PLEASE LOGIN TO KANNADANET.COM FOR REGULAR NEWS-UPDATES


  ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ಲಾಭದಾಯಕ ಬೆಳೆ ಬೆಳೆಯುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕಾರಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲೆಯ ಕೃಷಿ ಮಾರಾಟ ಮಂಡಳಿಯ ಪ್ರತಿನಿಧಿಗಳಾದ ಬಿ.ಜಿ. ಅರಳಿಯವರು ರೈತರಿಗೆ ಕರೆ ನೀಡಿದರು.
  ಕೃಷಿ ಮಾರಾಟ ಇಲಾಖೆ, ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಗುಲಬರ್ಗಾ ವಿಭಾಗೀಯ ಕಾರ್ಯಾಲಯದ ಸಹಯೋಗದಲ್ಲಿ  ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಮೆಕ್ಕೆಜೋಳ ಬೆಳೆಗಾರರ ಹಾಗೂ ಖರೀದಿದಾರರ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
  ಶ್ರಮವಹಿಸಿ ಬೆಳೆದ ರೈತನಿಗೆ ತಕ್ಕ ಪ್ರತಿಫಲವನ್ನು ದೊರಕಿಸಿಕೊಡುವುದು ಸಮಸ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆದ್ಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಬೆಳೆದಂತಹ ಉತ್ಪನ್ನವನ್ನು ರೈತರು ಮಾರುಕಟ್ಟೆಗೆ ತಂದಾಗ ನಿಖರವಾದ ತೂಕವನ್ನು ನೀಡಿ, ಸ್ಪರ್ಧಾತ್ಮಕ ಬೆಲೆಯನ್ನು ದೊರಕಿಸಿ, ಕೂಡಲೇ ಹಣವನ್ನು ಪಾವತಿಸುವ ವ್ಯವಸ್ಥೆ ಮಾಡಬೇಕು. ಇನ್ನೂ ಹೆಚ್ಚಿನ ಪರಿಣಾಮಕಾರಿ ಕ್ರಮವಾಗಿ ರೈತರು ಮತ್ತು ಖರೀದಿದಾರರ ಇಂತಹ ಸಂಪರ್ಕ ಸಭೆಗಳ ಮಹತ್ವ ಹೆಚ್ಚಾಗಿದ್ದು, ಈ ಪ್ರದೇಶದ ಪ್ರಮುಖ ಉತ್ಪನ್ನವಾದ ಮೆಕ್ಕೆಜೋಳ ಬೆಳೆಗಾರರು ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಉತ್ಪನ್ನವನ್ನು ರಾಜ್ಯದ ಇತರೆ ಭಾಗಗಳಿಗೆ, ಹೊರರಾಜ್ಯಕ್ಕೆ ಮತ್ತು ಹೊರರಾಷ್ಟ್ರಕ್ಕೆ ರವಾನಿಸಿ ಹೆಚ್ಚಿನ ಲಾಭ ಪಡೆಯುವಂತೆ ಕಾರಟಗಿ ಎಪಿಎಂಸಿ ಅಧ್ಯಕ್ಷ ಬಿ.ಜಿ. ಅರಳಿ ಅವರು ತಿಳಿಸಿದರು. 
        ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಶರಣಪ್ಪ ಸಜ್ಜನ ಇವರು ಮಾತನಾಡಿ, ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವನ್ನು ಸುಮಾರು ೧೪ ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಿದ್ದು, ಪ್ರಮುಖವಾಗಿ ಈ ಭಾಗದಲ್ಲಿ ಉತ್ಪಾದಿಸುವ ಮೆಕ್ಕೆಜೋಳಕ್ಕೆ ಉತ್ತಮ ಬೆಲೆಯನ್ನು ದೊರಕಿಸಿಕೊಡಲು ಎಲ್ಲಾ ಸೌಲಭ್ಯಗಳನ್ನು ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಒದಗಿಸಲಾಗುವುದೆಂದು ಭರವಸೆ ನೀಡಿದರು. 
         ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಮುದ್ರಣಾಲಯದ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಶಂಕರಮೂರ್ತಿಯವರು ಮಾತನಾಡಿ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ಶಾಸನದಂತೆ ರೈತರು ತಾವು ಬೆಳೆದಂತಹ ಉತ್ಪನ್ನವನ್ನು ಯಾವುದೇ ಮಧ್ಯಸ್ಥಿಕೆ ಇಲ್ಲದೇ ನೇರವಾಗಿ ಖರೀದಿದಾರರು ಅಥವಾ ಖರೀದಿದಾರರ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉತ್ತಮ ಲಾಭ ಪಡೆಯುವಂತೆ ರೈತರಿಗೆ ವಿನಂತಿ ಮಾಡಿದರು.    
        ಹುಬ್ಬಳ್ಳಿಯ ಮೆಕ್ಕೆಜೋಳ ಖರೀದಿ ಮತ್ತು ಸಂಸ್ಕರಣೆ ಸಂಸ್ಥೆಯಾದ ಮೆ: ಅಂಬುಜಾ ಎಕ್ಸ್‌ಪೋರ್ಟ್ಸ್ ಕಾರ್ಯನಿರ್ವಹಣಾ ಅಧಿಕಾರಿ ಟಿಬ್ರಿವಾಲಾ ಇವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ ಮೆಕ್ಕೆಜೋಳ ಉತ್ಪನ್ನವು ಉತ್ತಮ ಗುಣಮಟ್ಟ ಹೊಂದಿದ್ದು, ಸದರಿ ಉತ್ಪನ್ನದಿಂದ ತಯಾರಿಸುವ ಉಪ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇರುವುದರಿಂದ ರಾಷ್ಟ್ರದ ಹೊರರಾಜ್ಯದಲ್ಲಿ ಮತ್ತು ಹೊರರಾಷ್ಟ್ರದಲ್ಲಿ ಈ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದುದರಿಂದ ಮೆಕ್ಕೆಜೋಳ ಬೆಳೆಗಾರರು ಉತ್ತಮ ರೀತಿಯಲ್ಲಿ ಬೇಸಾಯ ಕ್ರಮಗಳನ್ನು ಅನುಸರಿಸಿ ಮೆಕ್ಕೆಜೋಳವನ್ನು ಬೆಳೆದು ಉತ್ತಮ ಮಾರಾಟ ಮಾರ್ಗಗಳನ್ನು ಕಂಡುಕೊಳ್ಳಲು ರೈತರಿಗೆ ಕರೆ ನೀಡಿದರು. 
        ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಗುಲಬರ್ಗಾ ವಿಭಾಗೀಯ ಕಾರ್ಯಾಲಯದ ವತಿಯಿಂದ ೨೦೧೧-೧೨ನೇ ಸಾಲಿನಲ್ಲಿ ನೋಂದಾಯಿಸಿದ ಸುಮಾರು ೫೦೦ ಮೆಕ್ಕೆಜೋಳ ಬೆಳೆಗಾರರಿಗೆ ಪ್ರಸ್ತುತ ವರ್ಷದಲ್ಲಿ ಸದರಿ ಉತ್ಪನ್ನದ ಉತ್ಪಾದನೆ, ಕಠಾವು ಪೂರ್ವದ ತಂತ್ರಜ್ಞಾನ ಮತ್ತು ಕಠಾವು ನಂತರದ ತಂತ್ರಜ್ಞಾನದ ಬಗ್ಗೆ ಮೂರು ಹಂತದ ತರಬೇತಿಯನ್ನು ನೀಡಲಾಯಿತು. ಸಂಬಂಧಿಸಿದಂತೆ ಮೂರೂ ಹಂತದಲ್ಲಿ ತರಬೇತಿ ಪಡೆದ ಪ್ರಗತಿಪರ ರೈತರಲ್ಲಿ ೧೦೦ ಜನ ರೈತರನ್ನು ಕೊಪ್ಪಳ, ಕುಷ್ಟಗಿ ಮತ್ತು ಯಲುಬರ್ಗಾ ತಾಲೂಕುಗಳಿಂದ ಆಹ್ವಾನಿಸಿ, ಸದರಿಯವರು ಬೆಳೆದ ಮೆಕ್ಕೆಜೋಳವನ್ನು ಲಾಭದಾಯಕವಾಗಿ ಮಾರಾಟ ಮಾಡುವ ಮಾರ್ಗಗಳ ಬಗ್ಗೆ ಖರೀದಿದಾರರು ಮತ್ತು ಖರೀದಿದಾರರ ಸಂಸ್ಥೆಗಳ ಪ್ರತಿನಿಧಿಗಳನ್ನು ಪರಿಚಯಿಸುವ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿತ್ತು. 
          ಪ್ರಾರಂಭಿಕವಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಗುಲಬರ್ಗಾ ವಿಭಾಗೀಯ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕ ಹೆಚ್. ಪರಶುರಾಮಪ್ಪ ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.  ಕೃಷಿ ಇಲಾಖೆಯ ವಿಷಯ ತಜ್ಞ ಡಾ. ಎ.ಎಲ್. ನಾಯಕ, ಕೊಪ್ಪಳ ಎ.ಪಿ.ಎಂ.ಸಿ ಸದಸ್ಯ ಗವಿಸಿದ್ದಪ್ಪ ಮುದಗಲ್, ಫಕೀರಯ್ಯ ಹಿರೇಮಠ, ಹನುಮರಡ್ಡಿ ಹಂಗನಕಟ್ಟಿ, ವರ್ತಕರ ಪ್ರತಿನಿಧಿಗಳಾದ ಎಸ್.ಎಂ. ಕದ್ರಳ್ಳಿಮಠ ಮತ್ತು ಪ್ರಭು ಹೆಬ್ಬಾಳ ಹಾಗೂ ರೈತ ಮುಖಂಡರಾದ ವೆಂಕನಗೌಡ್ರ ಹಿರೇಗೌಡ್ರ, ಯಂಕಣ್ಣ ಯರಾಶಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top