ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ತಿರುಮಲದೇವರ ಕೊಪ್ಪದ ದಲಿತ ಯುವಕ ಬಸವರಾಜ ಕಡೇಮನಿಯನ್ನು ದಿ. 26-11-2011ರಂದು ಮನೆಯ ವಾಸ್ತು ಸರಿಯಿಲ್ಲವೆಂಬ ಹಿನ್ನೆಲೆಯಲ್ಲಿ ನರಬಲಿ ಕೊಡಲಾಗಿದೆ. ಇದಕ್ಕೆ ಪ್ರಚೋದನೆ ನೀಡಿದ್ದು ನೀರಾಗಿಯ ನಿಜಲಿಂಗಸ್ವಾಮಿ ಅಲಿಯಾಸ್ ತಾತು ಅಜ್ಜ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಬಸವರಾಜ್ ಕಡೇಮನಿ ಬಸನಗೌಡನ ಟ್ರಾಕ್ಟರ್ ಡ್ರೈವರಾಗಿ ಮನೆಯ ಮಗನಾಗಿದ್ದ ಅಮಾಯಕನು. ಬಲಿ ಕೊಡುವ ದಿನ ಮೇಲಿಂದಮೇಲೆ ಫೋನ್ ಮಾಡಿ ಕರೆಸಿಕೊಂಡು ಬಾಯಲ್ಲಿ ಅರಳೆ ತುರುಕಿ ಚೀರದಂತೆ ಮಾಡಿ, ಕಣ್ಣ, ಹಲ್ಲು ಕಿತ್ತು, ಹಣೆಗೆ ಮೊಳೆ ಬಡಿದು ರಕ್ತ ಸಂಗ್ರಹಿಸಿ ಮನೆಯ ಒಳಗಿನ ಗೋಡೆಗಳಿಗೆ ರಕ್ತ ಸಿಂಪಡಿಸಿದ್ದಾರೆ. ನಂತರ ಶವಕ್ಕೆ ಪೂಜೆ ಮಾಡಿ ರಾತ್ರಿ ಹೊತ್ತು ಟ್ರಾಕ್ಟರಿನಲ್ಲಿ ಒಯ್ದು ಸುಡಲು ಪ್ರಯತ್ನಿಸಿದಾಗ ನೀರು ಕಟ್ಟಲು ಹೋದ ರೈತರು ಟ್ರಾಕರ್ ಕಡೆ ಬರತೊಡಗಿದಾಗ ಶವವನ್ನು ದಾರಿ ಬದಿಯಲ್ಲಿ ಬೀಸಾಡಿದ್ದಾರೆ.
ಆಧುನಿಕ ಕಾಲದಲ್ಲಿ ಇಂಥ ಘಟನೆ ಜರುಗಿದ್ದರೂ ಅದನ್ನು ಕೊಲೆಯೆಂದು ಮುಚ್ಚಿ ಹಾಕಲು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪೊಲೀಸರು ಪ್ರಯತ್ನಿಸುವುದನ್ನು ಪ್ರತಿಭಟಿಸಿ ದಿ. 30-1-2012ರಂದು ನಾಡಿನ ಪ್ರಗತಿಪರ ಚಿಂತಕರಾದ ನಗರಿಬಾಬಯ್ಯ., ಎಸ್.ಶಿವಲಿಂಗು, ನಗರಗೆರೆ ರಮೇಶ್, ಡಾ.ಯು.ರಾಮ ದಾಸ್ ರಾವ್, ಸರ್ಜಾಶಂಕರ , ಮುರುಘರಾಜೇಂದ್ರ ಒಡೆಯರ್, ಭೀಮನ ಕೆರೆ ಶಿವಮೂರ್ತಿ,ಅಲ್ಲಮಪ್ರಭು ಬೆಟ್ಟದೂರ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಸವರಾಜ್ ಕಡೇಮನಿಯ ಶವಪರೀಕ್ಷೆಯ ಭಾವಚಿತ್ರ , ವೀಡಿಯೋ ಇಲ್ಲವೆಂದು ಪೋಲೀಸರು ಹೇಳುತ್ತಿರುವುದು ಇನ್ನೂ ಹೆಚ್ಚಿನ ಸಂಶಯಕ್ಕೆ ಎಡೆಗೊಡುತ್ತಿದೆ. ಪ್ರತಿಭಟನಾಕಾರರ ಒತ್ತಾಯಗಳು
1. ಬಸವರಾಜ್ ಕಡೇಮನಿಯ ಶವವನ್ನು ಹೊರತೆಗೆದು ಮರು ಶವಪರೀಕ್ಷೆ ಮಾಡಬೇಕು
2.ಬಲಿ ನೀಡಲು ಪ್ರಚೋದನೆ ನೀಡಿದ ನಿಜಲಿಂಗಸ್ವಾಮಿಯನ್ನು ಬಂಧಿಸಬೇಕು.
3.ಮನೆಯ ಮಾಲಿಕ ಬಸವನಗೌಡನನ್ನು ಬಂಧಿಸಬೇಕು.
4. ಬಲಿಯನ್ನು ಕೊಲೆಯೆಂದು ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು.
4. ಸ್ಥಳೀಯ ಪೊಲೀಸರ ಮೇಲೆ ಜನ ನಂಬಿಕೆ ಕಳೆದುಕೊಂಡಿರುವುದರಿಂದ ಸಿಓಡಿ ತನಿಖೆಗೆ ಒಪ್ಪಿಸಬೇಕು.
ನಾಡಿನ ಪ್ರಜ್ಞಾವಂತರು ಇಂಥ ಪ್ರಕರಣಗಳು ಪುನಾರವೃತ್ತಿಗೊಳ್ಳದಂತೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಎಂದು ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಪ್ರಗತಿಪರರು ಆಗ್ರಹಿಸಿದ್ದಾರೆ.
0 comments:
Post a Comment