PLEASE LOGIN TO KANNADANET.COM FOR REGULAR NEWS-UPDATES



ಹೊಸದಿಲ್ಲಿ, ಮೇ 8: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ವಿಚಾರಣೆಯನ್ನು, ಅವರ ವಿರುದ್ಧದ ಪಿತೂರಿ ಆರೋಪವನ್ನು ಕೈಬಿಡದೆಯೇ ಮುಂದುವರಿಸಬೇಕೆಂದು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ಬಾಬ್ರಿ ಮಸೀದಿ ನಾಶವು ‘ಏಕೈಕ ವಿಸ್ತ್ರತ ಪಿತೂರಿಯ’ ಫಲವೆಂದು ಅದು ಹೇಳಿದೆ. ಅಡ್ವಾಣಿ, ಮುರಲಿ ಮನೋಹರ ಜೋಶಿ, ಉಮಾಭಾರತಿ, ವಿನಯ ಕತಿಯಾರ್, ಅಶೋಕ್ ಸಿಂಘಲ್, ಗಿರಿರಾಜ್ ಕಿಶೋರ್, ವಿಷ್ಣು ಹರಿ ದಾಲ್ಮಿಯಾ ಹಾಗೂ ಸಾಧ್ವಿ ಋತುಂಭರಾರ ವಿರುದ್ಧದ ಪ್ರಕರಣವನ್ನು, ಇತರ 41 ಮಂದಿಯ ಮುಖ್ಯವಾಗಿ ಕರ ಸೇವಕರು- ವಿರುದ್ಧದ ಪ್ರಕರಣದಿಂದ ಪ್ರತ್ಯೇಕಿಸಬಾರದೆಂದು ತನಿಖೆ ಸಂಸ್ಥೆಯು ಇತ್ತೀಚಿನ ಅಫಿದವಿತ್ ಒಂದರಲ್ಲಿ ನ್ಯಾಯಾಲಯವನ್ನು ವಿನಂತಿಸಿದೆ.
ವಿಚಾರಣಾ ನ್ಯಾಯಾಲಯ ಹಾಗೂ ಅಲಹಾಬಾದ್ ಹೈಕೋರ್ಟ್ ಗಳು ವಿಚಾರಣೆಯನ್ನು ಪ್ರತ್ಯೇಕಿಸಲು ಒಲವು ತೋರಿಸಿರುವುದು ಸಂಪೂರ್ಣ ತಪ್ಪೆಂದು ಅದು ಪ್ರತಿಪಾದಿಸಿದೆ. ಅಡ್ವಾಣಿಯವರ ವಿರುದ್ಧದ ಪಿತೂರಿ ಆರೋಪವನ್ನು ಕೈಬಿಟ್ಟ ಹಾಗೂ ವಾಸ್ತವವಾಗಿ ಬಾಬ್ರಿ ಮಸೀದಿ ನಾಶ ಮಾಡಿದವರು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದವರ ವಿಚಾರಣೆ ಯನ್ನು ಅವರ ವಿಚಾರಣೆಯಿಂದ ಪ್ರತ್ಯೇಕಿಸಿರುವುದನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ನ 2010, ಮೇ 20ರ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣದ ಕುರಿತು ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಮೊದಲನೆಯದು ಬಾಬ್ರಿ ಮಸೀದಿ ಧ್ವಂಸದಲ್ಲಿ ಕರಸೇವಕರ ಪಾತ್ರದ ಕುರಿತು ಬೆಟ್ಟು ಮಾಡಿದ್ದರೆ, ಎರಡನೆಯದು ವಿವಾದಿತ ನಿವೇಶನದ 175 ಮೀ. ದೂರದ ವೇದಿಕೆಯೊಂದರಲ್ಲಿ ಪ್ರಚೋ ದನಕಾರಿ ಭಾಷಣ ಹಾಗೂ ಘೋಷಣೆ ನೀಡಿದ ಬಗ್ಗೆ ಬಿಜೆಪಿ, ವಿಎಚ್‌ಪಿ ಹಾಗೂ ಆರೆಸ್ಸೆಸ್‌ನ 8 ಮಂದಿ ನಾಯ ಕರ ವಿರುದ್ಧ ಆರೋಪ ಹೊರಿಸಿದೆ.
