ತನ್ನ ಸಂಭಾವ್ಯ ಎದುರಾಳಿ ನರೇಂದ್ರ ಮೋದಿಯಂತೆ ರಾಹುಲ್ ಗಾಂಧಿ ಕೂಡ ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ಪ್ರಶ್ನೆಗಳನ್ನು ಸ್ವೀಕರಿಸಲು ಇಚ್ಛಿಸುವುದಿಲ್ಲ.ಅವರು ಕೇವಲ ಒಂದು ದಾಖಲಿತ ಸಂದರ್ಶನ ಕೊಟ್ಟಿದ್ದಾರೆ,ಕೆಲವು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ ಹಾಗೂ ಸಾಮಾನ್ಯವಾಗಿ ಆಯ್ದ ಸಂಪಾದಕರೊಂದಿಗೆ ‘ಆಫ್-ದಿ-ರೆಕಾರ್ಡ್’ ಮಾತಾಡಲು ಇಷ್ಟಪಡುತ್ತಾರೆ.ಈಗ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲಿನ ಪರಿಣಾಮದ ಬಗ್ಗೆ ದೇಶ ಚಿಂತನೆ ನಡೆಸುತ್ತಿರುವಂತೆಯೇ,ರಾಹುಲ್ ಉತ್ತರಿಸಲೇಬೇಕಾದ ಹಲವಾರು ಪ್ರಶ್ನೆಗಳಿವೆ. ಇಲ್ಲಿ 25 ಪ್ರಶ್ನೆಗಳನ್ನು ನೀಡಲಾಗಿದೆ.
1.ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿರ್ವಹಣೆಗೆ ಸಾಂಕೇತಿಕ ಜವಾಬ್ದಾರಿಯನ್ನು ವಹಿಸುತ್ತಾ, ರಾಹುಲ್ ಗಾಂಧಿ ಹೀಗೆ ಹೇಳಿದರು:‘‘ಸಂಘಟನೆಯ ಮಟ್ಟಿಗೆ ನಾವು ಎಲ್ಲಿರಬೇಕಿತ್ತೊ ಅಲ್ಲಿಲ್ಲ’’ ಹಾಗೂ ‘‘ಪಕ್ಷದ ಮೂಲಭೂತ ಅಂಶಗಳು ದುರ್ಬಲವಾಗಿವೆ’’.ಎರಡು ವರ್ಷಗಳ ಕಾಲ ಈ ರಾಜ್ಯದಲ್ಲಿ ಸುತ್ತಾಡಿದ ಬಳಿಕ ಇದರ ಹೊಣೆ ಯಾರದ್ದು?
2.ಸಾಕಷ್ಟು ಪ್ರಭಾವಿ ಹಿನ್ನೆಲೆಯಿರುವ ರಾಷ್ಟ್ರೀಯ ಪಕ್ಷವನ್ನು ನಿಮಗೆ ಬೇಕಾದಂತೆ ನಡೆಸಲು ನಿಮಗೆ ಮುಕ್ತ ಅವಕಾಶವಿತ್ತು. ಆದರೂ, ಗೆಲ್ಲುವುದು ಬಿಡಿ, ಒಂದು ರಾಜ್ಯದಲ್ಲಿಯಾದರೂ ಪಕ್ಷವನ್ನು ಒಂದು ನಿರ್ದಿಷ್ಟ ಹಂತಕ್ಕೆ ತಂದು ನಿಲ್ಲಿಸುವುದು ನಿಮ್ಮಿಂದ ಸಾಧ್ಯವಾಗಿಲ್ಲ. ಹಾಗಿರುವಾಗ, ಯಾವ ಆಧಾರದಲ್ಲಿ ನಿಮ್ಮನ್ನು ನಾವು ‘‘ಭವಿಷ್ಯದ ನಾಯಕ’’ ಎಂಬುದಾಗಿ ಪರಿಗಣಿಸಬೇಕು?
