ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಹಮ್ಮಿಕೊಳ್ಳುವುದು, ಪದವಿ ಮಟ್ಟದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅಂಕ ನಿಗದಿಪಡಿಸುವುದು ಸೇರಿದಂತೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ.
೨೦೧೨-೧೩ನೇ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಪ್ರತಿವಾರದ ಪಠ್ಯ ಬೋಧನಾ ಅವಧಿ ೨೮ ಗಂಟೆ ಮೀರದಂತೆ ನೋಡಿಕೊಂಡು, ವಾರದಲ್ಲಿ ಕನಿಷ್ಟ ೨ ರಿಂದ ೪ ಗಂಟೆಗಳ ಕಾಳ ಜೀವನ ಕೌಶಲ ಮತ್ತು ಉದ್ಯೋಗ ಕೌಶಲ ಕಲಿಸಲು ಅವಕಾಶ ಮಾಡಿಕೊಡುವುದು ಮತ್ತು ಇವುಗಳನ್ನು ಕರ್ನಾಟಕ ಜ್ಞಾನ ಆಯೋಗ ಹಾಗೂ ಕರ್ನಾಟಕ ರಾಜ್ಯ ವೃತ್ತಿ ತರಬೇತಿ ಮತ್ತು ಕೌಶಲ ನಿಗಮದ ಸಹಯೋಗದಲ್ಲಿ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು. ಪದವಿ ಮಟ್ಟದಲ್ಲಿ ೧ ರಿಂದ ೪ನೇ ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಗಳು ನಿಗದಿಪಡಿಸಿದ ಯಾವುದಾದರೂ ಒಂದು ಪಠ್ಯೇತರ ಚಟುವಟಿಕೆಗಳಲ್ಲಿ ಅಂದರೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್‌ಎಸ್‌ಎಸ್, ಎನ್‌ಸಿಸಿ, ಯೋಗ ಇತ್ಯಾದಿ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದ್ದು, ಈ ಚಟುವಟಿಕೆಗಳಿಗೆ ೫೦ ಅಂಕಗಳನ್ನು ನಿಗದಿಪಡಿಸಲಾಗಿದೆ. ಬಿ.ಎ. ಪದವಿಯಲ್ಲಿ ಮಹಿಳಾ ಅಧ್ಯಯನ ಮತ್ತು ಬಿ.ಎಸ್‌ಸಿ ಪದವಿಯಲ್ಲಿ ಭೂಗರ್ಭ ಶಾಸ್ತ್ರವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಂಭಿಸಲು ಕಾಲೇಜುಗಳಿಎ ಅವಕಾಶ ನೀಡಲು ಸಭೆ ನಿರ್ಣಯ ಕೈಗೊಂಡಿದೆ. ಪದವಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಮರು ಮೌಲ್ಯಮಾಪನದ ಅಂಕಗಳು ಮೊದಲಿಗಿಂತ ಶೇ. ೧೫ ಕ್ಕಿಂತ ಹೆಚ್ಚಾದಲ್ಲಿ, ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲು ಮತ್ತು ಮರು ಮೌಲ್ಯಮಾಪನದ ಅಂಕ ಹಾಗೂ ಪ್ರಥಮ ಮೌಲ್ಯ ಮಾಪನದ ಅಂಕ ಈ ಎರಡರಲ್ಲಿ ಯಾವುದು ಹೆಚ್ಚಿರುತ್ತದೋ ಅದನ್ನು ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಹೊಸತಾಗಿ ೨೦೧೨-೧೩ನೇ ಸಾಲಿನಿಂದ ಈಗಿರುವ ಸ್ನಾತಕೋತ್ತರ ಪದವಿಗಳ ಜೊತೆಗೆ ಭೌತಶಾಸ್ತ್ರ ಮತ್ತು ಪರಿಸರ ವಿಜ್ಞಾನ (ಎನ್ವಿರಾನ್‌ಮೆಂಟಲ್ ಸೈನ್ಸ್) ಗಳಲ್ಲಿ ಎಂ.ಎಸ್‌ಸಿ. ಪದವಿಗಳನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment