PLEASE LOGIN TO KANNADANET.COM FOR REGULAR NEWS-UPDATES



- ಶಿವಸುಂದರ್


ಸ್ವಾತಂತ್ರ್ಯ ಬಂದು 63 ವರ್ಷಗಳಾದ ನಂತರ ಪ್ರಜಾಪ್ರಭುತ್ವ ಒಂದರಲ್ಲಿ ಸರಕಾರ ಶಿಕ್ಷಣ ಮೂಲಭೂತ ಹಕ್ಕೆಂದು ಒಪ್ಪಿಕೊಳ್ಳು ತ್ತದೆ. ಆದರೆ ಎಲ್ಲರಿಗೂ ಶಿಕ್ಷಣ ಕೊಡಲು ಬೇಕಾದ ಸಂಪನ್ಮೂಲವಿಲ್ಲವೆಂದು ನೆಪಹೇಳು ತ್ತದೆ. ವಾಸ್ತವವಾಗಿ ವರ್ಷವೊಂದಕ್ಕೆ ಈ ದೇಶದ ಎಲ್ಲಾ ಮಕ್ಕಳಿಗೂ ಏಕರೂಪಿ ಗುಣ ಮಟ್ಟದ ಶಿಕ್ಷಣ ಕೊಡಲು ಅಂದಾಜು ವರ್ಷಕ್ಕೆ 3 ಲಕ್ಷ ಕೋಟಿ ರೂಪಾಯಿಗಳು ಹೆಚ್ಚುವರಿ ಯಾಗಿ ಬೇಕಾಗುತ್ತದೆ. ಈ ದೇಶದ 13 ಕೋಟಿ ಮಕ್ಕಳಿಗೆ ಅನುಕೂಲವಾಗುವ ಈ ಕನಿಷ್ಠ ಕಲ್ಯಾಣಕಾರಿ ಕಾರ್ಯಕ್ರಮಕ್ಕೆ ತನ್ನ ಬಳಿ ಹಣವಿಲ್ಲವೆಂದು ಹೇಳುವ ಕಲ್ಯಾಣ ರಾಜ್ಯದ ಸರಕಾರ ವರ್ಷವೊಂದಕ್ಕೆ ಕೇವಲ 20 ಕಾರ್ಪೊರೇಟ್ ಉದ್ಯಮಪತಿಗಳಿಗೆ 5.5 ಲಕ್ಷ ಕೋಟಿ ರೂಪಾಯಿ ರಿಯಾಯಿತಿಯನ್ನು ನೀಡುತ್ತದೆ.
ಕಲ್ಯಾಣ ಕಾರ್ಯಕರ್ಮಗಳಿಗೆ ಸಂಪನ್ಮೂಲಗಳ ಕೊರತೆ ಎಂದು ಹೇಳುತ್ತಲೇ ಸರಕಾರ ಎಲ್ಲಾ ಕಲ್ಯಾಣ ಕಾರ್ಯಕ್ರಮ ಗಳನ್ನು, ಶಿಕ್ಷಣ, ಆಸ್ಪತ್ರೆ, ರಸ್ತೆ, ಆಹಾರ ಪಡಿ ತರ ಎಲ್ಲವನ್ನೂ ಖಾಸಗೀಕರಣಗೊಳಿಸಿದೆ. ಅದರ ಭಾಗವಾಗಿಯೇ ಶಿಕ್ಷಣ ಮೂಲಭೂತ ಹಕ್ಕಾದರೂ ಅದನ್ನು ಒದಗಿಸುವುದು ಸರಕಾರದ ಕರ್ತವ್ಯವಾದರೂ ಅದನ್ನೂ ಪೂರೈಸಲು ಬೇಕಾದ ಶಾಲೆಗಳನ್ನು ಮತ್ತು ಉಪಾಧ್ಯಾಯ ರನ್ನು ಒದಗಿಸುವಷ್ಟು ಹಣಕಾಸು ತಮ್ಮ ಬಳಿ ಇಲ್ಲವಾದ್ದರಿಂದ ಶಾಲೆ ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಬಡ ವಿದ್ಯಾರ್ಥಿಗಳಿಗೆ ಮೀಸಲಿಡುವ ಕಾನೂನು ಮಾಡುವ ರಾಷ್ಟ್ರೀಯ ಶಿಕ್ಷಣ ಹಕ್ಕು ಕಾಯಿದೆಯನ್ನೂ 2009ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿತು. ಮೇಲ್ನೋಟಕ್ಕೆ ಅರ್ಥವಾಗುವಂತೆ ಅದು ಪ್ರತ್ಯಕ್ಷವಾಗಿಯೇ ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗೀಕರಣವನ್ನು ಇನ್ನೂ ಹೆಚ್ಚು ಪ್ರೋತ್ಸಾಹಿಸುವ, ಪ್ರಾಥಮಿಕ ಶಿಕ್ಷಣದ ವಾಣಿಜ್ಯೀಕರಣವನ್ನು ಮತ್ತು ಪ್ರಾಥಮಿಕ ಹಂತದಲ್ಲಿ ವಿಭಿನ್ನ ಬಗೆಯ ತಾರತಮ್ಯವುಳ್ಳ ಶಿಕ್ಷಣ ಪದ್ಧತಿಯನ್ನು ಸಮರ್ಥಿಸುವ ಮತ್ತು ಸಂವಿಧಾನ ಬದ್ಧಗೊಳಿಸುವ ಹುನ್ನಾರವೂ ಆಗಿತ್ತು.
