ಬೆಂಗಳೂರು: ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಇನ್ನೊಂದು ಚುನಾವಣೆಗೆ ಸಜ್ಜಾಗಿದೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹತ್ತು ಮಂದಿ ಸ್ಪರ್ಧಿಸಿದ್ದಾರೆ. ಕನ್ನಡ ನಾಡು, ನುಡಿ, ಜನಪದದ ರಕ್ಷಣೆಯ ಉದ್ದೇಶದಿಂದ 1915ರಲ್ಲಿ ಜನ್ಮತಾಳಿದ ಈ ಸ್ವಾಯತ್ತ ಸಂಸ್ಥೆಯ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಲಕ್ಷಕ್ಕಿಂತ ಹೆಚ್ಚಿನ ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾಗಲಿರುವ ಅಭ್ಯರ್ಥಿಯ ಅಧಿಕಾರಾವಧಿಯಲ್ಲಿ ಪರಿಷತ್ತಿನ ಶತಮಾನೋತ್ಸವ ಸಂಭ್ರಮವೂ ಎದುರಾಗಲಿರುವುದು, ಈ ಬಾರಿಯ ಚುನಾವಣೆಗೆ ಉಮೇದು ತಂದುಕೊಟ್ಟಿದೆ. ಶತಮಾನೋತ್ಸವದಂಥ ಮಹತ್ವದ ಘಟ್ಟದಲ್ಲಿ ಪರಿಷತ್ತಿನ ಅಧ್ಯಕ್ಷ ಆಗಬೇಕು ಎಂಬ ಆಸೆಯಿಂದ, ಕಣದಲ್ಲಿರುವ ಅಭ್ಯರ್ಥಿಗಳು ಜಿದ್ದಾಜಿದ್ದಿನ ಪ್ರಚಾರವನ್ನೂ ನಡೆಸಿದ್ದಾರೆ.
ಪರಿಷತ್ತಿನ ಚಟುವಟಿಕೆಗಳಲ್ಲಿ ಕಳೆದ 14 ವರ್ಷಗಳಿಂದ ತೊಡಗಿಸಿಕೊಂಡಿರುವ ಪುಂಡಲೀಕ ಹಾಲಂಬಿ, ಒಮ್ಮೆ ಅಧ್ಯಕ್ಷರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ), ಕಾರ್ಯದರ್ಶಿಯಾಗಿದ್ದ ಜರಗನಹಳ್ಳಿ ಶಿವಶಂಕರ್, ಮಂಡ್ಯದಲ್ಲಿ ಕರ್ನಾಟಕ ಸಂಘದ ಮೂಲಕ ಕ್ರಿಯಾಶೀಲರಾಗಿರುವ ಜಯಪ್ರಕಾಶ ಗೌಡ, ಕಸಾಪ ಕೊಪ್ಪಳ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಚಿತ್ರನಟ ಅಶೋಕ ಈ ಬಾರಿಯ ಚುನಾವಣಾ ಕಣದಲ್ಲಿ ಇದ್ದಾರೆ.
ಇವರಲ್ಲದೆ ಮ.ಚಿ. ಕೃಷ್ಣ, ಆರ್.ಎಸ್.ಎನ್. ಗೌಡ, ಡಾ.ಕೆ.ವಿ. ಚಂದ್ರಣ್ಣಗೌಡ, ಮತ್ತು ಶಿವಪ್ಪ ಮಲ್ಲಪ್ಪ ಬಾಗಲ ಅವರು ಕಣದಲ್ಲಿ ಇರುವ ಇತರೆ ಹುರಿಯಾಳುಗಳು. ಅಭ್ಯರ್ಥಿಗಳು ರಾಜ್ಯದ ಉದ್ದಗಲ ಪ್ರವಾಸ ಮಾಡಿ, ಪ್ರಚಾರ ನಡೆಸಿದ್ದಾರೆ. ಎಲ್ಲರ ನಡುವೆ ತುರುಸಿನ ಪೈಪೋಟಿ ಇದೆ.
ಒಂದಿಷ್ಟು ಅಂಕಿ ಅಂಶ: 2008ರಲ್ಲಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇದ್ದ ಮತದಾರರ ಸಂಖ್ಯೆ 61,958. ಈ ಬಾರಿ ಅದು 1,08,028ಕ್ಕೆ ಏರಿದೆ. ಕಳೆದ ಮತ್ತು ಈ ಬಾರಿಯ ಮತದಾರರ ಸಂಖ್ಯೆಗೆ ಹೋಲಿಸಿದರೆ, ಮತದಾರರ ಪ್ರಮಾಣದಲ್ಲಿ ಶೇಕಡ 74ರಷ್ಟು ಹೆಚ್ಚಳ ಆಗಿದೆ. ಮೂರೂವರೆ ವರ್ಷಗಳ ಅವಧಿಯಲ್ಲಿ ಹಾಸನ ಜಿಲ್ಲೆಯ ಮತದಾರರ ಸಂಖ್ಯೆಯಲ್ಲಿ ಶೇಕಡ 212ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಚಾಮರಾಜನಗರ ಜಿಲ್ಲೆಯ ಮತದಾರರ ಸಂಖ್ಯೆಯಲ್ಲಿ ಶೇ 231ರಷ್ಟು ಹೆಚ್ಚಳ ಕಂಡುಬಂದಿದೆ.
ಇದಲ್ಲದೆ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೊಡಗು, ಬಳ್ಳಾರಿ ಜಿಲ್ಲೆಗಳ ಮತದಾರರ ಸಂಖ್ಯೆಯಲ್ಲಿ ಶೇ 100ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಏರಿಕೆ ಕಂಡುಬಂದಿದೆ. ಮತದಾರರ ಸಂಖ್ಯೆಯಲ್ಲಿ ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ನಗರ, 15,744 ಮತದಾರರೊಂದಿಗೆ ಈ ಬಾರಿಯೂ ಮುಂಚೂಣಿ ಸ್ಥಾನದಲ್ಲಿದೆ. ಕಳೆದ ಬಾರಿ ಎರಡನೆಯ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ ಈ ಬಾರಿ ನಾಲ್ಕನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಾಲ್ಕನೆಯ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಎರಡನೆಯ ಸ್ಥಾನಕ್ಕೆ ಜಿಗಿದಿದೆ. ಹಾಸನ ಜಿಲ್ಲೆ ಸಂಖ್ಯಾ ಪ್ರಾಬಲ್ಯದಲ್ಲಿ ಈ ಬಾರಿ ಮೂರನೆಯ ಸ್ಥಾನ ಗಿಟ್ಟಿಸಿಕೊಂಡಿದೆ.
ಒಕ್ಕಲಿಗ ಸಮುದಾಯ ದಟ್ಟವಾಗಿರುವ ಜಿಲ್ಲೆಗಳಲ್ಲಿ ಈ ಸಾರಿ ಮತದಾರರ ಸಂಖ್ಯೆ ಜಾಸ್ತಿಯಾಗಿರುವುದು ಒಂದು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಮಾಡಿದ ಪ್ರಯತ್ನವಾಗಿದ್ದು ಅದರ ಲಾಭ ಯಾರಿಗೆ ತಟ್ಟುತ್ತದೆ ಎಂಬುದು ಈ ಸಾರಿಯ ಚುನಾವಣೆಯ ಕುತೂಹಲದ ಅಂಶವಾಗಿದೆ.
ಜಾತಿಯ ಆಟ?: ಮತದಾರರ ಪೈಕಿ ಲಿಂಗಾಯತರು ಮತ್ತು ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಎರಡು ಪ್ರಬಲ ಸಮುದಾಯ ಹೊರತುಪಡಿಸಿದರೆ ಬ್ರಾಹ್ಮಣ ಮತ್ತು ಜೈನ ಸಮುದಾಯದ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇನ್ನುಳಿದ ಸಮುದಾಯಗಳಿಗೆ ಸೇರಿದ ಮತದಾರರ ಸಂಖ್ಯೆ ಗಣನೀಯವಾಗಿಲ್ಲ. ಚುನಾವಣೆಯಲ್ಲಿ ಜಾತಿ ತನ್ನದೇ ಆಟ ಆಡುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂಬುದು ಕಸಾಪ ಚುನಾವಣಾ ವರಸೆಗಳನ್ನು ಬಲ್ಲವರ ಅಭಿಪ್ರಾಯ.
ಅವರೇನು ಹೇಳುತ್ತಾರೆ?: `ವಿವಿಧ ಚಳವಳಿಗಳಲ್ಲಿ ಪಾಲ್ಗೊಂಡಿರುವುದು ಹಾಗೂ ಜನಪರ ನಿಲುವು ನನ್ನ ಶಕ್ತಿ. ಹಿಂದೆ ಪರಿಷತ್ತಿನ ಅಧ್ಯಕ್ಷನಾಗಿದ್ದ ಅವಧಿಯಲ್ಲೂ ಸ್ಪಷ್ಟ ನಿಲುವು ತೆಗೆದುಕೊಂಡಿದ್ದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆ, ಗಡಿನಾಡು ಪ್ರದೇಶಗಳಿಗೆ ಭೇಟಿ ನೀಡಿ, ಮತದಾರರ ಜೊತೆ ಸಂವಾದ ನಡೆಸಿದ್ದೇನೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಸಾಹಿತ್ಯಕವಾಗಿ ಹೆಚ್ಚು ಕ್ರಿಯಾಶೀಲವಾಗಿರುವ ವ್ಯಕ್ತಿ ನಾನು, ಸಾಹಿತ್ಯ ಲೋಕದ ಒಲವು ನನ್ನ ಕಡೆಗೇ ಇದೆ` ಎನ್ನುತ್ತಾರೆ ಚಂಪಾ.
