PLEASE LOGIN TO KANNADANET.COM FOR REGULAR NEWS-UPDATES

  ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಬರುವ ಬೇಸಿಗೆ ತಿಂಗಳುಗಳಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲೆಯ ಬರಪರಿಸ್ಥಿತಿ ಹಾಗೂ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಣಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಈಗಾಗಲೆ ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ.  ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲಗೊಂಡಿರುವುದರಿಂದ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿದ್ದು, ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಈಗಾಗಲೆ ತಯಾರಿಸಲಾಗಿದೆ.  ಇಂತಹ ಗ್ರಾಮಗಳಲ್ಲಿನ ಕುಡಿಯುವ ನೀರಿನ ತೊಂದರೆ ನಿವಾರಿಸಲು ಕೊಳವೆಬಾವಿಗಳು, ಕೈಪಂಪ್ ದುರಸ್ತಿ, ಫ್ಲಶಿಂಗ್, ರೀಡ್ರಿಲ್ಲಿಂಗ್, ಹೈಡ್ರಾಫ್ಯಾಕ್ಚರಿಂಗ್, ಪೈಪ್‌ಲೈನ್ ವಿಸ್ತರಣೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಆದ್ಯತೆ ನೀಡಬೇಕು.  ಇವೆಲ್ಲವುಗಳಿಂದಲೂ ಕುಡಿಯುವ ನೀರಿನ ತೊಂದರೆ ನಿವಾರಣೆಯಾಗಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಮಾತ್ರ ಹೊಸ ಕೊಳವೆ ಬಾವಿಗಳನ್ನು  ಕೊರೆಯಿಸಲು ಕ್ರಮ ಕೈಗೊಳ್ಳಬೇಕು.  ಸರ್ಕಾರ ಈಗಾಗಲೆ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ೧೨೧. ೫ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.  ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ತೊಂದರೆಗಳ ನಿರ್ವಹಣೆಗೆ ಹಾಗೂ ಸಾರ್ವಜನಿಕ ದೂರುಗಳಿಗೆ ಕೂಡಲೆ ಸ್ಪಂದಿಸುವಂತೆ ಆಗಲು ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಹಾಯವಾಣಿಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇವು ಸಮಸ್ಯೆ : ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು.  ಜಿಲ್ಲೆಯಲ್ಲಿ ಈಗ ದಾಸ್ತಾನಿರುವ ಮೇವು ಇನ್ನೂ ೦೬ ವಾರಗಳಿಗೆ ಸಾಕಾಗಬಹುದಾಗಿದ್ದು, ನಂತರದ ದಿನಗಳಲ್ಲಿ ಮೇವಿನ ಸಮಸ್ಯೆ ಉಂಟಾಗದಂತೆ ಮಾಡಲು, ಹೆಚ್ಚಿನ ಮೇವು ದಾಸ್ತಾನು ಮಾಡಿಕೊಳ್ಳಲು ಹಾಗೂ ರೈತರಿಗೆ ಮೇವು ಬೆಳೆ ಬೆಳೆಯಲು ಮೇವಿನ ಬೀಜಗಳ ಸಮರ್ಪಕ ವಿತರಣೆಯಾಗಿ, ಅದರ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು.  ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯ ಪರಾಮರ್ಶೆ ನಡೆಸಬೇಕು.  ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ರೈತರು ಮೇವಿನ ತೊಂದರೆಯ ಕಾರಣಕ್ಕಾಗಿಯೇ ಕಸಾಯಿಖಾನೆಗೆ ಮಾರುವಂತಹ ಪರಿಸ್ಥಿತಿ ಉದ್ಭವವಾಗದಂತೆ ಎಚ್ಚರಿಕೆ ವಹಿಸಬೇಕು.  