PLEASE LOGIN TO KANNADANET.COM FOR REGULAR NEWS-UPDATES

   ಕೊಪ್ಪಳ ಜಿಲ್ಲೆಯ ರೈತರ ಪಾಲಿನ ಮಹತ್ವದ ಯೋಜನೆಯಾದ ಹಿರೇಹಳ್ಳ ಯೋಜನೆಗಾಗಿ ತಮ್ಮ ಜಮೀನು ಕಳೆದುಕೊಂಡು ಸಂತ್ರಸ್ಥರಾಗಿದ್ದವರಿಗೆ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಪುನರ್ವಸತಿ ಹಾಗೂ ಪರಿಹಾರ ಧನ ವಿತರಿಸುವ  ಸಮಾರಂಭ ಏ. ೨೫ ರಂದು ಯಲಬುರ್ಗಾ ತಾಲೂಕು ಶಿರೂರ ಗ್ರಾಮದಲ್ಲಿ ನೆರವೇರಲಿದ್ದು, ಬಹಳಷ್ಟು ವರ್ಷಗಳಿಂದ ಪುನರ್ವಸತಿ ಹಾಗೂ ಪರಿಹಾರ ಪಡೆಯಬೇಕಿದ್ದ ಸಂತ್ರಸ್ಥರ ಬೇಡಿಕೆ ಈಡೇರಿದಂತಾಗಿದೆ.
  ಇದೀಗ ಶಿರೂರು, ಮುತ್ತಾಳ, ವೀರಾಪುರ ಮತ್ತು ಮುದ್ಲಾಪುರ ಗ್ರಾಮಗಳ ಸಂತ್ರಸ್ಥರಿಗೆ ಹಕ್ಕುಪತ್ರ ವಿತರಣೆ ಹಾಗೂ ಪರಿಹಾರ ಧನ ವಿತರಣೆ ಸಮಾರಂಭ ಏ. ೨೫ ರಂದು ಶಿರೂರು ಗ್ರಾಮದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಸಂಸದ ಶಿವರಾಮಗೌಡ, ಶಾಸಕರುಗಳಾದ ಈಶಣ್ಣ ಗುಳಗಣ್ಣವರ್, ಕರಡಿ ಸಂಗಣ್ಣ, ಪರಣ್ಣ ಮುನವಳ್ಳಿ, ಶಿವರಾಜ ತಂಗಡಗಿ, ಅಮರೇಗೌಡ ಪಾಟೀಲ ಬಯ್ಯಾಪುರ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಶಿರೂರು ಗ್ರಾಮದಲ್ಲಿ ಸಮಾರಂಭಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಿಸುವ ಕಾರ್ಯ ಭರದಿಂದ ಸಾಗಿದ್ದು, ವೇದಿಕೆಯ ಬಳಿಯಲ್ಲಿಯೇ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಬಂದು ಹೋಗಲು ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ.  ಶಾಸಕ ಹಾಲಪ್ಪ ಆಚಾರ್ ಅವರು ಪೆಂಡಾಲ್ ಹಾಗೂ ಹೆಲಿಪ್ಯಾಡ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಹಿರೇಹಳ್ಳ ಯೋಜನೆಯ ಸಂಕ್ಷಿಪ್ತ ನೋಟ : ತುಂಗಭದ್ರಾ ಜಲಾಶಯಕ್ಕೆ ಹೂಳು ತುಂಬುವುದನ್ನು ತಡೆಗಟ್ಟುವುದು ಹಾಗೂ ಈ ಭಾಗದ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡಬೇಕೆಂಬ ಉದ್ದೇಶದಿಂದ ೧೯೭೯ ರಲ್ಲಿ ಆಗಿನ ಸರ್ಕಾರ ಹಿರೇಹಳ್ಳ ಜಲಾಶಯ ನಿರ್ಮಿಸಲು ೬. ೩೫ ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿತ್ತು.  ಈ ಯೋಜನೆಯ ಇತ್ತೀಚಿನ ಪರಿಷ್ಕೃತ ಅಂದಾಜು ಮೊತ್ತ ಸುಮಾರು ೨೭೫ ಕೋಟಿ ರೂ. ಆಗಿದೆ.  ಕೊಪ್ಪಳ ತಾಲೂಕಿನಲ್ಲಿರುವ ಫಲವತ್ತಾದ ಬಹುತೇಕ ಕೃಷಿ ಜಮೀನಿಗೆ ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ಕೇವಲ ಮಳೆ ಆಶ್ರಿತವಾಗಿದೆ.  