PLEASE LOGIN TO KANNADANET.COM FOR REGULAR NEWS-UPDATES




 ಗಂಗಾವತಿ ತಾಲೂಕಿನಲ್ಲಿ ಹೊಸದಾಗಿ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಸ್ಥಾಪನೆ ಕುರಿತಂತೆ ತಾಂತ್ರಿಕ ತಜ್ಞರಿಂದ ವರದಿ ಪಡೆದು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಇಂಧನ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು.
  ಗಂಗಾವತಿ ತಾಲೂಕು ಸಂಗಾಪುರ ಗ್ರಾಮದ ಬಳಿ ೧೧೦/೧೧ ಕೆ.ವಿ. ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಅಜ-ಗಜಾಂತರ ವ್ಯತ್ಯಾಸವಿದೆ.  ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸಲು ಜಿಲ್ಲೆಗೆ ೧೧೦ ಕೆ.ವಿ. ಸಾಮರ್ಥ್ಯದ ೦೬ ಮತ್ತು ೨೨೦ ಕೆ.ವಿ.ಯ ೦೧ ವಿದ್ಯುತ್ ಸ್ಟೇಷನ್‌ನ ಅಗತ್ಯವಿದ್ದು, ಇದಕ್ಕಾಗಿ ಸುಮಾರು ೧೦೫ ಕೋಟಿ ರೂ. ಅನುದಾನದ ಅಗತ್ಯವಿದೆ.  ಈಗಾಗಲೆ ಜಿಲ್ಲೆಯಲ್ಲಿ ಯರಡೋಣ, ಸಂಗನಾಳ, ಇಟಗಿ, ಹನುಮನಾಳ ಗ್ರಾಮಗಳಲ್ಲಿ ವಿದ್ಯುತ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ.   ಗಂಗಾವತಿ ತಾಲೂಕಿನಲ್ಲಿ ಹೊಸದಾಗಿ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಸ್ಥಾಪನೆಗಾಗಿ ತಾಂತ್ರಿಕ ತಜ್ಞರಿಂದ ವರದಿ ಪಡೆದು, ಮಂಜೂರು ಮಾಡಲು ಅಗತ್ಯ ಕ್ರಮ ಜರುಗಿಸಲಾಗುವುದು.  ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕಿನಲ್ಲಿ ಈಗಾಗಲೆ ನಿರಂತರ ಜ್ಯೋತಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಇದೇ ರೀತಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿಯೂ ನಿರಂತರ ಜ್ಯೋತಿ ಯೋಜನೆಯನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  ಗಂಗಾವತಿ ತಾಲೂಕಿನ ಮಲ್ಲಾಪುರದಲ್ಲಿನ ೯ ಮೆ.ವ್ಯಾ. ಸಾಮರ್ಥ್ಯದ ಜಲವಿದ್ಯುತ್ ಘಟಕ ಸದ್ಯ ಸ್ಥಗಿತಗೊಂಡಿದ್ದು, ಈ ಹಿಂದೆ ಕಿರು ವಿದ್ಯುತ್ ಘಟಕಗಳನ್ನು ಖಾಸಗೀಕರಣಗೊಳಿಸಿದ ಕಾರಣದಿಂದಾಗಿ, ಈ ಸಮಸ್ಯೆ ಉಂಟಾಗಿದೆ.  ಇದನ್ನು ಪುನರಾರಂಭಿಸುವ ಕುರಿತಂತೆ ಸಾಧಕ-ಬಾಧಕಗಳ ಬಗ್ಗೆ ವರದಿ ಪಡೆದು, ಪರಿಶೀಲಿಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ವಿದ್ಯುತ್ ಉತ್ಪಾದನೆ ಕುಂಠಿತ : ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜಲಾಶಯಗಳಲ್ಲಿ ವಿದ್ಯುತ್ ಸಂಗ್ರಹ ಕಡಿಮೆ ಇದೆ.  ರಾಜ್ಯದ ವಿದ್ಯುತ್ ಪೂರೈಕೆಯ ಮುಖ್ಯ ಜಲಾಶಯವಾಗಿರುವ ಲಿಂಗನಮಕ್ಕಿಯಲ್ಲಿ ಕೇವಲ ಶೇ. ೬೫ ರಷ್ಟು ಮಾತ್ರ ನೀರು ಸಂಗ್ರಹವಿದೆ.  ರಾಜ್ಯದಲ್ಲಿ ಜಲವಿದ್ಯುತ್ ಯೋಜನೆಗಳಿಂದ ಸುಮಾರು ೨೫೦೦ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ಆದರೆ ಜಲಾಶಯಗಳಲ್ಲಿ ನೀರಿನ ಕೊರತೆಯಿದೆ.  ಸೆಪ್ಟಂಬರ್‌ನಿಂದ ಡಿಸೆಂಬರ್ ವರೆಗೂ ಪವನಶಕ್ತಿಯಿಂದ ೨೧೦೦ ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಸಾಧ್ಯವಿದ್ದು, ಜನವರಿಂದ ಮುಂದಿನ ಬೇಸಿಗೆಯ ಅವಧಿಯವರೆಗೂ ಪವನಶಕ್ತಿಯಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲವಾದ್ದರಿಂದ, ಜಲಾಶಯಗಳಲ್ಲಿ ಈಗಿರುವ ನೀರನ್ನು ಡಿಸೆಂಬರ್ ವರೆಗೂ ಉಳಿಸಿಕೊಂಡು, ಬೇಸಿಗೆಯಲ್ಲಿ ಇದರಿಂದ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.  ರಾಯಚೂರಿನ ಶಕ್ತಿನಗರದ ಆರ್.ಟಿ.ಪಿ.ಎಸ್.ನ ೮ನೇ ಘಟಕ ಪ್ರಾರಂಭವಾಗಿಲ್ಲದಿರುವುದರಿಂದ, ವಿದ್ಯುತ್ ನಷ್ಟ ಉಂಟುಮಾಡಿದ್ದಕ್ಕಾಗಿ ಕಾರಣವಾದ ಕಂಪನಿಗೆ ೨೫೦ ಕೋಟಿ. ರೂ. ದಂಡ ವಿಧಿಸಲಾಗಿದೆ.  ಒರಿಸ್ಸಾ ರಾಜ್ಯ ಸೇರಿದಂತೆ ಉತ್ತರ ಭಾರತದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಅಲ್ಲಿಂದ ರಾಜ್ಯದ ರಾಯಚೂರಿನ ಆರ್.ಟಿ.ಪಿ.ಎಸ್. ಘಟಕಕ್ಕೆ ಪೂರೈಕೆಯಾಗುತ್ತಿರುವ ಕಲ್ಲಿದ್ದಲಿನಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರಿನ ಅಂಶ ಇರುವುದರಿಂದ, ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ, ಬರುವ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರು.
ಹೊಸ ಯೋಜನೆಗಳು : ಬಳ್ಳಾರಿಯಲ್ಲಿ ಸದ್ಯ ೫೦೦ ಮೆ.ವ್ಯಾ. ಸಾಮರ್ಥ್ಯದ ೨ನೇ ಘಟಕದಲ್ಲಿ ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.  ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ-ಹಾಸನದ ಶಾಂತಿ ಗ್ರಾಮದವರೆಗಿನ ೪೦೦ ಕೆ.ವಿ. ಲೈನ್ ವಿದ್ಯುತ್ ವಿತರಣಾ ವ್ಯವಸ್ಥೆಗೆ ಇದೇ ತಿಂಗಳು ಚಾಲನೆ ದೊರೆಯಲಿದ್ದು, ಇದರಿಂದಾಗಿ ಸುಮಾರು ೬೦೦ ಮೆ.ವ್ಯಾ. ವಿದ್ಯುತ್, ಹೊಸದಾಗಿ ಗ್ರಿಡ್‌ಗೆ ಸೇರ್ಪಡೆಯಾಗಲಿದೆ.  