ಕೊಪ್ಪಳಕ್ಕೆ ಹೊಸದಾಗಿ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಮಂಜೂರಾಗಿದ್ದು, ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಅಗತ್ಯವಿರುವ ಸುಮಾರು ೩೦ ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
ಕೊಪ್ಪಳ ಜನತೆಯ ಬಹುದಿನಗಳ ಬೇಡಿಕೆಯಾದ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಅನ್ನು ಕೊಪ್ಪಳ ತಾಲೂಕಿನ ಹಾಲವರ್ತಿ ಬಳಿ ಪ್ರಾರಂಭಿಸಲು, ಸರ್ಕಾರ ಮಂಜೂರಾತಿ ನೀಡಿ, ಸುಮಾರು ೩೦ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಇದರಿಂದಾಗಿ ಕೊಪ್ಪಳ ನಗರದ ಜನತೆಗೆ ಮತ್ತು ಹಾಲವರ್ತಿ, ಗಿಣಿಗೇರಾ, ಬಗನಾಳ, ಕುಣಿಕೇರಿ, ಹ್ಯಾಟಿ-ಮುಂಡರಗಿ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಕಡಿವಾಣ ಬೀಳಲಿದ್ದು, ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಕೈಗಾರಿಕೆಗೆ ಪ್ರತ್ಯೇಕ ಲೈನ್ ಅಳವಡಿಕೆಯಾಗುತ್ತದೆ. ವಿಶೇಷವಾಗಿ ಎಲ್‌ಐಸಿ ಸ್ಕೀಮ್‌ಗಳಿಗೆ ಅನುಕೂಲವಾಗುವುದರಿಂದ ರೈತರಿಗೆ ಒಳ್ಳೆಯ ಬೆಳೆ ತೆಗೆಯಲು ಸಹಕಾರಿಯಾಗಲಿದೆ. ಹೊಸದಾಗಿ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಪ್ರಾರಂಭದಿಂದ ವಿದ್ಯುತ್ ಅಡೆ-ತಡೆಯೂ ಕಡಿಮೆಯಾಗಲಿದ್ದು, ಹಾಲಿ ಇರುವ ೩೦ ಕೆ.ವಿ. ಕೊಪ್ಪಳ ವಿದ್ಯುತ್ ಕೇಂದ್ರಕ್ಕೆ ಮುನಿರಾಬಾದ್ ವಿದ್ಯುತ್ ಸ್ಟೇಷನ್‌ನಿಂದ ಸರಬರಾಜು ಆಗುತ್ತಿತ್ತು. ಕಿರ್ಲೋಸ್ಕರ್, ಹರಿಕೃಷ್ಣ ಕೈಗಾರಿಕೆಗಳಿಂದ ಕೊಪ್ಪಳ ನಗರದ ಸ್ಟೇಷನ್‌ಗೆ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಇದೆ. ಇದೀಗ ಈ ತೊಂದರೆ ತಪ್ಪಿ, ಕೊಪ್ಪಳದಿಂದ ಕೇವಲ ೪ ಕಿ.ಮೀ. ದೂರದಲ್ಲಿರುವ ಹಾಲವರ್ತಿಯಲ್ಲಿ ಸ್ಟೇಷನ್ ಆಗುವುದರಿಂದ, ಉತ್ತಮ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ. ಈಗಾಗಲೆ ಹೈದ್ರಾಬಾದ್ ಮೂಲಕ ರಾಮ್ಕಿ ಇನ್‌ಫ್ರಾಸ್ಟ್ರಕ್ಚರ್‍ಸ್, ಕಂಪನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು, ವಿದ್ಯುತ್ ಸ್ಟೇಷನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ೧೮ ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೊಪ್ಪಳಕ್ಕೆ ೨೨೦ ಕೆ.ವಿ. ಹೊಸ ವಿದ್ಯುತ್ ಸ್ಟೇಷನ್ ಮಂಜೂರು ಮಾಡಬೇಕು ಎಂದು ಸಲ್ಲಿಸಲಾಗಿದ್ದ ಮನವಿಗೆ, ಇದೀಗ ಸರ್ಕಾರ ಸ್ಪಂದಿಸಿ ಮಂಜೂರಾತಿ ನೀಡಿರುವುದು ಸಂತಸ ತಂದಿದೆ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಇಂಧನ ಸಚಿವರಾದ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಎಲ್ಲ ಗಣ್ಯಮಾನ್ಯರಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment