ಹಜ್ ಯಾತ್ರೆ ಕೈಗೊಳ್ಳಲು ಬಯಸಿ ಅರ್ಜಿ ಹಾಕಿ ರುವ ಯಾತ್ರಾರ್ಥಿಗಳ ಆಯ್ಕೆಗಾಗಿ ನಡೆಯಲಿರುವ ಲಾಟರಿ(ಕುರ್ರ) ಎತ್ತುವ ಕಾರ್ಯಕ್ರಮವನ್ನು ರಾಜ್ಯ ಹಜ್ ಕಮಿಟಿ ಮೇ 9ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದೆ.ಅಂದು ಬೆಳಗ್ಗೆ 10:30 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ, ಮುಸ್ಲಿಂ ಶಾಸಕರು, ವಿಧಾನ ಪರಿಷತ್ ಸದಸ್ಯರು, ಧರ್ಮ ಗುರುಗಳು ಆಗಮಿಸಲಿದ್ದಾರೆ ಎಂದು ರಾಜ್ಯ ಹಜ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಗೌಸ್ ಬಾಷಾ ಹೇಳಿದ್ದಾರೆ. ನಗರದ ಹಜ್ ಕಮಿಟಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗಣ್ಯರಿಗೆಲ್ಲರಿಗೂ ವಿಶೇಷ ಆಹ್ವಾನ ನೀಡಲಾಗುವುದು ಎಂದರು.ಕುರ್ರ ನಡೆಯುವ ವೇಳೆ ಹಜ್ ಯಾತ್ರೆಗೆ ಅರ್ಜಿ ಹಾಕಿರುವ ಯಾತ್ರಾರ್ಥಿಗಳು ತಮ್ಮ ಕವರ್ ನಂಬರ್‌ನ್ನು ತರಬೇಕು.ಒಂದು ವೇಳೆ ಕವರ್ ನಂಬರ್ ಸಿಗದಿದ್ದ ಯಾತ್ರಾರ್ಥಿಗಳು www.karhaj.in ವೆಬ್‌ಸೈಟ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ನಂಬರ್ ಹಾಕಿ ಪಡೆಯಬಹುದು. ಅದೂ ಆಗದಿದ್ದಲ್ಲಿ ಹಜ್ ಕಮಿಟಿ ಕಚೇರಿಗೆ ತೆರಳಿ ಕವರ್ ನಂಬರ್ ಪಡೆಯಬಹುದಾಗಿದೆ ಎಂದರು.
ಈ ಬಾರಿ 14,800 ಹಜ್ ಯಾತ್ರಾರ್ಥಿಗಳಿಂದ ಹಜ್ ಕೈಗೊಳ್ಳಲು ಬಯಸಿ ಅರ್ಜಿ ಬಂದಿದೆ. ಅರ್ಜಿ ಹಾಕುವ ವೇಳೆ ಯಾತ್ರಾರ್ಥಿಗಳು ಪಾಸ್‌ಪೋರ್ಟ್ ಹೊಂದಿರಲೇ ಬೇಕು ಎಂದು ಕಡ್ಡಾಯ ಮಾಡಿದ್ದೆವು.ಅದಕ್ಕಾಗಿ ಪಾಸ್‌ಪೋರ್ಟ್ ಅಧಿಕಾರಿಗಳೊಂದಿಗೆ ಮಾತುಕತೆ ಕೂಡಾ ನಡೆಸಿ, 9 ಸಾವಿರ ಮಂದಿಗೆ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಿದ್ದೇವೆ ಎಂದರು.ಹಜ್ ಯಾತ್ರೆ ಕೈಗೊಳ್ಳಲು ಬಯಸುವವರಿಗೆ ಪಾಸ್‌ಪೋರ್ಟ್ ವ್ಯವಸ್ಥೆ ಕಲ್ಪಿಸಿರುವುದರಲ್ಲಿ ಕರ್ನಾಟಕ ಹಜ್ ಕಮಿಟಿ ದೇಶದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ.
ನಮ್ಮ ರಾಜ್ಯದಲ್ಲಿ ಪಾಸ್‌ಪೋರ್ಟ್ ವ್ಯವಸ್ಥೆ ಕಲ್ಪಿಸಿದ ರೀತಿಯಲ್ಲಿಯೇ ಬೇರೆ ರಾಜ್ಯಗಳಲ್ಲಿಯೂ ಹಜ್ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ವ್ಯವಸ್ಥೆ ಮಾಡುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.ಆ ಮಟ್ಟಿನಲ್ಲಿ ನಾವು ಕಾರ್ಯೋನ್ಮುಖ ಆಗಿದ್ದೇವೆ ಎಂದು ಗೌಸ್ ಬಾಷಾ ಸಂತಸ ವ್ಯಕ್ತಪಡಿಸಿದರು.ಕಳೆದ ಬಾರಿ ಪಾಸ್‌ಪೋರ್ಟ್ ಕಡ್ಡಾಯ ಗೊಳಿಸಿರಲಿಲ್ಲ.ಆಗ 12,800 ಅರ್ಜಿಗಳು ಬಂದಿದ್ದವು.
ಆದರೆ ಈ ಬಾರಿ ಕಡ್ಡಾಯಗೊಳಿಸಿದ್ದರೂ 14,800 ಅರ್ಜಿಗಳು ಬಂದಿವೆ ಎಂದರು.ಈ ಬಾರಿ ಎಲ್ಲವೂ ಅಚ್ಚುಕಟ್ಟಾಗಿ ನಡೆಯಲು ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ಝಮೀರ್ ಪಾಷಾರವರೇ ಮುಖ್ಯ ಕಾರಣ. ಜೊತೆಗೆ ರೀಜಿನಲ್ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿ, ಸಿಬ್ಬಂದಿ ಕೂಡಾ ನಮಗೆ ಸಾಥ್ ನೀಡಿದ್ದರು ಎಂದು ಅವರಿಗೆ ಬಾಷಾ ಕೃತಜ್ಞೆ ಸಲ್ಲಿಸಿದರು.
0 comments:
Post a Comment