ಹೆಚ್ಚೆಂದರೆ ಕೆಲವು ಉನ್ನತ ಗುಣಮಟ್ಟದ, ಅವುಗಳಲ್ಲಿ ಹೆಚ್ಚಿನವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎಂದು ಹೆಸರಿಸಲ್ಪಡುವ ಕ್ರಿಶ್ಚಿಯನ್, ಜೈನ್ ಮತ್ತು ಶ್ರೀಮಂತ ಮುಸ್ಲಿಂ ಸಂಸ್ಥೆಗಳು ನಡೆಸುವ ಕಾನ್ವೆಂಟು ಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮತ್ತು ಈವರೆಗೆ ವಂಚಿತ ಮಕ್ಕಳಿಗೆ ಕೆಲವು (ಶೇ.25) ಸೀಟುಗಳನ್ನು ಈ ಕಾಯಿದೆ ದಕ್ಕಿಸಿ ಕೊಡುತ್ತಿತ್ತು. ಆದರೆ ಆ ಶೇ. 25 ಸೀಟುಗಳಿಗೆ ಬೇಕಾದ ಹಣವನ್ನು ಸರಕಾರವೇ ತುಂಬಿ ಕೊಡಲಾಗುವುದು ಎಂಬುದು ಈ ಕಾಯಿದೆಯ ತಾತ್ಪರ್ಯ. ಅಂದರೆ ಸರಕಾರವೇ ನೇರವಾಗಿ ಬಡವರ ಹೆಸರಲ್ಲಿ ಸರಕಾರಿ ಬೊಕ್ಕಸದಿಂದ ಖಾಸಗಿ ಕುಬೆೇರರ ಖಜಾನೆ ತುಂಬುವ ಯೋಜನೆ ಇದು. ಆದರೆ ಇಂದಿನ ಹತಾಶ ಪರಿಸ್ಥಿತಿ ಹೇಗಿದೆಯೆಂದರೆ ಹೇಗಿದ್ದರೂ ಖಾಸಗೀಕರಣವನ್ನು ಸಾರಾಸಗಟು ವಿರೋಧಿ ಸಲು ಸಾಧ್ಯವಿಲ್ಲ. ಶೇ.25ರಷ್ಟು ಮಕ್ಕಳಿಗಾದರೂ ಇದರಿಂದ ಒಳ್ಳೆಯ ಶಿಕ್ಷಣ ಸಿಕ್ಕರೆ ಸಿಗಲಿ ಬಿಡಿ ಎಂದು ಶೇ.75ರಷ್ಟು ತಾರತಮ್ಯವನ್ನು ಸಮರ್ಥಿ ಸುವ ನೈಚ್ಯಾನುಸಂಧಾನವನ್ನು ಜನತೆಯ ಮೇಲೆ ಹೇರುತ್ತಿದೆ...
ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇಷ್ಟು ರಾಜಿಗೂ ಸಿದ್ಧವಿಲ್ಲ. ಈ ಕಾಯಿದೆ ಹೊರಬಿದ್ದೊ ಡನೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇದರಿಂದ ತಮ್ಮ ಶಾಲೆಗಳ ಗುಣಮಟ್ಟ ಕುಸಿಯು ವುದೆಂದೂ, ಸಂಸ್ಕಾರವಂತ ಕುಲೀನ ಮಕ್ಕಳ ನಡುವೆ ಸಂಸ್ಕಾರ ರಹಿತ, ದಡ್ಡ, ಬಡ ಸ್ಲಂ ಮಕ್ಕಳು ಬಂದರೆ ಎಂಥ ಸಾಂಸ್ಕೃತಿಕ ಅಧಃಪತನ ಸಂಭವಿಸುತ್ತದೆಂದು ಹುಯಿಲೆಬ್ಬಿಸಿ ತಮ್ಮ ನಿಜ ವಾದ ಜಾತಿವಾದಿ, ರೇಸಿಸ್ಟ್, ಬ್ರಾಹ್ಮಣೀಯ ಫ್ಯಾಸಿಸ್ಟ್ ಮನೋಭಾವವನ್ನು ಅನಾವರಣ ಮಾಡಿಕೊಂಡವು. ಕೆಲವು ಸಂಸ್ಥೆಗಳು ಇದರ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನೂ ಏರಿದವು.
ಎಲ್ಲರಿಗೂ ಶಿಕ್ಷಣ ಒದಗಿಸಬೇಕಿರುವುದು ಸರಕಾರದ ಕರ್ತವ್ಯ. ಅದರ ಜವಾಬ್ದಾರಿಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಥೆಗಳಲ್ಲಿ ಶೇ.25 ರಷ್ಟು ಬಡ ಮಕ್ಕಳಿಗೆ ಅವಕಾಶ ಕೊಡಲು ಕಡ್ಡಾಯ ಮಾಡುವುದು ಸಂವಿಧಾನ ವಿರೋಧಿ. ಸಂವಿಧಾನದ 19 (1) (ಜಿ) ಕಲಂ ಈ ದೇಶದ ನಾಗರಿಕರು ಯಾವುದೇ ಬಗೆಯ ವ್ಯವಹಾರವನ್ನು ಎಲ್ಲಿ ಬೇಕಾದರೂ ಶುರು ಮಾಡಬಹುದೆಂಬ ಹಕ್ಕು ದಯಪಾಲಿಸುತ್ತದೆ. ಅದರ ಮೇಲೆ ಸರ ಕಾರ ಸವಾರಿ ಮಾಡುವಂತಿಲ್ಲ..ಇತ್ಯಾದಿ ವಾದ ಗಳನ್ನು ಮುಂದಿಟ್ಟರು. ಅದರಲ್ಲೂ ಸರಕಾರದಿಂದ ಯಾವುದೇ ಅನುದಾನವನ್ನು ಸ್ವೀಕರಿಸದ ಖಾಸಗಿ ಸಂಸ್ಥೆಗಳು ತಾವು ಸರಕಾರದಿಂದ ಯಾವುದೇ ಅನುದಾನವನ್ನು ಪಡೆಯುತ್ತಿಲ್ಲವಾದ್ದರಿಂದ ಸರಕಾರ ತಮ್ಮ ಮೇಲೆ ಯಾವುದೇ ನಿಯಂತ್ರಣ ವನ್ನು ಹೇರುವಂತಿಲ್ಲ ಎಂದು ವಾದ ಹೂಡಿದವು. ಆದರೆ ಇದೇ ಶಿಕ್ಷಣ ಸಂಸ್ಥೆಗಳೇ ನಗರದ ಒಳ ಮತ್ತು ಹೊರಭಾಗದಲ್ಲಿ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ಅದರಲ್ಲೂ ಚಾರಿಟೆಬಲ್ ಸಂಸ್ಥೆಗಳೆಂಬ ಎಂದರೆ ಲಾಭಕ್ಕಾಗಿಯಲ್ಲದೇ ಜನೋಪಯೋಗಿ ಕೆಲಸಕ್ಕೆ ಎಂಬ ಹೆಸರಿನಲ್ಲಿ ನೂರಾರು ಎಕರೆ ಜಮೀನನ್ನು ದಕ್ಕಿಸಿಕೊಂಡಿವೆ. ಸರಕಾರದಿಂದ ಜಮೀನು, ನೀರು, ಶುಲ್ಕ ವಿನಾಯತಿ ಇನ್ನಿತ್ಯಾದಿ ಹಲವು ಬಗೆಯ ಅನುದಾನ ಪಡೆದಿರುವುದನ್ನು ಮರೆಮಾಚುತ್ತವೆ. ಸಂವಿಧಾನವೆಂಬ ಕಾಗೆಗೂಡಿನಲ್ಲಿ ಮೆತ್ತಗೆ ತೂರಿಕೊಂಡ ಈ ಖಾಸಗಿ ಕೋಗಿಲೆಗಳು ಈಗ ಕಾಗೆಮರಿಗಳಿಗೇ ಗೂಡಿನಲ್ಲಿ ಜಾಗವಿಲ್ಲವೆನ್ನುತ್ತಿವೆ. ಈ ದಾವೆಯ ಬಗ್ಗೆ ಮೊನ್ನೆ ಸುಪ್ರೀಂ ಕೋರ್ಟಿನ ಮೂರು ಸದಸ್ಯರ ಬೆಂಚು ತೀರ್ಮಾನವನ್ನು ಪ್ರಕಟಿಸಿದೆ. ಅದು ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಅಸ್ಥಿತ್ವದ ಬಗ್ಗೆಯಾಗಲೀ, ಎಲ್ಲ ರಿಗೂ ಏಕರೂಪಿ ಗುಣಮಟ್ಟದ ಶಿಕ್ಷಣ ಕೊಡ ಬೇಕೆಂಬ ಸಂವಿಧಾನದ ನಿರ್ದೇಶನವನ್ನು ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣದ ಹಕ್ಕು ಕಾಯಿದೆಯೂ ಉಲ್ಲಂಘಿಸುವ ವಿಷಯವನ್ನಾ ಗಲಿ ಪರಿಗಣನೆಗೇ ತೆಗೆದುಕೊಂಡಿಲ್ಲ. ಆದರೂ ಶೇ.25 ಬಡಮಕ್ಕಳಿಗೆ ಎಲ್ಲಾ ಖಾಸಗಿ ಅನುದಾ ನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆ ಗಳಲ್ಲೂ ಅವಕಾಶ ಕೊಡಬೇಕೆಂದೂ, ಅದನ್ನು ಈ ಸಾಲಿನಲ್ಲೇ ಜಾರಿಗೆ ತರಬೇಕೆಂದೂ ಆದೇಶ ಹೊರಡಿಸಿದೆ. ಸರಕಾರದಿಂದ ಅನುದಾನ ಪಡೆ ಯದ ಮಾತ್ರಕ್ಕೆ ಸಂವಿಧಾನದತ್ತ ಜವಾಬ್ದಾರಿ ಯನ್ನು ಸರಕಾರ ಈಡೇರಿಸಲು ತೆಗೆದುಕೊಳ್ಳುವ ಕ್ರಮದಲ್ಲಿ ಖಾಸಗಿಯವರು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲವೆಂದು ಹೇಳಿದೆ. ಅಷ್ಟರ ಮಟ್ಟಿಗೆ ಈ ತೀರ್ಮಾನ ಸ್ವಾಗತಾರ್ಹವಾಗಿದೆ. ಏಕೆಂದರೆ ಖಾಸಗಿ, ಸರಕಾರಿ, ಸಹಕಾರಿ ಯಾಗಲಿ ಭಾರತದಲ್ಲಿ ಕಾರ್ಯನಿರ್ವಹಿ ಸುವ ವಿದೇಶಿ ಸಂಸ್ಥೆಯಾಗಲೀ ಎಲ್ಲವೂ ಈ ದೇಶದಲ್ಲಿ ಕಾರ್ಯಾಚರಣೆ ಮಾಡುವಾಗ ಈ ದೇಶದ ಸಂವಿಧಾನದ ಆಶಯಗಳಿಗೆ ಒಳಪಟ್ಟು ಮತ್ತು ಅದಕ್ಕೆ ವ್ಯತಿರಿಕ್ತವಾಗದೇ ಕೆಲಸ ಮಾಡಬೇಕು. ಸಂವಿಧಾನದ ಕಲಂ 19 ಯಾವುದೇ ವ್ಯಕ್ತಿಗೆ ಯಾವುದೇ ವ್ಯವ ಹಾರ ಮಾಡಲು ಅವಕಾಶ ಮಾಡಿ ಕೊಟ್ಟರೂ ಒಟ್ಟಾರೆ ಸಾರ್ವಜನಿಕ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ಒಳಪಟ್ಟು ಅದನ್ನು ನಿಯಂತ್ರಿಸುವ ಅಧಿಕಾರವನ್ನು ಪ್ರಭುತ್ವಕ್ಕೆ ಕೊಟ್ಟೇ ಇರುತ್ತದೆ. ಆದರೆ ಜಾಗತೀಕರಣದ ನಂತರ ಕೋರ್ಟುಗಳು ಸಹ ಮಾರುಕಟ್ಟೆ ಶಕ್ತಿಗಳ ಪರವಾದ ಸಂವಿಧಾನ ಆಶಯಗಳಿಗೆ ವಿರೋಧವಾದ ತೀರ್ಮಾನಗಳನ್ನೇ ಕೊಡುತ್ತಾ ಬಂದಿತ್ತು. ಅದರಲ್ಲಿ ಸರಕಾರಿ ಕಾರ್ಖಾನೆಗಳ ಖಾಸಗೀ ಕರಣ, ಎಸ್‌ಇಜೆಡ್, ದುಗ್ಗಾಣಿ ಬೆಲೆಗೆ ದೇಶದ ಸಂಪನ್ಮೂಲಗಳ ವಿಕ್ರಯ ಇನ್ನಿತ್ಯಾದಿ ಪ್ರಕರಣ ಗಳಲ್ಲಿ ಕೋರ್ಟು ಸಂವಿಧಾನದ ಆಶಯವಾದ ಸಮಾನತೆಗೆ ವಿರುದ್ಧವಾದ ಸಂಪತ್ತು ಒಂದೇ ಕಡೆ ಕೇಂದ್ರೀಕರಣಗೊಳ್ಳಲು ಪೂರಕವಾದ ಆರ್ಥಿಕ ನೀತಿಗಳ ಸಮರ್ಥನೆಗೇ ನಿಂತಿತ್ತು.
