ಬೆಂಗಳೂರು: `ಡಾ.ಎಸ್.ಎಲ್. ಭೈರಪ್ಪ ಅವರ ಸುತ್ತ ವಾದ- ವಿವಾದಗಳು ಸೃಷ್ಟಿಯಾಗಿರುವುದೇ ಅವರೊಬ್ಬ ಮಹತ್ವದ ಲೇಖಕ ಎಂಬುದನ್ನು ಸೂಚಿಸುತ್ತದೆ. ಸಾಹಿತ್ಯ ತಪಸ್ವಿ ಎನಿಸಿರುವ ಭೈರಪ್ಪ ಅವರ ಸಮಗ್ರ ಸಾಹಿತ್ಯದ ವಿಮರ್ಶೆ ನಡೆಯಬೇಕಿದೆ` ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ನಗರದ ಜಯನಗರದ ವಿಜಯ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ `ಭೈರಪ್ಪನವರ ಸಾಹಿತ್ಯದಲ್ಲಿ ಮೌಲ್ಯ ಸಂಘರ್ಷ` ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
`ಭೈರಪ್ಪ ಅವರ ಸುತ್ತ ಭಿನ್ನಾಭಿಪ್ರಾಯದ ಬಲೆ ಸುತ್ತಿಕೊಂಡಿದೆ. ಪ್ರಶ್ನೆಗಳ ಪರಿವೇಶವೇ ಆವರಿಸಿವೆ. ಇವೆಲ್ಲಾ ಅವರೊಬ್ಬ ಮಹತ್ವದ ಲೇಖಕ ಎಂಬುದನ್ನು ತೋರಿಸುತ್ತವೆ. ತಮ್ಮ ಕಾದಂಬರಿಯ ಚೌಕಟ್ಟಿನಲ್ಲೇ ಒಬ್ಬ ಅದ್ಧುತ ಕತೆಗಾರರಾಗಿ ಅವರು ಕಾಣುತ್ತಾರೆ. ಓದಿಸಿಕೊಂಡು ಹೋಗುವ ಬರಹ, ಕಥನ ಕಲೆ ಅದ್ವಿತೀಯವಾಗಿದೆ. ಅವರು ಸಾಮಾಜಿಕ ಆಸಕ್ತಿಗಿಂತ ಆತ್ಮಸಾಕ್ಷಿಗೆ ಬದ್ಧವಾಗಿ ಬರೆಯುತ್ತಾರೆ. ಕಲೆಗಾಗಿ ಕಲೆಯೆನ್ನುವ ನೆಲೆಯಲ್ಲಿ ಬರೆಯುವ ಅಪರೂಪದ ಸಾಹಿತಿ` ಎಂದು ಬಣ್ಣಿಸಿದರು.
ಟೀಕೆಗಳಲ್ಲಿ ಹುರುಳಿಲ್ಲ: `ಪ್ರತಿವಾದಿ, ಮನುವಾದಿ ಎಂದು ಟೀಕಿಸುವವರಿಂದ ಭೈರಪ್ಪ ಅವರ ಸಾಹಿತ್ಯ ಕುರಿತು ಸರಳ ವಿಮರ್ಶೆ ನಡೆದಿದೆಯೇ ಹೊರತು, ಪೂರ್ಣ ದೃಷ್ಟಿಯ ಗಟ್ಟಿವಿಮರ್ಶೆ ಮೂಡಿಬಂದಿಲ್ಲ. ಹಾಗಾಗಿ ಆ ಟೀಕೆಗಳಲ್ಲಿ ಹುರುಳಿಲ್ಲ ಎನ್ನಬೇಕಾಗುತ್ತದೆ` ಎಂದರು.
`ಅವರು ಪ್ರಜ್ಞಾಪೂರ್ವಕವಾಗಿ ಬರೆದಿರುವ ಬಗ್ಗೆ ಚರ್ಚೆ ನಡೆಸುವ ಬದಲು, ಅಪ್ರಜ್ಞಾಪೂರ್ವಕವಾಗಿ ಬರೆದಿರುವುದನ್ನು ಪ್ರಶ್ನಿಸಬೇಕು. ಆದರೆ ಆ ರೀತಿ ನಡೆದಿಲ್ಲ. ಅವರು ಯಾವುದೇ ಸಿದ್ಧಾಂತಕ್ಕೆ ಬದ್ಧವಾಗಿ ಬರೆಯುವುದಿಲ್ಲ. ಆದರೆ ಬರೆಯುವಾಗ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ` ಎಂದರು.
