PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಫೆ.22: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಪದಚ್ಯುತಿಗೆ ಕಸರತ್ತು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪನವರೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರಬಲ ನಾಯಕ, ಸಚಿವ ಜಗದೀಶ್ ಶೆಟ್ಟರ್ ಕೈ ಜೋಡಿಸಿದ್ದಾರೆ ನ್ನಲಾಗಿದೆ. ಬಿಜೆಪಿಯ ಕೆಲ ಮುಖಂಡರು ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೆ ಯಡಿಯೂರಪ್ಪ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಈ ಇಬ್ಬರು ನಾಯಕರು ಪರಸ್ಪರ ಚರ್ಚೆ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಯಡಿಯೂರಪ್ಪನವರ ರಾಜೀನಾಮೆಯ ನಂತರ ಮುಖ್ಯಮಂತ್ರಿ ಗಾದಿಗೆ ಜಗದೀಶ್ ಶೆಟ್ಟರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಯಡಿಯೂರಪ್ಪ ಸದಾನಂದ ಗೌಡರಿಗೆ ಅಧಿಕಾರದ ಗದ್ದುಗೆ ಲಭಿಸುವಂತೆ ನೋಡಿಕೊಂಡರು. ಇದೀಗ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂದು ಪಣತೊಟ್ಟಿರುವ ಅವರು, ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಣತಂತ್ರ ರೂಪಿಸುತ್ತಿದ್ದಾರೆ. ಪ್ರಸ್ತುತ ಯಡಿಯೂರಪ್ಪ ಪಾಳಯದಲ್ಲಿ ಗುರುತಿಸಿಕೊಂಡಿರುವವರು ಹಾಗೂ ಜಗದೀಶ್ ಶೆಟ್ಟರ್ ಬೆಂಬಲಿಗರು ಸೇರಿದಂತೆ ಕನಿಷ್ಠ 50 ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟು ಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರ ಎದುರು ಬಲ ಪ್ರದರ್ಶನ ನಡೆಸುವ ಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಆದರೆ ಭ್ರಷ್ಟಾಚಾರ, ಭೂ ಹಗರಣಗಳ ಆರೋಪಗಳಿಂದ ಮುಕ್ತರಾಗುವವರೆಗೆ ಯಡಿಯೂರಪ್ಪನವರಿಗೆ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದೆ. ಯಡಿಯೂರಪ್ಪ ಮಾತ್ರ ತಣ್ಣಗಾಗುತ್ತಿಲ್ಲ. ತನ್ನನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲವಾದಲ್ಲಿ ಲಿಂಗಾಯತ ಸಮುದಾಯದ ಮತ್ತೋರ್ವ ಪ್ರಬಲ ನಾಯಕ ಜಗದೀಶ್ ಶೆಟ್ಟರ್‌ರನ್ನು ಮುಖ್ಯಮಂತ್ರಿ ಮಾಡಿ, ತನಗೆ ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನ ನೀಡುವಂತೆ ಹೈ ಕಮಾಂಡ್‌ನೆದುರು ಬೇಡಿಕೆಯಿಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆಂದು ಹೇಳಲಾಗಿದೆ.
ಬಿಎಸ್‌ವೈ ನಿವಾಸದಲ್ಲಿ ಸಭೆ:
ಬಿಜೆಪಿಯಲ್ಲಿನ ಬಣ ರಾಜಕೀಯ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಗುರುವಾರ ಬೆಳಗ್ಗೆ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಯಡಿಯೂರಪ್ಪ ತನ್ನ ಬೆಂಬಲಿಗ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರ ಸಭೆಯನ್ನು ಆಯೋಜಿಸಿದ್ದಾರೆ. ಅಲ್ಲದೆ, ಎಲ್ಲರನ್ನೂ ಖುದ್ದಾಗಿ ದೂರವಾಣಿಯ ಮೂಲಕ ಸಂಪರ್ಕಿಸಿ ಸಭೆಗೆ ಆಹ್ವಾನಿಸಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.

ಫೆ.24ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಗರಕ್ಕೆ ಆಗಮಿಸಲಿದ್ದು, ಅದಕ್ಕೂ ಮುಂಚೆ ಯಡಿಯೂರಪ್ಪ ತಮ್ಮ ಬಣದ ಬಲ ಹೆಚ್ಚಿಸಿಕೊಂಡು ಅವರ ಮುಂದೆ ಶಕ್ತಿ ಪ್ರದರ್ಶನ ನಡೆಸುವ ಉದ್ದೇಶದಿಂದ ಮುಖಂಡರ ಸಭೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪನವರ ಆಪ್ತರಾದ ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ವಿ.ಸೋಮಣ್ಣ, ಸಿ.ಸಿ.ಪಾಟೀಲ್ ಸಭೆಯ ರೂಪುರೇಖೆಗಳನ್ನು ಸಿದ್ಧಪಡಿಸುತ್ತಿದ್ದು, ಸಚಿವರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಸಿ.ಪಿ.ಯೋಗೇಶ್ವರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಈ ಸಭೆಯಲ್ಲಿ ಪಾಲ್ಗೊಳ್ಳುವರೆಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

0 comments:

Post a Comment

 
Top