ಬೆಂಗಳೂರು, ಸೆ.23: ‘ಇನ್ನ್ನೊಂದು ಏಳೆಂಟು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಟ್ಟರೆ ಚುನಾವಣೆಗೆ ತೆರಳಲು ಅನುಕೂಲವಾಗಲಿದೆ’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವರಿಷ್ಠರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ರವಿವಾರ ನಗರದ ಕೆಂಗೇರಿಯಲ್ಲಿ ವಾಲ್ಮೀಕಿ ನಾಯಕ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಮಾಗಮ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಬೆಂಬಲಿಗರನ್ನು ಸಂಪುಟದಿಂದ ಕೈಬಿಟ್ಟರೆ ಚುನಾವಣೆ ಎದುರಿಸಬೇಕಾಗುತ್ತದೆಂದು ಗುಡುಗಿದರು.ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಸಚಿವರಾದ ರಾಜೂಗೌಡ ಹಾಗೂ ರೇಣುಕಾಚಾರ್ಯ ಅವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಬೇಕು ಎಂದು ಆಗ್ರಹಿಸಿದ ಯಡಿಯೂರಪ್ಪ, ಇಲ್ಲವಾದರೆ ಮುಂದಿನ ಕಾರ್ಯತಂತ್ರ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜಕೀಯ ಕಲುಷಿತ: ರಾಜಕೀಯ ಕಲುಷಿತಗೊಂಡಿದ್ದು, ಅದನ್ನು ಸ್ವಚ್ಛಗೊಳಿಸಲು ಪ್ರಾಮಾಣಿಕರು ರಾಜಕೀಯಕ್ಕೆ ಬರಬೇಕಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ ಅಭಿಪ್ರಾಯಪಟ್ಟರು.ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರಕಾರಗಳು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಿಲ್ಲ. ಆದರೆ, ಬಿಜೆಪಿ ಸರಕಾರ ಮಹಿಳೆಯರ ಬಗ್ಗೆ ವಿಶೇಷ ಆಸಕ್ತಿವಹಿಸಿ ‘ಭಾಗ್ಯಲಕ್ಷ್ಮಿ’ ಯೋಜನೆಯ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಯಡಿಯೂರಪ್ಪ ತಿಳಿಸಿದರು.
ವಿದ್ಯಾರ್ಥಿನಿಯರ ಶೈಕ್ಷಣಿಕ ಏಳ್ಗೆಗೆ ಬಿಜೆಪಿ ವಿಶೇಷ ಒತ್ತು ನೀಡಿದೆ. ಮಾತ್ರವಲ್ಲ, ದಲಿತ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದ ಅವರು, ಲೋಕಸೇವಾ ಆಯೋಗಕ್ಕೆ ವಾಲ್ಮೀಕಿ ಸಮುದಾಯದ ವ್ಯಕ್ತಿಯೊಬ್ಬರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಜಯಂತ್ಯುತ್ಸವ ಆಚರಿಸಲು ಬಿಜೆಪಿ ಸರಕಾರವೆ ಬರಬೇಕಾಯಿತು. ವಾಲ್ಮೀಕಿ ಜಯಂತಿಗೆ ಸರಕಾರಿ ರಜೆ ಘೋಷಿಸಲಾಗಿದೆ ಎಂದ ಯಡಿಯೂರಪ್ಪ, ನನ್ನ ಅಧಿಕಾರಾವಧಿಯಲ್ಲಿ ಜನ ಮೆಚ್ಚುವ ಕೆಲಸ ಮಾಡಿದ್ದೇನೆ. ಯಾರು ಮೆಚ್ಚಲಿ- ಬಿಡಲಿ ಎಂದು ತಮ್ಮನ್ನು ಸಮರ್ಥಿಸಿಕೊಂಡರು.ವಾಲ್ಮೀಕಿ ಸಮುದಾಯ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಸಲಹೆ ನೀಡಿದ ಯಡಿಯೂರಪ್ಪ, ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಂಬಂಧ ಸರಕಾರದೊಂದಿಗೆ ಚರ್ಚಿಸುವುದಾಗಿ ಇದೇವೇಳೆ ಭರವಸೆ ನೀಡಿದರು.
