PLEASE LOGIN TO KANNADANET.COM FOR REGULAR NEWS-UPDATES


ಪ್ರಸಕ್ತ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಯಾವುದೇ ನಕಲಿಗೆ ಅವಕಾಶ ನೀಡದೆ, ಕಟ್ಟುನಿಟ್ಟಿನ ಪರೀಕ್ಷೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
         ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರುವ ಏ. ೦೨ ರಿಂದ ೧೬ ರವರೆಗೆ ಜಿಲ್ಲೆಯ ಒಟ್ಟು ೬೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮ ಹಾಗೂ ಸುವ್ಯವಸ್ಥೆಯಿಂದ ಜರುಗಿಸಬೇಕು.  ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಾಮೂಹಿಕ ನಕಲು ನಡೆಯಬಾರದು.  ಒಂದು ವೇಳೆ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಅವಕಾಶ ನೀಡಿದ್ದು, ಅಥವಾ ನಕಲಿಗೆ ಸಹಕರಿಸುವುದು ಕಂಡುಬಂದಲ್ಲಿ, ಅಂತಹ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.  ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ಲಭ್ಯವಾಗದೇ ಇದ್ದರೂ ಪರವಾಗಿಲ್ಲ,  ಆದರೆ ಕಳಪೆ ಗುಣಮಟ್ಟದ ಪರೀಕ್ಷೆ ನಡೆಸಿದ ಕಳಂಕ ಜಿಲ್ಲೆಗೆ ಬರಬಾರದು.  ಇದರಿಂದಾಗಿ ಕಷ್ಟಪಟ್ಟು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದ ತೃಪ್ತಿ ಶಿಕ್ಷಕರಿಗೆ ಲಭಿಸಲಿದೆ.  ಪರೀಕ್ಷೆಯನ್ನು ಸುವ್ಯವಸ್ಥೆಯಿಂದ ಜರುಗಿಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಶಾಲೆಗಳಿಗೆ ಅನುದಾನ ಒದಗಿಸಲಾಗಿದ್ದು, ಮಕ್ಕಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಯಾ ಶಾಲೆಯವರೇ ಕಲ್ಪಿಸಬೇಕು.  ತಪ್ಪಿದಲ್ಲಿ ಅಂತಹ ಶಾಲೆಯ ಮುಖ್ಯಸ್ಥರನ್ನೆ ಹೊಣೆಗಾರರನ್ನಾಗಿಸಲಾಗುವುದು.  ಪರೀಕ್ಷಾ ಪ್ರಶ್ನೆಪತ್ರಿಕೆಗಳು ಮಾ. ೨೬ ಅಥವಾ ೨೭ ರಂದು ಜಿಲ್ಲೆಗೆ ಆಗಮಿಸಲಿದ್ದು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ತಾಲೂಕಿನಿಂದಲೇ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಕೇಂದ್ರದಿಂದ ಪಡೆದುಕೊಂಡು ಹೋಗಿ, ಆಯಾ ತಾಲೂಕು ಖಜಾನೆಯಲ್ಲಿ ನಿಯಮಾನುಸಾರ ಭದ್ರತೆಯಲ್ಲಿರಿಸಬೇಕು.  ಮಕ್ಕಳು ಪರೀಕ್ಷೆಯನ್ನು ನಿರ್ಭೀತಿಯಿಂದ ಬರೆಯುವಂತಹ ವಾತಾವರಣವನ್ನು ಶಾಲೆಯವರು ಒದಗಿಸಬೇಕು.  ಯಾವುದೇ ಕಾರಣಕ್ಕೂ ಮಕ್ಕಳು ನೆಲದ ಮೇಲೆ ಪರೀಕ್ಷೆ ಬರೆಯುವ ಸ್ಥಿತಿ ತಂದೊಡ್ಡಬಾರದು.  ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಸಮರ್ಪಕ ಆಸನದ ವ್ಯವಸ್ಥೆ ಇರಬೇಕು.  ಪರೀಕ್ಷಾ ದಿನದಂದು, ಉತ್ತರ ಪತ್ರಿಕೆಗಳು ಸಂಜೆ ೦೪ ಗಂಟೆಯ ಒಳಗಾಗಿ ಜಿಲ್ಲಾ ಕೇಂದ್ರವನ್ನು ತಲುಪುವಂತಾಗಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
