PLEASE LOGIN TO KANNADANET.COM FOR REGULAR NEWS-UPDATES


ಫೋರ್ಬ್ಸ್ ಬಿಲಿಯನೇರ್ ಭಾರತೀಯರ ಪಟ್ಟಿಯಲ್ಲಿ ರಿಲಯನ್ಸ್ ಇಂಡಿಯಾದ ಅಧ್ಯಕ್ಷ ಮುಖೇಶ್ ಅಂಬಾನಿ ಮೊದಲ ಸ್ಥಾನ ಗಳಿಸಿದ್ದಾರಂತೆ.22.3 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಅವರು ಹೊಂದಿದ್ದಾರಂತೆ. ಅಂದ ಹಾಗೆ 48 ಭಾರತೀಯರು ಫೋಬ್ಸ್ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಿಷ್ಟೇ ಅಲ್ಲ. ಜಗತ್ತಿನ ಬಿಲಿಯನೇರ್‌ಗಳಲ್ಲಿ ಶೇ.4ರಷ್ಟು ಭಾರತೀಯರಿದ್ದಾರಂತೆ. ಫೋಬ್ಸ್ ಮ್ಯಾಗಜಿನ್ ಎಂಬ ಶ್ರೀಮಂತ ಜಗತ್ತಿನ ಬ್ರೋಕರ್ ಹೊರಗೆಡಹಿರುವ ಈ ಸಂಗತಿಗೆ ಭಾರತ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದೆ. ಭಾರತದಲ್ಲಿ ವಿಶ್ವದ ಶೇ. 4ರಷ್ಟು ಬಿಲಿಯನೇರ್‌ಗಳು ಅಂದರೆ ಶತ ಕೋಟಿ ರೂ. ಸಂಪತ್ತನ್ನು ಹೊಂದಿದವರು ಇದ್ದಾರೆ ಎಂದರೆ ಅದು ನಮಗೆ ಹೆಮ್ಮೆಯ ವಿಷಯವಾ ಬೇಕಾಗಿತ್ತಲ್ಲವೆ ? ಆದರೂ ಇದು ಭಾರತಕ್ಕೆ ಹೆಮ್ಮೆಯ ಸುದ್ದಿಯಲ್ಲ. ಬದಲಿಗೆ ನಾಚಿಕೆಗೇಡಿನ ಸುದ್ದಿ.ಹೌದು.ಈ ದೇಶದಲ್ಲಿ ಶೇ.4ರಷ್ಟು ಬಿಲಿನೇರ್‌ಗಳಿದ್ದರೆ, ಶೇ.45ರಷ್ಟು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ದೇಶದ ಅಪೌಷ್ಟಿಕತೆಯ ವಿಷಯವನ್ನು ಹೆಮ್ಮೆಯಿಂದ ಘೋಷಿಸಿರುವುದು ಇನ್ನಾರೂ ಅಲ್ಲ. ನಮ್ಮ ದೇಶದ ಪ್ರಧಾನಮಂತ್ರಿ ಮನಮೋಹನ್ ಸಿಂಗ್.
ಭಾರತವು ಒಂದೆಡೆ ಬಿಲಿಯನೇರ್‌ಗಳ ದೇಶ. ಇನ್ನೊಂದೆಡೆ ಹಸಿದವರ ದೇಶ. ನಾವು ಯಾವುದಕ್ಕಾಗಿ ಹೆಮ್ಮೆ ಪಡಬೇಕು? ಯಾವುದಕ್ಕಾಗಿ ನಾಚಿಕೆಪಡಬೇಕು? ಇಷ್ಟು ಪ್ರಮಾಣದಲ್ಲಿ ಬಿಲಿಯನೇರ್‌ಗಳಿದ್ದರೂ ಈ ದೇಶ ಯಾಕೆ ಅಪೌಷ್ಟಿಕತೆಯನ್ನು, ಬಡತನವನ್ನು ಅನುಭವಿಸುತ್ತಿದೆ? ಉತ್ತರ ಹುಡುಕುವುದಕ್ಕೆ ಇದು ಸರಿಯಾದ ಸಂದರ್ಭವಾಗಿದೆ.ಫೋಬ್ಸ್ ಪಟ್ಟಿಯಲ್ಲಿ 1,226 ಬಿಲಿಯನೇರ್‌ಗಳನ್ನು ಗುರುತಿಸಲಾಗಿದೆ. ಟೆಲಿಕಾಂ ಉದ್ಯಮಿ ಕಾರ್ಲೊಸ್ ಸ್ಲಿಮ್ ಈ ಪಟ್ಟಿಯ ಮೊದಲ ಸ್ಥಾನದಲ್ಲಿದ್ದಾರೆ. ಇವರಲ್ಲಿ 57 ಮಂದಿ ಭಾರತೀಯರು. ಈ 57ರಲ್ಲಿ 9 ಮಂದಿ ವಿದೇಶಗಳಲ್ಲಿ ವಾಸವಾಗಿರುವ ಭಾರತೀಯ ಮೂಲದವರು. ಭಾರತದ ಒಟ್ಟು 48 ಬಿಲಿಯನೇರ್‌ಗಳ ಒಟ್ಟು ಆಸ್ತಿ ವೌಲ್ಯ 194.6 ಶತಕೋಟಿ ಡಾಲರ್. ವಿಷಾದನೀಯ ಸಂಗತಿಯೆಂದರೆ, ಭಾರತದ ಬಡವರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಇದರಿಂದ ತೀವ್ರ ಅವಮಾನಿತವಾಗಿರುವ ಸರಕಾರ, ಬಡತನದ ವ್ಯಾಖ್ಯಾನವನ್ನೇ ಬದಲಿಸಲು ಹೊರಟಿದೆ. ಅದರ ಭಾಗವಾಗಿ, ಬಡತನ ರೇಖೆಗಿಂತ ಕೆಳಗಿರುವವರ ಮಾನದಂಡವನ್ನು ಬದಲಿಸಿದೆ. ಇದು ಎಂತಹ ವಿಪರೀತವನ್ನು ತಲುಪಿದೆಯೆಂದರೆ 35 ರೂಪಾಯಿಯಲ್ಲಿ ಜೀವನ ನಡೆಸುವ ಕುಟುಂಬ ಶ್ರೀಮಂತ ಕುಟುಂಬ ಎಂದು ಕರೆಯಲು ನಮ್ಮ ಅರ್ಥಶಾಸ್ತ್ರಜ್ಞರು ಮುಂದಾಗಿದ್ದಾರೆ. ಅಂದರೆ ಬಡತನ, ಅಪೌಷ್ಟಿಕತೆಯನ್ನು ತಡೆಯುವ ಬದಲು, ಬಡತನದ ವ್ಯಾಖ್ಯಾನವನ್ನೇ ಬದಲಿಸುವುದು. ಆ ಮೂಲಕ ತನ್ನ ದೇಶದಲ್ಲಿ ಬಡವರಿಲ್ಲ ಎಂದು ವಿಶ್ವಕ್ಕೆ ಸಾರಿ ಮುಖ ಉಳಿಸಿಕೊಳ್ಳುವುದು ನಮ್ಮ ಸರಕಾರದ ಉದ್ದೇಶ.
ಅಪೌಷ್ಟಿಕತೆಯಲ್ಲಿ ನಮ್ಮ ದೇಶ ವಿಶ್ವದಲ್ಲೇ ಎರಡನೆ ರ್ಯಾಂಕನ್ನು ಪಡೆದುಕೊಂಡಿದೆ. ಮೊದಲ ರ್ಯಾಂಕ್‌ನಲ್ಲಿ ಪಕ್ಕದ ಬಾಂಗ್ಲಾ ದೇಶವಿದೆ. ಅಪೌಷ್ಟಿಕತೆ ಭಾರತದಲ್ಲಿ ಹೆಚ್ಚುತ್ತಿದೆ. ಅದು ಈಗಾಗಲೇ ಶೇ. 50ನ್ನು ಸಮೀಪಿಸುತ್ತಿದೆ. ಮನಮೋಹನ್ ಸಿಂಗರೇ ಇದನ್ನು ನಾಚಿಕೆಗೇಡು ಎಂದು ಬಣ್ಣಿಸಿದ ಮೇಲೆ, ನಾವು ಈ ಕುರಿತಂತೆ ನಾಚಿಕೆಪಟ್ಟುಕೊಳ್ಳಲು ಯಾವ ಅಡ್ಡಿಯೂ ಇಲ್ಲದಂತಾಗಿದೆ. ಈ ವ್ಯಾಪಕ ಅಸಮಾನತೆಯನ್ನು, ಅಂತರವನ್ನು ತುಂಬಿಸುವುದು ಹೇಗೆ? ಇತ್ತೀಚಿನ ದಿನಗಳಲ್ಲಿ ರೈತರ ಭೂಮಿ ಶ್ರೀಮಂತರ ಕೈವಶವಾಗುತ್ತಿವೆ. ರೈತರು ಕೂಲಿಕಾರ್ಮಿಕರಾಗಿ ಪರಿವರ್ತನೆಗೊಂಡು ನಗರ ಸೇರುತ್ತಿದ್ದಾರೆ. ದೇಶದಲ್ಲಿ ಬಡತನಕ್ಕೆ ಪೂರಕವಾಗಿ ಟಿಬಿಯಂತಹ ಕಾಯಿಲೆಗಳು ಮತ್ತೆ ಧುತ್ತೆಂದು ಭುಗಿಲೆದ್ದಿವೆ.
ಬಿಲಿಯನೇರ್ ಮತ್ತು ಅಪೌಷ್ಟಿಕಕತೆಯ ನಡುವಿನ ಅಂತರವನ್ನು ತುಂಬಲು ಭಾರತ ಯಶಸ್ವಿಯಾಗದೇ ಇದ್ದರೆ, ಇದು ಖಂಡಿತವಾಗಿಯೂ ಉಳ್ಳವರ ಮತ್ತು ಇಲ್ಲದವರ ದೇಶವಾಗಿ ಒಡೆಯುತ್ತದೆ.