ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಥಮ ಹಂತದಲ್ಲಿ ಹಮ್ಮಿಕೊಳ್ಳಲಾಗಿರುವ ಬಾಲ್ಯವಿವಾಹ ನಿಷೇಧ ಕಾಯ್ದೆಯ ಲಾಂಛನವು ಜ. ೨೩ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಇದರ ಅಂಗವಾಗಿ ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನದ ಬಳಿಯಿಂದ ಸೈಕಲ್ ಜಾಥಾ ಹಾಗೂ ಕಲಾ ಜಾಥಾ ಏರ್ಪಡಿಸಲಾಗಿದೆ.
ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ೨೦೧೧ ರ ನವೆಂಬರ್ ೧೪ ರಿಂದ ೨೦೧೨ ರ ನವೆಂಬರ್ ೧೩ ರವರೆಗೆ ಬಾಲ್ಯ ವಿವಾಹ ವಿರುದ್ಧ ಆಂದೋಲನ ವರ್ಷ ಎಂದು ಘೋಷಿಸಿದೆ. ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಬೀದರ್, ಗುಲಬರ್ಗಾ, ಯಾದಗಿರಿ, ರಾಯಚೂರು, ಬಳ್ಳಾರಿ, ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಥಮ ಹಂತವಾಗಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಜ. ೧೭ ರಂದು ಬೆಳಗಾವಿಯಲ್ಲಿ ಇದರ ಉದ್ಘಾಟನೆ ನೆರವೇರಿದೆ. ಬಾಲ್ಯ ವಿವಾಹ ನಿಷೇಧ ಕುರಿತ ಲಾಂಛನ ಬಿಡಗಡೆಯಾಗಿದ್ದು, ಮೇಲ್ಕಂಡ ಎಲ್ಲ ಜಿಲ್ಲೆಗಳಲ್ಲಿ ಲಾಂಛನ ಸಂಚರಿಸಲಿದೆ. ಕೊಪ್ಪಳ ಜಿಲ್ಲೆಗೆ ಜ. ೨೩ ರಂದು ಕೊಪ್ಪಳಕ್ಕೆ ಆಗಮಿಸಿದ್ದು, ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನದಿಂದ ಜಾಥಾ ಪ್ರಾರಂಭಗೊಂಡು, ಸಿಂಪಿಲಿಂಗಣ್ಣ ರಸ್ತೆ, ಗವಿಮಠ ರಸ್ತೆ ಮೂಲಕ ಸಾಗಿ ಸಾಹಿತ್ಯ ಭವನ ತಲುಪಲಿದೆ. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಲಾಂಛನ ಮತ್ತು ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮದ ಅಂಗವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಾಳಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಾಮೂಹಿಕ ವಿವಾಹಗಳ ಆಯೋಜಕರು, ಸ್ವ-ಸಹಾಯ ಸಂಘದ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯುನಿಸೆಫ್ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment