PLEASE LOGIN TO KANNADANET.COM FOR REGULAR NEWS-UPDATES


ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭಾರತದ ‘ಮಹಾಗೋಡೆ’ ರಾಹುಲ್ ದ್ರಾವಿಡ್ ವಿದಾಯ
ಬೆಂಗಳೂರು, ಮಾ.9: ‘ಗ್ರೇಟ್‌ವಾಲ್’(ಮಹಾಗೋಡೆ) ಎಂದೇ ಖ್ಯಾತರಾಗಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ರಾಹುಲ್ ದ್ರಾವಿಡ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ್ರಾವಿಡ್, 16 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ವಿದಾಯ ಹೇಳುತ್ತಿರುವುದು ಬೇಸರ ತಂದಿದೆ. ಆದರೆ, ಅದ್ಭುತ ನೆನಪುಗಳು ನನ್ನೊಂದಿಗಿವೆ ಎಂದರು.
ಯುವ ಆಟಗಾರರಿಗೆ ಅವಕಾಶ ಕಲ್ಪಿಸಲು ನನಗೀಗ ಸೂಕ್ತ ಸಮಯ ದೊರೆತಿದೆ. ಆದುದರಿಂದ ತಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಈ ಬಗ್ಗೆ ಸಚಿನ್ ಸೇರಿದಂತೆ ಇತರ ಹಿರಿಯ ಆಟಗಾರರಲ್ಲಿ ಚರ್ಚಿಸಿದ್ದೇನೆ. ಸಾಕಷ್ಟು ಚಿಂತನೆ ನಡೆಸಿದ ಬಳಿಕವೇ ತಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
ತನ್ನ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಬೇಸರ ಹಾಗೂ ಸಂತಸದ ಮಿಶ್ರಣವಿದೆ. ದೇಶದ ಪರ ಆಡಿದಕ್ಕಾಗಿ ತುಂಬಾ ಹೆಮ್ಮೆಯೆನಿಸುತ್ತಿದೆ. ಆದರೆ, ಕ್ಯಾಚ್ ಬಿಟ್ಟಾಗ ತುಂಬಾ ಬೇಸರವಾಗಿದೆ ಎಂದರು.
ನಿವೃತ್ತಿ ಘೋಷಿಸುವ ಈ ಸಂದರ್ಭದಲ್ಲಿ ತಾನು ಎಲ್ಲರನ್ನೂ ಸ್ಮರಿಸಬೇಕಾಗಿದೆ ಎಂದ ಅವರು, ಸಹೋದ್ಯೋಗಿಗಳಿಗೆ, ಬಿಸಿಸಿಐಗೆ, ಮಾಧ್ಯಮದವರಿಗೆ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಯತೆ ಸಲ್ಲಿಸಿದರು.
ತನ್ನ ಕಾರ್ಯದ ಬಗ್ಗೆ ತನಗೆ ತೃಪ್ತಿಯಿದ್ದು, ತನ್ನ ಈ ಸಾಧನೆಗೆ ತಂದೆ, ತಾಯಿ, ಹೆಂಡತಿ, ಮಕ್ಕಳು ಸೇರಿದಂತೆ ಅಭಿಮಾನಿಗಳು, ಸಹೋದ್ಯೋಗಿಗಳು ಹೀಗೆ ಎಲ್ಲರೂ ಕಾರಣರಾಗಿದ್ದಾರೆ ಎಂದು ನೆನಪಿಸಿಕೊಂಡರಲ್ಲದೆ, ಅವರಿಗೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
‘ಗ್ರೇಟ್ ವಾಲ್’ ಬಿರುದಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಎಂದ ಅವರು, ನಿವೃತ್ತಿಯ ಬಳಿಕ ಕುಟುಂಬದ ಜೊತೆಗೆ ಕಾಲಕಳೆಯಲಿದ್ದೇನೆ ಎಂದರು.
1990ರಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್, 1998ರಲ್ಲಿ ‘ಅರ್ಜುನ ಪ್ರಶಸ್ತಿ’, 1999ರಲ್ಲಿ ‘ಸಿಯಟ್’ ವರ್ಷದ ಪ್ರಶಸ್ತಿ ಹಾಗೂ 2004ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದರು.
ಒಟ್ಟು 164 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್ ದ್ರಾವಿಡ್, 286 ಇನ್ನಿಂಗ್ಸ್‌ನಲ್ಲಿ 13,288 ರನ್ ಕಲೆ ಹಾಕಿದ್ದರು. ಅದರಲ್ಲಿ 63 ಅರ್ಧ ಶತಕ ಸೇರಿದ್ದರೆ, 36 ಶತಕ ಸೇರಿತ್ತು. ಅವರ ಗರಿಷ್ಠ ರನ್ 270 ಆಗಿತ್ತು.
344 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್, 218 ಇನ್ನಿಂಗ್ಸ್‌ನಲ್ಲಿ 10889 ರನ್ ಗಳಿಸಿದ್ದರು. ಅದರಲ್ಲಿ 83 ಅರ್ಧ ಶತಕ ಹಾಗೂ 12 ಶತಕ ಸೇರಿತ್ತು. ಅವರ ಗರಿಷ್ಠ ರನ್ 153 ಆಗಿತ್ತು.
ಟ್ವೆಂಟಿ-20ಯ ಒಂದು ಪಂದ್ಯವನ್ನು ಆಡಿರುವ ದ್ರಾವಿಡ್ 21 ಎಸೆತದಲ್ಲಿ 31ರನ್ ಗಳಿಸಿದ್ದರು.

Advertisement

0 comments:

Post a Comment

 
Top