ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): 1993ರ ಮುಂಬೈ ಬಾಂಬ್ ದಾಳಿಯ ಮಿದುಳು ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂನ ಇಬ್ಬರು ನಿಕಟವರ್ತಿಗಳಾದ ಛೋಟಾ ಶಕೀಲ್ ಮತ್ತು ಇಬ್ರಾಹಿಂ `ಟೈಗರ್` ಮೆಮೊನ್ ಅವರನ್ನು ಪ್ರಮುಖ ಮಾದಕ ವಸ್ತು ಕಳ್ಳಸಾಗಣೆದಾರರು ಎಂಬುದಾಗಿ ಬುಧವಾರ ಘೋಷಿಸಿರುವ ಅಮೆರಿಕ ಇಬ್ಬರ ವಿರುದ್ಧವೂ ದಿಗ್ಬಂಧನ ವಿಧಿಸಿ ಅವರ ವಹಿವಾಟು ಮತ್ತು ಆರ್ಥಿಕ ಜಾಲಗಳನ್ನು ಅದುಮುವ ಕ್ರಮ ಕೈಗೊಂಡಿದೆ. ಇವರಿಬ್ಬರ ವಿರುದ್ಧ ಇಂಟರ್ ಪೋಲ್ `ರೆಡ್ ನೋಟಿಸ್`ಗಳನ್ನೂ ಹೊರಡಿಸಿದೆ.
ವಿದೇಶಾಂಗ ಆಸ್ತಿಗಳು ಮತ್ತು ನಿಯಂತ್ರಣದ ಬೊಕ್ಕಸ ಕಚೇರಿಯ ಇಲಾಖೆಯು ಛೋಟಾ ಶಕೀಲ್ ಮತ್ತು ಇಬ್ರಾಹಿಂ `ಟೈಗರ್` ಮೊಮೋನ್ ನ್ನು `ಮಾದಕ ದ್ರವ್ಯ ಕಳ್ಳಸಾಗಣೆದಾರರು` ಎಂದು ವಿಶೇಷವಾಗಿ ಹೆಸರಿಸಿದೆ. ದಾವೂದ್ ನಡೆಸುವ ಕ್ರಿಮಿನಲ್ ಚಟುವಟಿಕೆಗಳ ಸಮೂಹ `ಡಿ ಕಂಪೆನಿ`ಯಲ್ಲಿ ಇವರಿಬ್ಬರೂ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕ ಹೇಳಿದೆ.
ಮುಂಬೈಯಲ್ಲಿ ಜನಿಸಿದ 57ರ ಹರೆಯದ ಛೋಟಾ ಶಕೀಲ್ ದಾವೂದ್ ನ ಬಲಗೈ ಬಂಟನಾಗಿದ್ದು `ಡಿ ಕಂಪೆನಿ` ಮತ್ತು ಇತರ ಸಂಘಟಿತ ಅಪರಾಧ ಮತ್ತು ಭಯೋತ್ಪಾದಕ ಗುಂಪುಗಳ ಜೊತೆ ಸಮನ್ವಯ ಸಾಧಿಸುವ ಸಂಚಾಲಕನಾಗಿದ್ದಾನೆ.
52ರ ಹರೆಯದ ಮೆಮೋನ್ ದಕ್ಷಿಣ ಏಷ್ಯಾದಲ್ಲಿ `ಡಿ ಕಂಪೆನಿ`ಯ ವ್ಯವಹಾರಗಳನ್ನು ನಿಯಂತ್ರಿಸುತ್ತಿರುವ ದಾವೂದ್ ನ ನಿಕಟ ಬಂಟನಾಗಿದ್ದಾನೆ. ಈತ 1993ರಲ್ಲಿ ಮುಂಬೈಯಲ್ಲಿ 250ಕ್ಕೈ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಬಾಂಬ್ ದಾಳಿ ಪ್ರಕರಣದಲ್ಲಿ ಭಾರತ ಹುಡಕಾಡುತ್ತಿರುವ ಪ್ರಮುಖ ಅಪರಾಧಿಯಾಗಿದ್ದಾನೆ ಎಂದು ಅಮೆರಿಕ ಹೇಳಿದೆ.
ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಅಪರಾಧಗಳು ಮತ್ತು ಭಯೋತ್ಪಾದನೆ ಕೃತ್ಯಗಳಲ್ಲಿ ವಿಶ್ವದ ಕುಖ್ಯಾತ ಅಪರಾಧಿ ಸಂಘಟನೆಗಳ ಕೈವಾಡ ಇರುವ ಬಗೆಗೂ ಅಮೆರಿಕ ಬೊಟ್ಟು ಮಾಡಿದೆ. ಶಕೀಲ್ ಮತ್ತು ಮೆಮೋನ್ ಈ ಇಬ್ಬರ ಬಂಧನಕ್ಕೆ ಅನುಕೂಲವಾಗುವಂತೆ ಇಂಟರ್ ಪೋಲ್ `ರೆಡ್ ನೋಟಿಸ್` ಗಳನ್ನು ಜಾರಿ ಮಾಡಿದೆ.
ದಾವೂದ್ ನನ್ನು 2003ರ ಅಕ್ಟೋಬರ್ ನಲ್ಲೇ ` ಜಾಗತಿಕ ಭಯೋತ್ಪಾದಕ` ಎಂಬುದಾಗಿ ಘೋಷಿಸಲಾಗಿದ್ದರೆ, 2006ರ ಜೂನ್ ತಿಂಗಳಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆದಾರ ಎಂಬುದಾಗಿ ಘೋಷಿಸಲಾಗಿತ್ತು.
2006ರ ಜೂನ್ ತಿಂಗಳಲ್ಲಿ ದಾವೂದ್ ಗುಂಪನ್ನು ಪ್ರಮುಖ ವಿದೇಶೀ ಮಾದಕ ದ್ರವ್ಯ ಕಳ್ಳಸಾಗಣೆ ತಂಡ ಎಂಬುದಾಗಿಯೂ ಘೋಷಿಸಲಾಗಿತ್ತು
0 comments:
Post a Comment