ಕಳೆದ ಜೂನ್ ತಿಂಗಳಿನಲ್ಲಿ ಕುಷ್ಟಗಿ ತಾಲೂಕು ಕುಂಬಳಾವತಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಆರೋಪಿ ನೀಲಪ್ಪ ತಂದೆ ದ್ಯಾಮಪ್ಪ ಕಂಡೇಕರ್ ಎಂಬಾತನಿಗೆ ಕೊಪ್ಪಳದ ಒಂದನೆ ತ್ವರಿತ ನ್ಯಾಯಾಲಯ ೮ ವರ್ಷಗಳ ಜೈಲು ಹಾಗೂ ೮೦೦೦ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕುಷ್ಟಗಿ ತಾಲೂಕು ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬಳಾವತಿ ಗ್ರಾಮದ ನೀಲಪ್ಪ ತಂದೆ ದ್ಯಾಮಪ್ಪ ಕಂಡೇಕರ ಎಂಬಾತ ತನ್ನ ಹೆಂಡತಿ ನೀಲವ್ವಳ ನಡತೆಯನ್ನು ಶಂಕಿಸಿ, ಅವಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ, ಕಳೆದ ಜೂ. ೧೬ ರಂದು ಮನೆಯಿಂದ ಹೊರಗೆ ಹೋದ ನೀಲಪ್ಪ ಮರಳಿ ತನ್ನ ಮನೆಗೆ ಬಂದಾಗ, ತನ್ನ ಪತ್ನಿ ನೀಲವ್ವ ಪಕ್ಕದ ಮನೆಯ ಶರಣಪ್ಪ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಕಂಡು, ಕೈಗೆ ಸಿಕ್ಕ ಕಟ್ಟಿಗೆಯಿಂದ ಪತ್ನಿ ನೀಲವ್ವ ಮತ್ತು ಶರಣಪ್ಪ ಅವರಿಗೆ ಹೊಡೆದಿದ್ದಲ್ಲದೆ, ಹಗ್ಗದಿಂದ ಇಬ್ಬರ ಕುತ್ತಿಗೆಗೆ ಉರುಳು ಹಾಕಿ ಕೊಲೆ ಮಾಡಿದ ಘಟನೆ ಕುರಿತಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳದ ಒಂದನೆ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಲೆಕ್ಕದಪ್ಪ ಜಂಬಗಿ ಅವರು ಆರೋಪಿ ನೀಲಪ್ಪ ತಂದೆ ದ್ಯಾಮಪ್ಪ ಕಂಡೇಕರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ೮ ವರ್ಷಗಳ ಜೈಲು ಹಾಗೂ ೮೦೦೦ ರೂ. ದಂಡ, ದಂಡ ಭರಿಸಲು ತಪ್ಪಿದಲ್ಲಿ ೩ ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಎಲ್.ಎಸ್. ಸುಳ್ಳದ ಅವರು ಸರ್ಕಾರದ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
0 comments:
Post a Comment