ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಹಾಗೂ ಡೊನೇಷನ್ ವಸೂಲು ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಯಾವುದೇ ಪಾಲಕರು ಅಥವಾ ಪೋಷಕರು ದೂರು ಸಲ್ಲಿಸಿದ್ದಲ್ಲಿ, ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ತಿಳಿಸಿದ್ದಾರೆ.
ಖಾಸಗಿ ಶಾಲೆಗಳ ಕಾರ್ಯವೈಖರಿ ಮತ್ತಿತರ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ಕ್ರಮಬದ್ಧತೆ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ನಿಗದಿಗಿಂತ ಹೆಚ್ಚಿನ ಶುಲ್ಕ ಹಾಗೂ ಡೊನೇಷನ್ ವಸೂಲಿ ಬಗೆಗಿನ ದೂರುಗಳ ಬಗ್ಗೆ ಸಭೆಯಲ್ಲಿ ಪರಾಮರ್ಶಿಸಲಾಗಿದೆ. ಹೆಚ್ಚಿನ ಶುಲ್ಕ ಹಾಗೂ ಡೊನೇಷನ್ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ಕುರಿತಂತೆ ಸಂಬಂಧಪಟ್ಟ ಪಾಲಕರು ಅಥವಾ ಪೋಷಕರು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ೧೦ ರೂ.ಗಳ ಛಾಪಾ ಕಾಗದದ ಮೇಲೆ ಲಿಖಿತವಾಗಿ ದೂರನ್ನು ಆರ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಈಗಾಗಲೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಸಂಸ್ಥೆಯವರು ಹಾಗೂ ಇತರೆ ಶಾಲೆಯವರು (ನೋಟಿಫೈಡ್ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಶೇ. ೨೫ ರಷ್ಟು ಪ್ರವೇಶ ಮತ್ತಿತರ ಅಂಶಗಳ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಆದೇಶ ಪಾಲಿಸದಂತಹ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
0 comments:
Post a Comment