PLEASE LOGIN TO KANNADANET.COM FOR REGULAR NEWS-UPDATES


 ದಾವಣಗೆರೆಯಲ್ಲಿ ರಾಹುಲ್ ಗಾಂಧಿ ಫರ್ಮಾನು

ದಾವಣಗೆರೆ, ಜೂ.೩: ಪದೇ ಪದೇ ಪಕ್ಷ ಬದಲಿಸುವವರಿಗೆ ಆದ್ಯತೆ ನೀಡಬೇಡಿ, ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ, ಮೂರು ಬಾರಿ ಚುಅವಣೆಯಲ್ಲಿ ಸೋತವರಿಗೆ ಟಿಕೆಟ್ ಕೊಡಬೇಡಿ ಇದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ನೀಡಿದ ಫರ್ಮಾನು.ಅವರು ಹುಬ್ಬಳ್ಳಿಯಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕಾರಿಣಿಯ ಬಳಿಕ ಇಂದು ಕರ್ನಾಟಕದ ಮ್ಯಾನ್‌ಚೆಸ್ಟರ್ ಎಂದೇ ಖ್ಯಾತವಾದ ದಾವಣಗೆರೆಗೆ ಆಗಮಿಸಿದರು. ಸ್ಥಳೀಯ ಸಂಸ್ಥೆಗಳ ಪಕ್ಷದ ಚುನಾಯಿತ ಪ್ರತಿನಿಧಿಗಳೊಂದಿಗೆ ಒಂದು ಗಂಟೆಗಳಿಗೂ ಹೆಚ್ಚುಕಾಲ ಸಂವಾದ ನಡೆಸಿದ ಅವರು, ಪಕ್ಷದ ನಾಯಕರ ಒಳ ಜಗಳದಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಒಗ್ಗಟ್ಟಿನಿಂದ ಕಾರ್ಯೋನ್ಮುಖರಾಗಿ ಎಂದು ತಿಳಿಯ ಹೇಳಿದರು.ಪಕ್ಷದಲ್ಲಿ ಹಿರಿಯ-ಕಿರಿಯ ನಾಯಕರೆಂಬ ಭೇದ-ಭಾವ ಮಾಡದೆ ನಾವೆಲ್ಲರೂ ಕಾಂಗ್ರೆಸ್ಸಿಗರೆಂಬ ಭಾವನೆಯಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ ಎಂದು ರಾಹುಲ್ ಗಾಂಧಿ ತಿಳಿಸಿದರು.
ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂದಿನ ಆರು ತಿಂಗಳುಗಳಲ್ಲಿಯೇ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು, ಇದರಿಂದ ಪೂರ್ವಭಾವಿಯಾಗಿ ಚುನಾವಣಾ ಪ್ರಚಾರ ನಡೆಸಲು ಮತ್ತು ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಕೆಲವು ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ಅಧಿಕತ ಅಭ್ಯರ್ಥಿಗಳೇ ಸೋಲುವಂತೆ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್‌ಗಾಂಧಿ, ನಮ್ಮ ನಮ್ಮ ಕಚ್ಚಾಟದ ಲಾಭವನ್ನು ಮೂರನೆಯವರು ಪಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಹಂಚಿಕೆಯಿಂದ ತಲೆದೋರುವ ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡುವ ಸಲುವಾಗಿಯೇ ಚುನಾವಣೆಗೆ 6 ತಿಂಗಳ ಮೊದಲೇ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದ ಅವರು, ಪಕ್ಷದಿಂದ ಪಕ್ಷಕ್ಕೆ ಪದೇ ಪದೇ ಹಾರುವವರಿಗೆ, ಮೂರು ಬಾರು ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡದಂತೆ ಪಕ್ಷದ ರಾಜ್ಯ ನಾಯಕರಿಗೆ ತಾಕೀತು ಮಾಡಿದರು.ಜನರಿಗೆ ತಲುಪಿಸಿ: ಕೇಂದ್ರ ಸರಕಾರ ಶ್ರೀಸಾಮಾನ್ಯರ ಒಳಿತಿಗಾಗಿ ನೂರಾರು ಜನಪರ ಕಾರ್ಯಕ್ರಮ ರೂಪಿಸಿದೆ.
ಈ ಎಲ್ಲ ಕಾರ್ಯಕ್ರಮಗಳ ಲಾಭ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿ ಎಂದು ಅವರು ಇದೇ ಸಂದರ್ಭದಲ್ಲಿ ಪಕ್ಷದ ಜನಪ್ರತಿನಿಧಿಗಳಿಗೆ ಕರೆ ನೀಡಿದರು.ರಾಜ್ಯ ಸರಕಾರ ಕೇಂದ್ರದ ಯೋಜನೆಗಳನ್ನು ತನ್ನದೆಂದು ಬಿಂಬಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ,ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿರುವ ಮಧುಸೂದನ್ ಮಿಸ್ತ್ರಿ, ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ,ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಈ ಸಭೆಯಲ್ಲಿ ಹಾಜರಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

Advertisement

0 comments:

Post a Comment

 
Top