: ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಅಹವಾಲುಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕೆ.ಡಿ.ಪಿ. ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ವಿಫಲಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನೀರಿನ ಮೂಲಗಳಾದ ಕೆರೆ, ಕಟ್ಟೆ, ಹಳ್ಳಗಳು ಬರಿದಾಗಿವೆ. ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳಲ್ಲಿ ನೀರು ದೊರೆಯುತ್ತಿಲ್ಲ. ಈಗಾಗಲೆ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಕೈಪಂಪು, ಕಿರು ನೀರು ಸರಬರಾಜು ಘಟಕಗಳ ದುರಸ್ತಿಗಾಗಿ ಸುಸಜ್ಜಿತ ವಾಹನದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಸಂಬಂಧಿಸಿದಂತೆ ಸಹಾಯವಾಣಿಗೆ ದಾಖಲಾಗುವ ದೂರುಗಳನ್ನು ನಮೂದಿಸಿಕೊಂಡು, ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕ್ರಮ ಜರುಗಿಸಬೇಕು. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಿ, ಜನರಿಗೆ ನೀರು ಒದಗಿಸುವ ವ್ಯವಸ್ಥೆ ಕೈಗೊಳ್ಳಬೇಕು ಎಂದರು.
ಕೈಗಾರಿಕೆ ನೋಂದಣಿ : ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ನೋಂದಣಿಯಲ್ಲಿ ನಿಗದಿತ ಗುರಿಯಷ್ಟು ಸಾಧನೆಯಾಗಿಲ್ಲ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್ ಅವರು, ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಕೈಗಾರಿಕೆಗಳು ನೋಂದಣಿಯಾಗಿಲ್ಲ. ಕಳೆದ ೦೫ ವರ್ಷಗಳಿಂದ ಕೈಗಾರಿಕೆಗಳಿಗೆ ನೀಡಬೇಕಾದ ಸಹಾಯಧನ ಇದುವರೆಗೂ ಬಿಡುಗಡೆಯಾಗಿಲ್ಲ ಅಲ್ಲದೆ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಕೈಗಾರಿಕೆಗಳ ನೋಂದಣಿ ಕುಂಠಿತಗೊಂಡಿದೆ ಎಂದು ಸಮಜಾಯಿಷಿ ನೀಡಿದರು.
ಗಂಗಾಕಲ್ಯಾಣ ವಿಳಂಬ : ಹಿಂದುಳಿದ ವರ್ಗಗಳ ಜನಾಂಗದವರಿಗೆ ಗಂಗಾಕಲ್ಯಾಣ ಯೋಜನೆಯಡಿ ನಿಗಮದಿಂದ ಈ ವರ್ಷ ೮೧ ಫಲಾನುಭವಿಗಳಿಗೆ ಬೋರ್‌ವೆಲ್ ಕೊರೆಯಿಸುವ ಗುರಿ ನಿಗದಿಪಡಿಸಲಾಗಿದ್ದು, ಇದುವರೆಗೂ ಬೋರ್‌ವೆಲ್ ಕೊರೆಯಿಸದಿದ್ದರೂ, ಮಾಸಿಕ ಪ್ರಗತಿ ವರದಿಯಲ್ಲಿ ೮೧ ಗುರಿ ಸಾಧಿಸಲಾಗಿದೆ ಎಂದು ತಪ್ಪಾಗಿ ವರದಿ ನೀಡಿದ್ದಕ್ಕಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಲ್ತಾನ್‌ಪುರಿ ಅವರನ್ನು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ ಅವರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸುಲ್ತಾನ್‌ಪುರಿ ಅವರು ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ನೀಡುವಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ಆಯಾ ಶಾಸಕರು ವಿಳಂಬ ಮಾಡಿದ್ದರಿಂದ ಗುರಿ ಸಾಧನೆಯಲ್ಲಿ ತಡವಾಗಿದೆ. ಆದರೆ ಸದ್ಯ ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಯಿಸುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ವಿವರಣೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್ ಅವರು ಮಾತನಾಡಿ, ಉದ್ಯೋಗಖಾತ್ರಿ ಯೋಜನೆಯಡಿ ಜಲಾನಯನ ಅಭಿವೃದ್ಧಿಯಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಕೂಡಲೆ ಅಗತ್ಯವಿರುವ ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕ್ರಿಯಾ ಯೋಜನೆಯೊಂದನ್ನು ತಯಾರಿಸಿ ಸಲ್ಲಿಸುವಂತೆ ಜಿಲ್ಲಾನಯನ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸದ್ಯ ಕೆಲವು ಕಡೆ ಭತ್ತದ ಕಟಾವು ನಡೆಯುತ್ತಿದ್ದು, ಇಂತಹ ಸ್ಥಳದಿಂದ ಮೇವನ್ನು ಸಂಗ್ರಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಮೇವಿನ ಲಭ್ಯತೆ, ಜಾನುವಾರುಗಳ ಸ್ಥಿತಿಗತಿ ಕುರಿತಂತೆ ವರದಿ ನೀಡಲು ಸೂಚಿಸಿದ್ದಕ್ಕೆ ಉತ್ತರಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ನಿಂಬರಗಿ ಅವರು, ಜಿಲ್ಲೆಯಲ್ಲಿ ಸದ್ಯ ರೈತರಲ್ಲಿ ೯ ವಾರಗಳಿಗೆ ಆಗುವಷ್ಟು ಮೇವು ಇರುವುದಾಗಿ ತಿಳಿದುಬಂದಿದ್ದು, ಜಿಲ್ಲೆಯಲ್ಲಿ ೬ ಕಡೆ ಗೋಶಾಲೆಗಳನ್ನು ಸ್ಥಾಪಿಸಲಾಗಿದೆ. ಮೇವಿನ ಕೊರತೆಯಿಂದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುವ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಸದ್ಯ ವರದಿಯಾಗಿಲ್ಲ ಎಂದರು.
