-ಶೀಲವಂತರ
ಕೊಪ್ಪಳ : ಕನ್ನಡ ಸಾಹಿತ್ಯ ಪರಿಷತ್ ಮಹತ್ತರ ಉದ್ದೇಶಗಳಿಗಾಗಿ ರೂಪುಗೊಂಡಿರುವಂಥಹದ್ದು.ಅದಕ್ಕೆ ತನ್ನದೇ ಆದ ಬದ್ದತೆಇದೆ. ಈ ನಾಡು ನುಡಿಯ ಸಮಗ್ರ ಅಭಿವೃದ್ದಿ,ರಕ್ಷಣೆ ಅದರ ಗುರಿ.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಪರಿಷತ್ತ್ ನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸ್ವಹಿತಾಸಕ್ತಿಗಾಗಿ,ಸ್ವಾರ್ಥ ಸಾಧನೆಗಾಗಿ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ ಇವರಿಗೆ ಯಾವುದೇ ಬದ್ದತೆ ಹಾಗೂ ಯೋಗ್ಯತೆ ಇಲ್ಲ. ಪರಿಷತ್ ಚುನಾವಣೆಯಲ್ಲಿ ರಾಜಕೀಯದ ಹೊಲಸು ಸೇರಿಕೊಂಡಿದೆ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ಜಾತಿ, ಹಣ ಮತ್ತು ಪಕ್ಷದ ಲಾಭಿ ಮಾಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಬಸವರಾಜ್ ಶೀಲವಂತರ ಆಕ್ರೋಶ ವ್ಯಕ್ತಪಡಿಸಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೦೧ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವವರೂ ಸಹ ರಾಜಕಾರಣಿಗಳಂತೆ ದುಡ್ಡು ಖರ್ಚು ಮಾಡುತ್ತಿದ್ದಾರೆ. ಜಾತಿಯ ಲಾಬಿಯಲ್ಲಿ ತೊಡಗಿದ್ದಾರೆ. ಇವರ‍್ಯಾರಿಗೂ ನಾಡು ನುಡಿ ಮುಖ್ಯವಲ್ಲ. ಪರಿಷತ್ತಿನ ಲೇಬಲ್ ನಲ್ಲಿ ತಮ್ಮ ಕಾರ‍್ಯಸಾಧನೆಗಾಗಿ ಚುನಾವಣೆಗೆ ನಿಂತಿದ್ದಾರೆ. ಇಂತವರಿಂದ ನಮ್ಮ ನಾಡು,ನುಡಿಗೆ ಉಪಯೋಗವಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೆ ದುರಂತ ಕಾದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ವೀರಕನ್ನಡಿಗ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ ಮಾತನಾಡಿ ಭಾಷೆ ಹಾಗೂ ನಾಡಿನ ಬಗ್ಗೆ ಯಾರಿಗೂ ಆಸಕ್ತಿ ಉಳಿದಿಲ್ಲ. ಪ್ರಣಾಳಿಕೆಗಳಿಂದ ಜನರನ್ನು ಮೋಸ ಮಾಡಲಾಗುತ್ತಿದೆ. ಕನ್ನಡ ಧ್ವಜವನ್ನೇ ಹಾರಿಸದವರು ಸಾಹಿತ್ಯ ಪರಿಷತ್ ನಲ್ಲಿದ್ದಾರೆ. ಜಾತಿ,ದುಡ್ಡಿನ ಆಧಾರದಲ್ಲೇ ಚುನಾವಣೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಾಸುದೇವ ಕುಲಕರ್ಣಿ- ಬೆಳಿನೆಡೆಗೆ ಹೋಗೋಣ, ಡಾ.ಬಸವರಾಜ ಕುಂಪಾ-ಪವಜತ್ವ, ಕುರುವತ್ತಿಗೌಡ್ರ- ಸಾವಿನಮನೆ, ಶಿವಪ್ರಸಾದ ಹಾದಿಮನಿ- ಬಂದಿತು ಮತ್ತೆ ಬಸವ ಜಯಂತಿ, ಶಿವಾನಂದ ಹೊದ್ಲೂರ-ಚಪ್ಪಾಳೆ, ಶರಣಪ್ಪ ದಾನಕೈ- ಪರಾರಿ, ವೀರಣ್ಣ ಹುರಕಡ್ಲಿ- ಹುಡುಕುತ್ತಲ್ಲೇ ಇದ್ದಾರೆ, ಸಿರಾಜ್ ಬಿಸರಳ್ಳಿ- ನೆನಪು, ಬಸವರಾಜ್ ಸಂಕನಗೌಡರ- ಕನ್ನಡ ಶಾಯಿರಿಗಳು, ಪುಷ್ಪಲತಾ ಏಳುಬಾವಿ- ಸಾವಿನ ಬಾಗಿಲು ತಟ್ಟಿದವರು, ವಿಜಯಲಕ್ಷ್ಮೀ ಮಠದ- ಆಫ್ರೀನ್, ಎ.ಪಿ.ಅಂಗಡಿ-ಸಕಾಲ, ಬಸವರಾಜ ಗಾಣಿಗೇರ- ನಮ್ಮ ಜಿಲ್ಲೆ ಕವನಗಳನ್ನು ವಾಚನ ಮಾಡಿದರು.
ಕಳೆದ ವಾರ ನಡೆದ ೧೦೦ನೇ ಕವಿಸಮಯದ ಕುರಿತು ಚರ್ಚೆ ಮಾಡಲಾಯಿತು. ಜೊತೆಗೆ ಸಾಹಿತ್ಯಭವನದ ದುರವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಸಾಹಿತ್ಯ ಕಾರ‍್ಯಕ್ರಮಗಳನ್ನು ಮಾಡಬೇಕೆಂದರೂ ದುಡ್ಡು ಕೊಡಬೇಕಾಗಿರುವ ಅನಿವಾರ‍್ಯತೆಯ ಬಗ್ಗೆ ಖೇದ ವ್ಯಕ್ತಪಡಿಸಿದರು. ದುಡ್ಡು ತೆಗೆದುಕೊಂಡರೂ ಸಾಹಿತ್ಯ ಭವನವನ್ನು ಸರಿಯಾಗಿ ನಿರ್ವಹಿಸದೇ ಇರುವುದು , ಕನಿಷ್ಠ ಮೂಲಭೂತ ಸೌಲಭ್ಯಗಳೂ ಇರದಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ನಗರದ ಹೃದಯ ಭಾಗದಲ್ಲಿರುವ ಸಾಹಿತ್ಯಭವನದ ಬಗ್ಗೆ ಯಾರೂ ಕಾಳಜಿವಹಿಸದಿರುವುದನ್ನು ಖಂಡಿಸಲಾಯಿತು.ಸಂಬಂಧಿಸಿದವರು ಮುಂದಿನ ದಿನಗಳಲ್ಲಾದರೂ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆ ಮಾಡುವದಕ್ಕೆ ನಿರ್ಧರಿಸಲಾಯಿತು.
ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು ಬಸವರಾಜ್ ಸಂಕನಗೌಡರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಡೆಸಿಕೊಟ್ಟರು.
0 comments:
Post a Comment