ಲಾಜಿಕ್ ಯಾಕೆ ಮ್ಯಾಜಿಕ್ ಓಕೆ
ಚಿಕ್ಕ ತೂತು ಒಂದು ದೊಡ್ಡ ಹಡಗನ್ನು ಮುಳುಗಿಸಬಲ್ಲದು, ಚಿಕ್ಕ ಚಿಕ್ಕ ಗೆದ್ದಲುಗಳು ದೊಡ್ಡ ಮರಗಳನ್ನು ಉರುಳಿಸಬಲ್ಲವು.ಚಿಕ್ಕದೊಂದು ವೈರಸ್ ಕಂಪ್ಯೂಟರ್‌ನ್ನು ಹಾಳಾಗುವಂತೆ ಮಾಡಬಲ್ಲದು, ಚಿಕ್ಕ ಚಿಕ್ಕ ಹಣಕ್ಕೆ ಚಿಕ್ಕ ಚಿಕ್ಕ ಮತಗಳನ್ನು ಮಾರಿಕೊಳ್ಳುವ ಈ ಜನರಿಂದ ಚಿಕ್ಕವರೆಲ್ಲ ದೊಡ್ಡವರಾಗಿ, ದೊಡ್ಡ ದೊಡ್ಡ ಹಗರಣಗಳನ್ನು ಸೃಷ್ಟಿಸಿ, ದೊಡ್ಡ ದೊಡ್ಡ ಹಣವನ್ನು ಲೂಟಿ ಮಾಡಬಲ್ಲರು. ಆದ್ದರಿಂದ ತಪ್ಪು ಚಿತ್ತದಾದರೆ ಉಗ್ರ ಶಿಕ್ಷೆ. ದೊಡ್ಡ ತಪ್ಪಾಗಿದ್ದರೆ ಅವರಿಗೆ ಸ್ವರ್ಗ..
ಹೀಗೆ ಉಪೇಂದ್ರ ೩ ನಿಮಿಷ ೫೧ ಸೆಕೆಂಡ್‌ನ ಈ ಸಂಭಾಷಣೆಯನ್ನು ಹೇಳುವಾಗ ಥೇಟರ್ ತುಂಬಾ ಚಪ್ಪಾಳೆಗಳ ಸುರಿಮಳೆ. ಶಿಳ್ಳೆಗಳ ಮುಂಗಾರು ಮಳೆ.
ಅದೇ ಲವ್, ಅದೇ ರಿವೆಂಜ್, ಮತ್ತದೇ ರೌಡಿಸಂ ಸಿನಿಮಾಗಳನ್ನು ನೋಡಿ ನೋಡಿ ಬೇಸತ್ತಿದ್ದ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಈ ವಾರ ತೆರೆ ಕಂಡ ಕಠಾರಿವೀರ ಸುರಸುಂದರಾಂಗಿ ಸಿನಿಮಾ ಖಂಡಿತ ಮಜಾ ಕೊಡುತ್ತೆ. ಆದರೆ ಕಥೆಯಲ್ಲಿರುವ ಲಾಜಿಕ್‌ನ್ನು ಗಂಭೀರವಾಗಿ ಪರಿಗಣಿಸಿದೇ ಕಠಾರಿವೀರನನ್ನು ನೋಡಬೇಕಷ್ಟೇ. ಸಿನಿಮಾ ನೋಡಿ ಹೊರಬಂದಾಗ ‘ಅಂಬ’ಲಿ ಸಾರು, ‘ಉಪ್ಪಿ’ನ ಕಾಯಿ ಹಾಗೂ ರಮ್ಯಾ ಎಂಬ ಮುದ್ದೆಯ ಊಟ ಮಾಡಿದ ಅನುಭವ ಪ್ರೇಕ್ಷಕನದ್ದು. ಯಮ-ಚಿತ್ರಗುಪ್ತ, ಇಂದ್ರ-ಇಂದ್ರಜೆ ಹಾಗೂ ಹುಲುಮಾನವನ ಆಟ, ಲೋಕಲೋಕಗಳ ನಡುವಿನ ಓಡಾಟ ಖುಷಿ ಕೊಡುತ್ತದೆ. ರಕ್ತಕಣ್ಣೀರು ಚಿತ್ರದ ಕುಷ್ಟರೋಗಿ ಮೋಹನ್ ಕೆಲವೇ ದೃಶ್ಯಗಳಲ್ಲಿ ಇದ್ದರೂ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತಂತೆ ಹಿಡಿದಿಡುವ ಸಾಮರ್ಥ್ಯವನ್ನು ಪಾತ್ರಕ್ಕೆ ಕಲ್ಪಿಸಲಾಗಿದೆ. ಇದನ್ನು ನೋಡಿದರೆ ನಿರ್ಮಾಪಕ ಮುನಿರತ್ನ ಇನ್ನೂ ರಕ್ತಕಣ್ಣೀರು ಹ್ಯಾಂಗೋವರ್‌ನಿಂದ ಹೊರಬಂದಂತೆ ಕಾಣಲ್ಲ.
