ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರಪತಿಗಳ ಅನುಮೋದನೆಗಾಗಿ ಸಲ್ಲಿಸಿರುವ ಇಂಡಸ್ಟ್ರಿಯಲ್ ಎಂಪ್ಲಾಯ್‌ಮೆಂಟ್ ವಿಧೇಯಕ ೨೦೦೫ ರ ಅನುಮೋದನೆಗೆ ಯಾವುದೇ ಕಾಲಮಿತಿ ನಿಗದಿಪಡಿಸಲಾಗಿಲ್ಲ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಎಂ. ರಾಮಚಂದ್ರನ್ ಅವರು ತಿಳಿಸಿದ್ದಾರೆ.
ಇಂಡಸ್ಟ್ರಿಯಲ್ ಎಂಪ್ಲಾಯ್‌ಮೆಂಟ್ ವಿಧೇಯಕ ೨೦೦೫ ರ ಅನುಮೋದನೆ ಕುರಿತಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿಗೆ ಸಲ್ಲಿಸಿರುವ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಎಂ. ರಾಮಚಂದ್ರನ್ ಅವರು, ಕರ್ನಾಟಕ ಸರ್ಕಾರ ಇಂಡಸ್ಟ್ರಿಯಲ್ ಎಂಪ್ಲಾಯ್‌ಮೆಂಟ್ ವಿಧೇಯಕ ೨೦೦೫ ಅನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದು, ಇದರ ಭಾಗ-೩ ರ ಉಪವಿಭಾಗ-೩ ನ್ನು ಶಾಸನ ಸಭೆಯಲ್ಲಿ ತಿದ್ದುಪಡಿ ಮಾಡಿ ಸಲ್ಲಿಸುವಂತೆ ರಾಷ್ಟ್ರಪತಿಗಳು ಕಳೆದ ೨೦೦೭ ರಲ್ಲಿ ನೀಡಿದ ನಿರ್ದೇಶನದ ಮೇರೆ ರಾಜ್ಯ ಸರ್ಕಾರಕ್ಕೆ ಸೂಚನೆಗಳೊಂದಿಗೆ ಹಿಂದಿರುಗಿಸಲಾಗಿದೆ. ತಿದ್ದುಪಡಿ ಮಾಡಿರುವ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಅನುಮೋದನೆಗೆ ಸಲ್ಲಿಸಲು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವ ಸಲುವಾಗಿ ಕಳುಹಿಸಿಕೊಡಲಾಗಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ವಿಧೆಯಕವನ್ನು ಮೂರು ದೃಷ್ಟಿಕೋನಗಳಿಂದ ಪರಿಶೀಲಿಸಬೇಕಾಗಿದ್ದು, ಕೇಂದ್ರದ ಕಾನೂನುಗಳೊಂದಿಗಿನ ವ್ಯತ್ಯಾಸ, ರಾಷ್ಟ್ರೀಯ ಅಥವಾ ಕೇಂದ್ರ ನೀತಿಯ ಅತಿಕ್ರಮ ಹಾಗೂ ಕಾನೂನು ಮತ್ತು ಸಂವಿಧಾನಿಕ ನ್ಯಾಯ ಸಮ್ಮತಿ ಕುರಿತಂತೆ ಪರಿಶೀಲನೆ ನಡೆಯಬೇಕಾಗಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಅವಶ್ಯಕತೆ ಇದ್ದಾಗ ಶಾಸನಗಳನ್ನು ಮಾರ್ಪಾಟು ಅಥವಾ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಬೇಕಾಗಿರುತ್ತದೆ. ಅಲ್ಲದೆ ಈ ವಿಷಯಗಳ ಕುರಿತು ರಾಜ್ಯ ಸರ್ಕಾರದೊಂದಿಗೆ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆದ್ದರಿಂದ ವಿಧೇಯಕದ ಅನುಮೋದನೆಗೆ ಯಾವುದೆ ಕಾಲಮಿತಿ ಅಳವಡಿಸಿಕೊಳ್ಳಲಾಗುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಎಂ. ರಾಮಚಂದ್ರನ್ ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
0 comments:
Post a Comment