ಭಾರತವನ್ನು ಒಡೆಯುವುದಕ್ಕೆ ಯಾವುದೇ ಐಎಸ್‌ಐ ಏಜೆಂಟ್‌ಗಳ ಅಗತ್ಯವಿಲ್ಲ. ಇಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಅಸಮಾನತೆಯೇ ದೇಶವನ್ನು ವಿಭಜಿಸಲು ಸಾಕು. ಒಂದೆಡೆ ದೇಶ ಅಭಿವೃದ್ಧಿಯ ಮಂತ್ರವನ್ನು ಹೇಳುತ್ತಿದ್ದರೆ ಇನ್ನೊಂದೆಡೆ ಈ ಅಭಿವೃದ್ಧಿಗೆ ಈ ದೇಶದ ಬಹುಸಂಖ್ಯಾತರು ಬೆಲೆ ತೆರಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ. ಅಭಿವೃದ್ಧಿ ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿಯೂ, ಇಲ್ಲದವರನ್ನು ಇನ್ನಷ್ಟು ಬಡವರನ್ನಾಗಿಯೂ ಮಾಡುತ್ತಿದೆ. ಇಂತಹ ಅಭಿವೃದ್ಧಿ ದೇಶವನ್ನು ಖಂಡಿತವಾಗಿಯೂ ಒಡೆಯಲಿದೆ. ಅರಾಜಕತೆ, ದಂಗೆಯನ್ನೂ ಹುಟ್ಟು ಹಾಕಲಿದೆ. ಅದಕ್ಕೆ ಮೊದಲು ಕನಿಷ್ಟ ಮಟ್ಟದಲ್ಲಾದರೂ ಈ ದೇಶದ ಬಿಲಿಯನೆರ್‌ಗಳ ಹಣವನ್ನು ಹಂಚುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ.
ಮುಖ್ಯವಾಗಿ, ದೇಶದೊಳಗಿನ ಕಪ್ಪುಹಣವನ್ನು ಪತ್ತೆ ಹಚ್ಚುವ ಕೆಲಸ ನಡೆಯಬೇಕಾಗಿದೆ. ಭ್ರಷ್ಟಾಚಾರದ ಮೂಲಕ ಹರಿದುಹೋಗುತ್ತಿರುವ ಹಣವನ್ನು ತಡೆದು ಅದನ್ನು ಕೆಳವರ್ಗದ ಜನರ ಶಿಕ್ಷಣ,ಆರೋಗ್ಯ ಮತ್ತು ಆಹಾರಕ್ಕಾಗಿ ಬಳಸಬೇಕಾಗಿದೆ.ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಪುನಃಸ್ಥಾಪನೆ ಮಾಡಬೇಕು. ಹಾಗೆಯೇ ದೇಶದ ಎಲ್ಲ ಮಕ್ಕಳಿಗೆ ಕನಿಷ್ಟ ಹತ್ತನೆ ತರಗತಿಯವರೆಗೆ ಉಚಿತ ಶಿಕ್ಷಣವನ್ನು ನೀಡಬೇಕು. ಹಾಗೆಯೇ ಬಡವರ್ಗಕ್ಕೆ ಉಚಿತ ಆರೋಗ್ಯ ಚಿಕಿತ್ಸೆಯ ಕೊಡುಗೆಯನ್ನು ನೀಡಬೇಕು.ಇಷ್ಟನ್ನಾದರೂ ಮಾಡದೇ ಇದ್ದಲ್ಲಿ, ಈ ದೇಶದ ಅಭಿವೃದ್ಧಿ ಈ ದೇಶವನ್ನು ಸರ್ವನಾಶದೆಡೆಗೆ ಒಯ್ಯಲಿದೆ.ಇಂದು ನಾವು ಫೋರ್ಬ್ಸ್ ನೀಡಿದ ಬಿಲಿಯಾಧಿಪತಿಗಳ ಕಡೆಗೆ ನೋಡದೆ, ಈ ದೇಶದ 20 ಕೋಟಿಗೂ ಅಧಿಕವಿರುವ ಅಪೌಷ್ಟಿಕ ಮಕ್ಕಳ ಕಡೆಗೆ ದೃಷ್ಟಿ ಹರಿಸಬೇಕಾಗಿದೆ. ಅವರೇ ಭವಿಷ್ಯದ ನಿಜವಾದ ಭಾರತ. ಅವರ ಬುಡ ಗಟ್ಟಿಯಾದರೆ ಮಾತ್ರ ಈ ದೇಶದ ಭವಿಷ್ಯ ಗಟ್ಟಿಯಾದೀತು. ಆ ಬುಡಕ್ಕೆ ನೀರುಣಿಸುವ ಕಡೆಗೆ ಸರಕಾರ ಆದ್ಯತೆಯನ್ನು ನೀಡಬೇಕಾಗಿದೆ. -ವಾರ್ತಾಭಾರತಿ ಸಂಪಾದಕೀಯ

Advertisement

0 comments:

Post a Comment

 
Top