PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಶಾಂತಾದೇವಿ ಹಿರೇಮಠ ಈ ವಯಸ್ಸಿನಲ್ಲಿಯೂ ನಿರಂತರವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಎಲ್ಲರಿಗೆ ಪ್ರೇರಣೆ ನೀಡುವಂತಹದ್ದು. ಇವರ 'ಮಾತುಕತೆ' ಕೃತಿ ಸಹಜವಾಗಿ ಮೂಡಿಬಂದಿದೆ. ಅವರ ಮನೆತನವು ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೦೭ನೇ ಕವಿಸಮಯದಲ್ಲಿ ಶಾಂತಾದೇವಿ ಹಿರೇಮಠರಿಗೆ ಅಭಿನಂದಿಸಿ ಮಾತನಾಡುತ್ತಿದ್ದರು.
ಶಾಂತಾದೇವಿಯವರ ಕೃತಿಯ ಬಗ್ಗೆ ಮಾತನಾಡಿದ ಗೋರಂಟ್ಲಿಯವರು 'ಮಾತುಕತೆ' ಕೃತಿಗೆ ದತ್ತಿನಿಧಿ ಬಹುಮಾನ ಪಡೆಯುವ ಮೂಲಕ ಅವರು ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಸಾಹಿತ್ಯ ಪರಂಪರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಸಾಹಿತ್ತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಹಾಸ್ಯ , ವಿಡಂಭಣೆಯ ಮೂಲಕ ಇಡೀ ಪರಿಸರದ ವಿಶ್ಲೇಷಣೆ ಮತ್ತು ಚರ್ಚೆಯನ್ನು ಶಾಂತಾದೇವಿ ಹಿರೇಮಠರು ತಮ್ಮ ಕೃತಿಯಲ್ಲಿ ಮಾಡಿದ್ದಾರೆ. ಅವರಿಗೆ ಸಕಲ ಸಾಹಿತ್ಯ ಬಳಗದ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.
ನಂತರ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರರು ಶಾಂತಾದೇವಿ ಹಿರೇಮಠರಿಗೆ ಶಾಂತರಸರು ಬೆನ್ನ ಹಿಂದಿನ ಬೆಳಕಾಗಿದ್ದರು. ಶಾಂತಾದೇವಿಯವರ ಲಲಿತ ಬರಹಗಳು ಗಮನಸೆಳೆದಿವೆ. ಕವಿಸಮಯದ ನಿರಂತರ ಸಾಹಿತ್ತಿಕ ಚಟುವಟಿಕೆಗಳಿಂದಾಗಿ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಎಲ್ಲರೂ ಒಟ್ಟೊಟ್ಟಿಗೆ ಬೆಳೆಯುತ್ತಿರುವುದು ಸ್ವಾಗತಾರ್ಹ.ಶಾಂತಾದೇವಿ ಹಿರೇಮಠರಿಗೆ ಅಭಿನಂದನೆಗಳನ್ನು ಅರ್ಪಿಸಿದರು. ನಂತರ ಮಾತನಾಡಿದ ಶಾಂತಾದೇವಿ ಹಿರೇಮಠ ಈ ಪುಸ್ತಕ ಪ್ರಕಟವಾಗುವುದಕ್ಕೆ ಮುಖ್ಯ ಪ್ರೇರಣೆ ಕವಿಸಮಯ ಎಂದರಲ್ಲದೇ ತಮ್ಮ ಪತಿ ಕವಿ ದಿ.ಗುರುಲಿಂಗಯ್ಯರನ್ನು ನೆನೆದು ಭಾವುಕರಾದರು. 
ವಿಜಯಲಕ್ಷ್ಮೀ ಮಠದ,ಸಿರಾಜ್ ಬಿಸರಳ್ಳಿ ಕೃತಿಯ ಕುರಿತು ಮಾತನಾಡಿದರು. ಕಸಾಪ ದತ್ತಿನಿಧಿ ಪುರಸ್ಕಾರ ಪಡೆದ ಶಾಂತಾದೇವಿ ಹಿರೇಮಠರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ  ಅಲ್ಲಮಪ್ರಭು ಬೆಟ್ಟದೂರು- ಹೋಗೋಣವೇ ಮಠದ ಕಡೆಗೆ, ಅನಸೂಯಾ ಜಾಗೀರದಾರ- ನನಗೂ ಬಿಪಿ ಏರುತ್ತದೆ, ಶಾಂತಾದೇವಿ ಹಿರೇಮಠ- ಧಗೆ ಧಗೆ ಬಿಸಿಲು, ವಿಜಯಲಕ್ಷ್ಮೀ ಮಠದ- ಗುಳುಂಪ್ರಸಾದ, ವಿಠ್ಠಪ್ಪ ಗೋರಂಟ್ಲಿ- ಏನ ಹಾಡಲಿ ಹೇಗೆ ಹಾಡಲಿ, ಶರಣಪ್ಪ ದಾನಕೈ-ಬಂಗಾರ, ಸಿರಾಜ್ ಬಿಸರಳ್ಳಿ- ಆರೀಪ್ ರಾಜಾರ ಗಜಲ್, ಪುಷ್ಪಲತಾ ಏಳುಬಾವಿ- ಬತ್ತಿ ಬಾಡಿ ಹೋದವಳು, ಡಾ.ಬಸವರಾಜ ದೋಟಿಹಾಳ- ಸ್ತಿತ್ಯಂತರ, ವಾಸುದೇವ ಕುಲಕರ್ಣಿ- ಮಳೆ ಬಂದೀತೆ?, ಎಂ.ಡಿ.ಹುಸೇನ್ - ಚುಟುಕು ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಹನುಮಂತಪ್ಪ ಅಂಡಗಿ, ಶಿವಾನಂದ ಹೊದ್ಲೂರ, ಬಸವರಾಜ ಶೀಲವಂತರ, ಕೃಷ್ಣಪ್ಪ ಸಂಗಟಿ, ಮಲ್ಲಿಕಾರ್ಜುನಗೌಡ  ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಅನಸೂಯಾ ಜಾಗೀರದಾರ, ವಂದನಾರ್ಪಣೆಯನ್ನು ಪುಷ್ಪಲತಾ ಏಳುಬಾವಿ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top