ಹಲೋ ಯಮ, ಯಮಲೋಕದಲ್ಲಿ ವೀರಪ್ಪನ್ ಎಂಬ ಕಾಲ್ಪನಿಕ ಕಮ್ ಪೌರಾಣಿಕ ಸಿನಿಮಾಗಳ ನಂತರ ಕನ್ನಡದಲ್ಲಿ ಅಂಥದ್ದೆ ಮತ್ತೊಂದು ಪ್ರಯತ್ನ ಕಠಾರಿವೀರ ಸುರಸುಂದರಾಂಗಿ. ಚಿತ್ರಕ್ಕೆ ಈ ಹೆಸರಿಗಿಂತ ಚಿತ್ರದ ಕೊನೆಯಲ್ಲಿ ಅಂಬರೀಶ್ ಹೇಳುವ ಯಮನನ್ನೇ ಗೆದ್ದ ಮಾನವ ಎಂಬ ಶೀರ್ಷಿಕೆ ಮತ್ತಷ್ಟೂ ಸೂಕ್ತವಾಗುತ್ತಿತ್ತು. ಚಿತ್ರದ ಆರಂಭದಲ್ಲೇ ಸುದೀಪ್ ಧ್ವನಿಯಲ್ಲಿ ನರಕ, ಸ್ವರ್ಗ, ಯಮಲೋಕ, ಇಂದ್ರಲೋಕ ಎಂಬುವು ತಾತ-ಮುತ್ತಾತರಿಂದ ಬಳುವಳಿಯಾಗಿ ಬಂದಿರುವ ನಂಬಿಕೆಗಳು ಎಂದು ಮುನಿರತ್ನ ಹೇಳಿಸಿದ್ದಾರೆ. ಬಳಿಕ ನಿಧಾನವಾಗಿ ಕಥೆಯನ್ನು ಎಲ್ಲೂ ಬೋರಾಗದಂತೆ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.
ಚಿತ್ರಗುಪ್ತನನ್ನು ಮೊಬಲ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ, ನರಕಾಽಪತಿ ಕುರ್ಚಿಗಾಗಿ ಯಮ ಹಾಗೂ ಚಿತ್ರಗುಪ್ತರ ನಡುವೆ ಚುನಾವಣೆಯ ನಡೆಸುವ ಕಲ್ಪನೆ, ಇಂದ್ರಲೋಕದಲ್ಲೂ ಮಾನವನೊಂದಿಗೆ ದೇವಸಖರ ಕಾಳಗ, ಹಾಡೊಂದರಲ್ಲಿ ಭೂಲೋಕದಲ್ಲಿ ಅಗಾಧ ಸಾಧನೆ ಮಾಡಿ ಮೃತರಾದವರನ್ನು ಸ್ವರ್ಗದಲ್ಲಿರುವಂತೆ ಚಿತ್ರಿಸಿರುವ ಕಲ್ಪನೆ, ಭೂಲೋಕದ ಮೃತ ಕುಖ್ಯಾತರಿಗೆ ನರಕದ ಶಿಕ್ಷೆ ಕೊಡುತ್ತಿರುವ ದೃಶ್ಯ, ಇಂದ್ರನ ಮಗಳನ್ನೇ ಪಟಾಯಿಸುವ ಪಡ್ಡೆತನ, ದೇವಕನ್ಯೆಯನ್ನು ಸ್ವಯಂವರದಲ್ಲಿ ದೇವಾನುದೇವತೆಗಳ ಸ್ಪರ್ಧೆಯ ನಡುವೆಯೂ ಮಾನವ ವರಿಸುವ ಪರಿ ಇಷ್ಟವಾಗುತ್ತವೆ. ಹೀಗೆಂದ ಮಾತ್ರಕ್ಕೆ ಚಿತ್ರದಲ್ಲಿ ಲೋಪಗಳೇ ಇಲ್ಲವೆಂದಲ್ಲ. ಮುತ್ತಪ್ಪ ರೈ ಅವರಿರುವ ದೃಶ್ಯ ಜಯ ಕರ್ನಾಟಕ ಸಂಘಟನೆಯ ಪ್ರಚಾರಕ್ಕೆ ಬಳಸಿಕೊಂಡಂತಿದೆ. ಮುಂದೊಂದು ದಿನ ರೈ ಅಭಿನಯದಲ್ಲಿನ ಸಂಭಾಷಣೆಯ ಸಾಲುಗಳು ಕಾರ್ಯಕರ್ತರ ಮೊಬಲ್ ಕಾಲರ್‌ಟ್ಯೂನ್ ಆದರೂ ಅಚ್ಚರಿ ಇಲ್ಲ. ಈ ಪಾತ್ರದಲ್ಲಿ ಮುತ್ತಪ್ಪ ರೈ ಅವರೇ ಕಾಣಿಸಿಕೊಳ್ಳಬೇಕು ಎಂಬ ಗಟ್ಟಿತನ ಪಾತ್ರಕ್ಕಿಲ್ಲ.
