PLEASE LOGIN TO KANNADANET.COM FOR REGULAR NEWS-UPDATES


2008ರ ಕಳೆದ ಮೇ 18ರಂದು ಮುಲ್ಲತ್ತೀವು ಅಡವಿಗಳಲ್ಲಿ ಸೆರೆಸಿಕ್ಕ ಪ್ರಭಾಕರನ್‌ನನ್ನು ಹತ್ಯೆ ಮಾಡಿದ ನಂತರ ತಮ್ಮ ದೇಶದಲ್ಲಿ 25ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧ ಕೊನೆಗೊಂಡಿತೆಂದು ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಘೋಷಿಸಿದರೂ ಅವರ ಸರಕಾರ ಆ ಯುದ್ಧವನ್ನು ನಿಲ್ಲಿಸಿಲ್ಲ. ಎಲ್‌ಟಿಟಿಇ ಇರುವವರೆಗೆ ಕನಿಷ್ಠ ಪಕ್ಷ ತಮಿಳರ ಮಾನ ಮತ್ತು ಪ್ರಾಣಗಳನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತಿದ್ದ ಶ್ರೀಲಂಕಾ ಸರಕಾರ ಎಲ್‌ಟಿಟಿಇಯ ನಿರ್ಮೂಲನದೊಂದಿಗೆ ತಮಿಳರ ಅಸ್ತಿತ್ವ ಮತ್ತು ಅಸ್ಮಿತೆಗಳ ಮೇಲೆಯೇ ಮಾರಣಾಂತಿಕ ಯುದ್ಧ ಪ್ರಾರಂಭಿಸಿದೆ.ಇತ್ತೀಚೆಗೆ ಬಿಬಿಸಿಯ ಚಾನೆಲ್ 4 ಬಿತ್ತರಿಸಿದ ಕೆಲವು ವಿಡಿಯೋ ಚಿತ್ರಗಳು ಯುದ್ಧದ ಕಾಲದಲ್ಲಿ ಮತ್ತು ನಂತರದಲ್ಲಿ ಶ್ರೀಲಂಕಾ ಸರಕಾರ ಹೇಗೆ ಶ್ರೀಲಂಕಾದ ಮೂಲನಿವಾಸಿಗಳೇ ಆಗಿರುವ ತಮಿಳರ ಮೀಲೆ ಅನ್ಯಾಯ-ಅತ್ಯಾಚಾರ-ನರಹತ್ಯೆ-ಬಾಲವಧೆ-ನಡೆಸುತ್ತಿದೆಯೆಂಬುದನ್ನು ಜಗತ್ತಿಗೆ ಬಯಲುಗೊಳಿಸಿದೆ.ಈ ಚಿತ್ರಗಳನ್ನು ಕಂಡ ಯಾರ ಮನಸ್ಸು ಕರಗುವುದಿಲ್ಲವೋ ಶ್ರೀಲಂಕಾ ಸರಕಾರವನ್ನು ಖಂಡಿಸಲು ಮನಸ್ಸಾಗುವುದಿಲ್ಲವೋ ಅವರು ಮನುಷ್ಯಕುಲದ ಸದಸ್ಯರಾಗಿರಲೇ ಅನರ್ಹರು.
ಕಳೆದ ಒಂದೆರಡು ವರ್ಷಗಳಿಂದ ಈ ಚಿತ್ರಗಳನ್ನು ಮತ್ತು ಸೋರಿ ಹೊರಬರುತ್ತಿದ್ದ ನರಹತ್ಯೆ ವರದಿಗಳಿಂದ ದಿಗ್ಭ್ರಾಂತರಾಗಿದ್ದ ಹಲವಾರು ದೇಶಗಳ ಜನತೆ ಶ್ರೀಲಂಕಾ ಸರಕಾರ ಈ ಮಾನವಹಕ್ಕು ಉಲ್ಲಂಘನೆಯನ್ನು ತಡೆಗಟ್ಟಬೇಕೆಂದು ಜಗತ್ತಿನಾದ್ಯಂತ ಹೋರಾಟ ಪ್ರಾರಂಭಿಸಿದ್ದರು.ಆದರೆ ಶ್ರೀಲಂಕಾ ಸರಕಾರಕ್ಕೆ ಮೊದಲಿಂದಲೂ ಚೀನಾ, ಅಮೆರಿಕ, ರಷ್ಯಾ, ಜರ್ಮನಿ, ಭಾರತ ಒಳಗೊಂಡಂತೆ ಎಲ್ಲಾ ಬಲಿಷ್ಠ ರಾಷ್ಟ್ರಗಳು ಬೆಂಬಲಕ್ಕಿದ್ದವು. ಅವುಗಳ ಕಣ್ಣೆಲ್ಲಾ ಶ್ರೀಲಂಕಾದ ಸಂಪನ್ಮೂಲಗಳ ಮೇಲೆ ಮತ್ತು ಆ ದೇಶದ ಸರಕಾರದ ಸಹಕಾರದೊಂದಿಗೆ ಇಡೀ ಏಷಿಯಾ- ಫೆಸಿಫಿಕ್ ವಲಯದಲ್ಲಿ ತನ್ನ ಮೇಲ್ಮೆ ಸಾಧಿಸುವುದರ ಮೇಲೆ.
ಆದರೆ ಕ್ರಮೇಣ ಚೀನಾದ ಬಂಡವಾಳ ಲಂಕಾದಲ್ಲಿ ಹೆಚ್ಚಾಗುತ್ತಿದ್ದಂತೆ ಲಂಕಾ ಸರಕಾರ ಅಮೆರಿಕಕ್ಕಿಂತ ಚೀನದ ಕಡೆ ಹೆಚ್ಚು ಒಲವು ತೋರಿಸಲು ಪ್ರಾರಂಭಿಸಿದೆ.ಈ ಕಾರಣದಿಂದಾಗಿಯೇ ಈವರೆಗೆ ಶ್ರೀಲಂಕಾ ಸರಕಾರದ ಬೆಂಬಲಕ್ಕೆ ನಿಂತಿದ್ದ ಅಮೆರಿಕ ಈಗ ಅದಕ್ಕೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಅದೇ ಕಾರಣಕ್ಕೆ ಈವರೆಗೂ ತಾನೇ ಬೆಂಬಲಿಸಿದ್ದ ತಮಿಳರ ನರಮೇಧದ ವಿಷಯವನ್ನು ಇದೇ ಮಾರ್ಚ್ 7ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಎದುರು ತೆಗೆದುಕೊಂಡು ಹೋಗಿ ಶ್ರೀಲಂಕಾ ಸರಕಾರದ ವಿರುದ್ಧ ಮತ ನಿರ್ಣಯ ತೆಗೆದುಕೊಳ್ಳಲು ಮತಕ್ಕೆ ಹಾಕಬೇಕೆಂದು ಒತ್ತಾಯಿಸಿತ್ತು.
ಆ ನಿಟ್ಟಿನಲ್ಲಿ ಅಮೆರಿಕವು ಶ್ರೀಲಂಕಾ ಸರಕಾರವೇ ರಚಿಸಿದ, ಪಾಠ ಕಲಿತ ಮತ್ತು ಮರು ಸಂಧಾನ ಸಮಿತಿ (Lessons Learnt and Reconcialtion Committee- LLRC)ಯ ಸಲಹೆಗಳನ್ನು ಶ್ರೀಲಂಕಾ ಸರಕಾರ ಚಾಚೂ ತಪ್ಪದಂತೆ ಜಾರಿಗೆ ತರಲು ಅಂತಾರಾಷ್ಟ್ರೀಯ ಸಮುದಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ಮತಕ್ಕೆ ಹಾಕಿತು.ಮಾರ್ಚ್ 22ರಂದು ನಡೆದ ಸಮಿತಿಯ 48 ದೇಶಗಳ ಮತದಾನದಲ್ಲಿ 24ದೇಶಗಳು ಅಮೆರಿಕದ ನಿರ್ಣಯದ ಪರವಾಗಿಯೂ,15ದೇಶಗಳು ವಿರುದ್ಧವಾಗಿಯೂ,8 ದೇಶಗಳು ತಟಸ್ಥವಾಗಿಯೂ ಉಳಿದುಕೊಂಡವು. ನಿರೀಕ್ಷೆಯಂತೆ ಚೀನಾ, ರಷ್ಯಾ ಇತರ ಅಮೆರಿಕ ವಿರೋಧಿ ಶ್ರೀಲಂಕಾ ಸ್ನೇಹಿತರು ಶ್ರೀಲಂಕಾ ಪರವಾಗಿ ನಿರ್ಣಯದ ವಿರುದ್ಧ ಮತ ಹಾಕಿದರು. ಅಮೆರಿಕದ ಎಲ್ಲಾ ಚೇಲಾ ದೇಶಗಳು ಅಮೆರಿಕದ ಪರವಾಗಿ ಮತಚಲಾಯಿಸಿದವು.
ಆದರೆ ಭಾರತ ಮಾತ್ರ ಬ್ರಾಹ್ಮಣೀಯ ಕುತಂತ್ರವನ್ನು ಮಾಡಿತು. ಭಾರತದ ತಮಿಳು ಜನರ ಮತ್ತು ಪ್ರಜಾತಾಂತ್ರಿಕ ಜನರ ಒತ್ತಾಯ ಹಾಗೂ ತಮಿಳು ಪಕ್ಷಗಳ ಒಕ್ಕೊರಲಿನ ಒತ್ತಾಯದಿಂದಾಗಿ ಭಾರತ ಶ್ರೀಲಂಕಾ ಸರಕಾರದ ಅಮಾನವೀಯ ಅತ್ಯಾಚಾರಗಳನ್ನು ಖಂಡಿಸುವ ನಿರ್ಣಯದ ಪರವಾಗಿ ಮತ ಹಾಕಲೇನೋ ಒಪ್ಪಿತು. ಆದರೆ ಅದೇ ಸಮಯದಲ್ಲಿ ಶ್ರೀಲಂಕಾ ಸರಕಾರ ತಮ್ಮನ್ನು ಎಂದಿಗೂ ತಪ್ಪುತಿಳಿದುಕೊಳ್ಳಬಾರದು ಎಂಬ ಉದ್ದೇಶದಿಂದ ಕೂಡಲೇ ಅಧ್ಯಕ್ಷ ರಾಜಪಕ್ಸೆಗೆ ಪತ್ರ ಬರೆದು ತಾವು ಹೇಗೆ ಶ್ರೀಲಂಕಾ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ಕಂಡರೂ ಒಳಗಿದ್ದೇ ಅವರ ಪರವಾಗಿ ಕೆಲಸ ಮಾಡಿದ್ದೇವೆ ಎಂದು ನಾಚಿಕೆ ಬಿಟ್ಟು ಹೇಳಿ ಕೊಂಡಿದೆ.
