PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಎಚ್.ಜಿ. ರಾಮುಲು ಅವರ ನಾಲ್ಕನೇ ಪುತ್ರಿ ವಿಷ್ಣುವಂದನಾ (47) ಅವರನ್ನು ಬೆಂಗಳೂರಿನ ಜಯನಗರದಿಂದ ದುಷ್ಕರ್ಮಿಗಳು ಸೋಮವಾರ ರಾತ್ರಿ ಅಪಹರಿಸಿದ್ದಾರೆ.

‘ಜಯನಗರ ನಾಲ್ಕನೇ ಹಂತದ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ರಾತ್ರಿ ಎಂಟು ಗಂಟೆಯ ಸುಮಾರಿಗೆ ಅವರನ್ನು ಅಪಹರಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಷ್ಣುವಂದನಾ ಅವರ ಮಗಳನ್ನು ಬೆಂಗಳೂರಿನ ಸೂರ್ಯಕುಮಾರ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿದೆ. ಸಂಬಂಧಿಕರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ವಿಷ್ಣುವಂದನಾ ಅವರು ತಮ್ಮ ಪತಿ ರವಿಕುಮಾರ್ ಹಾಗೂ ತಂಗಿ ಡಾಲಿ ಅವರೊಂದಿಗೆ ಎರಡು ದಿನಗಳ ಹಿಂದೆ ನಗರದ ತಮ್ಮ ಮಗಳ ಮನೆಗೆ ಬಂದಿದ್ದರು.

ಸೋಮವಾರ ರಾತ್ರಿ ಅವರು ಹೈದರಾಬಾದ್‌ಗೆ ಹಿಂದಿರುಗಬೇಕಿತ್ತು. ಸೋಮವಾರ ಸಂಜೆ ತಮ್ಮ ತಂಗಿ ಡಾಲಿ ಜೊತೆ ವಿಷ್ಣುವಂದನಾ ಅವರು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಔಷಧ ಮತ್ತಿತರ ವಸ್ತುಗಳ ಖರೀದಿಗೆ ಕಾರಿನಲ್ಲಿ ಬಂದಿದ್ದರು. ಖರೀದಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅವರನ್ನು ಅಪಹರಿಸಲಾಗಿದೆ‘ ಎಂದು ದಕ್ಷಿಣ ವಿಭಾಗ ಡಿಸಿಪಿ ಸೋನಿಯಾ ನಾರಂಗ್ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಖರೀದಿ ಮುಗಿಸಿ ಕಾರಿನ ಬಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಬಂದು ವಿಷ್ಣುವಂದನಾ ಅವರನ್ನು ‘ನೀವು ಮಾಜಿ ಸಂಸದ ರಾಮುಲು ಅವರ ಮಗಳಲ್ಲವೇ‘ ಎಂದು ಕೇಳ್ದ್ದಿದ್ದಾರೆ. ನಂತರ ವಿಷ್ಣುವಂದನಾ ಅವರೊಂದಿಗೆ ಖಾಸಗಿಯಾಗಿ ಮಾತನಾಡಬೇಕೆಂದು ಅವರನ್ನು ಮರೆಗೆ ಕರೆದುಕೊಂಡು ಹೋಗಿ ಅಪಹರಣ ಮಾಡಿದ್ದಾರೆ. ಬಹಳ ಸಮಯವಾದರೂ ವಿಷ್ಣುವಂದನಾ ಅವರು ವಾಪಸ್ ಬಾರದ ಹಿನ್ನೆಲೆಯಲ್ಲಿ ಡಾಲಿ ಅವರು ವಿಷ್ಣುವಂದನಾ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ.