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಚಿವರಾದ ಶೋಭಾ ಕರಂದ್ಲಾಜೆ, ರಾಜೂಗೌಡ, ಮೇಲ್ಮನೆ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇಂದು ಬಿಎಸ್‌ವೈ ಆಪ್ತರ ಸಭೆ
ಬೆಂಗಳೂರು,ಸೆ.23:‘ಇನ್ನೊಂದು ಏಳೆಂಟು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಟ್ಟರೆ ಚುನಾವಣೆಗೆ ತೆರಳಲು ಅನುಕೂಲವಾಗಲಿದೆ’ ಎಂದು ಗುಡುಗಿರುವ ಮಾಜಿ ಸಿಎಂ ಯಡಿಯೂರಪ್ಪ, ಆಯನೂರು ಹಾಗೂ ಧನಂಜಯ ಕುಮಾರ್ ರನ್ನು ಪದಚ್ಯುತಿ ಗೊಳಿಸಿರುವ ಬಿಜೆಪಿಗೆ ತಿರುಗೇಟು ನೀಡಲು ನಾಳೆ(ಸೆ.24) ಬೆಂಬಲಿಗರ ಸಭೆ ಕರೆದಿದ್ದಾರೆ.ಈ ಮಧ್ಯೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ‘ನಮ್ಮ ಪಕ್ಷ, ನಮ್ಮ ಇಷ್ಟ, ಮಾಧ್ಯಮಗಳು ಅನಗತ್ಯವಾಗಿ ವೈಭವೀಕರಿಸುತ್ತಿದ್ದು, ನಮ್ಮ ನಿರ್ಧಾರ ನಿಮಗೇಕೇ? ನಿಮಗೆ ಎಲ್ಲ ವಿವರ ನೀಡುವ ಅಗತ್ಯವಿಲ್ಲ ಎಂದು ಪತ್ರಕರ್ತರ ವಿರುದ್ಧ ಕೆಂಡಕಾರಿದ್ದಾರೆ.ತನ್ನ ಪದಚ್ಯುತಿಗೆ ಕಾರಣ ನೀಡಿ, ತಪ್ಪು ಮಾಡಿದ್ದರೆ ನೇಣಿಗೇರಿಸಿ, ತಾನು ಯಾರ ವಿರುದ್ಧವೂ ಹೇಳಿಕೆ ನೀಡಿಲ್ಲ.
ಕಾರ್ಮಿಕರ ಪರ ಧ್ವನಿ ಎತ್ತಿದ್ದು ತಪ್ಪಾ ಎಂದು ಪ್ರಶ್ನಿಸಿರುವ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪರ ಸರ್ವಾಧಿಕಾರಿ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕಿದ್ದ ಬಿಜೆಪಿ ಅಕ್ಷರಶಃ ಒಡೆದ ಮನೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ, ತಮ್ಮ ಬೆಂಬಲಿಗರ ಮೂಲಕ ಒತ್ತಡ ತಂತ್ರದ ಮೊರೆ ಹೋಗಿದ್ದಾರೆ.
ಪಕ್ಷದ ವಕ್ತಾರ ಸ್ಥಾನದಿಂದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹಾಗೂ ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್ ಪದಚ್ಯುತಿ ಕುರಿತು ಚರ್ಚಿಸಲು ನಾಳೆ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಬಿಎಸ್‌ವೈ ಆಪ್ತ ಸಚಿವರು-ಶಾಸಕರು ಹಾಗೂ ಮುಖಂಡರ ಸಭೆ ಕರೆದಿದ್ದಾರೆ
0 comments:
Post a Comment