PLEASE LOGIN TO KANNADANET.COM FOR REGULAR NEWS-UPDATES


ವಿಧಾನಸಭೆಯ ಕಲಾಪ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ಬ್ಲೂಫಿಲಂ ನೋಡಿದ ಮೂವರು ಸಚಿವರ ರಾಜೀನಾಮೆ ಕೊಡಿಸಿದ್ದೇನೋ ನಿಜ. ಆದರೆ, ರಾಜ್ಯದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಗೆ ಈ ನಿರ್ಲಜ್ಜ ಘಟನೆಯ ಬಗ್ಗೆ ಯಾವುದೇ ಪಶ್ಚಾತ್ತಾಪವಾದಂತಿಲ್ಲ. ಅಂತಲೇ ರಾಜೀನಾಮೆ ಕೊಟ್ಟ ಮೂವರ ಸಮರ್ಥನೆಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಈ ಮೂವರ ನಡುವೆ ಪೈಪೋಟಿ ಆರಂಭವಾಗಿದೆ. ಆ ಮೂವರನ್ನು ಸಮರ್ಥಿಸಿಕೊಳ್ಳಲು ಈ ಮೂವರು ಮುಂದಾಗಿದ್ದಾರೆ. ಇವರ ಹೇಳಿಕೆಗಳನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ.
ಈ ಪ್ರಕರಣ ಬಯಲಿಗೆ ಬಂದಾಗ ದೇಶದ ಜನ ಉಗಿಯುತ್ತಾರೆಂದು ರಾಜೀನಾಮೆ ಕೊಡಿಸ ಲಾಯಿತು. ಆದರೆ, ಈಗ ಅಂತಹವರನ್ನು ಸಮರ್ಥಿಸಿಕೊಂಡು ರಕ್ಷಣೆ ಮಾಡಿಕೊಳ್ಳುವ ಯತ್ನ ನಡೆದಿದೆ. ತಾವು ತಪ್ಪೇ ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಲಕ್ಷ್ಮಣ ಸವದಿ ಮತ್ತು ಸಿ.ಸಿ. ಪಾಟೀಲ್ ಹೇಳುತ್ತಾರೆ. ತಕ್ಷಣ ಇವರ ಸಮರ್ಥನೆಗೆ ಮುಂದಾಗುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇವರು ಅತ್ಯುತ್ತಮ ಮಂತ್ರಿಗಳಾಗಿದ್ದರು. ಆರೋಪ ಬಂದಾಕ್ಷಣ ಅಪರಾಧಿಗಳಾಗು ವುದಿಲ್ಲ ಎಂದು ಹೇಳುತ್ತಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಮೂವರು ಮಂತ್ರಿ ಸ್ಥಾನಗಳಿಗೆ ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ ಎನ್ನುತ್ತಾರೆ. ತಮ್ಮವರು ಸೆಕ್ಸ್ ಚಿತ್ರ ನೋಡಿರಬಹುದು. ಆದರೆ, ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡಿದ ಅಕ್ರಮ, ಅನೈತಿಕತೆಯ ಬಗ್ಗೆ 25 ಉದಾಹರಣೆ ಕೊಡುತ್ತೇನೆಂದು ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರು ಸವಾಲು ಹಾಕುತ್ತಾರೆ.
ಈ ಮೂವರು ನಾಯಕರ ಮಾತುಗಳನ್ನು ಗಮನಿಸಿದರೆ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್, ಪಾಲೆಮಾರ್ ಇವರೆಲ್ಲ ಸಂಪನ್ನರು, ಆದರೂ ಕೂಡ ಆರೋಪ ಬಂದಾಕ್ಷಣ ರಾಜೀನಾಮೆ ಕೊಟ್ಟು ಮಹತ್ ಸಾಧನೆ ಮಾಡಿದ್ದಾರೆ ಎಂಬ ಭಾವನೆ ಬರುತ್ತದೆ. ಅಂತಲೇ ವಿಚಾರಣೆ ಮುಗಿದ ನಂತರ ಅವರನ್ನು ಮತ್ತೆ ಮಂತ್ರಿಗಳನ್ನಾಗಿ ಮಾಡಿ ಅಧಿಕಾರ ನೀಡುವ ಹುನ್ನಾರ ನಡೆದಂತೆ ಕಾಣುತ್ತದೆ. ಈ ಮೂವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದು ಸಾಕು. ಅವರ ಶಾಸನಸಭಾ ಸದಸ್ಯತ್ವ ರದ್ದು ಸೇರಿದಂತೆ ಇನ್ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದು ಅಗತ್ಯವಿಲ್ಲವೆಂದು ವಿಧಾನಸಭಾಧ್ಯಕ್ಷರ ತೀರ್ಮಾನಕ್ಕೆ ಮುನ್ನ ಈ ರಾಜಕೀಯ ನಾಯಕರೇ ತೀರ್ಪು ನೀಡಿದಂತಾಗಿದೆ. ಶಾಸನ ಸಭೆಯ ಕಲಾಪ ನಡೆಯುತ್ತಿರುವಾಗ ರತಿಕ್ರೀಡೆಯ ಬ್ಲೂಫಿಲಂ ನೋಡುವುದು ಭಾರತೀಯ ದಂಡಸಂಹಿತೆಯ ಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ.
ಇಂತಹ ಪ್ರಕರಣ ಸ್ಪೀಕರ್‌ರ ಗಮನಕ್ಕೆ ಬಂದ ತಕ್ಷಣ ಅವರು ವಿಳಂಬ ಮಾಡದೆ ವಿಧಾನಸಭಾ ಪೊಲೀಸ್ ಠಾಣೆಗೆ ಈ ಮೂವರನ್ನು ಒಪ್ಪಿಸ ಬೇಕಾಗಿತ್ತು. ತಕ್ಷಣ ಇವರ ಸದಸ್ಯತ್ವವನ್ನು ಅಮಾನತು ಮಾಡ ಬೇಕಾಗಿತ್ತು. ಅದನ್ನು ಬಿಟ್ಟು, ಬರೀ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಪ್ರತಿಭಟನೆಯ ಧ್ವನಿಗಳನ್ನು ಅಡಗಿಸಲು ಮಸಲತ್ತು ನಡೆದಂತೆ ಕಾಣುತ್ತದೆ. ಸಂಘಪರಿವಾರ ಮಹಿಳೆಯರನ್ನು ಮಾತೆಯ ರೆಂದು ಕರೆಯುತ್ತದೆ. ಈ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿಯ ಮಂತ್ರಿಗಳು ಮಾತೃ ಸ್ವರೂಪಿಯರಾದ ಮಹಿಳೆಯರನ್ನು ಅವಮಾನಿಸುವಂತಹ ದೃಶ್ಯಗಳನ್ನು ಸದನದಲ್ಲಿ ನೋಡಿ ಖುಷಿ ಪಡುತ್ತಾರೆ. ಇದು ದೇಶದ ಮಹಿಳೆಯರ ಮರ್ಯಾದೆಯ ಪ್ರಶ್ನೆ. ಇದಕ್ಕಾಗಿ ಬಿಜೆಪಿ ನಾಯಕತ್ವ ನಾಡಿನ ಜನತೆಯ ಕ್ಷಮೆ ಯಾಚಿಸ ಬೇಕಾಗಿದೆ. ಹಾಗೆ ಮಾಡಿದ್ದರೆ ಪಕ್ಷಕ್ಕೆ ಪಶ್ಚಾತ್ತಾಪ ವಾಗಿದೆ ಎಂಬ ಭಾವನೆ ಮೂಡುತ್ತಿತ್ತು.
ಆದರೆ, ಅಂತಹ ಪಶ್ಚಾತ್ತಾಪದ ಭಾವ ಬಿಜೆಪಿ ಯಲ್ಲಿ ಕಾಣುತ್ತಿಲ್ಲ. ನರ್ಸ್ ಜಯಲಕ್ಷ್ಮಿ ಹಗ ರಣದಲ್ಲಿ ಬೀದಿಯಲ್ಲಿ ಮರ್ಯಾದೆ ಕಳೆದು ಕೊಂಡ ರೇಣುಕಾಚಾರ್ಯರಿಗೆ ಮಂತ್ರಿ ಸ್ಥಾನ ನೀಡಿ ದಕ್ಕಿಸಿಕೊಳ್ಳಲಾಯಿತು. ಈ ಸರಕಾರದ ಇನ್ನೊಬ್ಬ ಮಂತ್ರಿ ಹಾಲಪ್ಪ ತನ್ನ ಸ್ನೇಹಿತನ ಮಡದಿಯ ಮೇಲೆ ಆತ್ಯಚಾರ ಮಾಡಲು ಹೋಗಿ ಜೈಲಿಗೆ ಹೋಗಿ ಬಂದರು. ಅವ ರಿನ್ನೂ ಪಕ್ಷದಲ್ಲೇ ಇದ್ದಾರೆ. ಭೂಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲು ಸೇರಿ ದರು. ಗಣಿ ಹಗರಣದಲ್ಲಿ ಸಿಲುಕಿ ಜನಾರ್ದನ ರೆಡ್ಡಿ ಸೆರೆಮನೆಯಲ್ಲಿದ್ದಾರೆ. ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸುತ್ತ ಹಗರಣಗಳು ಸುತ್ತಿಕೊಳ್ಳುತ್ತಲೇ ಇವೆೆ. ಈ ಪೈಕಿ ಯಾರನ್ನೂ ಪಕ್ಷದಿಂದ ಹೊರ ಹಾಕಿಲ್ಲ. ಏನೇ ಪಾತಕ ಎಸಗಿದರೂ ಈ ಪಕ್ಷದಲ್ಲಿ ಸುರಕ್ಷಿತವಾಗಿರ ಬಹುದು ಎಂಬ ಭಾವನೆ ರಾಜಕಾರಣಿಗಳಲ್ಲಿ ಮೂಡಿದೆ. ನಿಜವಾಗಿಯೂ ಈ ಕಳಂಕಿತ ಸಚಿವರ ಮೇಲೆ ಕ್ರಮ ಕೈಗೊಳ್ಳಲು ವಿಳಂಬ ಮಾಡ ಬೇಕಾಗಿರಲಿಲ್ಲ. ತನಿಖೆಗಾಗಿ ಸದನ ಸಮಿತಿಯ ಅಗತ್ಯವೂ ಇರ ಲಿಲ್ಲ.
ಈ ಮಂತ್ರಿಗಳು ಚಿತ್ರ ವೀಕ್ಷಿಸುವ ದೃಶ್ಯವನ್ನು 6 ಕೋಟಿ ಕನ್ನಡಿಗರು ಮಾತ್ರವಲ್ಲ, ದೇಶದ ಹಾಗೂ ಜಗತ್ತಿನ ಕೊಟ್ಯಂತರ ಜನ ವೀಕ್ಷಿಸಿದ್ದಾರೆ. ಆರೋಪ ಸಾಬೀತಾಗಿರುವಾಗ ತನಿಖೆಯ ನಾಟಕ ನಡೆಸಿ ತಿಪ್ಪೆ ಸಾರಿಸುವುದು ಕೂಡ ಕಳಂಕಿತರನ್ನು ರಕ್ಷಿಸುವ ಯತ್ನವಲ್ಲದೆ ಇನ್ನೇನೂ ಅಲ್ಲ. ಸರಕಾರ ಏನೇ ತನಿಖೆಯ ಪ್ರಹಸನ ನಡೆಸಿದರೂ ಜನತೆ ನಂಬುವುದಿಲ್ಲ. ಬಿಜೆಪಿಗೆ ಪ್ರಾಮಾಣಿಕತೆ ಎಂಬುವುದಿದ್ದರೆ ಈ ಮೂವರ ಶಾಸನ ಸಭಾ ಸದಸ್ಯತ್ವವನ್ನು ರದ್ದು ಮಾಡಲು ಕ್ರಮ ಕೈಗೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಶಾಸನ ಸಭೆಯನ್ನು ವಿಸರ್ಜಿಸಿ ಮತ್ತೆ ಜನಾದೇಶವನ್ನು ಪಡೆಯಬೇಕು. ಆಡಳಿತ ವ್ಯವಸ್ಥೆ ಕುಸಿದು ಬಿದ್ದಿರುವಾಗ ಈ ರೀತಿ ಸರಕಾರ ನಡೆಸಿಕೊಂಡು ಹೋಗುವುದು ಸರಿಯಲ್ಲ. ಈ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

Advertisement

0 comments:

Post a Comment

 
Top