ಜಿಲ್ಲೆಯಲ್ಲಿ ಈಗಾಗಲೆ ಪ್ರತಿ ತಾಲೂಕಿನಲ್ಲಿ ತಲಾ ಒಂದು ಗೋಶಾಲೆ ಪ್ರಾರಂಭಿಸಲಾಗಿದ್ದು, ಆದರೆ ಈ ಗೋಶಾಲೆ ಇರುವ ಸಮೀಪದ ಪ್ರದೇಶಗಳ ರೈತರಿಗಷ್ಟೇ ಅನುಕೂಲವಾಗಲಿದೆ.  ಆದರೆ ದೂರದ ಪ್ರದೇಶದಲ್ಲಿರುವ ಜಾನುವಾರುಗಳಿಗೆ ಮೇವಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.  ಬೇಸಿಗೆಯ ತಿಂಗಳಲ್ಲಿ ಉದ್ಭವಿಸಬಹುದಾದ ಪರಿಸ್ಥಿತಿ ಹಾಗೂ ಅದರ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಿದ್ಧಪಡಿಸಿ, ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ತಿಳಿಸಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಸದ್ಯ ಜಿಲ್ಲೆಯಲ್ಲಿ ೦೪ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ.  ಜಿಲ್ಲೆಯ ೨೦ ಹೋಬಳಿಗಳ ಪೈಕಿ ೦೪ ಹೋಬಳಿಯಲ್ಲಿ ಗೋಶಾಲೆ ತೆರೆಯುವ ಅಗತ್ಯವಿಲ್ಲ.  ಉಳಿದ ೧೬ ಹೋಬಳಿಗಳಲ್ಲಿ ತಲಾ ಒಂದು ಗೋಶಾಲೆ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಪಿ.ಕೆ. ಭಜಂತ್ರಿ ಅವರು ಮಾತನಾಡಿ, ಈಗಾಗಲೆ ಜಿಲ್ಲೆಯಲ್ಲಿ ಸುಮಾರು ೨೬೦ ಜನವಸತಿ ಪ್ರದೇಶಗಳನ್ನು ಸಮಸ್ಯಾತ್ಮಕ ಪ್ರದೇಶವೆಂದು ಗುರುತಿಸಲಾಗಿದ್ದು, ಇಂತಹ ಪ್ರದೇಶಗಳಲ್ಲಿ ಕೈಪಂಪ್ ದುರಸ್ತಿ, ಫ್ಲಶಿಂಗ್, ರೀಡ್ರಿಲ್ಲಿಂಗ್, ಹೈಡ್ರಾಫ್ಯಾಕ್ಚರಿಂಗ್, ಪೈಪ್‌ಲೈನ್ ವಿಸ್ತರಣೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
  ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಬೆಳೆ ವಿಫಲಗೊಂಡ ಕಾರಣಕ್ಕಾಗಿ ೧೧೧.೮೬ ಕೋಟಿ ರೂ.ಗಳ ಬೆಳೆ ಹಾನಿ ಸಂಭವಿಸಿದೆ.  ಅಲ್ಲದೆ ೮೭೨೯೧ ಟನ್ ಬೆಳೆ ಉತ್ಪಾದನೆಯ ನಷ್ಟವಾಗಿದೆ.  ಹಿಂಗಾರು ಹಂಗಾಮಿನಲ್ಲಿ ೯೧. ೯೨ ಕೋಟಿ ರೂ.ಗಳ ಬೆಳೆ ಹಾನಿ ಸಂಭವಿಸಿದ್ದು, ೯೬೩೦೪ ಟನ್ ಬೆಳೆ ಉತ್ಪಾದನೆಯ ನಷ್ಟ ಉಂಟಾಗಿದೆ.  ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ, ಕಡಲೆ, ಜೋಳ, ಗೋಧಿ ಮುಂತಾದ ಪ್ರಮುಖ ಬೆಳೆಗಳು ಶೇ. ೫೦ ರಷ್ಟು ಹಾನಿಯಾಗಿದೆ.  ಇದು ಜಿಲ್ಲೆಯ ಸುಮಾರು ೦೧ ಲಕ್ಷ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವಿವರಿಸಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಜಿ.ಪಂ. ಉಪಕಾರ್ಯದರ್ಶಿ ಅನ್ನದಾನಯ್ಯ, ಮುಖ್ಯ ಲೆಕ್ಕಾಧಿಕಾರಿ ರತ್ನಾನಾಯಕ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ನಿಂಬರಗಿ, ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ, ವೀರಣ್ಣ ಕಮತರ್ ಮುಂತಾದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top