ರಾಷ್ಟ್ರಪತಿ ಚುನಾವಣೆ:
ಹೊಸದಿಲ್ಲಿ,ಜೂ.19:ಎನ್‌ಡಿಎಯ ಪ್ರಧಾನ ಮಿತ್ರಪಕ್ಷ ಶಿವಸೇನೆ ಯುಪಿಎಯ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿಯವರಿಗೆ ಬೆಂಬಲ ಸೂಚಿಸಿದ್ದು, ಅವರನ್ನು ಏಕ ಮತದಿಂದ ಬೆಂಬಲಿಸಬೇಕೆಂದು ಹೇಳಿದೆ.ಇದರಿಂದಾಗಿ ಪ್ರಣವ್ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸುವ ಬಿಜೆಪಿಯ ಯೋಜನೆಗೆ ಹೊಡೆತ ಬಿದ್ದಿದೆ.ಮುಖರ್ಜಿ ‘ಸೂಕ್ತ ಅಭ್ಯರ್ಥಿ’ ಎಂದು ಶ್ಲಾಘಿಸಿರುವ ಶಿವಸೇನಾ ವರಿಷ್ಠ ಬಾಳ್ ಠಾಕ್ರೆ, ರಾಷ್ಟ್ರಪತಿ ಭವನಕ್ಕೆ ಅವರನ್ನು ಅವಿರೋಧವಾಗಿ ಚುನಾಯಿಸಿ ಕಳುಹಿಸುವ ಮೂಲಕ ‘ನಾವು ಒಗ್ಗಟ್ಟಿನಿಂದ ಇದ್ದೇವೆ’ ಎಂಬ ಸಂದೇಶವನ್ನು ಎಲ್ಲೆಡೆಗೆ ಕಳುಹಿಸಬೇಕೆಂದು ಹೇಳಿದ್ದಾರೆ.‘‘ಆದುದು ಆಗಿಹೋಯ್ತು.ನಾವು ಪ್ರಣವ್ ಮುಖರ್ಜಿಯವರನ್ನು ಏಕಾಭಿಪ್ರಾಯದಿಂದ ಬೆಂಬಲಿಸೋಣ ಹಾಗೂ ವಿಶ್ವಕ್ಕೆ ‘ಹಂ ಸಬ್ ಏಕ್ ಹೈಂ’ (ನಾವೆಲ್ಲರೂ ಒಗ್ಗಟ್ಟಿನಿಂದಿದ್ದೇವೆ)ಎಂಬ ಸಂದೇಶವನ್ನು ನೀಡೋಣ’’ ಎಂದು ಠಾಕ್ರೆ ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟಿಸಿದ ಹೇಳಿಕೆಯೊಂದರಲ್ಲಿ ಅಭಿಪ್ರಾಯಿಸಿದ್ದಾರೆ.ಎನ್‌ಡಿಎಯ ನೇತೃತ್ವ ವಹಿಸಿರುವ ಬಿಜೆಪಿಯ ಗಮನಾರ್ಹ ವರ್ಗವೊಂದು ಪಿ.ಎ.ಸಂಗ್ಮಾರನ್ನು ಬೆಂಬಲಿಸುವ ಯೋಜನೆಯಲ್ಲಿರುವಂತೆ ತೋರುತ್ತಿರುವಾಗಲೇ,ಅತ್ಯುಚ್ಚ ಹುದ್ದೆಗಾಗಿ ನಡೆಯುತ್ತಿರುವ ಪ್ರಹಸನ ನ್ಯಾಯವಾದುದಲ್ಲ ಎಂದು ಅವರು ಹೇಳಿದ್ದಾರೆ.
ರಾಜಕೀಯ ಲಾಭಕ್ಕಾಗಿ ದೇಶದ ಗೌರವ ಒತ್ತೆಯಾಗುತ್ತಿದೆಯೆಂದು ಅವರು ಆರೋಪಿಸಿದ್ದಾರೆ.ಯಾವುದೇ ಅರ್ಹತೆಯಿಲ್ಲದವರೂ ಸ್ಪರ್ಧೆಯಲ್ಲಿದ್ದಾರೆ ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ಪರ್ಧಿಸುವುದಿಲ್ಲವೆಂದು ಘೋಷಿಸಿದ ಮರುದಿನ ಠಾಕ್ರೆ ಹೇಳಿದ್ದಾರೆ.ತನ್ನ ಪಕ್ಷವು ಬೆನ್ನಿಗಿರಿಯಿತ್ತಿದೆಯೆಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಶಿವಸೇನೆಯು ಮೋಸ ಮಾಡುತ್ತಿದೆ ಹಾಗೂ ಬೆನ್ನಿಗಿರಿಯುತ್ತಿದೆಯೆಂಬ ಆರೋಪವನ್ನು ಯಾರೂ ಮಾಡಲಾಗದು. ಇಂತಹ ಆರೋಪಗಳನ್ನು ಈ ಹಿಂದೆ ಮಾಡಿದ್ದಾಗಲೂ ಪಕ್ಷವು ಪ್ರತಿಕಾರ ಕೈಗೊಂಡಿರಲಿಲ್ಲವೆಂದು ಠಾಕ್ರೆ ಹೇಳಿದ್ದಾರೆ.
ಮುಖರ್ಜಿ ನಿನ್ನೆ ಠಾಕ್ರೆಯವರಿಗೆ ಹಾಗೂ ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆಯವರಿಗೆ ಕರೆ ಮಾಡಿ ಬೆಂಬಲ ಕೋರಿದ್ದರು.ಶಿವಸೇನೆಯು 11 ಲೋಕಸಭಾ ಸದಸ್ಯರು ಸಹಿತ 15 ಸಂಸದರು, 48 ವಿಧಾನಸಭಾ ಸದಸ್ಯರು ಹಾಗೂ 7 ವಿಧಾನ ಪರಿಷತ್ ಸದಸ್ಯರನ್ನು ಮಹಾರಾಷ್ಟ್ರದಲ್ಲಿ ಹೊಂದಿದ್ದು, ಅದರ ಬೆಂಬಲ ಯುಪಿಎ ಅಭ್ಯರ್ಥಿಗೆ ಇನ್ನಷ್ಟು ಬಲ ನೀಡಿದೆ.2007ರಲ್ಲೂ ಬಿಜೆಪಿಯ ಇಚ್ಛೆಗೆ ಹೊರತಾಗಿ ಶಿವಸೇನೆ ಪ್ರತಿಭಾ ಪಾಟೀಲರನ್ನು ಬೆಂಬಲಿಸಿತ್ತು.ಆ ವೇಳೆ ಬೈರೋನ್ ಸಿಂಗ್ ಶೆಖಾವತ್ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದರು
0 comments:
Post a Comment