         ಸಭೆಯಲ್ಲಿ ಭಾಗವಹಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಪಂಡಿತ್ ಯಲ್ಲಪ್ಪ ಮಾತನಾಡಿ, ಈ ಬಾರಿ  ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ೬೦ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಈ ಬಾರಿ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಆ ಪೈಕಿ ೯೨೦೪ ಬಾಲಕರು ಹಾಗೂ ೭೪೫೬ ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ ೧೫೪೫೦ ವಿದ್ಯಾರ್ಥಿಗಳು ಹೊಸಬರಾದರೆ, ೧೨೧೦ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯುವವರಾಗಿದ್ದಾರೆ.  ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೈಕಿ ೨೪೪೧-ಪರಿಶಿಷ್ಟ ಜಾತಿ, ೨೦೦೩-ಪ.ವರ್ಗ, ೧೨೦೬- ವರ್ಗ-೧ ಹಾಗೂ ೧೧೦೧೦- ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ.  ಜಿಲ್ಲೆಯಲ್ಲಿ ೦೪ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಹಾಗೂ ೦೨ ಕೇಂದ್ರಗಳನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದೆ.     ಗಂಗಾವತಿ ತಾಲೂಕು ಸಿದ್ದಾಪುರದ ಸರ್ಕಾರಿ ಪ.ಪೂ. ಕಾಲೇಜು, ಕೊಪ್ಪಳ ತಾಲೂಕು ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು, ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಗುರುತಿಸಲಾಗಿದೆ.  ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಕುಷ್ಟಗಿ ತಾಲೂಕು ಹನುಮನಾಳದ ಸರ್ಕಾರಿ ಪ.ಪೂ. ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರವಾಗಿ ಗುರುತಿಸಲಾಗಿದೆ.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜಾಗೃತ ದಳವನ್ನು ನೇಮಕ ಮಾಡಲಾಗಿದ್ದು, ಜಾಗೃತ ದಳದ ತಂಡ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಯುವ ಕುರಿತು ಪರೀಕ್ಷಾ ಕೇಂದ್ರಗಳಿಗೆ ಆಕಸ್ಮಿಕವಾಗಿ ಭೇಟಿ ನೀಡಿ ಪರಾಮರ್ಶಿಸಲಿದೆ.  ತಾಲೂಕು ಕೇಂದ್ರಗಳಲ್ಲಿ ಸ್ಥಾನಿಕ ಜಾಗೃತ ದಳವನ್ನು ರಚಿಸಲಾಗಿದೆಯಲ್ಲದೆ, ಪರೀಕ್ಷಾ ನಕಲನ್ನು ಪತ್ತೆ ಹಚ್ಚಲು ಮೊಬೈಲ್ ಸ್ಕ್ವಾಡ್ ಸಹ ರಚಿಸಲಾಗಿದೆ.  ಪರೀಕ್ಷಾ ಕೆಲಸ ಕಾರ್ಯಗಳಿಗೆ ಪರೀಕ್ಷೆಯ ಆಯಾ ವಿಷಯವಾರು ಶಿಕ್ಷಕರನ್ನು ಬಿಟ್ಟು, ಪ್ರೌಢಶಾಲೆಯ ಉಳಿದ ವಿಷಯಗಳ ಶಿಕ್ಷಕರನ್ನೆ ಪರೀಕ್ಷಾ ಕಾರ್ಯಕ್ಕೆ ನೇಮಕ ಮಾಡಲಾಗುವುದು.  ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳು, ಹಾಗೂ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.
       ಸಭೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top