ಕೊಲೆಗಡುಕ ಅಧ್ಯಕ್ಷ ರಾಜಪಕ್ಸೆಗೆ ಪ್ರಧಾನಿ ಮನಮೋಹನ್ ಸಿಂಗ್ ಬರೆದಿರುವ ಪತ್ರದಲ್ಲಿ ತಮ್ಮ ದೇಶದ ನಿಲುವನ್ನು ತಪ್ಪುತಿಳಿಯಬಾರದೆಂದೂ ತಾವೆಂದಿಗೂ ಶ್ರೀಲಂಕಾದ ಸಾರ್ವಭೌಮತೆ ಮತ್ತು ಭೌಗೋಲಿಕ ಘನತೆಯ ಪರವಾಗಿಯೇ ಇರುವೆವೆಂದು ಹೇಳುತ್ತಾ ಅಮೆರಿಕ ಮುಂದಿಟ್ಟ ನಿರ್ಣಯಕ್ಕೆ ಲಂಕಾ ಸರಕಾರದ ಪರವಾದ ತಿದ್ದುಪಡಿಯನ್ನು ತರುವಲ್ಲಿ ಯಶಸ್ವಿಯಾಗಿರುವುದಾಗಿಯೂ ಹೇಳಿಕೊಂಡಿದೆ. ಈ ತಿದ್ದುಪಡಿ ಪ್ರಕಾರ ಸಮಿತಿ ಮಾನವ ಹಕ್ಕು ಉಲ್ಲಂಘನೆಯನ್ನು ತಡೆಯಲು ತೆಗೆದುಕೊಳ್ಳುವ ಯಾವುದೇ ಕ್ರಮ ‘‘ಶ್ರೀಲಂಕಾ ಸರಕಾರದ ಸಮ್ಮತಿ ಮತ್ತು ಸಹಕಾರ’’    

ದೊಂದಿಗೆ ಮಾತ್ರ ಜಾರಿಗೆ ಬರತಕ್ಕದ್ದು ಎಂಬ ತಿದ್ದುಪಡಿಯನ್ನು ತಂದುಬಿಟ್ಟಿದೆ. ಅಂದರೆ ಯಾರು ಕೊಲೆಗಾರನೋ ಅವನ ಒಪ್ಪಿಗೆಯೊಂದಿಗೆ ಕೊಲೆಯನ್ನು ತಡೆಯತಕ್ಕದ್ದು..ಅರ್ಥಾತ್ ಕೊಲೆಗಾರ ಒಪ್ಪದಿದ್ದಲ್ಲಿ ಕೊಲೆಯನ್ನು ತಡೆಯುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಹಾಗಿಲ್ಲ! ಹೀಗೆ ಭಾರತ ತಮಿಳರ ಪರ ಎನ್ನುತ್ತಾ ತಮಿಳರ ಬೆನ್ನಿಗೇ ಚೂರಿಹಾಕಿದೆ. ಹಿಂದಿನಿಂದಲೂ ಭಾರತ ಸರಕಾರ ಈ ಎಲ್ಲಾ ಜನಾಂಗೀಯ ನರಮೇಧದ ಯೋಜನೆಗಳಿಗೆ ಸಕ್ರಿಯ ಬೆಂಬಲ ಕೊಡುತ್ತಿದೆ. ಎಲ್‌ಟಿಟಿಇಯ ವಿರುದ್ಧದ ಯುದ್ಧಕ್ಕೆ ಆಗ ಹಣಕಾಸು ಮತ್ತು ಬೇಹುಗಾರಿಕಾ ನಕ್ಷೆಗಳನ್ನು ಒದಗಿಸಿದಂತೆ ಈಗ ಅಮಾಯಕ ತಮಿಳರ ಮೇಲಿನ ಯುದ್ಧಕ್ಕೆ ತನ್ನ ಬಜೆಟ್ಟುಗಳಲ್ಲಿ ಕೋಟ್ಯಂತರ ಹಣಕಾಸು ನೆರವು ಒದಗಿಸಿದೆ.
ಕನಿಷ್ಠ ಪಕ್ಷ ಕ್ಯಾಂಪುಗಳ ಪರಿಸ್ಥಿತಿ ಸುಧಾರಿಸಬೇಕೆಂಬ ಶರತ್ತನ್ನೂ ಹಾಕದೆ ಕೊಟ್ಟಿರುವ ಈ ಹಣ ತಮಿಳರ ಯೋಜಿತ ನರಮೇಧಕ್ಕೆ ಬಳಕೆಯಾಗುತ್ತದೆಂಬುದರಲ್ಲಿ ಸಂಶಯವಿಲ್ಲ. ಒಂದರ್ಥದಲ್ಲಿ ನಾಗರಿಕ ಸಮಾಜದ ಈ ಮೌಲಿಕ ಅಧಃಪತನ ಈ ಯುದ್ಧದ ಬಹುದೊಡ್ಡ ಕೊಲ್ಯಾಟರಲ್ ಡ್ಯಾಮೇಜು!

Advertisement

0 comments:

Post a Comment

 
Top