ವೈದ್ಯಕೀಯ ವೆಚ್ಚ ಮರುಪಾವತಿ : ಜಿಲ್ಲೆಯಲ್ಲಿನ ಶಿಕ್ಷಕರ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದ ಸುಮಾರು ೪೩ ಕಡತಗಳು ಹಲವಾರು ತಿಂಗಳುಗಳಿಂದ ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ತಮ್ಮ ಗಮನಕ್ಕೆ ತಂದಿದ್ದು, ಮೊದಲೆ ವೈದ್ಯಕೀಯ ಸಮಸ್ಯೆಯಿಂದ ಬಳಲಿ, ತೊಂದರೆ ಅನುಭವಿಸಿರುವ ಶಿಕ್ಷಕರಿಗೆ ಕಡತ ವಿಲೇವಾರಿ ವಿಳಂಬಗೊಳಿಸಿ, ಇನ್ನಷ್ಟು ತೊಂದರೆ ಕೊಡುವುದು ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆಯಾ ಕಡತಗಳ ದಾಖಲಾತಿ ಚೆಕ್ ಲಿಸ್ಟ್ ತಯಾರಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಒಂದೆಡೆ ಸೇರಿ, ಕಡತಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ಒಂದು ವಾರದೊಳಗೆ ಅಂತಿಮ ನಿರ್ಧಾರ ಕೈಗೊಂಡು, ಕಡಿತ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಎಸ್. ರಾಜಾರಾಮ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಾಸ್‌ಬುಕ್ ಮೂಲಕ ಗೊಬ್ಬರ : ಜಿಲ್ಲೆಯಲ್ಲಿ ಹಿಂಗಾರು ಮಳೆ ವಿಫಲಗೊಂಡ ಕಾರಣ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಾರದ ಕಾರಣದಿಂದಾಗಿ ಸಾಕಷ್ಟು ರಸಗೊಬ್ಬರ ಉಳಿದಿದೆ. ಅಲ್ಲದೆ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಂದಿದ್ದರಿಂದ ಈಗಾಗಲೆ ಜಿಲ್ಲೆಯಲ್ಲಿ ಸುಮಾರು ೨೦೦೦೦ ಟನ್ ರಸಗೊಬ್ಬರ ದಾಸ್ತಾನಿದೆ. ಈ ಬಾರಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಾಸ್‌ಬುಕ್ ಮೂಲಕ ಗೊಬ್ಬರ ವಿತರಿಸಲು ನಿರ್ಧರಿಸಲಾಗಿದ್ದು, ಸುಮಾರು ೨ ಲಕ್ಷ ಪಾಸ್‌ಬುಕ್ ಮುದ್ರಣ ಕಾರ್ಯಕ್ಕೆ ಟೆಂಡರ್ ನೀಡಲಾಗಿದೆ. ಜಿಲ್ಲಾಡಳಿತ ಪಾಸ್‌ಬುಕ್ ಒದಗಿಸುವ ವ್ಯವಸ್ಥೆ ಕೈಗೊಂಡಿದೆ. ಇದರಿಂದಾಗಿ ಈ ಬಾರಿ ರಸಗೊಬ್ಬರ ವಿತರಣೆ ಸಮರ್ಪಕವಾಗಿ ನಡೆಯುವ ವಿಶ್ವಾಸವಿದೆ ಎಂದು ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಅವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್, ಮುಖ್ಯ ಲೆಕ್ಕಾಧಿಕಾರಿ ರತ್ನಾನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು
0 comments:
Post a Comment