ಕೊಪ್ಪಳ ತಾಲೂಕು ಹಲವಾಗಲಿ ಗ್ರಾಮದ ಮೀನಾಕ್ಷಿ ಎಂಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಅವರು ಮಂಗಳವಾರ ಹಲವಾಗಲಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಅವರು ಮೃತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ, ಬಾಲಕಿಯ ಕುಟುಂಬದವರೊಂದಿಗೆ ಚರ್ಚಿಸಿದ ಅವರು ಪ್ರಕರಣದ ಸಂಪೂರ್ಣ ವಿವರವನ್ನು ಪಡೆದುಕೊಂಡರು. ಬಾಲಕಿಯ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗವು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ತಪ್ಪಿತಸ್ಥರು ಕಾನೂನು ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹವರಿಗೆ ಕಠಿಣ ಶಿಕ್ಷೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಆಯೋಗ ಕ್ರಮ ಕೈಗೊಳ್ಳಲಿದೆ. ರಾಜ್ಯಾದ್ಯಂತ ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಬಗ್ಗೆ ಸದ್ಯದಲ್ಲೆ ರಾಜ್ಯ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಪೊಲೀಸ್ ಇಲಾಖೆ ಅಧಿಕಾರಿಗಳು ಕೇವಲ ನಗರ, ಪಟ್ಟಣ, ರಾಷ್ಟ್ರೀಯ ಹೆದ್ದಾರಿಗಳ ಮೇಲಷ್ಟೆ ತೀವ್ರ ನಿಗಾ ವಹಿಸುತ್ತಿದ್ದು, ಗಡಿಭಾಗಗಳ ಕುಗ್ರಾಮಗಳತ್ತವೂ ಪೊಲೀಸ್ ಇಲಾಖೆ ತನ್ನ ಕಣ್ಗಾವಲನ್ನು ಬಲಪಡಿಸಬೇಕು. ಈ ಕುರಿತಂತೆಯೂ ರಾಜ್ಯ ಗೃಹ ಸಚಿವರೊಂದಿಗೆ ಚರ್ಚಿಸಿ, ಮಾಹಿತಿ ನೀಡಲಾಗುವುದು ಎಂದರು. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರ ಹಿತರಕ್ಷಣೆಗೆ ರಾಜ್ಯ ಮಹಿಳಾ ಆಯೋಗ ಬದ್ಧವಾಗಿದ್ದು, ಇಂತಹ ಪ್ರಕರಣಗಳಲ್ಲಿನ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಆಗಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕಾನೂನು ತಿದ್ದುಪಡಿ ತಂದು, ಕಠಿಣ ಶಿಕ್ಷೆಯ ಕಾನೂನು ಜಾರಿಗೆ ಮುಂದಾಗಬೇಕಿದೆ. ರಾಜ್ಯದ ಯಾವುದೇ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಸಂಭವಿಸಿದಾಗ, ರಾಜ್ಯ ಮಹಿಳಾ ಆಯೋಗ ಕೂಡಲೇ ಸ್ಪಂದಿಸುತ್ತಿದ್ದು, ಈ ಮೂಲಕ ಸಮಾಜಕ್ಕೆ ನೈತಿಕ ಸ್ಥೈರ್ಯ ತುಂಬುವುದು, ಮಹಿಳೆ ರಕ್ಷಣೆಗೆ ನೀಡುವಂತಹಾ ಕಾರ್ಯಕ್ಕೆ ಆಯೋಗ ಶ್ರಮಿಸುತ್ತಿದೆ. ರಾಜ್ಯದಲ್ಲಿನ ಮಹಿಳಾ ಜನಪ್ರತಿನಿಧಿಗಳು, ಅಧಿಕಾರಿಗಳು ಸಂವೇದನಾಶೀಲರಾಗಿ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ಕೂಡಲೆ ಸ್ಪಂದಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಅವರು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಮುಂತಾದ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಾಲಕಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಟಿ.ಎಸ್. ಅಪ್ಪಣ್ಣವರ್, ಕಾರ್ಯಕ್ರಮ ಅಧಿಕಾರಿ ವೆಂಕಣ್ಣ, ಡಿವೈಎಸ್‌ಪಿ ವಿಜಯ್ ಡಂಬಳ, ಸಿಪಿಐ ವೆಂಕಟಪ್ಪ ನಾಯಕ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment