ಬೆಂಗಳೂರು, ಫೆ.1: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಗೋ ಸಂರಕ್ಷಣಾ ವಿಧೇಯಕ-2010 ಜಾರಿಗೆ ಅಂಕಿತ ಹಾಕದಂತೆ ರಾಷ್ಟ್ರಾಧ್ಯಕ್ಷೆಯ ಮೇಲೆ ತೀವ್ರ ಒತ್ತಡ ಹೇರುವ ಸಲುವಾಗಿ ಸಕ್ರಿಯ, ನಿರಂತರ ಹಾಗೂ ಜೀವಂತವಾದ ಬೃಹತ್ ಜನಾಂದೋಲನವನ್ನು ತುರ್ತಾಗಿ ಹಮ್ಮಿಕೊಳ್ಳಬೇಕು ಎಂದು ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಕರೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಜಾರಿಗೆ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾಯ್ದೆ ಜಾರಿ ವಿರೋಧಿಸಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲು ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ ಬುಧವಾರ ನಗರದಲ್ಲಿ ಎಲ್ಲ ಪ್ರಗತಿಪರ, ದಲಿತ-ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಪರ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆದಿತ್ತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಸುಬ್ಬಯ್ಯ, ಮಧ್ಯಪ್ರದೇಶದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ರಾಷ್ಟ್ರಾಧ್ಯಕ್ಷೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಭಯಪಡುವ ಅಗತ್ಯವಿಲ್ಲ. ಕರ್ನಾಟಕ ಹಾಗೂ ಮಧ್ಯ ಪ್ರದೇಶ ಸರಕಾರಗಳು ರಚಿಸಿರುವ ಕಾಯ್ದೆಗಳ ನಡುವೆ ಸಾಕಷ್ಟು ವ್ಯತ್ಯಾಸ ಗಳಿವೆ. ಹಾಗಂತ ಕಾಯ್ದೆ ವಿರುದ್ಧ ಧ್ವನಿ ಯೆತ್ತದೆ ಸುಮ್ಮನೆ ಕೂತರೆ ಅಪಾಯ ತಪ್ಪಿದ್ದಲ್ಲ. ಆದುದರಿಂದ ಕಾಯ್ದೆ ಜಾರಿ ಯನ್ನು ವಿರೋಧಿಸುವ ಎಲ್ಲ ಸಂಘಟನೆ ಗಳು ಜಂಟಿಯಾಗಿ ಬೃಹತ್ ಜನಾಂ ದೋಲನ ರೂಪಿಸಬೇಕು. ಆ ಜನಾಂ ದೋಲವನ್ನು ನಿರಂತ, ಜೀವಂತ ಹಾಗೂ ಸಕ್ರಿಯಗೊಳಿಸಬೇಕು ಎಂದು ಪ್ರತಿಪಾದಿಸಿದರು.
ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಕೇವಲ ಹಿಂದೂ-ಮುಸ್ಲಿಮರ ಪ್ರಶ್ನೆಯಲ್ಲ. ಮೇಲಾಗಿ ಕೃಷಿಕರ ಹಾಗೂ ರೈತರ ಬದುಕಿನ ಪ್ರಶ್ನೆಯಾಗಿದೆ. ಆದುದರಿಂದ ರಾಜ್ಯದಲ್ಲಿ ಪ್ರತಿನಿತ್ಯ ಕಾಯ್ದೆ ಜಾರಿಯ ವಿರುದ್ಧ ಚಳವಳಿಯನ್ನು ರೂಪಿಸಬೇಕು. ಅದರಲ್ಲಿ ರೈತರು ಹಾಗೂ ರೈತ ಸಂಘಟನೆಗಳು ಮನಃಪೂರ್ವಕವಾಗಿ ಭಾಗವಹಿಸಬೇಕು. ರೈತರು ಪಾಲ್ಗೊಳ್ಳಬೇಕಾದರೆ ಅವರಲ್ಲಿ ಕಾಯ್ದೆಯ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು. ರೈತರು ಹಾಗೂ ಜನರು ಸೇರಿ ಚಳವಳಿ ರೂಪಿಸುವ ಮೂಲಕ ಜನಶಕ್ತಿಯನ್ನು ತೋರಿಸಬೇಕು. ಆಗ ಮಾತ್ರ ಕಾಯ್ದೆ ಜಾರಿಗೆ ಸರಕಾರಗಳು ಹಿಂದೇಟು ಹಾಕುತ್ತವೆ ಎಂದು ಅವರು ಹೇಳಿದರು.
ಕಾಯ್ದೆ ಜಾರಿಯಾಗದಂತೆ ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳನ್ನು ರೂಪಿ ಸುವ ಅಗತ್ಯವಿದ್ದು, ರಾಜ್ಯಪಾಲರು ಕಾಯ್ದೆಯನ್ನು ರಾಷ್ಟ್ರಾಧ್ಯಕ್ಷೆಗೆ ಶಿಫಾರಸು ಮಾಡಿರುವುದರಿಂದ, ಪ್ರಥಮವಾಗಿ ರಾಜ್ಯಪಾಲರ ಮೇಲೆ ತೀವ್ರ ಒತ್ತಡ ಹೇರಬೇಕು. ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಕೇಂದ್ರ ಸರಕಾರ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬೇಕು. ಆಂದೋಲನಕ್ಕೆ ರಾಜಕೀಯ ಶಕ್ತಿ ತರಲು ಕಾಯ್ದೆ ಜಾರಿಯನ್ನು ವಿರೋಧಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಚಳವಳಿಗೆ ಕರೆ ತರಬೇಕು. ಕೊನೆಯದಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ರೈತರ ನಿಯೋಗ ಪ್ರತ್ಯೇಕವಾಗಿ ಕಾಯ್ದೆಗೆ ಒಪ್ಪಿಗೆ ಸೂಚಿಸದಂತೆ ರಾಷ್ಟ್ರಾಧ್ಯಕ್ಷೆಗೆ ಮನವಿ ಮಾಡಬೇಕು ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ರಾಜ್ಯ ಸಂಚಾಲಕ ಕೆ.ಎಲ್.ಅಶೋಕ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕ್ಷಣದಿಂದಲೆ ಬಿಜೆಪಿ ಸರಕಾರ ಪ್ರಜಾಪ್ರಭುತ್ವ, ರಾಜ್ಯದ ಜನತೆಯ ವಿರೋಧಿಯ ಶಾಸನಗಳನ್ನು ಜಾರಿ ಮಾಡುತ್ತಿದೆ. ಜನರ ಭಾವನೆಗಳನ್ನು ಕೆರಳಿಸುವ ಮೂಲಕ ರಾಜಕೀಯ ಮಾಡುತ್ತಿದೆ. ಸದ್ಯ ಕಾಯ್ದೆಯ ಬಗ್ಗೆ ರಾಷ್ಟ್ರಪತಿಗಳ ಅಂತಿಮ ನಿರ್ಧಾರ ಕೈಗೊಳ್ಳುವ ಕಾಲ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಎಲ್ಲ ಸಂಘಟನೆಗಳು ತಮ್ಮ-ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದುಗೂಡಿ ಕಾಯ್ದೆ ಜಾರಿ ವಿರುದ್ಧ ದೊಡ್ಡ ಜನಾಂದೋಲನ ರೂಪಿಸಿ, ಸಕ್ರಿಯಗೊಳಿಸಬೇಕು ಎಂದರು.
ಸಭೆಯಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ರಾಜ್ಯಾಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, ಇಕ್ಬಾಲ್, ವೇದಿಕೆಯ ರಘುನಂದನ್, ನರಸಿಂಹ ಮೂರ್ತಿ. ಪ್ರಜಾತಾಂತ್ರಿಕ ಜನರ ವೇದಿಕೆಯ ನಗರಗೆರೆ ರಮೇಶ್, ಬಿಬಿಎಂಪಿ ನೌಕರ ಗಂಗಪ್ಪ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
0 comments:
Post a Comment