PLEASE LOGIN TO KANNADANET.COM FOR REGULAR NEWS-UPDATES




 : ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಬರಗಾಲ ಪರಿಸ್ಥಿತಿ ಉಂಟಾಗಲು ಪರಿಸರದ ಮೇಲೆ ಮಾನವ ನಡೆಸುತ್ತಿರುವ ದಾಳಿಯೇ ಪ್ರಮುಖ ಕಾರಣವಾಗಿದೆ.  ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಂಡು, ನಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕು.  ಪ್ರಕೃತಿ ಮುನಿದರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂಬುದನ್ನು ಇನ್ನಾದರೂ ನಾವು ಅರಿತು ಬಾಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
ಅರಣ್ಯ ಇಲಾಖೆ, ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
   ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳು, ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ದೇಶಗಳಲ್ಲಿ ನಡೆದ ಕೈಗಾರೀಕರಣದ ಕ್ರಾಂತಿ ಹಾಗೂ ಅತಿಯಾದ ವಾಹನಗಳ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಬೃಹತ್ ಪ್ರಮಾಣದಲ್ಲಿ ವಾತಾವರಣವನ್ನು ಸೇರುತ್ತಿದ್ದು, ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗಿದೆ.  ಇದರಿಂದಾಗಿ ಭೂಮಿಯ ಮೇಲೆ ಹವಾಮಾನದ ತೀವ್ರ ಬದಲಾವಣೆ ಉಂಟಾಗುತ್ತಿದೆ.  ಒಂದೆಡೆ ಅತಿವೃಷ್ಠಿಯಿಂದ ಹಾನಿಯಾದರೆ, ಇನ್ನೊಂದೆಡೆ ಭೀಕರ ಬರಗಾಲ ಮನುಕುಲವನ್ನು ಕಾಡುತ್ತಿದೆ.  ತನ್ನ ಸ್ವಾರ್ಥ ಉದ್ದೇಶಕ್ಕಾಗಿ, ಕಾಡನ್ನು ಕಡಿದು ಕಾಂಕ್ರಿಟ್ ನಾಡನ್ನಾಗಿ ಪರಿವರ್ತಿಸಲು ಪರಿಸರದ ಮೇಲೆ ಮನುಷ್ಯ ನಡೆಸುತ್ತಿರುವ ದೌರ್ಜನ್ಯ ಇದಕ್ಕೆ ಪ್ರಮುಖ ಕಾರಣವಾಗಿದೆ.  ಸದ್ಯದ ಪರಿಸ್ಥಿತಿಯಲ್ಲಿ ಪರಿಸರವನ್ನು ಅತಿಹೆಚ್ಚು ಹಾಳು ಮಾಡುತ್ತಿರುವುದು ಪ್ಲಾಸ್ಟಿಕ್.  ನಮ್ಮ ಸುತ್ತಮುತ್ತಲ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದರೆ  ಸಾರ್ವಜನಿಕರು ದೃಢಮನಸ್ಸಿನಿಂದ ಪ್ಲಾಸ್ಟಿಕ್ ತ್ಯಜಿಸಲು ಮುಂದಾಗಬೇಕು.  ನಮ್ಮ ಪೂರ್ವಿಕರು ನಮಗೆ ಉತ್ತಮ ಪರಿಸರ ನೀಡಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ಲಾಸ್ಟಿಕ್ ಸಾಮಗ್ರಿ ಪರಿಸರವನ್ನು ಹೆಚ್ಚು ಕಲುಶಿತಗೊಳಿಸುತ್ತಿದೆ. ಭೂಮಿಯಲ್ಲಿ ಕರಗದ ಈ ಪ್ಲಾಸ್ಟಿಕ್, ಸಮಸ್ಯೆಯನ್ನು ಬೃಹದಾಕಾರಗೊಳಿಸುತ್ತಿದೆ.  ಎಲ್ಲರೂ ದೃಢಮನಸ್ಸಿನಿಂದ ಪ್ಲಾಸ್ಟಿಕ್ ತ್ಯಜಿಸಲು ಮುಂದಾಗಬೇಕು.  ಇದರಿಂದ ಪರಿಸರ ಉಳಿಸಲು ಸಹಾಯಕಾರಿಯಾಗಲಿದೆ ಎಂದರು.  ಗಿಡ, ಮರಗಳು ನಮ್ಮೆಲ್ಲರಿಗೆ ಆಹಾರವಷ್ಟೆ ಅಲ್ಲ ನೆರಳು ನೀಡುವುದಲ್ಲದೆ, ಭೂಮಿ ಸವಕಳಿಯಾಗುವುದನ್ನೂ ತಡೆಗಟ್ಟುತ್ತದೆ.  ಇದು ಪರಿಸರದ ರಕ್ಷಣೆಗೆ ಪೂರಕವಾಗಿದೆ.  ಎಲ್ಲರೂ ತಮ್ಮ ಮಕ್ಕಳಿಗೆ ಆಸ್ತಿಯನ್ನು ಉಳಿಸಿ, ಕೊಡುಗೆ ನೀಡುವ ರೀತಿಯಲ್ಲಿಯೇ, ಗಿಡ-ಮರಗಳನ್ನೂ ಸಹ ಆಸ್ತಿಯಂತೆ ಪರಿಗಣಿಸಿ ಉಳಿಸಿ, ಬೆಳೆಸಲು ಮುಂದಾಗಬೇಕು. ಪ್ರತಿಯೊಬ್ಬರೂ ಕನಿಷ್ಟ ೨ ಗಿಡಗಳನ್ನಾದರೂ ನೆಟ್ಟು, ಅವನ್ನು ಮಕ್ಕಳಂತೆ ಬೆಳೆಸಿ, ಪೋಷಿಸಬೇಕು,  ನೀರು ಅಮೂಲ್ಯ ಜೀವಜಲ.  ಮಳೆನೀರು ಸಂಗ್ರಹಿಸಿ, ಅದನ್ನು ಉಪಯೋಗಿಸುವಂತಾಗಬೇಕು.  ನೈಸರ್ಗಿಕ ಸಂಪನ್ಮೂಲವಾಗಿರುವ ಸೌರಶಕ್ತಿ ಬಳಕೆ ಹಾಗೂ ಪವನ ಶಕ್ತಿಯನ್ನು ಉಪಯೋಗಿಸುವ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಪರಿಸರ ಅಧಿಕಾರಿ ಎಂ. ಶ್ರೀಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ೧೯೭೨ ರ ಜೂನ್ ೦೫ ರಂದು ಒಂದೆಡೆ ಸೇರಿ ಪರಿಸರ ಸಂರಕ್ಷಣೆಗಾಗಿ ಮೊಟ್ಟ ಮೊದಲ ಬಾರಿಗೆ ಚಿಂತನೆ ನಡೆಸಿ, ಜಾಗತಿಕ ಮಟ್ಟದಲ್ಲಿ ಪರಿಸರದ ಮೇಲೆ ಮಾನವ ನಡೆಸುತ್ತಿರುವ ಹಾನಿ ನಿಯಂತ್ರಿಸಲು, ಪರಿಸರ ಸಂರಕ್ಷಣೆಗಾಗಿ ಜನಜಾಗೃತಿ ಮೂಡಿಸಲು ತೀರ್ಮಾನ ಕೈಗೊಂಡ ದಿನದ ನೆನಪಿಗಾಗಿ ಜೂ. ೫ ರ ದಿನವನ್ನು ವಿಶ್ವ ಪರಿಸರ ದಿನಾಚರಣೆಯನ್ನಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ.  ಈ ವರ್ಷ ಹಸಿರು ಆರ್ಥಿಕತೆ- ನೀವು ಭಾಗಿಯೇ ಎಂಬ ಘೋಷವಾಕ್ಯವನ್ನು ಪ್ರಕಟಿಸಲಾಗಿದ್ದು, ಸರ್ಕಾರ ಕೇವಲ ಅಭಿವೃದ್ಧಿಯ ಮಂತ್ರ ಜಪಿಸುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಗೂ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.
  ಕೊಪ್ಪಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಜಿ. ಹೆಗಡೆ ಮತ್ತು ಸಂಗಡಿಗರಿಂದ ಪರಿಸರ ಜಾಗೃತಿ ಕುರಿತಂತೆ ಪರಿಸರ ವಿಜಯ ಎಂಬ ಯಕ್ಷಗಾನ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.  ಶಿರಸಿಯ ಶೇಷಗಿರಿ, ದೇವದಾಸ್, ಶ್ರೀಕಾಂತ್, ಪ್ರಕಾಶ್ ಮುಂತಾದ ಕಲಾವಿದರು ಯಕ್ಷಗಾನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಬಿ.ಆರ್. ಭಾಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಜಲಾನಯನ ಅಭಿವೃದ್ದಿ ಇಲಾಖೆಯ ಅಧಿಕಾರಿ ದೇವರಾಜ್ ಅವರು ಸ್ವಾಗತಿಸಿದರು, ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳು ಪ್ರಾರ್ಥಿಸಿದರು, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗರಾಜ್ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

1 comments:

 
Top