3.ಉತ್ತರಪ್ರದೇಶ ವಿಧನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ನಿಮ್ಮ ಪಕ್ಷದ ಅಭ್ಯರ್ಥಿಗಳ ಪೈಕಿ 34 ಶೇ. ಮಂದಿ ಅಪರಾಧ ಹಿನ್ನೆಲೆಯವರು.ಅದಕ್ಕೆ ನೀವು ಏನು ವಿವರಣೆ ಕೊಡುತ್ತೀರಿ? ಇತರ ಪಕ್ಷಗಳಿಂದ ತಿರಸ್ಕೃತರಾದ ಮಾಜಿ ಭ್ರಷ್ಟ ಮತ್ತು ಕ್ರಿಮಿನಲ್ ಶಾಸಕರು ಮತ್ತು ಮಂತ್ರಿಗಳಿಗೆ ನಿಮ್ಮ ಪಕ್ಷ ಟಿಕೆಟ್ ಕೊಟ್ಟಿತು. ಇದನ್ನು ನೀವು ಹೇಗೆ ಸಮರ್ಥಿಸುತ್ತೀರಿ?
4.ಉನ್ನತ ಹುದ್ದೆಗೆ ಆಯ್ಕೆಗೊಳ್ಳುವುದು ಬಿಡಿ,ಅರ್ಹತೆಯ ಆಧಾರದಲ್ಲಿ ಶಾಸಕ ಅಭ್ಯರ್ಥಿಯಾಗಿ ಆಯ್ಕೆಗೊಳ್ಳುವ ಸಾಧ್ಯತೆಯೂ ಇಲ್ಲದಿರುವಾಗ ಯಾವುದೇ ಬುದ್ಧಿವಂತ ಯುವ ವ್ಯಕ್ತಿ ಕಾಂಗ್ರೆಸ್ ಸೇರುತ್ತಾನೆ ಎಂದು ನೀವು ಯಾಕೆ ಭಾವಿಸುತ್ತೀರಿ? ಇದು ಉತ್ತರಪ್ರದೇಶದ ಪಟಿಯಾಳಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಸಾಬೀತಾಗಿದೆ.ಕಾರ್ಯಕರ್ತನಾಗಿ ಹಂತ ಹಂತವಾಗಿ ಮೇಲೇರಿ ಎರಡು ವರ್ಷಗಳ ಕಾಲ ಕ್ಷೇತ್ರದ ತುಂಬಾ ಸುತ್ತಾಡಿ ಜನರ ನಾಡಿ ಮಿಡಿತಗಳನ್ನು ಅರಿತಿದ್ದ ಸ್ಥಳೀಯ ಅಭ್ಯರ್ಥಿಯ ಬದಲಿಗೆ ಕೊನೆಯ ಕ್ಷಣದಲ್ಲಿ ದಿಲ್ಲಿಯ ವ್ಯಕ್ತಿಯೊಬ್ಬನನ್ನು (ಆತ ಅಂತಿಮವಾಗಿ ಐದನೆ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ) ಹೇರಿದ್ದು ಯಾಕೆ? ಇದು ಹೇಗಾಯಿತು?
5.ಉತ್ತರಪ್ರದೇಶ ಚುನಾವಣಾ ಪ್ರಚಾರವನ್ನು ಕೋಮುಮಯಗೊಳಿಸಿದ್ದು ನಿಮ್ಮ ಪಕ್ಷ ಎನ್ನುವುದು ಸರಿಯಲ್ಲವೆ? ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣ, ಮುಸ್ಲಿಮ್ ಕೋಟಾ ಹಾಗೂ ಅದಕ್ಕಿಂತ ಮೊದಲು ಸಲ್ಮಾನ್ ರುಶ್ದಿ ಪ್ರಕರಣಗಳನ್ನು ಒಬ್ಬೊಬ್ಬ ನಾಯಕರು ಕೆದಕಿದರು. ಇದು ದುರಾಲೋಚನೆಯ ತಂತ್ರದ ಒಂದು ಭಾಗವೇ?
6.ಚುನಾವಣಾ ಸಭೆಯೊಂದರಲ್ಲಿ ಸ್ಯಾಮ್ ಪಿತ್ರೋಡ ವಿಶ್ವಕರ್ಮ ಜನಾಂಗಕ್ಕೆ ಸೇರಿದವರು ಎಂದು ನೀವು ಪ್ರಚಾರ ಮಾಡಿದಿರಿ.ನೀವು ಇದಕ್ಕೆ ಕಾರಣಗಳನ್ನು ಕೊಡಬಹುದು. ಆದರೆ, ಆ ಬಳಿಕ ಹೆಚ್ಚಿನವರು ನಿಮ್ಮ ಕೈಬಿಟ್ಟರು.ರಾಜ್ಯದ ಚುನಾವಣಾ ಪ್ರಚಾರದಲ್ಲಿ ಗುರುತು ರಾಜಕೀಯ ವಹಿಸಿದ ಪಾತ್ರದ ಬಗ್ಗೆ ನಿಮ್ಮಲ್ಲಿ ಹೆಮ್ಮೆಯ ಭಾವನೆಯಿದೆಯೇ?
7.ಚುನಾವಣಾ ಪ್ರಚಾರದ ವೇಳೆ ನೀವು ಕೊಡುತ್ತಾ ಬಂದ ರಕ್ಷಣಾತ್ಮಕ ಹೇಳಿಕೆಗಳು (ಉದಾ: ಪ್ರಧಾನಿ-ಮುಖ್ಯಮಂತ್ರಿ ಯಾಗಲು ಬಯಸುವು ದಿಲ್ಲ, ಭವಿಷ್ಯಕ್ಕಾಗಿ ನಾನು ಇಲ್ಲಿದ್ದೇನೆ) ನಿಮ್ಮ ಪ್ರಚಾರದ ಬದ್ಧತೆ ಹೀನತೆ ಯನ್ನೇ ತೋರಿಸಿದೆ ಎಂಬುದನ್ನು ನೀವು ಒಪ್ಪುತ್ತೀರಾ? ನಿಮ್ಮಲ್ಲೇ ಸ್ಪಷ್ಟತೆಯಿಲ್ಲದಿರುವಾಗ ಮತದಾರರು ನಿಮಗೆ ಮತ ನೀಡಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ?
8.ಪ್ರಚಾರದ ವೇಳೆ ನೀವು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಮತ್ತೆ ಗಮನ ಯಾಕೆ ಹರಿಸಿಲ್ಲ? ಉದಾಹರಣೆಗೆ: ಭಟ್ಟ-ಪರುಸಾಲ್‌ನಲ್ಲಿನ ರೈತರ ಭೂಸ್ವಾಧೀನ ಮತ್ತು ಬುಂದೇಲ್‌ಖಂಡದಲ್ಲಿನ ಬಡವರ ಪರಿಸ್ಥಿತಿ.
9.ಬುಂದೇಲ್‌ಖಂಡದ ಬಡವರಿಗೆ ಹಾಗೂ ನೇಕಾರರಿಗೆ ನೀವು ಕೋಟ್ಯಂತರ ರೂ. ‘‘ಚುನಾವಣಾ ಪರಿಹಾರ’’ ಘೋಷಿಸಿದ್ದೀರಿ ಹಾಗೂ ಈ ಹಣವನ್ನು ಕೇಂದ್ರದಲ್ಲಿರುವ ನಾವು ಕಳುಹಿಸಿದ್ದೇವೆ,ಆದರೆ ಅದನ್ನು ಆನೆ ನುಂಗಿ ಹಾಕಿದೆ ಎಂದು ಹೇಳಿಕೊಂಡಿದ್ದೀರಿ.ಆದರೆ, ಈ ಹಣವನ್ನು ನಿಮಗೆ ಇಷ್ಟಬಂದಂತೆ ಹಂಚಲು ಅದು ನಿಮ್ಮ ಜಾಗೀರು ಅಲ್ಲ, ತೆರಿಗೆದಾರರ ಹಣ ಎಂಬುದು ನಿಮಗೆ ಗೊತ್ತಿದೆಯೇ? ಇಂಥ ಎಷ್ಟು ಯೋಜನೆಗಳನ್ನು ಪ್ರಧಾನಿ ಅಥವಾ ಯೋಜನಾ ಆಯೋಗ ಕೇವಲ ಎರಡು ನಿಮಿಷಗಳಲ್ಲಿ ಮಂಜೂರು ಮಾಡುತ್ತದೆ?
10.ನಿಮ್ಮನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೆ, ಪಕ್ಷ ಈಗ ಅನುಭವಿಸಿದ ಹೀನಾಯ ಸ್ಥಿತಿಯನ್ನು ಅನುಭವಿಸುತ್ತಿರಲಿಲ್ಲ ಎಂದು ಅನೇಕರು ಭಾವಿಸಿದ್ದಾರೆ ಎಂದು ದಿಗ್ವಿಜಯ ಸಿಂಗ್ ಈಗ ಹೇಳುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅನುಭವಿಸಿದ ಅನುಭವ ನಿಮ್ಮ ಭವಿಷ್ಯದ ಯೋಜನೆಗಳಿಗೆ ಉಪಯೋಗವಾಗುತ್ತಿರಲಿಲ್ಲವೆ?
11.ಈ ಚುನಾವಣಾ ವೈಫಲ್ಯದ ಹಿನ್ನೆಲೆಯಲ್ಲಿ ಯುಪಿಎ ಪೂರ್ಣಾವಧಿ ಬಾಳುತ್ತದೆ ಎಂಬ ಬಗ್ಗೆ ವಿಶ್ವಾಸ ಹೊಂದಿದ್ದೀರಾ? ಅಥವಾ,ಭವಿಷ್ಯದಲ್ಲಿ ಸರಕಾರವನ್ನು ಉಳಿಸಿಕೊಳ್ಳಲು ಮಾಡಿಕೊಳ್ಳಬೇಕಾದ ವಿವಿಧ ‘ರಾಜಿ’ಗಳ ಬಗ್ಗೆ ನೀವು ಸಂತುಷ್ಟರಾಗಿರುವಿರೇ?
12.ನಿಮ್ಮ ಭವಿಷ್ಯದ ಯೋಜನೆಗಳೇನು? ನಿಮಗೆ ಯಾವಾಗ ಬೇಕೊ ಆಗ ಪ್ರಧಾನಿಯಾಗಬಹುದು ಎಂಬುದಾಗಿ ನಿಮ್ಮ ಪಕ್ಷದ ವಕ್ತಾರರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ನಿಮಗೆ ಅನಿಸುವುದೇ?
13.2014ರ ಲೋಕಸಭಾ ಚುನಾವಣೆಯಲ್ಲಿ ನೀವು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವಿರೇ? ಅಥವಾ, ನಿಮ್ಮ ತಾಯಿಯಂತೆಯೇ ಅನಿರ್ದಿಷ್ಟಾವಧಿ ಕಾಲ ಉತ್ತರದಾಯಿತ್ವವಿಲ್ಲದ ಅಧಿಕಾರವನ್ನು ಅನುಭವಿಸಲು ಇಷ್ಟಪಡುತ್ತೀರಾ?
14.ಪ್ರಧಾನಿಯಾಗಲು ಇರಬೇಕಾದ ಅರ್ಹತೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಲೋಕಸಭೆಗೆ ಆಯ್ಕೆಯಾಗದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುವುದು ಸರಿ ಎಂದು ನಿಮ್ಮ ಅಭಿಪ್ರಾಯವೇ?
15.ನಿಮ್ಮನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ಭವಿಷ್ಯದ ಪ್ರಧಾನಿಯನ್ನಾಗಿ ಮಾಡುವಲ್ಲಿ ನಿಮ್ಮ ಯಾವ ಅರ್ಹತೆ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ನೀವು ದಯವಿಟ್ಟು ವಿವರಿಸಬಲ್ಲಿರಾ?
16.ಯುವ ಕಾಂಗ್ರೆಸನ್ನು ಮರು ಸಂಘಟನೆಗೊಳಿಸುವಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ವಿವರಿಸುವಿರಾ? ಆಯ್ಕೆಯಲ್ಲಿ ‘ಕುಟುಂಬ, ಆಶ್ರಯ ಮತ್ತು ಹಣ’ದ ಪ್ರಭಾವವನ್ನು ತೆಗೆದುಹಾಕುವಲ್ಲಿ ನೀವೇನಾದರೂ ಯಶಸ್ವಿಯಾಗಿದ್ದೀರಾ? ಕುಟುಂಬ ರಾಜಕಾರಣದ ಕುಡಿಗಳು ನಿಮ್ಮ ಉಸ್ತುವಾರಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಮುಖವಾಗಿ ಹೊರಹೊಮ್ಮುತ್ತಿರುವುದಕ್ಕೆ ಕಾರಣವೇನು?
17.ಕಾಂಗ್ರೆಸ್‌ನ ಒಬ್ಬ ಪ್ರಮುಖ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ತರಲು ಏನು ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ಎಐಸಿಸಿಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಾವು ಎಂದು ನಿರೀಕ್ಷಿಸಬಹುದು?
18 ಪರ್ಯಾಯ ಶಕ್ತಿ ಕೇಂದ್ರವೊಂದು ಬೆಳೆಯುವ ಭೀತಿಯಿಂದ ರಾಜ್ಯ ಮಟ್ಟದಲ್ಲಿ ಒಬ್ಬ ಪ್ರಬಲ ನಾಯಕ ಬೆಳೆಯುವುದನ್ನು ಕಾಂಗ್ರೆಸ್ ವ್ಯವಸ್ಥೆ ಇಂದಿರಾ ಗಾಂಧಿ ಕಾಲದಿಂದಲೂ ನಿರುತ್ತೇಜನಗೊಳಿಸುತ್ತಾ ಬಂದಿದೆ ಎಂಬುದನ್ನು ನೀವು ಒಪ್ಪುತ್ತೀರಾ? ಅದಕ್ಕಾಗಿಯೇ ನಿಮ್ಮ ಪಕ್ಷದ ಯುವ ನಾಯಕರು ಉತ್ತರಪ್ರದೇಶ ಚುನಾವಣೆ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸದಂತೆ ಅವರನ್ನು ದೂರವಿಡಲಾಗಿದೆಯೇ?
19.ನೀವು ಭ್ರಷ್ಟಾಚಾರದ ಬಗ್ಗೆ ತುಂಬಾ ಸಲ ಮಾತನಾಡಿದ್ದೀರಿ. ಯುಪಿಎ ಎರಡರ ಪ್ರತಿಷ್ಠೆಯನ್ನು ಹಾಗೂ ನಿಮ್ಮ ಕುಟುಂಬದ ವರ್ಚಸ್ಸನ್ನು ವಿವಿಧ ಹಗರಣಗಳು ಕಸಿದುಕೊಂಡಿವೆ ಎಂದು ನಿಮಗೆ ಅನಿಸುತ್ತಿಲ್ಲವೇ? ನಿಮ್ಮ ಪಕ್ಷದಲ್ಲಿರುವ ಆರೋಪಿಗಳ ವಿರುದ್ಧ ನೀವು ಯಾವ ಕ್ರಮ ತೆಗೆದುಕೊಂಡಿದ್ದೀರಿ?
