ರಾಜ್ಯದ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಬುಧವಾರ ಮಂಡಿಸಿದ ೨೦೧೨-೧೩ನೇ ಸಾಲಿನ ಬಜೆಟ್ ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
೨೦೧೨-೧೩ನೇ ಸಾಲಿನ ಬಜೆಟ್ ಕುರಿತಂತೆ ದೂರವಾಣಿ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶಾಸಕ ಸಂಗಣ್ಣ ಕರಡಿ ಅವರು, ಕಳೆದ ಬಾರಿ ಮಂಡಿಸಲಾದ ಕೃಷಿ ಬಜೆಟ್ ಅನ್ನು ಈ ಬಾರಿಯೂ ಮುಂದುವರೆಸಿರುವುದು ಸ್ವಾಗತಾರ್ಹವಾಗಿದೆ. ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಅಲ್ಲದೆ ಬಾಕಿ ಉಳಿದಿರುವ ನೀರಾವರಿ ಕ್ಷೇತ್ರದ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ. ತುಂಗಭದ್ರಾ ಜಲಾಶಯದ ಹೂಳೆತ್ತುವುದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದರಿಂದ, ರೈತರ ಬೆಳೆಗಳಿಗೆ ಹೆಚ್ಚಿನ ನೀರು, ಹಾಗೂ ಕುಡಿಯುವ ನೀರಿನ ವಿವಿಧ ಯೋಜನೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಜೆಟ್‌ನಲ್ಲಿ ಯುವಜನರಿಗೆ ಹೆಚ್ಚಿನ ಪ್ರೋತ್ಸಾಹ ಪ್ರಕಟಿಸಿದ್ದು, ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿಯೇ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿಗದಿಪಡಿಸಿರುವುದು ಶ್ಲಾಘನೀಯವಾಗಿದ್ದು, ಕೊಪ್ಪಳದ ಶ್ರೀ ಗವಿಮಠಕ್ಕೆ ೫೦ ಲಕ್ಷ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿರುವುದು ಈ ಭಾಗದ ಸಕಲ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ ಎಂದು ಶಾಸಕ ಸಂಗಣ್ಣ ಕರಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
0 comments:
Post a Comment