ಕೃಪೆ : ಪ್ರಜಾವಾಣಿ |
ನಮ್ಮ ಕಾನೂನು ವ್ಯವಸ್ಥೆಯ ಅಸಹಾಯಕತೆಗೆ ಕನ್ನಡಿ ಹಿಡಿಯುವ ಬೆಳವಣಿಗೆಗಳು ಮುಖ್ಯಮಂತ್ರಿ ಸದಾನಂದ ಗೌಡರ ತವರು ಸುಳ್ಯದಲ್ಲೇ ನಡೆಯುತ್ತಿದೆ. ಕಾನೂನನ್ನು ಕೈಗೆತ್ತಿಕೊಂಡ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡ ಒಂದೇ ಒಂದು ಕಾರಣಕ್ಕಾಗಿ ಸುಳ್ಯದ ಪೊಲೀಸ್ ಅಧಿಕಾರಿಗಳು, ಅವರ ಕುಟುಂಬಗಳು ಸಂಕಷ್ಟವನ್ನು ಎದುರಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸುಳ್ಯ ತಾಲೂಕಿನ ಪುಂಡುಪೋಕರಿಗಳ ಬೆಂಬಲಕ್ಕೆ ಸ್ವತಃ ಬಿಜೆಪಿ ಸರಕಾರವೇ ನಿಂತಂತಿದೆ.ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದಾಂಧಲೆ, ಗೂಂಡಾಗಿರಿ ಕರಾವಳಿಗೆ ಹೊಸತೇನಲ್ಲ. ವಿಷಾದನೀಯ ಸಂಗತಿಯೆಂದರೆ, ಕರಾವಳಿಯಲ್ಲಿ ಪೊಲೀಸ್ ವ್ಯವಸ್ಥೆ ಇದನ್ನು ಅಸಹಾಯಕತೆಯಿಂದ ನೋಡುತ್ತಿದೆ. ಮಗದೊಂದೆಡೆ ತಳ ಮಟ್ಟದ ಪೊಲೀಸ್ ಸಿಬ್ಬಂದಿಯೇ ಸಂಘಪರಿವಾರದ ಈ ಜನರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ದನದ ವ್ಯಾಪಾರಿಗಳನ್ನು ತಡೆದು ನಡೆಸುವ ದರೋಡೆಗಳಲ್ಲಿ ಸಣ್ಣ ಪಾಲನ್ನೂ ಪಡೆಯುತ್ತಿದ್ದಾರೆ. ಒಂದೆರಡು ಪೊಲೀಸ್ ಅಧಿಕಾರಿಗಳು ಈ ದುಷ್ಕರ್ಮಿಗಳಿಗೆ ಮೂಗುದಾರ ಹಾಕಲು ಪ್ರಯತ್ನಿಸಿದಾಗೆಲ್ಲ, ಈ ಪೊಲೀಸರಿಗೇ ಮೂಗುದಾರ ಹಾಕಿ ಅವರನ್ನು ನೀರಿಲ್ಲದ ಕಡೆಗೆ ಎತ್ತಂಗಡಿ ಮಾಡಲಾಗುತ್ತದೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುವ ಸಂದರ್ಭದಲ್ಲಿ ಸಾವಿರ ಬಾರಿ ಆಲೋಚಿಸುವಂತಹ ಸನ್ನಿವೇಶ ಬಂದಿದೆ. ಸುಳ್ಯದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಒಂದೇ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಮಾತ್ರವಲ್ಲ, ಸಾರ್ವಜನಿಕವಾಗಿ ದುಷ್ಕರ್ಮಿಗಳ ಪರವಾಗಿ ಬೆಂಬಲ ಘೋಷಿಸಿದ ಸಂಘಪರಿವಾರದ ನಾಯಕರು,ಪೊಲೀಸ್ ಅಧಿಕಾರಿಗಳ ಪತ್ನಿಯರ ಕುರಿತಂತೆ ಅವಾಚ್ಯವಾಗಿ ಮಾತನಾಡಿದರು. ಅಷ್ಟೇ ಯಾಕೆ, ಸಂಘಪರಿವಾರದ ವೃದ್ಧ ನಾಯಕನೊಬ್ಬ ಪೊಲೀಸ್ ಠಾಣೆಗೇ ನುಗ್ಗಿ ದಾಳಿ ನಡೆಸುವ ಬೆದರಿಕೆಯನ್ನು ಹಾಕಿದ.