ಇದೇ ಮೊದಲ ಬಾರಿಗೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಾಲಂಬಿ ತಮ್ಮ ಶಕ್ತಿ-ಸಾಮರ್ಥ್ಯ ಕುರಿತು ಈ ವಾದ ಮುಂದಿಡುತ್ತಾರೆ: `ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಪ್ರವಾಸ ನಡೆಸಿದ್ದೇನೆ. ಪರಿಷತ್ತಿನ ಸದಸ್ಯರಿಗೆ ನಾನು ಸಾಕಷ್ಟು ಪರಿಚಿತ. ಜಾತ್ಯತೀತ ಮನೋಭಾವದಿಂದ ನಾನು ಮಾಡಿರುವ ಪರಿಷತ್ತಿನ ಕೆಲಸಗಳು ನನ್ನ ಬಂಡವಾಳ. ಪರಿಷತ್ತಿನ ಕೆಲಸಗಳಲ್ಲಿ ಆರ್ಥಿಕ ಶಿಸ್ತು ತರುವುದು ನನ್ನ ಗುರಿ. ಕಸಾಪದ ಹಿಂದಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಮತ್ತು ಹರಿಕೃಷ್ಣ ಪುನರೂರು ನನ್ನ ಬೆಂಬಲಕ್ಕೆ ಇದ್ದಾರೆ`.
ಕೆಲವು ಅಭ್ಯರ್ಥಿಗಳ ಖಡಾಖಡಿ ಮಾತು, ಇನ್ನು ಕೆಲವರ ಜಾತಿ ಅವರ ಪಾಲಿನ ದೌರ್ಬಲ್ಯವಾಗಿ, ಎದುರಾಳಿಗಳಿಗೆ ಅನುಕೂಲ ಮಾಡಬಲ್ಲದು. ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಬ್ಬೊಬ್ಬ ಅಭ್ಯರ್ಥಿ ಪ್ರಾಬಲ್ಯ ಹೊಂದಿದ್ದಾರೆ. ಸ್ಥಳೀಯ ರಾಜಕಾರಣ, ಜಾತಿ, ಉದ್ಯಮಿಗಳು, ಮಠಗಳು, ಸ್ವಾಮೀಜಿಗಳ ಬೆಂಬಲ ಎಲ್ಲವೂ ಈ ಚುನಾವಣೆಯಲ್ಲಿ ತನ್ನದೇ ಆದ ಕೆಲಸ ಮಾಡುತ್ತದೆ ಎಂದು ಪರಿಷತ್ತಿನ ಚುನಾವಣೆಗಳನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
`ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಾಹಿತಿಯಾಗಿಯೂ ಪರಿಚಿತ. ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳ ಹೆಸರು ರಾಜ್ಯದ ಬಹುತೇಕ ಮತದಾರರಿಗೆ ತಿಳಿದೇ ಇಲ್ಲ` ಎನ್ನುತ್ತಾರೆ ಶಿವಶಂಕರ್.
`ಮಂಡ್ಯ ಜಿಲ್ಲೆಯೊಂದಿಗೆ ಬಲವಾಗಿ ಗುರುತಿಸಿಕೊಂಡಿರುವುದು ನನ್ನ ಪಾಲಿನ ಶಕ್ತಿ. ಮೂರು ದಶಕಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದೇನೆ. ಸಾಹಿತಿ ಅಲ್ಲದಿದ್ದರೂ ನಾನು ಸಾಹಿತ್ಯದ ಅಧ್ಯಾಪನ ಮಾಡಿದವನು. ಪರಿಷತ್ತನ್ನು ಅಧಿಕಾರಕ್ಕಾಗಿ ಅಂಟಿಕೊಂಡವರಿಂದ ಬಿಡುಗಡೆ ಮಾಡಬೇಕು` ಎಂಬುದು ಜಯಪ್ರಕಾಶ ಗೌಡರ ಪ್ರತಿಪಾದನೆ.
ಶೇಖರಗೌಡ ಮಾಲಿಪಾಟೀಲ ಅವರು ಉತ್ತರ ಕರ್ನಾಟಕ ಭಾಗದ ಮತದಾರರ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟು ಚುನಾವಣೆ ಎದುರಿಸುತ್ತಿದ್ದಾರೆ. `ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸಾಪ ಮತದಾರರು ಇದ್ದಾರೆ. ಚುನಾವಣಾ ಕಣದಲ್ಲಿ ಇರುವ ಹತ್ತು ಅಭ್ಯರ್ಥಿಗಳ ಪೈಕಿ ನಾನು ಮಾತ್ರ ಈ ಭಾಗದವನು. ಉಳಿದವರೆಲ್ಲ ಹಳೆ ಮೈಸೂರು ಭಾಗದಲ್ಲಿ ನೆಲೆ ನಿಂತಿರುವವರು` ಎನ್ನುತ್ತಾರೆ ಮಾಲಿಪಾಟೀಲ
ಪ್ರಜಾವಾಣಿ ವಾರ್ತೆ / ವಿಜಯ್ ಜೋಷಿ
0 comments:
Post a Comment