ಛತ್ತೀಸ್‌ಗಡ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸಿ, ರಾಜ್ಯಕ್ಕೆ ತರುವ ಕಾರ್ಯಕ್ಕೆ ಈಗಾಗಲೆ ಚಾಲನೆ ದೊರೆತಿದ್ದು, ಆ ರಾಜ್ಯದಲ್ಲಿ ಸುಮಾರು ೧೩೦೦ ಎಕರೆ ಭೂಮಿಯನ್ನು ಖರೀದಿಸಲಾಗಿದೆ.  ವಿದ್ಯುತ್ ಉತ್ಪಾದನಾ ಘಟಕಕ್ಕೆ ಅಗತ್ಯವಿರುವ ನೀರು ಪೂರೈಸಲು ಛತ್ತೀಸ್‌ಗಡ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ : ರೈತರು ಕೃಷಿ ನೀರಾವರಿಗಾಗಿ ಬಳಸುವ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿದಲ್ಲಿ, ಪಂಪ್‌ಸೆಟ್‌ಗಳ ಸಂಖ್ಯೆಗನುಗುಣವಾಗಿ ಟ್ರಾನ್ಸ್‌ಫಾರ್‍ಮರ್‌ಗಳನ್ನು ಅಳವಡಿಸಲು ಸಹಕಾರಿಯಾಗಲಿದೆ.  ಇಲ್ಲದಿದ್ದಲ್ಲಿ, ಪದೇ ಪದೇ ಟ್ರಾನ್ಸ್‌ಫಾರ್‍ಮರ್‌ಗಳು ಸುಟ್ಟುಹೋಗುವುದರಿಂದ, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಕಷ್ಟಸಾಧ್ಯವಾಗಲಿದೆ.  ಆದ್ದರಿಂದ ರೈತರು ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಮುಂದಾಗಬೇಕು.  ಅಲ್ಲದೆ ಪಂಪ್‌ಸೆಟ್‌ಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಬೇಕು ಎಂದು ಸಚಿವರಾದ ಶೋಭಾ ಕರಂದ್ಲಾಜೆ ಅವರು ಮನವಿ ಮಾಡಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪದೇ ಪದೇ ಅನಿಯಮಿತವಾಗಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದರಿಂದ, ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಕೊಪ್ಪಳ ಜಿಲ್ಲೆ ಇನ್ನಷ್ಟು ಹಿಂದುಳಿಯುವಂತಾಗಿದೆ ಎಂದರು.
  ಸಮಾರಂಭದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ತಾ.ಪಂ. ಅಧ್ಯಕ್ಷ ಶರಣೇಗೌಡ, ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ, ತಾ.ಪಂ. ಸದಸ್ಯೆ ಹಂಪಮ್ಮ, ಗ್ರಾ.ಪಂ. ಅಧ್ಯಕ್ಷೆ ಈರಮ್ಮ, ಗಣ್ಯರಾದ ಗಿರೇಗೌಡ ಮುಂತಾದವರು ಭಾಗವಹಿಸಿದ್ದರು.
  ಇದಕ್ಕೂ ಮುನ್ನ ಸಚಿವರಾದ ಶೋಭಾ ಕರಂದ್ಲಾಜೆ ಅವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದರು, ನಂತರ ಗಂಗಾವತಿ ತಾಲೂಕು ಲಿಂಗದಳ್ಳಿ ಗ್ರಾಮದಲ್ಲಿ ೩೩ ಕೆ.ವಿ. ನೂತನ ವಿದ್ಯುತ್ ಸ್ಟೇಷನ್‌ನ ಉದ್ಘಾಟನೆ ನೆರವೇರಿಸಿದರು.

Advertisement

0 comments:

Post a Comment

 
Top