PLEASE LOGIN TO KANNADANET.COM FOR REGULAR NEWS-UPDATES



 ತಿರಳುಗನ್ನಡನಾಡು, ಕೊಪಣನಗರ, ಕೊಪಣತೀರ್ಥ ಉಚ್ಛಾರ ಮಾತ್ರದಿಂದ ಮುಕ್ತಿಸಾಧ್ಯ ಎಂದಿರುವ ಶಾಸನೋಕ್ತಿ ನಿತ್ಯನೂತನ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ತ್ರಿವಿಧ ದಾಸೋಹಗಳ ನೆಲೆಯಾಗಿರುವ ಶ್ರೀಗವಿಮಠ ಈ ನಾಡಿನ ಜನತೆಗೆ ಪವಿತ್ರ ತಾಣ ಮತ್ತು ಶ್ರೀಗವಿಸಿದ್ಧೇಶ್ವರ ಕತೃಗದ್ದುಗೆ ಆರಾಧ್ಯ ದೇವರು. ಶ್ರೀಗವಿಮಠದ ಗುರುಪರಂಪರೆಯಲ್ಲಿ ಹದಿನೇಳನೇಯವರಾದ ಶ್ರೀಶಿವಶಾಂತವೀರ  ಮಹಾಸ್ವಾಮಿಗಳು "ನಡೆದಾಡುವ ದೇವರೆಂದು" ಜನಮನದಲ್ಲಿ ಪೂಜ್ಯನಿಯರಾಗಿರುವರು. 

ಶ್ರೀಗಳ ಪೂರ್ವಾಶ್ರಮದ ಹೆಸರು ಉಮಾಪತಿಸ್ವಾಮಿ. ಗದಗ ಜಿಲ್ಲೆಯ ಸೂಡಿಯಲ್ಲಿಯ ಜುಕ್ತಿಹಿರೇಮಠದ ಜಗಧೀಶ್ವರಯ್ಯ ಮತ್ತು ತಾಯಿ ಬಸಮ್ಮ ದಂಪತಿಗಳ ಉದರದಲ್ಲಿ ೧೯೩೧ರಲ್ಲಿ ಜನಿಸಿದರು. ಜನ್ಮತಃ ಪರಮ ವೈರಾಗ್ಯ ಮೂರ್ತಿಗಳಾಗಿ ಸಂಸ್ಕೃತ, ಹಿಂದಿ ಮತ್ತು ಉರ್ದು ಸಾಹಿತ್ಯಗಳಲ್ಲಿ ಪಾಂಡಿತ್ಯ ಸಂಪಾದಿಸಿ, ಜುಕ್ತಿ ಹಿರೇಮಠದ ಪಟ್ಟಾಧ್ಯಕ್ಷರಾಗಿ ಅನುಪಮಸೇವೆ ಸಲ್ಲಿಸಿದರು. ಅಂದಿನ ಶ್ರೀಗವಿಮಠದ ಗುರುಗಳಾದ ಶ್ರೀಮರಿಶಾಂತವೀರ ಸ್ವಾಮಿಗಳು, ೧೯೬೬ರಲ್ಲಿ ಷ.ಬ್ರ.ಶ್ರೀಉಮಾಪತಿಸ್ವಾಮಿಗಳನ್ನು ಕೊಪ್ಪಳಕ್ಕೆ ಆಹ್ವಾನಿಸಿ, ಶ್ರೀಗವಿಮಠದ ನಿರಂಜನ ಪಟ್ಟಾಭಿಷೇಕ ನೆರವೇರಿಸಿ, ಜಗದ್ಗುರು ಶ್ರೀಶಿವಶಾಂತವೀರಸ್ವಾಮಿಗಳೆಂದು ಅಭಿದಾನ ಮಾಡಿದರು. ಅಂದಿನಿಂದ ಶ್ರೀಗಳು ಗವಿಮಠದ ಮತ್ತು ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು, ಶ್ರೀಮರಿಶಾಂತವೀರಸ್ವಾಮಿಗಳಿಂದು ಸ್ಥಾಪನೆಗೊಂಡ ಶಾಲಾ-ಕಾಲೇಜುಗಳ ಆಡಳಿತವನ್ನು; ಸಂಸ್ಕೃತ ಮತ್ತು ಸಂಗೀತ ಪಾಠಶಾಲೆಗಳನ್ನು ಅಭಿವೃದ್ಧಿಗೊಳಿಸಿದರು. ನಂತರ ಆಧುನಿಕವಾಗಿ ಜಗದ್ಗುರು ಶ್ರೀಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ, ಕಾಲೇಜು ಮತ್ತು ಸಂಶೋಧನೆ ಸಂಸ್ಥೆ ಸ್ಥಾಪಿಸಿದರು. ಶ್ರೀಗವಿಸಿದ್ಧೇಶ್ವರ ಕಲ್ಯಾಣ ಮಂಟಪ ಮತ್ತು ಬೃಹತ್ ಮಹಾದ್ವಾರ ಮುಂತಾದವುಗಳನ್ನು ನಿರ್ಮಿಸಿದರು. ನಾಡಿನಾದ್ಯಂತ ಇರುವ ೬೩ ಶಾಖಾಮಠಗಳನ್ನು ಜೀರ್ಣೋದ್ಧಾರಗೊಳಿಸಿದರು. ನಾಡಿನ ಪ್ರಖ್ಯಾತ ಸಾಹಿತಿಗಳ ಮತ್ತು ಇತಿಹಾಸಕಾರರ ಸಹಕಾರದಿಂದ "ಗವಿದೀಪ್ತಿ" ಎಂಬ ಅಮೂಲ್ಯ ಆಕರ ಗ್ರಂಥವನ್ನು ೧೯೭೬ರಲ್ಲಿ, ನಂತರ ಶ್ರೀಗವಿಸಿದ್ಧೇಶ್ವರ ಪುರಾಣ, ಶ್ರೀಗವಿಸಿದ್ಧೇಶ್ವರ ಸುಪ್ರಭಾತ ಇತರ ಸಾಹಿತ್ಯ ಕೃತಿಗಳನ್ನು ಶ್ರೀಗವಿಸಿದ್ಧೇಶ್ವರ ಕೃಪಾಪೋಶಿತ ವಿದ್ಯಾರ್ಥಿ ಬಳಗದಿಂದ ಪ್ರಕಟಿಸಿದರು. ಸ್ವತಃ ಇವರು ಭಕ್ತಿ ಪದಗಳನ್ನು ಮತ್ತು ಸಂಸ್ಕೃತ ಶ್ಲೋಕಗಳನ್ನು ರಚಿಸಿದರು. 

ಶ್ರೀಗಳು ಕೈಗೊಂಡಿದ್ದ ಪ್ರತಿ ಮಂಗಳವಾರ ವಿಶೇಷ ಪೂಜೆ, ಅನುಷ್ಠಾನ, ಮೌನವೃತ, ಹಾಗೂ ಪ್ರತಿನಿತ್ಯ ತ್ರಿಕಾಲಪೂಜೆ, ಅವರ ಪರಮ ವೈರಾಗ್ಯ ಮತ್ತು ತ್ರಿವಿಧ ದಾಸೋಹ ಸೇವೆ ಅಪ್ರತಿಮವಾಗಿದ್ದೀತು. ನಾಡಿನ ಭಕ್ತ ಸಮೂಹವು ಶ್ರೀಗಳ ಷಷ್ಠ್ಯಭ್ದಿಯನ್ನು ಆಚರಿಸಿ, "ಶಾಂತಪ್ರಭೆ" ಎಂಬ ಅಭಿನಂದನಾ ಗ್ರಂಥ ಪ್ರಕಟಿಸಿ ಕೃತಾರ್ಥರಾದರು. ಶ್ರೀಗಳು ಮಾನವಧರ್ಮದ ತಿರಳನ್ನು ಭೋದಿಸುತ್ತಿದ್ದುದರಿಂದ ಸರ್ವಧರ್ಮಿಯರಿಗೆ ಪೂಜ್ಯನಿಯರಾಗಿದ್ದರು. ಶ್ರೀಗಳು ಮಾರ್ಚ ೨೦೦೩ರಲ್ಲಿ ಶಿವೈಕ್ಯರಾದರು. ಪರಮಪೂಜ್ಯರ ಕರಕಮಲ ಸಂಜಾತರಾಗಿ ಮತ್ತು ಉತ್ತರಾಧಿಕಾರಿಗಳಾಗಿರುವ ಪೂಜ್ಯ ಶ್ರೀಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಶ್ರೀಮಠದ ಗುರುಪರಂಪರೆಯ ಕೀರ್ತಿಯನ್ನು ಬೆಳಗಿಸುತ್ತಿರುವದು ಈ ನಾಡಿನ ಸೌಭಾಗ್ಯ.

ಪರಮವೈರಾಗ್ಯಮೂರ್ತಿ, ಶಿವಯೋಗ ಚಕ್ರವರ್ತಿ, ನಾಡಿನ ಜನತೆಯ ಆರಾಧ್ಯ ದೇವರಾಗಿ ಕಂಗೊಳಿಸಿದ ಪೂಜ್ಯ ಶ್ರೀ ಶಿವಶಾಂತವೀರಸ್ವಾಮಿಗಳ ಪುಣ್ಯ ಸ್ಮರಣೋತ್ಸವವು ಪ್ರತಿವರ್ಷ ಅಭೂತಪೂರ್ವವಾಗಿ ನಡೆಯುತ್ತಿದೆ. ದಿನಾಂಕ : ೧೬ ಮಾರ್ಚ ೨೦೧೨ರ ಶುಕ್ರವಾರ ಅರುಣೋದಯದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹರಗುರುಚರಮೂರ್ತಿಗಳು ಮತ್ತು ಅಸಂಖ್ಯಾತ ಭಕ್ತ ಸಮೂಹವು ಸದ್ಗುರು ಶ್ರೀಶಿವಶಾಂತವೀರಸ್ವಾಮಿಗಳ ನಾಮ ಸ್ಮರಣೆಯೊಂದಿಗೆ ಕೈಗೊಳ್ಳುವ ಪಾದಯಾತ್ರೆಯಲ್ಲಿ ಭಾಗವಹಿಸುವದೇ ಆತ್ಮಾನಂದದ ಅಪೂರ್ವ ಸುವರ್ಣಾವಕಾಶ. ನಂತರದಲ್ಲಿ ಅಯುರ್ವೇದದ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ ಹಾಗೂ ಶ್ರೀಮಠದಲ್ಲಿ ಜರುಗುವ ಗುರುಸ್ಮರಣೋತ್ಸವ ಮತ್ತು ಸಂಗೀತ ಇತರ ಮಾನವ ಧರ್ಮದ ಕಾರ್ಯಕ್ರಮಗಳು ಆದರಣೀಯವಾಗಿವೆ.

Advertisement

0 comments:

Post a Comment

 
Top