ಕೊಪ್ಪಳ ತಾಲೂಕಿನ ಸುಮಾರು ೨೦೦೦೦ ಕ್ಕೂ ಹೆಚ್ಚು ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವುದು, ಮತ್ತು ತುಂಗಭದ್ರಾ ಜಲಾಶಯಕ್ಕೆ ಹೂಳು ತುಂಬುವುದನ್ನು ತಡೆಗಟ್ಟಲು ಮುದ್ಲಾಪುರ ಗ್ರಾಮದ ಬಳಿ ತುಂಗಭದ್ರಾ ನದಿಯ ಉಪನದಿಗಳಾದ ಹಿರೇಹಳ್ಳ ಮತ್ತು ವೀರಾಪುರ ಹಳ್ಳಕ್ಕೆ ಅಡ್ಡಲಾಗಿ ಹಿರೇಹಳ್ಳ ಜಲಾಶಯವನ್ನು ನಿರ್ಮಿಸಲಾಗಿದೆ.  ಈ ಹಳ್ಳಗಳು ಕಿನ್ನಾಳ ಗ್ರಾಮದಿಂದ ಸುಮಾರು ೪ ಕಿ.ಮೀ. ದೂರದಲ್ಲಿ ಕೂಡಿಕೊಳ್ಳುತ್ತವೆ.  ಈ ಹಿರೇಹಳ್ಳ ಜಲಾಶಯವನ್ನು ೨೦೦೧ ರಲ್ಲಿ ಲೋಕಾರ್ಪಣೆ ಮಾಡಲಾಗಿದೆ.  ಹಿರೇಹಳ್ಳ ಯೋಜನೆಯಲ್ಲಿ ಬಲದಂಡೆ ಕಾಲುವೆ ಸುಮಾರು ೨೫ ಕಿ.ಮೀ. ಉದ್ದವಿದ್ದು, ೮೨೨೮ ಎಕರೆ ಜಮೀನಿಗೆ ನೀರೊದಗಿಸಬಹುದಾಗಿದೆ.  ಎಡದಂಡೆ ಕಾಲುವೆ ಸುಮಾರು ೨೪ ಕಿ.ಮೀ. ಉದ್ದವಿದ್ದು, ಇದರಿಂದ ೧೨೩೫೫ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯ.  ಹಿರೇಹಳ್ಳ ಅಣೆಕಟ್ಟೆಯ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ೧. ೬೭ ಟಿ.ಎಂ.ಸಿ. ಇದ್ದು, ಯೋಜನೆಯಲ್ಲಿ ಒಟ್ಟು ೨. ೨೭ ಟಿಎಂಸಿ ನೀರನ್ನು ನೀರಾವರಿಗೆ ಬಳಸಿಕೊಳ್ಳಬಹುದಾಗಿದೆ.  ಜಲಾಶಯದಲ್ಲಿ ೫೪೨ ಮೀ. ವರೆಗೆ ಮಾತ್ರ ನೀರನ್ನು ನಿಲ್ಲಿಸಲಾಗುತ್ತಿದ್ದು,  ಜಲಾಶಯದ ಗರಿಷ್ಟ ಮಟ್ಟ ೫೪೨. ೮೪ ಮೀ. ಆಗಿದೆ.
ಮುಳುಗಡೆ ಗ್ರಾಮಗಳು : ಜಿಲ್ಲೆಯ ಯಲಬುರ್ಗಾ ತಾಲೂಕಿನ ಅರಕೇರಿ ಗ್ರಾಮವು ಈ ಯೋಜನೆಗಾಗಿ ಸಂಪೂರ್ಣ ಮುಳುಗಡೆಯಾಗಿದ್ದು, ಈ ಗ್ರಾಮವನ್ನು ಈಗಾಗಲೆ ಹೊಸ ಪುನರ್ವಸತಿ ಕೇಂದ್ರಕ್ಕೆ ಈ ಹಿಂದೆಯೇ ಸ್ಥಳಾಂತರಿಸಲಾಗಿದೆ.  ಜಲಾಶಯದಲ್ಲಿ ನೀರು ನಿಲ್ಲಿಸುವುದರಿಂದ ಯಲಬುರ್ಗಾ ತಾಲೂಕಿನ ಶಿರೂರು, ಮುತ್ತಾಳ ಮತ್ತು ವೀರಾಪುರ ಗ್ರಾಮಗಳು ಹಿನ್ನೀರಿನಿಂದ ಶೀತಪೀಡಿತವಾಗುವುದಲ್ಲದೆ, ಕೊಪ್ಪಳ ತಾಲೂಕಿನ ಮುದ್ಲಾಪುರ ಗ್ರಾಮ ಬಸಿ ನೀರಿನಿಂದ ಬಾಧಿತವಾಗುವುದರಿಂದ ಈ ಗ್ರಾಮಗಳನ್ನು ಸ್ಥಳಾಂತರಿಸಲು ಸರ್ಕಾರ ಕಳೆದ ೨೦೦೩ ರಲ್ಲಿಯೇ ಆದೇಶ ಹೊರಡಿಸಿದೆ.  ವೀರಾಪುರ ಗ್ರಾಮದಲ್ಲಿ ಸುಮಾರು ೬೨೫ ಮನೆಗಳು, ಮುತ್ತಾಳ ಗ್ರಾಮದಲ್ಲಿ ಸುಮಾರು ೨೭೭ ಮನೆಗಳು, ಶಿರೂರು ಗ್ರಾಮದ ಸುಮಾರು ೪೯೭ ಮನೆಗಳು ಹಾಗೂ ಮುದ್ಲಾಪುರದ ಸುಮಾರು ೧೯೫ ಮನೆಗಳನ್ನು ಸ್ಥಳಾಂತರಿಸುವುದು ಈ ಯೋಜನೆಯಲ್ಲಿ ಸೇರಿದೆ.

Advertisement

0 comments:

Post a Comment

 
Top