ಅಂಬಿ ಯಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಯಮನ ಕುರ್ಚಿಗೂ ಸವಾಲೊಡ್ಡುವ ಪಾತ್ರ ಚಿತ್ರಗುಪ್ತನಿಗೆ ಇದ್ದುದರಿಂದ ದೊಡ್ಡಣ್ಣ ಸರಿಯಾದ ಆಯ್ಕೆ. ಹಾಗೆಯೇ ದೊಡ್ಡಣ್ಣ ಕೂಡಾ ಚಿತ್ರಗುಪ್ತನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವಕನ್ಯೆಯಾಗಿ ರಮ್ಯಾ ಯುವಕರ ಎದೆಗೆ ಕಿಚ್ಚು ಹಚ್ಚುತ್ತಾರೆ. ಹುಲುಮಾನವ ಮತ್ತು ರಕ್ತಕಣ್ಣೀರಿನ ಮೋಹನನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಪೇಂದ್ರ ಹಾಗೂ ಬೀಸೋ ಗಧೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಸಿಂಹಾಸನವಂತೆ ಎಂಬಂಥ ಅವರು ಬರೆದಿರುವ ಸಂಭಾಷಣೆಯ ಸಾಲುಗಳು ಚಿತ್ರದ ಪ್ರಮುಖ ಹೈಲೈಟ್.
ಸಂಭಾಷಣೆ ಬರೆದಿರುವ ಉಪೇಂದ್ರ ಆದಿಪ್ರಾಸ, ಆಂತ್ಯಪ್ರಾಸವನ್ನು ತಲೆಯಲ್ಲಿಟ್ಟುಕೊಂಡು ಬರೆದಿರುವ ಸಾಲುಗಳು ಖುಷಿ ಕೊಡುತ್ತವೆ. ಇಂಥ ದೊಡ್ಡ ಸಂಬಾಷಣೆಗಳನ್ನು ರಕ್ತಕಣ್ಣೀರು ಸಿನಿಮಾದ ಮೋಹನ್‌ನ ಪಾತ್ರದಲ್ಲಿ ಹೇಳಿಸಿರುವುದು ಚಿತ್ರದ ಓಟಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ವಿ.ಹರಿಕೃಷ್ಣ ಊಲಾಲಾ ಊಲಾಲಾಲಾ ಇದು ಹಾಲು ಕೊಡೋ ಎಮ್ಮೆ ಹಾಡಿಗೆ ಭಲ್ಲೆ ಭಲ್ಲೇ ಹಿನ್ನಲೆ ಸಂಗೀತವನ್ನು ಕದ್ದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಉಳಿದಂತೆ ಟಪ್ಪಾಂಗುಚ್ಚಿ ಹಾಡುಗಳಿಗೆ ಸಂಗೀತ ನೀಡುವುದು ಹರಿಕೃಷ್ಣಗೆ ಸಲೀಸು. ವೇಣು ಛಾಯಾಗ್ರಹಣದ ಬಗ್ಗೆ ನೋ ದೂಸ್ರಾ. ಸೆಟ್‌ಗಳು, ಲೋಕೆಷನ್‌ಗಳ ವಿಷಯದಲ್ಲಿ ನಿರ್ಮಾಪಕ ರತ್ನ ಎಲ್ಲೂ ಮುನಿಸಿಕೊಂಡಿಲ್ಲ. ಆದರೆ ೩ಡಿ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡದ್ದು ೨ಡಿ ಸಿನಿಮಾ ಪ್ರೇಕ್ಷಕರಿಗೆ ಕೊಟ್ಟದ್ದು, ಬಿಡುಗಡೆಗಾಗಿ ರಾಧ್ಧಾಂತ ಮಾಡಿಕೊಂಡದ್ದು ಇವೆಲ್ಲಾ ಬೇಕಿತ್ತಾ?
-ಚಿತ್ರಪ್ರಿಯ ಸಂಭ್ರಮ್
0 comments:
Post a Comment