ಈ ನಾಯಕರ ವಿರುದ್ಧ ಪ್ರಕರಣ ದಾಖಲಿಸುವ ಬದಲಿಗೆ, ಪೊಲೀಸರನ್ನೇ ಅಮಾನತುಗೊಳಿಸಲಾಯಿತು. ಈ ಅಮಾನತು ಶಿಕ್ಷೆ ಯಾಕೆ? ಎಂದು ಪೊಲೀಸ್ ಅಧಿಕಾರಿಗಳು ಕೇಳಿದರೆ, ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಸದಾನಂದ ಗೌಡರು ತಲೆ ತಪ್ಪಿಸಿಕೊಂಡು ಓಡಾಡುತ್ತಾರೆ. ಹಾಗಾದರೆ ಕರಾವಳಿಯನ್ನು ಆಳುತ್ತಿರುವವರು ಯಾರು? ಒಂದು ಪ್ರಜಾಸತ್ತಾತ್ಮಕ ಸರಕಾರವೇ? ಅಥವಾ ಸಂಘಪರಿವಾರವೇ? ಮುಖ್ಯಮಂತ್ರಿ ಸದಾನಂದ ಗೌಡರು ಇದಕ್ಕೆ ಉತ್ತರಿಸಬೇಕು.ಬಿಜೆಪಿ ಸರಕಾರದ ಆಳ್ವಿಕೆಯ ದುರಂತ ಹತ್ತಿರವಾಗುತ್ತಿದ್ದ ಹಾಗೆಯೇ ಸಂಘಪರಿವಾರ ಅಲ್ಲಲ್ಲಿ ತನ್ನ ಸಂಚುಗಳನ್ನು ರೂಪಿಸುತ್ತಿದೆ. ಸಮಾಜಕ್ಕೆ ಬೆಂಕಿ ಹಚ್ಚುವ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಸಿಂಧಗಿಯಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರೇ ಪಾಕಿಸ್ತಾನ ಧ್ವಜ ಹಾರಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಅಂತೆಯೇ ಕರಾವಳಿಯಲ್ಲಿಯೂ ಸಂಘಪರಿವಾರದ ದುಷ್ಕರ್ಮಿಗಳು ಜಾಗೃತರಾಗಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ಥಳಿಸಲಾಯಿತು. ಹಿಂದೂ ತರುಣಿಯ ಜೊತೆಗೆ ಮುಸ್ಲಿಂ ತರುಣರು ಎಂದು ದಾಂಧಲೆ ಎಬ್ಬಿಸಲಾಯಿತು. ದಾಂಧಲೆ ನಡೆಸಿ, ಗಲಭೆ ಎಬ್ಬಿಸಿ, ಕಾನೂನನ್ನು ಕೈಗೆತ್ತಿಕೊಂಡ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದರು.ಪೊಲೀಸರ ಕರ್ತವ್ಯ ನಿಷ್ಠೆ ಮಾಧ್ಯಮಗಳ, ರಾಜಕಾರಣಿಗಳ ಶ್ಲಾಘನೆಗೆ ಪಾತ್ರವಾಗಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಅವರಿಗೆ ಸಿಕ್ಕಿದ ಉಡುಗೊರೆ ಅಮಾನತು. ಸುಳ್ಯದ ಬಿಜೆಪಿ ನಾಯಕರನ್ನು ಸಮಾಧಾನ ಪಡಿಸುವ ಒಂದೇ ಒಂದು ಕಾರಣಕ್ಕಾಗಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮಹಿಳೆ ಯಾವ ಧರ್ಮಕ್ಕೇ ಸೇರಿರಲಿ. ಅವಳಿಗೆ ಅನ್ಯಾಯ ಬಗೆಯುವುದು, ಅವಳನ್ನು ತಮ್ಮ ಸ್ವಕಾರ್ಯಕ್ಕೆ ಬಳಸುವುದು, ವಂಚಿಸುವುದು ಅಪರಾಧ.