ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರ ಮೆಟ್ರಿಕ್ ನಂತರದ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗಾಗಿ ಕೊಪ್ಪಳದಲ್ಲಿ ೧೦೦ ಸೀಟು ಸಾಮರ್ಥ್ಯದ ಒಂದು ವಿದ್ಯಾರ್ಥಿನಿಲಯವನ್ನು ಮಂಜೂರು ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ್ಯಂತ ೧೦೦ ಸಂಖ್ಯಾಬಲದ ಒಟ್ಟು ೫೦ ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಆ ಪೈಕಿ ಕೊಪ್ಪಳ ನಗರಕ್ಕೆ ಮೆಟ್ರಿಕ್ ನಂತರದ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರಿಗಾಗಿ ಒಂದು ವಿದ್ಯಾರ್ಥಿನಿಲಯವನ್ನು ಮಂಜೂರು ಮಾಡಿದೆ. ಅಲ್ಲದೆ ಈ ವಿದ್ಯಾರ್ಥಿನಿಲಯಕ್ಕೆ ಅಗತ್ಯವಿರುವ ನಿಲಯ ಮೇಲ್ವಿಚಾರಕರು/ ವಾರ್ಡನ್, ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರ ಹುದ್ದೆಯನ್ನು ಸಹ ಮಂಜೂರು ಮಾಡಿದೆ. ಇದರಿಂದಾಗಿ ಕೊಪ್ಪಳ ನಗರದಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಾದ ಐಟಿಐ ಮುಂತಾದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ಗ್ರಾಮಗಳ ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿದ್ದುಕೊಂಡು, ಸುಗಮವಾಗಿ ವ್ಯಾಸಂಗ ಮಾಡಲು ಅನುಕೂಲವಾದಂತಾಗಿದೆ. ಶೀಘ್ರದಲ್ಲಿಯೇ ಈ ವಿದ್ಯಾರ್ಥಿನಿಲಯವನ್ನು ಕೊಪ್ಪಳದಲ್ಲಿ ಪ್ರಾರಂಭಿಸಲಾಗುವುದು ಎಂದು ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
ಬಂಡಿಹರ್ಲಾಪುರಕ್ಕೆ ವಿದ್ಯಾರ್ಥಿನಿಲಯ : ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಗ್ರಾಮಕ್ಕೆ ಉನ್ನತೀಕರಿಸಿದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮಂಜೂರಾಗಿದೆ. ವಿದ್ಯಾರ್ಥಿಗಳ ಸಂಖ್ಯಾಬಲ ಕೊರತೆ ಇರುವ ವಿದ್ಯಾರ್ಥಿನಿಲಯದ ಸಮೀಪದಲ್ಲಿನ ವಸತಿ ಶಾಲೆಗಳನ್ನು ಉನ್ನತೀಕರಿಸಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನಾಗಿ ಪರಿವರ್ತಿಸಿದ್ದು, ಇಂತಹ ಉನ್ನತೀಕರಿಸಿದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ಬಂಡಿಹರ್ಲಾಪುರ ಗ್ರಾಮಕ್ಕೆ ಮಂಜೂರು ಮಾಡಲಾಗಿದ್ದು, ವಿದ್ಯಾರ್ಥಿ ನಿಲಯಗಳನ್ನು ತಕ್ಷಣವೇ ಪ್ರಾರಂಭಿಸುವಂತೆ ಸರ್ಕಾರ ಆದೇಶ ನೀಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
0 comments:
Post a Comment