ಈ ಹಿನ್ನೆಲೆಯಲ್ಲಿ ನೋಡಿದರೆ ಈ ತೀರ್ಪನ್ನು ನೀಡುವಾಗ ಕೋರ್ಟು ಖಾಸಗಿ ಅನುದಾನ ರಹಿತ ಸಂಸ್ಥೆಗಳಿಗೂ ಸಾಂವಿಧಾನಿಕ ಜವಾಬ್ದಾರಿ ಇದೆ ಎಂದು ಹೇಳಿರುವುದು ಸ್ವಾಗತಾರ್ಹವಾದ ಬೆಳವಣಿಗೆಯಾಗಿದೆ. ಆದರೆ ಇದೇ ತೀರ್ಪು ಶೇ. 25ರಷ್ಟು ಮಕ್ಕಳಿಗೆ ನ್ಯಾಯವನ್ನು ಒದಗಿಸುವ ಸಮಯದಲ್ಲೇ ಉಳಿದ ಶೇ.75 ಭಾಗದಲ್ಲಿ ಅಸಮಾನತೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿರುವುದು ವಿಪರ್ಯಾಸವಾದರೂ ಅದು ಈ ಪ್ರಜಾತಂತ್ರದ ಮಿತಿಯನ್ನಷ್ಟೇ ಸೂಚಿಸುತ್ತದೆ. ಅಷ್ಟು ಮಾತ್ರವಲ್ಲ. ಈ ತೀರ್ಪಿನಿಂದ ಅನು ದಾನ ರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರಗಿಡಲಾಗಿದೆ.
ಜಾಗತೀಕರಣದ ಕಾಲಘಟ್ಟದಲ್ಲಿ ಪ್ರಪ್ರಥಮ ಬಾರಿಗೆ ಖಾಸಗಿಯವರೂ ಕೂಡ ಸಂವಿಧಾನದ ಆಶಯಗಳಿಗೆ ಬದ್ಧರು ಎಂದು ಹೇಳುವಷ್ಟರ ಮಟ್ಟಿಗೆ ಈ ತೀರ್ಪು ಸ್ವಾಗತಾರ್ಹ. ಆದರೆ ಇದೇ ತೀರ್ಪು ಖಾಸಗೀಕರಣವನ್ನು ಸಮರ್ಥನೆ ಮಾಡಿರುವುದು ನಂತರದಲ್ಲಿ ಆಯಾ ರಾಜ್ಯಗಳು ರೂಲ್ಸ್‌ಗಳನ್ನು ಮಾಡುವಾಗ ಅಥವಾ ಜಾರಿಗೆ ತರುವಾಗ ಅಥವಾ ಹೊಸ ಶಿಕ್ಷಣ ನೀತಿ ತರುವಾಗ ಖಾಸಗಿ ಪರವಾಗಿ ರೂಪಿಸಲು ಕುಮ್ಮಕ್ಕು ಕೊಡುತ್ತದೆ. ತಮ್ಮ ಗೂಡಿನಲೇ ತಾವು ಬದುಕುತ್ತಿರುವ ಕಾಗೆಮರಿಗಳಿಗೆ ತಾವು ಕೋಗಿಲೆಗಳ ಹಂಗಿನಲ್ಲಿ ಬದುಕುತ್ತಿದ್ದೇವೇನೋ ಎಂಬ ಹಂಗನ್ನು ದೈನ್ಯವನ್ನು ಹುಟ್ಟಿಸುವ ಜಾಗತೀಕರಣದ ವೌಲ್ಯವನ್ನು ಈ ತೀರ್ಪು ಪರೋಕ್ಷವಾಗಿ ಸಮರ್ಥಿಸಿದಂತೆಯೇ ಆಗಿದೆ...       ಕೃಪೆ: ವಾರ್ತಾಭಾರತಿ

Advertisement

0 comments:

Post a Comment

 
Top