20.ಆಗಾಗ ನೀತಿ ಮತ್ತು ನೈತಿಕತೆ ಬಗ್ಗೆ ಭಾಷಣ ಮಾಡುವ ಒಬ್ಬ ಯುವ ನಾಯಕರಾಗಿ, ನಿಮ್ಮ ಪಕ್ಷದ ಹಿರಿಯ ಸಚಿವರು ರಕ್ಷಣೆಯೊಂದಿಗೆ ಸಾಂವಿಧಾನಿಕ ರೀತಿಗಳನ್ನು ಉಲ್ಲಂಘಿಸಿದಾಗ ನೀವು ಕನಿಷ್ಠ ಅದರ ವಿರುದ್ಧ ಮಾತನಾಡುತ್ತೀರೆಂದು ನಿರೀಕ್ಷಿಸಲಾಗಿತ್ತು. ನೀವು ಯಾಕೆ ಹಾಗೆ ಮಾಡಲಿಲ್ಲ?
21.ಲೋಕಪಾಲ ಚಳವಳಿಯನ್ನು ಯುಪಿಎ-2 ತಪ್ಪಾಗಿ ನಿಭಾಯಿಸಿದ ರೀತಿ ಜನರು ಕಾಂಗ್ರೆಸ್ ವಿರುದ್ಧ ಆಕ್ರೋಶಗೊಳ್ಳಲು ಕಾರಣವಾಯಿತು ಎಂಬುದನ್ನು ನೀವು ಒಪ್ಪುತ್ತೀರೇ?
22.ಒಂದೋ ನೀವು ಸುಮ್ಮನಿರುತ್ತೀರಿ ಅಥವಾ ಪಕ್ಷದ ವಕ್ತಾರರ ಮೂಲಕ ಮಾತಾಡುವುದನ್ನು ನಿಮ್ಮ ನೀತಿಯನ್ನಾಗಿ ಯಾಕೆ ಮಾಡಿಕೊಂಡಿದ್ದೀರಿ?
23.ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ನೀವು ಅನರ್ಹ ಬೆಂಬಲ ನೀಡಿರುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ನಿಮ್ಮ ನಿಲುವೇನು ಎಂಬ ಬಗ್ಗೆ ಲೇಖನದ ಮೂಲಕ ಅಥವಾ ಸಿದ್ಧಪಡಿಸಿದ ಭಾಷಣದ ಮೂಲಕವಾದರೂ ಯಾಕೆ ಸ್ಪಷ್ಟಪಡಿಸಬಾರದು?
24.ನೀವು ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಲ್ಲಿ ಯಾಕೆ ಮಾತನಾಡುವುದಿಲ್ಲ? ಚುನಾವಣಾ ಫಲಿತಾಂಶದ ಬಳಿಕ ಮಾರ್ಚ್ 6ರಂದು ನೀವು ಕರೆದಂಥ ಕಿರು ಅವಧಿಯ ಪತ್ರಿಕಾಗೋಷ್ಠಿಗಳಲ್ಲಾದರೂ ಯಾಕೆ ಮಾತನಾಡಲಿಲ್ಲ? ನೀವು ಪೂರ್ಣ ಪ್ರಮಾಣದ ಸಂದರ್ಶನಗಳಿಗೆ ಯಾಕೆ ಲಭ್ಯವಾಗುತ್ತಿಲ್ಲ? ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ನೀವು ಯಾಕೆ ಇಲ್ಲ?
25.ದೇಶ ಎದುರಿಸುತ್ತಿರುವ ಪ್ರಮುಖ ವಿಷಯಗಳಲ್ಲಿ ನಿಮ್ಮ ನಿಲುವೇನು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕೆ ಇಲ್ಲವೆಂದು ನೀವು ಭಾವಿಸುತ್ತೀರಾ?
0 comments:
Post a Comment