ಅಂತಹ ಕೃತ್ಯ ನಡೆದರೆ ಪೊಲೀಸರು ದೂರು ಪಡೆದು ಸರಿಯಾದ ಕ್ರಮವನ್ನು ತೆಗೆದುಕೊಳ್ಳಬಹುದು.ಆದರೆ ಅಪರಾಧಿಗಳ ಪಟ್ಟಿಯಲ್ಲಿರುವ ದುಷ್ಕರ್ಮಿಗಳೇ ಅಮಾಯಕರ ಮೇಲೆ ಆರೋಪಪಟ್ಟಿಯನ್ನು ಮಾಡಿ, ಅವರ ಮೇಲೆ ದೌರ್ಜನ್ಯವೆಸಗಿ, ಅವರಿಂದ ಹಣವನ್ನು ದೋಚಿದರೆ ಪೊಲೀಸರು ಏನು ಮಾಡಬೇಕು? ಜನರೇ ಕಾನೂನನ್ನು ಕೈಗೆತ್ತಿಕೊಳ್ಳುವುದಾದರೆ ಪೊಲೀಸ್ ಠಾಣೆಗಳು ಯಾಕೆ ಇರಬೇಕು? ಅಂದರೆ ಕಾನೂನನ್ನು ಕೈಗೆತ್ತಿಕೊಂಡ ದುಷ್ಕರ್ಮಿಗಳಿಗೆ ಪೊಲೀಸರು ಸೆಲ್ಯೂಟ್ ಹೊಡೆಯಬೇಕು ಎಂದು ಸರಕಾರ ಆದೇಶಿಸುತ್ತದೆಯೇ? ಹಾಗಾದರೆ ಆ ಕುರಿತಂತೆ ಅಧಿಕೃತ ಸುತ್ತೋಲೆಯನ್ನು ಗೃಹ ಇಲಾಖೆ ಹೊರಡಿಸಬಹುದಲ್ಲ? ನಾಳೆ ಸುಳ್ಯದಂತಹ ಪ್ರದೇಶಗಳಿಗೆ ಕಾರ್ಯನಿರ್ವಹಿಸಲು ಆಗಮಿಸುವ ಪೊಲೀಸರು ಧೈರ್ಯದಿಂದ ಕಾರ್ಯನಿರ್ವಹಿಸುವುದಾದರೂ ಹೇಗೆ? ಇದು ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದಂತಲ್ಲವೇ?
ಸಂಸ್ಕೃತಿಯ ಕುರಿತಂತೆ ಮಾತನಾಡುವ ಸಂಘಪರಿವಾರದ ನಾಯಕರು, ಪೊಲೀಸರ ಪತ್ನಿಯರ ಬಗ್ಗೆ ಸಾರ್ವಜನಿಕವಾಗಿ ಆಡಬಾರದ ಮಾತುಗಳನ್ನು ಆಡಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಪೊಲೀಸರೇ ರಾಜಕಾರಣಿಗಳ ವಿರುದ್ಧ ಪ್ರತಿಭಟನೆಗಿಳಿಯುವ ಪರಿಸ್ಥಿತಿ ಬಂದರೂ ಬಂದೀತು. ಪೊಲೀಸ್ ಠಾಣೆ ಸ್ಥಳೀಯ ಗೂಂಡಾಗಳ ಅಡ್ಡೆಯಾಗುವ ಮೊದಲು ಗೃಹ ಇಲಾಖೆ ಎಚ್ಚೆತ್ತುಕೊಳ್ಳಬೇಕು.ಮಾಜಿ ಪ್ರಧಾನಿ ವಾಜಪೇಯಿಯವರು ಮೋದಿಯವರಿಗೆ ಹೇಳಿದ ರಾಜಧರ್ಮದ ಪಾಠವನ್ನು ಮುಖ್ಯ ಮಂತ್ರಿ ಸದಾನಂದ ಗೌಡರು ನೆನಪಿಸಿಕೊಳ್ಳ ಬೇಕು. ಇದೀಗ ರಾಜಧರ್ಮವನ್ನು ಪಾಲಿಸುವ ಸಂದರ್ಭ ಸದಾನಂದ ಗೌಡರಿಗೆ ಎದುರಾಗಿದೆ. ಅವರದನ್ನು ಪಾಲಿಸಲಿ ಎನ್ನುವುದು ನಾಡಿನ ಜನತೆಯ ಆಶಯವಾಗಿದೆ. - ವಾರ್ತಾಭಾರತಿ
0 comments:
Post a Comment