PLEASE LOGIN TO KANNADANET.COM FOR REGULAR NEWS-UPDATES


  ಪೂರ್ವನಿಯೋಜಿತ ಜನಸ್ಪಂದನ ಸಭೆಗಳಿಗೆ ವಿವಿಧ ಕಾರಣಗಳ ನೆಪವೊಡ್ಡಿ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಜರುಗಿಸುವಂತೆ ಶಾಸಕ ಸಂಗಣ್ಣ ಕರಡಿ ಅವರು ತಹಸಿಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜನಸ್ಪಂದನ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
  ಜನರ ಬಳಿಗೆ ಸರ್ಕಾರ ಎನ್ನುವ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಲಾಗಿರುವ ಜನಸ್ಪಂದನ ಸಭೆಗಳಿಗೆ ಅಧಿಕಾರಿಗಳು ಪದೇ ಪದೇ ಗೈರು ಹಾಜರಾಗುತ್ತಿರುವುದರಿಂದ, ಜನಸ್ಪಂದನ ಸಭೆಗಳು ಮಹತ್ವ ಕಳೆದುಕೊಳ್ಳುತ್ತಿವೆ.  ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.  ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದ್ದು, ಅಧಿಕಾರಿಗಳು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅಗತ್ಯವಿದೆ.  ಅವರ ಅಹವಾಲುಗಳಿಗೆ ಪರಿಹಾರ ನೀಡುವ ಉದ್ದೇಶದಿಂದಲೇ ಸರ್ಕಾರ ಜನಸ್ಪಂದನ ಸಭೆಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಿದೆ.  ಆದರೆ ಅಧಿಕಾರಿಗಳು ಸರ್ಕಾರದ ಉದ್ದೇಶಕ್ಕೆ ವಿರುದ್ಧವಾಗಿ ವರ್ತಿಸುವುದು ಸರಿಯಲ್ಲ.  ಇಂತಹ ಅಧಿಕಾರಿಗಳಿಗೆ ಸೂಕ್ತ ಪಾಠ ಕಲಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಶಾಸಕ ಸಂಗಣ್ಣ ಕರಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 
  ಸರ್ಕಾರದ ಯೋಜನೆಗಳು ಸಫಲವಾಗಬೇಕಾದರೆ ಅಧಿಕಾರಿಗಳ ಇಚ್ಛಾಶಕ್ತಿ ಅಗತ್ಯವಾಗಿದೆ.  ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.  ಗೊಂಡಬಾಳ ಗ್ರಾಮದ ಜನತೆ ಪ್ರಗತಿಪರ ರೈತರಾಗಿದ್ದು, ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳುವ ಅವರ ಶ್ರಮ ಇತರರಿಗೆ ಮಾದರಿಯಾಗಿದೆ.  ಗ್ರಾಮಕ್ಕೆ  ಅವಶ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಹಳೇಗೊಂಡಬಾಳ ಗ್ರಾಮಕ್ಕೆ ತುಂಗಭದ್ರಾ ಹಿನ್ನೀರಿನಿಂದ ಆಗುವ ತೊಂದರೆಯನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಏತನೀರಾವರಿ, ಪೈಪ್‌ಲೈನ್, ಮೋಟಾರ್ ದುರಸ್ತಿ ಕ್ರಮಕ್ಕೆ ಆದ್ಯತೆ ನೀಡಲಾಗುತ್ತಿದೆ.  ಗೊಂಡಬಾಳ ಗ್ರಾಮದ ಸುತ್ತಮುತ್ತಲಿನ ಜಮೀನುಗಳು ಅತಿಕ್ರಮಕ್ಕೆ ಒಳಗಾಗಿದ್ದು, ಅಂತಹ ಅತಿಕ್ರಮವನ್ನು ತೆರವುಗೊಳಿಸಿ ಗ್ರಾಮ ಪಂಚಾಯತಿಗೆ ಮರು ಹಂಚಿಕೆಗೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸಭೆಗೆ ಗೈರುಹಾಜರಾಗಿದ್ದ ಶಿಕ್ಷಣ ಇಲಾಖೆ, ಸಣ್ಣ ನೀರಾವರಿ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ತಕ್ಷಣ ನೋಟೀಸ್ ಜಾರಿಗೊಳಿಸುವಂತೆ ಶಾಸಕ ಸಂಗಣ್ಣ ಕರಡಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದು ಕಲಾಲ್, ಉಪಾಧ್ಯಕ್ಷ ಹುಲಗಪ್ಪ ಬಜಂತ್ರಿ, ಎಪಿಎಂಸಿ ಅಧ್ಯಕ್ಷ ಶರಣಪ್ಪ ಸಜ್ಜನ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ತಹಸಿಲ್ದಾರ್ ಬಿ.ಎಲ್. ಗೋಠೆ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top