`ಭೈರಪ್ಪ ಅನುಭವವನ್ನು ಅರಸಿಕೊಂಡು ಹೋಗುತ್ತಾರೆ. ಅನುಭವ, ಅನ್ವೇಷಣೆ ಹಾಗೂ ಶೋಧನೆಯನ್ನು ಅವರ ಬರಹದಲ್ಲಿ ಕಾಣಬಹುದು. ಅವರ ಸಾಹಿತ್ಯದ ಪುನರಾವಲೋಕನ ಹಾಗೂ ಪುನರ್ ಮೌಲ್ಯಮಾಪನ ನಡೆಯಬೇಕಿದೆ` ಎಂದು ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, `ಭೈರಪ್ಪ ಅವರು ಬರಹಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತು, ಪಾತ್ರ, ಸನ್ನಿವೇಶಗಳು ಅಚ್ಚರಿ ಮೂಡಿಸುತ್ತವೆ. ಒಂದು ಕಥಾವಸ್ತುವನ್ನು ಎಂದಿಗೂ ಅವರು ಪುನರಾವರ್ತನೆ ಮಾಡಿಲ್ಲ. ಅನುಭವ ಅರಸಿ ಹೋಗುವ ಸಾಹಿತಿಗಳ ಪೈಕಿ ಅಗ್ರಗಣ್ಯರೆನಿಸಿದ್ದಾರೆ. ತಮಗೆ ದೊರೆತ ಪ್ರಶಸ್ತಿಗಳೊಂದಿಗೆ ಬಂದ ನಗದು ಹಣವನ್ನು ವಿವಿಧ ಉದ್ದೇಶಗಳಿಗೆ ಹಿಂದಿರುಗಿಸಿದ ಅಪರೂಪದ ಸಾಹಿತಿ` ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಮರ್ಶಾ ಲೋಕದ ವಿಕೃತಿ: `ಅವರ ವಿರುದ್ಧದ ವಾದ- ವಿವಾದಗಳು ವಿಮರ್ಶಾ ಲೋಕದ ವಿಕೃತಿಯನ್ನು ತೋರಿಸುತ್ತದೆ. ಅವರನ್ನು ಸಾಧ್ಯವಾದಷ್ಟು ನಿರ್ಲಕ್ಷಿಸಿದ್ದಾರೆ, ಖಂಡಿಸಿದ್ದಾರೆ. ಆದರೂ ಎಲ್ಲವನ್ನೂ ಮೀರಿ ಅವರು ಲೇಖಕರಾಗಿ ಬೆಳೆದಿದ್ದಾರೆ. ನಿಂದನೆಗೆ ಎಂದೂ ನೊಂದುಕೊಂಡವರಲ್ಲ` ಎಂದರು.
ಇದೇ ಸಂದರ್ಭದಲ್ಲಿ ಬಿಡುಗಡೆಯಾದ `ಅಡಿಗರ ಕಾವ್ಯ: ಒಂದು ಪುನರಾವಲೋಕನ` ಕೃತಿ (ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಲೇಖನಗಳ ಸಂಗ್ರಹ) ಕುರಿತು ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಮಾತನಾಡಿದರು.
`ಭೈರಪ್ಪ ಕಾದಂಬರಿಯಲ್ಲಿ ಮತೀಯ ಮೌಲ್ಯದ ವಿವೇಚನೆ` ಕುರಿತು ಲೇಖಕ ಸಂದೀಪ್ ಬಾಲಕೃಷ್ಣ, ಭೈರಪ್ಪ ಅವರ ಕಾದಂಬರಿಗಳಲ್ಲಿ ಸಾಮಾಜಿಕ ಮೌಲ್ಯ ಕುರಿತು ಬಂಟ್ವಾಳದ ಕನ್ನಡ ಪ್ರಾಧ್ಯಾಪಕ ಡಾ.ಅಜಕ್ಕಳ ಗಿರೀಶ್ ಭಟ್ ವಿಷಯ ಮಂಡಿಸಿದರು. ಸಾಹಿತಿ ಭೈರಪ್ಪ, ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಬಿ.ವಿ. ನಾರಾಯಣರಾವ್, ಜಂಟಿ ಕಾರ್ಯದರ್ಶಿ ಪ್ರೊ.ಆರ್.ವಿ. ಪ್ರಭಾಕರ, ಪ್ರಾಚಾರ್ಯ ಬಿ.ಎನ್. ವೆಂಕಟರಾವ್ ಉಪಸ್ಥಿತರಿದ್ದರು.
ಹಿಮಾಲಯದಷ್ಟು ಎತ್ತರ...
ಆಶಯ ನುಡಿಗಳನ್ನಾಡಿದ ಡಾ.ಪ್ರಧಾನ ಗುರುದತ್ತ, `ದಕ್ಷಿಣ ಭಾಗದಲ್ಲಿ ಭೈರಪ್ಪ ಅವರು ಸಾಹಿತ್ಯದ ಅಧಿಪತಿಯಾಗಿದ್ದಾರೆ. ಅವರು ಹಿಮಾಲಯ ಪರ್ವತದಷ್ಟು ಎತ್ತರಕ್ಕೆ ಬೆಳೆದ ಶ್ರೇಷ್ಠ ಸಾಹಿತಿ` ಎಂದು ಬಣ್ಣಿಸಿದರು.
ಇದಕ್ಕೆ ಸಭಿಕರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಪ್ರೊ.ಭಕ್ತರಹಳ್ಳಿ ಕಾಮರಾಜ್, `ಭೈರಪ್ಪ ಅವರು ಹಿಮಾಲಯ ಪರ್ವತದಷ್ಟು ಎತ್ತರಕ್ಕೆ ಬೆಳೆದ ಸಾಹಿತಿಯಾಗಿದ್ದರೆ ಕುವೆಂಪು, ಬೇಂದ್ರೆ, ಕಾರಂತರಿಗಿಂತ ಶ್ರೇಷ್ಠರೇ. ಅವರನ್ನು ಈ ರೀತಿ ಹೊಗಳುವುದು ಸರಿಯಲ್ಲ` ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ ಗುರುದತ್ತ, `ಭೈರಪ್ಪ ಅವರನ್ನು ಇತರೆ ಸಾಹಿತಿಗಳಿಗೆ ಹೋಲಿಸಿ ಹೇಳಿಲ್ಲ. ಅವರ ಕೃತಿಗಳು ಇತರೆ ಭಾಷೆಗಳಿಗೆ ಭಾಷಾಂತರಗೊಂಡಷ್ಟು ಇತರೆ ಸಾಹಿತಿಗಳ ಕೃತಿಗಳು ಭಾಷಾಂತರಗೊಂಡಿಲ್ಲ. ಇತರ ಸಾಹಿತಿಗಳ ಸಾಧನೆಯನ್ನು ಮೀರಿದ ಪ್ರತಿಭೆ ಅವರದು` ಎಂದು ಹೇಳಿದರು.
ಭೈರಪ್ಪ ಕಾದಂಬರಿಯಲ್ಲಿ ಕಲೆ- ಸಾಹಿತ್ಯ- ಮೌಲ್ಯ
ಭೈರಪ್ಪ ಅವರ ಕಾದಂಬರಿಗಳಲ್ಲಿ ಕಲೆ- ಸಾಹಿತ್ಯ- ಮೌಲ್ಯ` ಕುರಿತು ಮಾತನಾಡಿದ ಶತಾವಧಾನಿ ಡಾ.ಆರ್. ಗಣೇಶ್, `ಭೈರಪ್ಪ ಅವರು ವಾಸ್ತವದ ಕತೆಗೆ ಕಲ್ಪನೆಯನ್ನು ಬೆರೆಸಿ ಕಲಾತ್ಮಕವಾಗಿ ನಿರೂಪಿಸುತ್ತಾರೆ.
ಸಂಘರ್ಷಗಳನ್ನು ಕಲಾತ್ಮಕವಾಗಿ ಹೆಣೆಯುತ್ತಾ ಹೋಗುತ್ತಾರೆ. ಹಳೆಯ ಸಾಹಿತ್ಯದಲ್ಲಿ ಉತ್ಪ್ರೇಕ್ಷೆ, ವರ್ಣನೆಯ ವೈಭವೀಕರಣವನ್ನು ಕಾಣಬಹುದು. ಅದನ್ನು ತಪ್ಪು ಎನ್ನಲಾಗದು. ಆದರೆ ಭೈರಪ್ಪ ಅವರು ಅಗತ್ಯ ಬಿದ್ದರಷ್ಟೇ ವಿಷಯವನ್ನು ಕಲಾತ್ಮಕವಾಗಿ ನಿರೂಪಿಸುತ್ತಾರೆ` ಎಂದರು - ಪ್ರಜಾವಾಣಿ
0 comments:
Post a Comment