ಬೆಂಗಳೂರು, ಎ.14: ರಾಜ್ಯದಲ್ಲಿ ಪ್ರಚಲಿತವಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ವಿಧಾನಸೌಧದಿಂದ ಕಿತ್ತು ಹಾಕಿ ಜನಾಧಿಕಾರ ಗಳಿಸುವುದು ನಮ್ಮ ಪಕ್ಷದ ಉದ್ದೇಶ ಎಂದು ನೂತನವಾಗಿ ಪ್ರಾರಂಭಗೊಂಡ ಪ್ರಜಾ ಪ್ರಗತಿ ರಂಗ ಪಕ್ಷದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ನಗರದ ಸ್ವಾತಂತ್ರ ಉದ್ಯಾನವನದಲ್ಲಿಂದು ‘ಪ್ರಜಾ ಪ್ರಗತಿ ರಂಗ’ ಪಕ್ಷದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಭಯಾನಕ ರೀತಿಯಲ್ಲಿ ಹಬ್ಬುತ್ತಿರುವ ಹಣ, ಹೆಂಡ, ಗಣಿ, ಭೂಗಳ್ಳ ಮನಸ್ಥಿತಿಯ ರಾಜಕಾರಣಕ್ಕೆ ಇತಿಶ್ರೀ ಹಾಡಿ ಪರ್ಯಾಯ ಜನಪರ ರಾಜಕಾರಣದ ಹುಟ್ಟಿಗೆ ವೇದಿಕೆ ಸಜ್ಜುಗೊಳಿಸುವುದು ನಮ್ಮ ಪಕ್ಷದ ಧ್ಯೇಯವಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಸ್ವಾತಂತ್ರ ಮೈದಾನದಲ್ಲಿ ಶನಿವಾರ ಪ್ರಜಾ ಪ್ರಗತಿ ರಂಗ ಪಕ್ಷವನ್ನು ರೈತ ನಾಯಕ ಕಡಿದಾಳ್ ಶಾಮಣ್ಣ ಉದ್ಘಾಟಿಸಿದರು. ಎಂ.ವೆಂಕಟಸ್ವಾಮಿ, ಡಾ.ಸಿ.ಎಸ್.ದ್ವಾರಕಾನಾಥ್, ಕೋಡಿಹಳ್ಳಿ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.
‘‘ಹದಗೆಟ್ಟು ಹೋಗಿರುವ ರಾಜಕೀಯ ವ್ಯವಸ್ಥೆಯಲ್ಲಿ ನೀವೇಕೆ ಪಕ್ಷ ಪ್ರಾರಂಭಿಸುತ್ತಿದ್ದೀರಿ?’’ ಎಂದು ಬಹಳಷ್ಟು ಜನ ತಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಹದಗೆಟ್ಟ ರಾಜಕೀಯವನ್ನು ಶುಚಿಗೊಳಿಸಲು ಯಾರಾದರೂ ಪ್ರಯತ್ನಿಸುತ್ತಲೇ ಇರಬೇಕು. ಎಷ್ಟು ದಿನವೆಂದು ತಾವು ಬೀದಿ ಹೋರಾಟ ಮಾಡುತ್ತ ಬೀದಿಯಲ್ಲೇ ಕೂಡಬೇಕು ಎಂದು ಖಾರವಾಗಿ ಪ್ರಶ್ನಿಸಿದ ಚಂದ್ರಶೇಖರ್ ತಮ್ಮ ಭರವಸೆಗಳು ಈಡೇರಬೇಕಾದರೆ ತಮ್ಮ ಕೈಯಲ್ಲಿಯೇ ಅಧಿಕಾರವಿರಬೇಕು ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೈತಸಂಘದ ಹಿರಿಯ ಮುಖಂಡ ಕಡಿದಾಳು ಶಾಮಣ್ಣ, ಇಂದಿನ ಭ್ರಷ್ಟ ರಾಜಕೀಯ, ಚುನಾವಣೆಯ ಹೊಲಸನ್ನೆಲ್ಲ ನೋಡಿದರೆ ಮುಂದಿನ ದಿನಗಳು ಇನ್ನೂ ಭಯಾನಕ ವಾಗಿರಬಹುದು ಎಂದು ಕಳವಳವಾಗುತ್ತದೆ. ರಾಜಕೀಯದ ಹೊಲಸನ್ನು ತೊಳೆಯಲು ಆಗಾಗ ಇಂಥ ಪ್ರಾದೇಶಿಕ ಪಕ್ಷಗಳ ಪ್ರಯತ್ನ ನಡೆಯುತ್ತಲೆ ಇರಬೇಕು ಎಂದರು.
ಇಂಥ ಪ್ರಯತ್ನಗಳೇನೂ ಕರ್ನಾಟಕಕ್ಕೆ ಹೊಸದಲ್ಲ. ದೇವರಾಜ್ ಅರಸರು, ಲಂಕೇಶ, ತೇಜಸ್ವಿ, ದೇವನೂರು, ರಾಮದಾಸ್‌ರಂಥ ಬರಹಗಾರರು, ಪರ್ಯಾಯ ಪಕ್ಷಗಳ ಕಟ್ಟುವ ಪ್ರಯತ್ನವನ್ನು ಮಾಡಿ ಸೋತಿದ್ದಾರೆ. ಅವುಗಳ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುನ್ನಡೆಯಬೇಕು ಎಂದ ಅವರು, ಈ ಪಕ್ಷದ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್ ಇದಕ್ಕೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಪ್ರಗತಿರಂಗದ ಹೆಸರಿನಲ್ಲಿ ಪಕ್ಷ ಕಟ್ಟುವ ಸಂದರ್ಭದಲ್ಲಿ ರೈತಸಂಘವೂ ಕೈಜೋಡಿಸ ಬೇಕಾಗಿತ್ತು. ಆದರೆ ಆಗಿರಲಿಲ್ಲ. ಈಗ ರೈತಸಂಘಕ್ಕೆ 20ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿರುವುದು ಶ್ಲಾಘನೀಯ. ಮುಂಬರುವ ಚುನಾವಣಾ ಸಂದರ್ಭದಲ್ಲಿ ತಾವು ಸರಿಯಾಗಿ ವರ್ತಿಸಿದರೆ ಗೆಲುವು ಖಚಿತ ಎಂದು ಶಾಮಣ್ಣ ಭರವಸೆ ವ್ಯಕ್ತಪಡಿಸಿದರು.
ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಮಾತನಾಡಿ, ಇದು ಪಕ್ಷದ ಕಾರ್ಯಕರ್ತರ ಸಭೆಯಲ್ಲ. ಕೇವಲ ಪಕ್ಷದ ಪ್ರತಿನಿಧಿಗಳ ಸಭೆ. ಮುಂದಿನ ದಿನಗಳಲ್ಲಿ 5 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ಸಂವಿಧಾನದ ಮುನ್ನುಡಿ ಮತ್ತು ಕರ್ನಾಟಕ ಭೂಪಟದಲ್ಲಿನ ಜನರ ಚಿತ್ರವನ್ನುಳ್ಳ ಚಿತ್ರಗಳು ತಮ್ಮ ಪಕ್ಷದ ಲಾಂಛನವಾಗಿದೆ. ಸಂವಿಧಾನ ಮುನ್ನಡೆಸುವ ಜವಾಬ್ದಾರಿ ಜನರಿಗೆ ಸಿಗಬೇಕು ಎಂಬುದು ಇದರರ್ಥ. ತಮ್ಮ ಪಕ್ಷ ಯಾವುದೇ ಪಕ್ಷದ ಭಾಗವಾಗುವುದಿಲ್ಲ. ಆದರೆ, ತಮ್ಮ ಪಕ್ಷದ ಸಿದ್ಧಾಂತಗಳನ್ನು ಇಷ್ಟಪಟ್ಟು ಒಳಬರುವವರಿಗೆ ಸ್ವಾಗತವಿದೆ ಎಂದು ಅವರು ಹೇಳಿದರು.
ಶಿಕ್ಷಣದ ಖಾಸಗಿಕರಣವನ್ನು ಪ್ರೋತ್ಸಾಹಿಸುತ್ತಿರುವ ಶ್ರೀ ರವಿಶಂಕರ ಗುರೂಜಿ ಮತ್ತು ಕೇಸರೀಕರಣಕ್ಕೆ ಉತ್ತೇಜನ ನೀಡುವ ಪೇಜಾವರ ಶ್ರೀಗಳಂಥವರಿಗೆ ಬುದ್ಧಿ ಕಲಿಸುವುದು ಸಹ ತಮ್ಮ ಉದ್ದೇಶವಾಗಿದೆ ಎಂದ ವೆಂಕಟ ಸ್ವಾಮಿ, ತಮ್ಮ ಪಕ್ಷದಲ್ಲಿ ಎಲ್ಲ ವರ್ಗದವರಿಗೂ ಸಮಾನ ಅಧಿಕಾರವಿರುತ್ತದೆ ಎಂದರು. ಪಕ್ಷದ ಸಂಚಾಲಕ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಬೆಂಗಳೂರನ್ನು ಸ್ವಚ್ಛಾವಾಗಿಡುವ ಪೌರ ಕಾರ್ಮಿಕರ ರೂ. 7 ಸಾವಿರ ಸಂಬಳದಲ್ಲಿ ಮಧ್ಯವರ್ತಿಗಳು ಗುಳುಂ ಮಾಡಿ ಕೇವಲ 2 ಸಾವಿರ ರೂ.ಮಾತ್ರ ನೀಡುತ್ತಿದ್ದಾರೆ. ಇದು ಈಗಿನ ಎಲ್ಲ ರಾಜಕಾರಣಿಗಳಿಗೂ ಗೊತ್ತು. ಆದರೆ ಯಾರೂ ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಹೀಗೆ ದೌರ್ಜನ್ಯಕ್ಕೆ ಈಡಾಗಿರುವ, ದಲಿತರು, ರೈತರು, ಅಲ್ಪಸಂಖ್ಯಾತರಿಗೆ ಅಧಿಕಾರ ನೀಡುವುದನ್ನು ತಮ್ಮ ಪಕ್ಷ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಎಸ್‌ಎಸ್‌ನ ಆರ್.ಮೋಹನಬಾಬು, ಎನ್.ಗಿರಿಯಪ್ಪ, ಅಹಿಂದ ಮುಖಂಡ, ಚಿಂತಕ ಲೋಲಾಕ್ಷ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸರ್ವೋದಯ ಪಕ್ಷದ ಪುಟ್ಟಣ್ಣಯ್ಯ, ದಲಿತ ಕ್ರಿಶ್ಚಿಯನ್ ಒಕ್ಕೂಟದ ರೆವರಂಡ್ ಪ್ರಸಾದ್, ಪಿಎಫ್‌ಐಯ ಮುಹಮ್ಮದ್ ಇಲಿಯಾಸ್ ತುಂಬೆ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು
0 comments:
Post a Comment