ಅವರು ಕರೆ ಸ್ವೀಕರಿಸದೇ ಇದ್ದಾಗ ಗಾಬರಿಗೊಂಡ ಡಾಲಿ ಅವರು ರವಿಕುಮಾರ್ ಅವರಿಗೆ ವಿಷಯ ತಿಳಿಸಿದ್ದಾರೆ. ರವಿಕುಮಾರ್ ಜಯನಗರ ಠಾಣೆಗೆ ಬಂದು ಈ ಬಗ್ಗೆ ದೂರು ನೀಡಿದ್ದಾರೆ‘ ಎಂದು ಅವರು ತಿಳಿಸಿದರು.

‘ಅಪಹರಣವಾದ ಸ್ವಲ್ಪ ಹೊತ್ತನ ನಂತರ ವಿಷ್ಣುವಂದನಾ ಅವರು ತಮ್ಮ ಮೊಬೈಲ್‌ನಿಂದ ರವಿಕುಮಾರ್ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ.ನನ್ನನ್ನು ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಮೂವತ್ತು ಲಕ್ಷ ರೂಪಾಯಿ ಒತ್ತೆ ಹಣ ಕೇಳುವ ಬಗ್ಗೆ ಅಪಹರಣಕಾರರು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ‘ ಎಂದು ಅವರು ತಮ್ಮ ಪತಿಗೆ ತಿಳಿಸಿದ್ದಾರೆ.

ಆ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಪಹರಣಕಾರರನ್ನು ಪತ್ತೆ ಹಚ್ಚಲು ಮೂರು ತನಿಖಾ ತಂಡಗಳನ್ನು ರಚಿಸಲಾಗಿದ್ದು, ಅನುಮಾನ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ‘ ಎಂದು ನಾರಂಗ್ ತಿಳಿಸಿದ್ದಾರೆ.

ರಾಜಕೀಯ ದ್ವೇಷದ ಕಾರಣ ಇಲ್ಲ: ‘ಅಪಹರಣದ ಹಿಂದೆ ಯಾವುದೇ ರಾಜಕೀಯ ದ್ವೇಷದ ಕಾರಣಗಳೂ ಇದ್ದಂತಿಲ್ಲ‘ ಎಂದು ನಾರಂಗ್ ಸ್ಪಷ್ಟಪಡಿಸಿದ್ದಾರೆ. ‘ಹಣದ ಕಾರಣಕ್ಕಾಗಿ ಅಪಹರಣ ನಡೆದಿರುವ ಸಾಧ್ಯತೆ ಇದೆ. ವಿಷ್ಣುವಂದನಾ ಅವರ ಪತಿ ರವಿಕುಮಾರ್ ಹೈದರಾಬಾದ್‌ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಅವರ ಮನೆಯಿದೆ. ಅವರ ಮಗ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದಾರೆ.

ಇವರ ಶ್ರೀಮಂತ ಹಿನ್ನೆಲೆಯನ್ನು ತಿಳಿದಿರುವ ಹತ್ತಿರದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ.  ಆದರೆ ಅಪಹರಣಕಾರರು ಒತ್ತೆ ಹಣಕ್ಕಾಗಿ ಈ ವರೆಗೆ ಕುಟುಂಬ ಸದಸ್ಯರನ್ನು ಸಂಪರ್ಕಿಸಿಲ್ಲ‘ ಎಂದು ಹೇಳಿದರು.

‘ಪರಿಚಿತರೇ ನನ್ನ ಮಗಳನ್ನು ಅಪಹರಿಸಿದ್ದಾರೆ. ನಮ್ಮ ಕುಟುಂಬಕ್ಕೆ ಹತ್ತಿರವಾದವರೇ ಈ ಕೃತ್ಯ ಎಸಗಿದ್ದಾರೆ‘ ಎಂದು ವಿಷ್ಣುವಂದನಾ ಅವರ ತಂದೆ ಎಚ್.ಜಿ. ರಾಮುಲು ಶಂಕೆ ವ್ಯಕ್ತಪಡಿಸಿದ್ದಾರೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಂತಿ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಜಯನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಕೃಪೆ : ಪ್ರಜಾವಾಣಿ

Advertisement

0 comments:

Post a Comment

 
Top