ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸುಶಿಕ್ಷಿತರಾದಲ್ಲಿ, ಬಾಲ್ಯ ವಿವಾಹದಂತಹ ಅನಿಷ್ಟ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ. ಬಾಲ್ಯ ವಿವಾಹ ಮಾಡಿಸಲು ಪ್ರಯತ್ನಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
ಜಿಲ್ಲಾಡಳಿತ, ಯುನಿಸೆಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ ನಿಷೇಧಕ್ಕೆ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಪದ್ಧತಿಯು ಹೆಣ್ಣು ಮಕ್ಕಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಶೈಕ್ಷಣಿಕವಾಗಿ ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬಾಲ್ಯ ವಿವಾಹ ವ್ಯವಸ್ಥೆಯು ಉಳಿದೆಲ್ಲೆಡೆಗಳಿಗಿಂತ ಹೆಚ್ಚಿದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ದೇಶದ ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಮಹನೀಯರು ಹೋರಾಟ ನಡೆಸುತ್ತ ಬಂದಿದ್ದಾರೆ. ಬಾಲ್ಯ ವಿವಾಹ ಹೆಣ್ಣು ಮಕ್ಕಳ ಪಾಲಿಗೆ ನರಕದ ಕೂಪವಾಗಿ ಪರಿಣಮಿಸುತ್ತಿದೆ. ಮದುವೆ ಎಂಬುದು ಗೊಂಬೆಯಾಟವಲ್ಲ. ವೈವಾಹಿಕ ಬಂಧನದ ಬಗ್ಗೆ ಯಾವುದೇ ಅರಿವು ಹೊಂದಿಲ್ಲದ ಮಕ್ಕಳನ್ನು ವಿವಾಹ ಬಂಧನಕ್ಕೆ ದೂಡುವುದರ ಮೂಲಕ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದಾಗ ಹೈ-ಕ ಪ್ರದೇಶದ ಜಿಲ್ಲೆಗಳ ಬಹಳಷ್ಟು ಹೆಣ್ಣು ಮಕ್ಕಳು ಹೀನ ಸ್ಥಿತಿಯಲ್ಲಿದ್ದಾರೆ. ೧೨ ರಿಂದ ೧೩ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಮದುವೆಯಾಗುತ್ತಿದೆ. ಶಾರೀರಿಕವಾಗಿ ಬೆಳವಣಿಗೆ ಹೊಂದಿಲ್ಲದ ಹೆಣ್ಣು ಮಕ್ಕಳು ಬೇಗ ಮಕ್ಕಳನ್ನು ಹಡೆಯುವುದರಿಂದ, ಈ ಭಾಗದಲ್ಲಿ ತಾಯಿ-ಶಿಶುವಿನ ಮರಣ ಪ್ರಮಾಣ ಹೆಚ್ಚಾಗಿದೆ. ಹೆರಿಗೆ ನಂತರ ತಾಯಿಯ ಸಾವು, ಹುಡುಗನಿಗೆ ಮತ್ತೆ ಮದುವೆ ಇಂತಹ ಪ್ರಕರಣಗಳೇ ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ೧೮ ವರ್ಷಕ್ಕೂ ಮೊದಲು ಹೆಣ್ಣು ಮಕ್ಕಳಲ್ಲಿ ಶಾರೀರಿಕ ಬೆಳವಣಿಗೆ ಆಗಿರುವುದಿಲ್ಲ. ಇದಕ್ಕೂ ಮೊದಲೇ ಮದುವೆ ಮಾಡಿಸುವುದರಿಂದ ಇವರಿಗೆ ಹುಟ್ಟುವ ಮಗು ಉತ್ತಮ ಆರೋಗ್ಯ ಹೊಂದಲು ಸಾಧ್ಯವಿಲ್ಲ, ಆ ಹೆಣ್ಣು ಮಕ್ಕಳೂ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗುತ್ತಿದ್ದಾರೆ. ಶಾಲೆ ಬಿಡುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮದುವೆ ಎಂಬ ವೈವಾಹಿಕ ಜೀವನದ ಬಗ್ಗೆ ಅರಿಯುವುದರ ಮೊದಲೇ ವಿಧವೆಯರಾಗುತ್ತಿದ್ದಾರೆ. ಇದು ಈ ಭಾಗದಲ್ಲಿನ ವಾಸ್ತವಿಕ ಸಂಗತಿಯಾಗಿದೆ. ಮದುವೆಗೆ ಸರ್ಕಾರ ಗಂಡಿಗೆ ೨೧ ವರ್ಷ, ಹೆಣ್ಣಿಗೆ ೧೮ ವರ್ಷ ಕನಿಷ್ಟ ವಯೋಮಿತಿಯನ್ನು ನಿಗದಿಪಡಿಸಿ ಕಾಯ್ದೆ ಜಾರಿಗೊಳಿಸಿದೆ. ಬಾಲ್ಯ ವಿವಾಹ ಪದ್ಧತಿಯನ್ನು ನಿಷೇಧಿಸಿ ಸರ್ಕಾರ ಕಾಯ್ದೆ ಜಾರಿಗೊಳಿಸಿದ್ದರೂ, ಈ ಭಾಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದೆ ಎಂದರೆ, ಪರಿಸ್ಥಿತಿಯ ಗಂಭೀರತೆಯನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. ಈ ಅನಿಷ್ಟ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಬೇಕಾಗಿದೆ. ಸಾಮೂಹಿಕ ವಿವಾಹಗಳನ್ನು ನಡೆಸುವಂತಹ ಸಂಘ-ಸಂಸ್ಥೆಗಳು, ಸಂಘಟನೆಗಳು, ಮುಖಂಡರುಗಳು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ಮಾಡಿಕೊಡಬಾರದು. ಬಾಲ್ಯ ವಿವಾಹವನ್ನು ನಡೆಸುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಅಲ್ಲದೆ ಅಂತಹವರನ್ನು ಬಂಧಿಸಲು ಹಿಂಜರಿಯುವುದಿಲ್ಲ. ಒಂದು ವೇಳೆ ತಮ್ಮ ಸುತ್ತ ಮುತ್ತಲು ಯಾವುದೇ ಬಾಲ್ಯ ವಿವಾಹ ನಡೆಯುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೆ ೧೦೯೮ ಸಹಾಯವಾಣಿ ಉಚಿತ ಕರೆಗೆ ಮಾಹಿತಿ ನೀಡಿ, ಮಾಹಿತಿ ನೀಡುವವರ ವಿವರವನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ಸಾರ್ವಜನಿಕರು, ಪ್ರಜ್ಞಾವಂತರು ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸಿ, ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮನವಿ ಮಾಡಿದರು.
ಯುನಿಸೆಫ್‌ನ ಸಂಯೋಜಕ ಹರೀಶ್ ಜೋಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಕೋರ್ ಕಮಿಟಿ ರಚನೆ ಮಾಡಿತ್ತು. ಈ ಸಮಿತಿಯು ಬಾಲ್ಯವಿವಾಹ ನಿರ್ಮೂಲನೆಗೆ ಹತ್ತು ಹಲವು ಕ್ರಮಗಳ ಶಿಫಾರಸು ಮಾಡಿದೆ. ಪ್ರಥಮ ಹಂತದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ರಾಜ್ಯದ ೧೩ ಜಿಲ್ಲೆಗಳಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ೨೦೧೧ ರ ನವೆಂಬರ್ ೧೪ ರಿಂದ ೨೦೧೨ ರ ನವೆಂಬರ್ ೧೩ ರವರೆಗೆ ಬಾಲ್ಯ ವಿವಾಹ ವಿರುದ್ಧ ಆಂದೋಲನ ವರ್ಷ ಎಂದು ಘೋಷಿಸಿದೆ ಎಂದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ. ವೆಂಕಣ್ಣ, ಬಾಲ್ಯ ವಿವಾಹ ನಿಷೇಧ ಆಂದೋಲನದ ರಾಜ್ಯ ಸಂಚಾಲಕರಾದ ಬೆಳಗಾವಿಯ ಸುಶೀಲ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜಶೇಖರ್, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ನಾಗರಾಜ್ ದೇಸಾಯಿ, ಸಾವಿತ್ರಿ ಮುಜುಂದಾರ್, ರವಿ ಮುಂತಾದ ಗಣ್ಯರು ಭಾಗವಹಿಸಿದ್ದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ರಂಗದರ್ಶನ ಕಲಾತಂಡದವರು ವಿವಿಧ ಜಾಗೃತ ಗೀತೆಗಳನ್ನು ಹಾಡಿದರು, ಇದಕ್ಕೂ ಮುನ್ನ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳ ಮಕ್ಕಳು ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೆರವಣಿಗೆ ನಡೆಸಿದರು.
0 comments:
Post a Comment