ಘಟನೆಯ ಕುರಿತು ಸಿಬಿಐ ಒಟ್ಟು 49 ಪ್ರಕರಣಗಳನ್ನು ದಾಖಲಿಸಿದ್ದು, ಎಲ್ಲ 49 ಮಂದಿ ಆರೋಪಿಗಳಿಂದ 1992ರ ಡಿ.6ರಂದು ವಿವಾದಿತ ಕಟ್ಟಡ ಧ್ವಂಸಗೊಳಿಸುವ ‘ಏಕೈಕ ವಿಸ್ತೃತ ಪಿತೂರಿ’ ನಡೆದಿತ್ತೆಂದು ಆರೋಪಿಸಿದೆ. ಪ್ರತಿಯೊಬ್ಬ ಭಾಗಿದಾರನೂ ಈ ಪಿತೂರಿಯ ಉದ್ದೇಶ ಸಾಧನೆಗಾಗಿ ಭಾಗವಹಿಸಿದ್ದಾರೆ ಹಾಗೂ ಅನುಕೂಲ ಕಲ್ಪಿಸಿದ್ದಾರೆಂದು ಅದು ಹೇಳಿದೆ. ಪ್ರಚೋದನಕಾರಿ ಘೋಷಣೆ, ಕಟ್ಟಡ ನಾಶಕ್ಕೆ ಕರ ಸೇವಕರಿಗೆ ತರಬೇತಿ ಹಾಗೂ ಘಟನೆಯ ವೇಳೆ ಪತ್ರಕರ್ತರ ಮೇಲೆ ಹಲ್ಲೆ ವೇದಿಕೆಯ ನಿರ್ದೇಶನದಂತೆ ನಡೆದಿದೆ. ಅಲ್ಲಿ ಏನು ನಡೆಯುತ್ತಿದೆಯೆಂದು ಚಿತ್ರೀಕರಿಸಲು ಅವಕಾಶ ನೀಡದಿರುವುದು ಪಿತೂರಿಯ ಭಾಗವಾಗಿದೆ. ಎಲ್ಲ ಅಪರಾಧಗಳೇ ಈ ಸಂವಹನದ ಅನ್ವಯ ನಡೆದಿವೆಯೆಂದು ಸಿಬಿಐ ಆರೋಪಿಸಿದೆ.
ಹೀಗೆ ಎಲ್ಲ ಆರೋಪಿಗಳೂ ಗುರಿ ಸಾಧನೆಯ ಪಿತೂರಿಯಲ್ಲಿ ಭಾಗವಹಿಸಿ ದ್ದಾರೆ. ಆದರೆ, ಅವರ ವಿರುದ್ಧ ದಂಡ ಸಂಹಿತೆಯ 120ಬಿ, 295, 295ಎ ವಿಧಿಗಳನ್ವಯ ಆರೋಪ ಹೊರಿಸ ಲಾಗಿರಲಿಲ್ಲ ಅಥವಾ ವಿಚಾರಣಾ ನ್ಯಾಯಾಲಯ ಈ ಆರೋಪಗಳನ್ನು ಕೈ ಬಿಟ್ಟಿದೆ. ಎಂಟು ಮಂದಿ ನಾಯಕರು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಕರ ಸೇವಕರನ್ನು ಬಾಬ್ರಿ ಮಸೀದಿ ನಾಶಕ್ಕೆ ಪ್ರಚೋದಿಸಿದ್ದಾರೆ. ಗುಮ್ಮಟ ಕೆಳಗೆ ಉರುಳಿದಾಗ ವೇದಿಕೆಯಲ್ಲಿದ್ದ ನಾಯಕರು ಮತ್ತಿತರರು ಚಪ್ಪಾಳೆ ತಟ್ಟಿ, ಪರಸ್ಪರ ಆಲಿಂಗಿಸಿಕೊಂಡು ಹಾಗೂ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ. ಆದುದರಿಂದ ಎಂಟು ಮಂದಿ ನಾಯಕರು ಹಾಗೂ ಕರಸೇವಕರ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸದೆ ಒಟ್ಟಿಗೇ ನಡೆಸಬೇಕೆಂದು ಸಿಬಿಐ ವಾದಿಸಿದೆ.

Advertisement

0 comments:

Post a Comment

 
Top