: ಸಿಂಗಟಾಲೂರು ಏತನೀರಾವರಿ ಯೋಜನೆಯ ಕೊಪ್ಪಳ ಭಾಗದ ಕಾಲುವೆ ಕಾಮಗಾರಿಯನ್ನು ಒಂದು ತಿಂಗಳ ಒಳಗೆ ಪ್ರಾರಂಭಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವುದರಿಂದ, ಮಹಾರಾಷ್ಟ್ರ ರಾಜ್ಯದ ದೂದಗಂಗಾ ಹಾಗೂ ವಾರಣಾ ಜಲಾಶಯದಿಂದ ಕರ್ನಾಟಕ ರಾಜ್ಯಕ್ಕೆ ನೀರು ಬಿಡುವ ಬಗ್ಗೆ ಈಗಾಗಲೆ ಮುಖ್ಯಮಂತ್ರಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ, ಇನ್ನು ಎರಡು ಅಥವಾ ಮೂರು ದಿನಗಳ ಒಳಗಾಗಿ ನೀರು ರಾಜ್ಯಕ್ಕೆ ಬರಲಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ರಾಜ್ಯದ ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿನ ಬರಪರಿಸ್ಥಿತಿಯ ಅವಲೋಕನ ನಡೆಸಲಾಗಿದ್ದು, ಪರಿಶೀಲನಾ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ರಾಜ್ಯದಲ್ಲಿ ಮುಂಗಾರು ವಿಫಲಗೊಂಡಿದ್ದರಿಂದ, ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಈಗಿರುವ ಸ್ಥಿತಿಗತಿ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಲು ನಿರ್ಧರಿಸಲಾಗಿದೆ. ನಾರಾಯಣಪುರ ಜಲಾಶಯದಿಂದ ಆಂಧ್ರಕ್ಕೆ ೫ ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಆಂಧ್ರಪ್ರದೇಶ ರಾಜ್ಯ ಬೇಡಿಕೆ ಸಲ್ಲಿಸಿದೆ. ಆದರೆ ರಾಜ್ಯದ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಅಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೋರಿ ಸದ್ಯದಲ್ಲಿಯೇ ನಿಯೋಗ ತೆರಳಲಾಗುವುದು. ಈ ಮೂಲಕ ರಾಜ್ಯದ ಬರಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಹೆಚ್ಚಿನ ಅನುದಾನ ಒದಗಿಸುವ ವಿಶ್ವಾಸವಿದೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕೊಪ್ಪಳ ಜಿಲ್ಲೆಯಲ್ಲಿನ ಬರಪರಿಸ್ಥಿತಿಯ ಬಗ್ಗೆ ಸದ್ಯದಲ್ಲಿಯೇ ಪರಿಶೀಲನೆ ನಡೆಸಲಾಗುವುದು, ಅಳವಂಡಿ-ಬೆಟಗೇರಾ ಏತ ನೀರಾವರಿ ಯೋಜನೆಗೆ ಅರ್ಧ ಟಿ.ಎಂ.ಸಿ. ನೀರು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಯತ್ನಟ್ಟಿ ಗ್ರಾಮದ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಬಗ್ಗೆ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ, ೨೦೧೨-೧೩ನೇ ಸಾಲಿನ ಯೋಜನೆಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment