PLEASE LOGIN TO KANNADANET.COM FOR REGULAR NEWS-UPDATES


ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ !
ಬನ್ನಿ ಎಲ್ಲರೂ ಪಾಲ್ಗೊಳ್ಳಿ !!

-ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ
ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಪೂರಕವಾಗಿ ಈ ಹಿಂದೆ ಸರಕಾರ ನೇಮಿಸಿದ ಹಲವಾರು ಸಮಿತಿಗಳು ವರದಿ ನೀಡಿವೆ. ೧೯೮೦ರಲ್ಲಿ ಮಾನ್ಯ ಶ್ರೀ ಗುಂಡುರಾವ್ ಅವರ ಸರಕಾರ ನೇಮಿಸಿದ ಶ್ರೀ ಎನ್.ಧರ್ಮಸಿಂಗ್ ಸಮಿತಿಯು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿನ ಅಸಮತೋಲನವನ್ನು ಅಧ್ಯಯನಮಾಡಿ ವರದಿಯನ್ನು ಸಲ್ಲಿಸಿ, ಈ ಭಾಗದ ಅಭಿವೃದ್ಧಿಗಾಗಿ ಒಂದು ವಿಷೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನಂತೆ ೧೯೯೨ ರಲ್ಲಿ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ವರ್ಷಕ್ಕೆ ೧೦ ರಿಂದ ೫೦ ಕೋಟಿ ರೂಪಾಯಿವರೆಗೆ ಅನುದಾನವನ್ನು ನೀಡಿ ಕೈ ತೊಳೆದು ಕೊಂಡಿತ್ತೇ ವಿನಃ ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವಂvಹ ಕೆಲಸ ಆಗಿರುವುದಿಲ್ಲ ಎನ್ನಬಹುದು. ತದ ನಂತರ ೨೦೦೨ರಲ್ಲಿ ಮಾನ್ಯ ಶ್ರೀ ಎಸ್.ಎಮ್.ಕೃಷ್ಣರವರ ನೇತೃತ್ವದ ಸರಕಾgವು ನೇಮಿಸಿದ ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಪ್ರಾದೇಶಿಕ ಅಸಮತೋಲನ ಕುರಿತು ಆಳವಾಗಿ ಅಧ್ಯಯನ ಮಾಡಿ ಸಲ್ಲಿಸಿರುವ ವರದಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶವು ಅಭಿವೃದ್ದಿಯಲ್ಲಿ ಮೈಸೂರು ಕರ್ನಾಟಕ ಮತ್ತು ಮುಂಬಯಿ ಕರ್ನಾಟಕಕ್ಕೆ ಹೋಲಿಸಿದಾಗ ನೂರು ವರ್ಷದಷ್ಟು ಹಿಂದುಳಿದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯು ರಾಜಕೀಯ ಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನರಿಗೆ ವಂಚಿಸುವ ಒಂದು ಚುನಾವಣಾ ವಿಷಯವಾಯಿತೇ ವಿನಃ ಆ ವರದಿಯನ್ನು ಸಂಪೂರ್ಣವಾಗಿ ಜಾರಿ ತರುವ ಮನಸ್ಸು ಸುಮಾರು ೨೦೦೨ ರಿಂದ ಇಲ್ಲಿಯವರೆಗೆ ಬಂದ ಯಾವ ಸರಕಾರಗಳು ಮಾಡಲಿಲ್ಲ್ಲ್ಲ.
ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿರುವ ೧೭೫ ತಾಲ್ಲೂಕುಗಳನ್ನು ಅಭಿವೃದ್ಧಿ ದೃಷಿಯಿಂದ ನಾಲ್ಕೂ ವಿಧಗಳಾಗಿ ವಿಂಗಡಿಸಲಾಗಿದೆ.
೧. ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು,
೨. ಹಿಂದುಳಿದ ತಾಲ್ಲೂಕುಗಳು,
೩. ಅತೀ ಹಿಂದುಳಿದ ತಾಲ್ಲೂಕುಗಳು ಮತ್ತು
೪. ಅತ್ಯಂತ ಹಿಂದುಳಿದ ತಾಲ್ಲೂಕುಗಳು
ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ೬೧ ತಾಲ್ಲೂಕುಗಳು ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ೧೧೪ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಎಂದೂ ಅವುಗಳಲ್ಲಿ ೩೫ ಹಿಂದುಳಿದ ತಾಲ್ಲೂಕುಗಳು, ೪೦ ಅತೀ ಹಿಂದುಳಿದ ತಾಲ್ಲೂಕುಗಳು ಹಾಗೂ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ವಿಶ್ಲೇಶಣೆ ನೀಡಲಾಗಿದೆ. ಇದೇ ರೀತಿಯಲ್ಲಿ ನಮ್ಮ (ರಾಯಚೂರು) ಜಿಲ್ಲೆಯನ್ನು ಪರಿಗಣಿಸಿದರೆ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಂದು ಅತೀ ಹಿಂದುಳಿದ ತಾಲ್ಲೂಕು ರಾಯಚೂರು ತಾಲ್ಲೂಕಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ನಾಲ್ಕು ತಾಲ್ಲೂಕುಗಳೆಂದರೆ ಸಿಂಧನೂರು, ಲಿಂಗಸಗೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳು ಇರುತ್ತವೆ.
ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ೩೪ ತಾಲ್ಲೂಕುಗಳಲ್ಲಿ ಕೇವಲ ಮೂರು ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ಉಳಿದ ೩೧ ತಾಲ್ಲೂಕುಗಳು ಹಿಂದುಳಿದವು ಎಂದಿದೆ. ಹೈದ್ರಾಬಾದ ಕರ್ನಾಟಕದ ಶೇಕಡ ೯೧.೧೭ ರಷ್ಟು ತಾಲ್ಲೂಕುಗಳು ಹಿಂದುಳಿದಿವೆ ಎಂದು ಸ್ಪಷ್ಟವಾಗುತ್ತದೆ. ರಾಜ್ಯದ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ೨೧ ತಾಲ್ಲೂಕುಗಳು ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿವೆ ಎನ್ನುವದೇ ಅತೀ ಸೋಜಿಗದ ವಿಷಯವಾಗಿದೆ. ಡಾ: ಡಿ.ಎಮ್.ನಂಜುಂಡಪ್ಪನವರ ವರದಿಯು ರಾಜ್ಯದಲ್ಲಿ ವಿಭಾಗವಾರು ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿದ (ಯಾವುದೇ ಹಿಂದುಳಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು ಮೈಸೂರು ಭಾಗದಲ್ಲಿವೆ. ಅದೇ ರೀತಿ ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿರದ (ಯಾವುದೇ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು (ಅವಿಭಜಿತ ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ) ಹೈದ್ರಾಬಾದ-ಕರ್ನಾಟಕದಲ್ಲಿವೆ ಎಂಬುದು ಈ ಭಾಗದ ಜನರಿಗೆ ಚಿಂತೆಗೀಡುಮಾಡಿದೆ.

ಐತಿಹಾಸಿಕ ಹಿನ್ನಲೆ: ಹೈದ್ರಾಬಾದ-ಕರ್ನಾಟಕ ಪ್ರದೇಶವು ಅಭಿವೃದ್ದಿ ಕಾಣದೇ ಹಿಂದುಳಿಯಲು ಈ ಕೆಳಗಿನ ಕಾರಣಗಳನ್ನು ಕೊಡಬಹುದು. ಹೈದ್ರಾಬಾದ-ಕರ್ನಾಟಕವು ಅತ್ಯಂತ ಸಂಪದ್ಭsರಿತ ನಾಡಾಗಿದ್ದು, ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿರುವ ಪ್ರದೇಶವಾಗಿದೆ. ಇಂತಹ ಸಂಪದ್ಭರಿತ ನಾಡಿನ ಮೇಲೆ ತಮ್ಮ ಹಿಡಿತ ಸಾದಿಸಲು ಇಲ್ಲ ಯಾವಾಗಲೂ ಯುದ್ದ ನಡಿತಾ ಇದ್ದದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಈ ಪ್ರದೇಶವನ್ನು ತೆಲುಗು ಭಾಷಿಗನಾದ ಶ್ರೀ ಕೃಷ್ಣದೇವರಾಯನ ವಂಷಸ್ಥರಿಂದ, ಉರ್ದು/ಪಾರ್ಸಿ ಭಾಷೆಯನ್ನು ಮಾತನಾಡುವ ಬಿಜಾಪುರದ ಸುಲ್ತಾನರು ಮತ್ತು ಹೈದ್ರಾಬಾದ ಸಂಸ್ಥಾನದ ನಿಜಾಮನ ವಂಶಸ್ಥರು ಸುಮಾರು ೭೦೦ ವರ್ಷಗಳ ಕಾಲ ಆಳ್ವಿಕೆ ನಡೆಸಿರುತ್ತಾರೆ. ಹೀಗಾಗಿ ಈ ಭಾಗದ ಜನರು ಬೇರೆಯವರ ಆಳ್ವ್ವಿಕೆಯ ದಾಸ್ಯಕ್ಕೊಳಗಾಗಿ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು. ಇಲ್ಲಿ ಲಬ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಜೀವನ ಉತ್ತಮಗೊಳಿಸುವ ಕೆಲಸ ನಮ್ಮನ್ನಾಳಿದ ಯಾವ ರಾಜ ಮಹಾರಾಜರು ಮತ್ತು ಪ್ರಜಾಪ್ರಭುತ್ವ ಸರಕಾರಗಳು ಮಾಡಲಿಲ್ಲ.

ಶೈಕ್ಷಣಿಕ ಸಮಸ್ಯೆಗಳು: ಸ್ವಾತಂತ್ರ್ಯಪೂರ್ವದಲ್ಲಿ ಆಳುವ ವರ್ಗದ ಆಡಳಿತ ಭಾಷೆ ಒಂದಾದರೆ, ಇಲ್ಲಿಯ ಜನರ ಆಡುವ ಭಾಷೆ ಮತ್ತೊಂದು ಆಗಿತ್ತು. ಹೀಗಾಗಿ ನೂರಾರು ವರ್ಷಗಳ ಕಾಲ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ೧೯೪೮ ರವರೆಗೂ ಇಡೀ ಹೈದ್ರಾಬಾದ-ಕರ್ನಾಟಕದಲ್ಲಿ ಕೇವಲ ಮೂರೇ ಮೂರು ಹೈಸ್ಕೂಲಗಳಿದ್ದವು ಮತ್ತು ಶಿಕ್ಷಣವು ಖಡ್ಡಾಯವಾಗಿ ಉರ್ದು ಮಾದ್ಯಮದಲ್ಲೇ ಪಡೆಯಬೇಕಾಗಿತ್ತು ಎಂದರೆ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. ತೀರ ಇತ್ತೀಚಿನವರೆಗೆ ಅಂದರೆ ೧೯೯೦ ರ ವರೆಗೆ ತಾಲ್ಲೂಕಿಗೆ ಎರಡು-ಮೂರು ಪ್ರೌಡಶಾಲೆಗಳಿದ್ದವು ಮತ್ತು ಇಂದಿನವರೆಗೂ ಕೂಡ ಎಷ್ಟೋ ಶಾಲೆಗಳು ಏಕೋಪಾದ್ಯಯ ಶಾಲೆಗಳಾಗಿವೆ. ಇಂದಿಗೂ ನಮ್ಮ ಭಾಗದ ಬಹಳಷ್ಟು ಶಾಲಾ/ಕಾಲೇಜುಗಳು, ಶಿಕ್ಷಕರ/ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿರುವ ೩೯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಸುಮಾರು ೪೦೦ ಉಪನ್ಯಾಸಕರ ಹುದ್ದೆಗಳಲ್ಲಿ ೧೯೨ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿ ರಾಜ್ಯದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ೪೦೦೦ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ತುಂಬಲಾಗಿದ್ದು ಅವುಗಳಲ್ಲಿ ೨೫೦೦ ಹುದ್ದೆಗಳು ಹೈದ್ರಾಬಾದ-ಕರ್ನಾಟಕ ವಿಭಾಗದಲ್ಲಿ ಖಾಲಿ ಇದ್ದವು. ಇಡೀ ಕೊಪ್ಪಳ ಜಿಲ್ಲೆಗೆ ಇವತ್ತು ಕೂಡ ಒಂದೇ ಒಂದು ವೃತ್ತಿಪರ ಕಾಲೇಜುಗಳಿಲ್ಲದಿರುವದು ವಿಪರ್ಯಾಸವೇ ಸರಿ. ಈ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿ ಅನಕ್ಷರತೆ ಮಡುಗಟ್ಟಿದೆ.

ನೀರಾವರಿ ಸಮಸ್ಯೆ: ಹೈದ್ರಾಬಾದ-ಕರ್ನಾಟಕವು ನದಿಗಳ ಬೀಡು ಎಂದರೆ ಅತೀಶಯೋಕ್ತಿಯಾಗಲಾರದು. ಈ ಭಾಗದಲ್ಲಿ ತುಂಗೆ-ಭದ್ರೆ, ಕೃಷ್ಣೆ, ಭೀಮಾ, ಕಾರಂಜಾ ಇವೆಲ್ಲ ನದಿಗಳು ಹರಿಯುತ್ತವೆ. ಇಲ್ಲಿನ ಜನರ ದುರ್ದೈವವೆಂದರೆ, ಈ ನದಿಗಳಲ್ಲಿ ಹರಿಯುವ ನೀರು ರೈತರ ಹೊಲಗಳಿಗೆ ತಲುಪದೇ ಇರುವದು ನಮ್ಮ ಸರಕಾರಗಳ ನಿರ್ಲಕ್ಷ್ಯ ಎನ್ನಬಹುದು. ನೀರಾವರಿ ಯೋಜನೆಯಡಿಯಲ್ಲಿ ತುಂಗಾ-ಭದ್ರಾ ಎಡದಂಡೆ ಕಾಲುವೇ ನಿರ್ಮಿಸಿದ್ದು, ಅದು ರೈತರ ಹೊಲಗಳಿಗೆ ಉಪಯೋಗವಾದದ್ದಕ್ಕಿಂತ ಬೇಳೆಗಳನ್ನು ಹಾಳು ಮಾಡಿದ್ದೆ ಹೆಚ್ಚು, ಯಾಕೆಂದರೆ ವರ್ಷದಲ್ಲಿ ಎರಡು-ಮೂರು ಸಲ ಅದು ಖಂಡಿತವಾಗಿ ಒಡೆದು ಹೋಗುತ್ತದೆ. ಅದೇ ಪರಸ್ಥಿತಿ ನಾರಾಯಣಪುರ ಕೃಷ್ಣ ಬಲದಂಡೆ ಕಾಲುವೆಯದ್ದು ಆಗಿದೆ. ಇನ್ನೂ ಬಾಕಿ ಉಳಿದಿರುವ ನೀರಾವರಿ ಯೋಜನೆಗಳು ಹಲವಾರು, ಅವುಗಳಲ್ಲಿ ಮುಖ್ಯವಾದವುಗಳೆಂದರೆ ಭೀಮಾ ಬ್ಯಾರೇಜ ನಿರ್ಮಾಣ, ಕಾರಂಜಾ ಏತ ನೀರಾವರಿ ಯೋಜನೆ, ರಾಂಪುರ ಏತನೀರಾವರಿ ಯೋಜನೆ, ನಂದವಾಡಗಿ ಏತ ನೀರಾವರಿ ಯೋಜನೆ, ಹೀರೆ ಹಳ್ಳ ಯೋಜನೆ ಮುಂತಾದವು ಹಾಗೆ ನೆನೆಗುದಿಗೆ ಬಿದ್ದಿವೆ. ರಾಜ್ಯ ಸರಕಾರಗಳು ಮನಸ್ಸು ಮಾಡಿದರೆ ಈ ಭಾಗದ ಇಂಚಿಂಚು ಭೂಮಿಯನ್ನು ನೀರಾವರಿಗೊಳಪಡಿಸಬಹುದಾದಷ್ಟು ನೀರು ಇಲ್ಲಿ ಲಬ್ಯವಿದೆ.

ನಿರುದ್ಯೋಗ ಸಮಸ್ಯೆ: ಈ ಭಾಗದ ರೈತರು, ಕೂಲಿಕಾರ್ಮಿಕರು ಹೊಟ್ಟೆಪಾಡಿಗಾಗಿ ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸಹಕುಟುಂಬ ಪರಿವಾರ ಸಮೇತ ಮಹಾನಗರಗಳಿಗೆ ಉದ್ಯೋಗವನ್ನರಸಿ ಗೂಳೆ ಹೋಗುವದು ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾದ್ಯವಾಗದೇ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಂಚಿತರಾಗಿ ಸೋತಿರುವದು ಸ್ಪಷ್ಟ. ಇದರಿಂದಾಗಿ ಈ ಭಾಗದ ಸರಕಾರಿ ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಛೇರಿಗಳಲ್ಲಿ ಜವಾನರಿಂದ ಹಿಡಿದು ಅಧಿಕಾರಿಗಳವರೆಗೂ ಸರಕಾರಿ ನೌಕರರೆಲ್ಲರೂ ರಾಜ್ಯದ ಬೇರೆ ಭಾಗದವರೇ ಆಗಿರುತ್ತಾರೆ. ರಾಜ್ಯ ಸರಕಾರ ಜಿಲ್ಲಾವಾರು ನೇಮಕಾತಿ ಮಾಡಿಕೊಳ್ಳುವ ಸರಕಾರಿ ಹುದ್ದೆಗಳ ಅಂಕಿ ಅಂಶಗಳನ್ನು ನೋಡಿದಾಗ ಆಶ್ಚರ್ಯವಾಗುವ ಸಂಗತಿ ಗೋಚರಿಸುತ್ತದೆ. ಉದಾಹರಣೆಗೆ ಇತ್ತೀಚಿನ ವರ್ಷಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರ ವಿವರಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.
ವರ್ಷ ಖಾಲಿ ಹುದ್ದೆಗಳ ವಿವರ ನೇಮಕಾತಿ ಮಾಡಿದ ಹುದ್ದೆಗಳ ವಿವರ ರಾಯಚೂರು ಜಿಲ್ಲೆಯವರೇ ನೇಮಕವಾದವರ ಸಂಖ್ಯೆ ಶೇಕಡಾವಾರು (%)
೨೦೦೬-೦೭ ೬೯೬ ೬೯೬ ೧೫೧ ೨೧.೬
೨೦೦೭-೦೮ ೧೪೬೩ ೧೪೬೩ ೧೦೪ ೭.೧
೨೦೦೮-೦೯ ೧೧೫೪ ೧೧೫೪ ೭೫ ೬.೨

ಇದರಿಂದ ಈ ಭಾಗದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವದು ಕಳವಳಕಾರಿ ವಿಷಯವಾಗಿದೆ. ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲು ಒಂದೇ ಒಂದು ಪರಿಹಾರ ಎಂದರೆ ಸಂವಿಧಾನದ ೩೭೧ ನೇ ಕಲಂ ತದ್ದುಪಡಿ ಮಾಡುವ ಮೂಲಕ ಮುಲ್ಕಿ ಕಾನೂನು ಜಾರಿಮಾಡಿ ಸ್ಥಳೀಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ನೀಡುವ ಅವಶ್ಯಕತೆ ಇರುತ್ತದೆ.

ಮುಲ್ಕಿ ಕಾನೂನು: ಇಲ್ಲಿ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಅಂದು ಹೈದ್ರಾಬಾದ ರಾಜ್ಯದ ಆಡಳಿತ ಭಾಷೆ ಉರ್ದುವಾಗಿತ್ತು ಮತ್ತು ಬಹು ಸಂಖ್ಯಾತ ಜನರ ಭಾಷೆ ತೆಲುಗು, ಮರಾಠಿ ಮತ್ತು ಕನ್ನಡವಾಗಿತ್ತು, ಇದರಿಂದಾಗಿ ಎಲ್ಲರಿಗೂ ಶಿಕ್ಷಣ ದಕ್ಕುವದು ಕಷ್ಟವಾಗುತಿತ್ತು. ಆ ಸಂದರ್ಭದಲ್ಲಿ ಸರಕಾರಿ ಹುದ್ದೆಗಳಿಗೆ ನೇಮಕವಾಗುತ್ತಿದ್ದವರು ಹೆಚ್ಚಿನ ಸಂಖ್ಯೆಯಲಿ ಉತ್ತರ ಭಾರತದ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಅಭ್ಯರ್ಥಿಗಳಾಗಿದ್ದರು. ಇದನ್ನು ಮನಗೊಂಡು ಹೈದ್ರಾಬಾದ ನಿಜಾಮನು ೧೯೧೯ ರಲ್ಲಿ ಈ ರಾಜ್ಯದ ನೌಕರಿಗಳು ಇದೇ ರಾಜ್ಯದ ಅಭ್ಯರ್ಥಿಗಳಿಗೆ ಸಿಗಬೇಕು ಎಂದು ಮುಲ್ಕಿ (ಮುಲ್ಕಿ ಎಂದರೆ ಉರ್ದುವಿನಲ್ಲಿ ಸ್ಥಳಿಯರು ಎಂದು ಅರ್ಥ) ಕಾನೂನು ಜಾರಿಗೆ ತಂದನು. ಈ ಕಾನೂನು ಹೈದ್ರಾಬಾದ ರಾಜ್ಯದಲ್ಲಿ ೧೯೫೬ ರವರೆಗೆ ಜಾರಿಯಲ್ಲಿತ್ತು.
ಮುಲ್ಕಿ ಕಾನೂನು ಎಂದರೆ ರಾಜ್ಯ ಸರಕಾರದ ಎಲ್ಲ ಹುದ್ದೆಗಳ ನೇಮಕಾತಿಯಲ್ಲಿ ಶೇಕಡ ೮೦ ರಷ್ಟು ಹುದ್ದೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಶೇಕಡ ೮೦ ರಷ್ಟು ಸ್ಥಾನಗಳನ್ನು ಸ್ಥಳಿಯರಿಗೇ ನೀಡಬೇಕು ಎಂದು ಹೇಳುತ್ತದೆ.
೧೯೫೬ ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದಾಗ ಹೈದ್ರಾಬಾದ ರಾಜ್ಯವನ್ನು ಮೂರು ಭಾಗಗಳಾಗಿ ತೆಲಂಗಾಣವನ್ನು ಆಂದ್ರಪ್ರದೇಶಕ್ಕೆ, ಮರಾಠಾವಾಡವನ್ನು ಮಹಾರಾಷ್ಟ್ರಕ್ಕೆ ಹಾಗೂ ಈಗಿನ ಹೈದ್ರಾಬಾದ-ಕರ್ನಾಟಕ ಪ್ರದೇಶವನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಆ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳಾದ ತೆಲಂಗಾಣ ಮತ್ತು ಮರಾಠಾವಾಡ ಪ್ರಾಂತಕ್ಕೆ ೩೭೧ನೇ ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಲಾಯಿತು ಮತ್ತು ಇಂದಿನವರಗೂ ತೆಲಂಗಾಣದಲ್ಲಿ ಮುಲ್ಕಿ ಕಾನೂನು ಜಾರಿಯಲ್ಲಿದೆ. ಅಂದಿನ ಸಂದರ್ಭದಲ್ಲಿ ಇಡೀ ದೇಶದಲ್ಲೇ ಅತ್ಯಂತ ಮುಂದುವರೆದ ರಾಜ್ಯ ಮೈಸೂರು ರಾಜ್ಯವೆಂದು ಪರಿಗಣಿಸಲ್ಪಡುತಿತ್ತು. ಹೈದ್ರಾಬಾದ-ಕರ್ನಾಟಕ ಪ್ರದೇಶದ ಅಭಿವೃದ್ದಿಯನ್ನು ಮೈಸೂರು ರಾಜ್ಯವೆ ಮಾಡುತ್ತದೆ ಎಂದು ಹೇಳಲಾಗಿತ್ತು ಮತ್ತು ಇದನ್ನು ಈ ಭಾಗದ ಜನ ನಂಬಿದ್ದು ಇತಹಾಸ. ಆದರೆ ೧೯೫೬ ರಿಂದ ಇಲ್ಲಿಯವರೆಗೆ ಮೈಸೂರು/ಕರ್ನಾಟಕ ರಾಜ್ಯವನ್ನಾಳಿದ ಎಲ್ಲ ಸರಕಾರಗಳು ಈ ಭಾಗಕ್ಕೆ ಅಭಿವೃದ್ದಿ ವಿಷಯದಲ್ಲಿ ಭಾರಿ ತಾರತಮ್ಯ ಮಾಡಿರುವದು ಕಂಡುಬರುತ್ತದೆ.
ಸಂವಿಧಾನದ ೩೭೧ ನೇ ಕಲಂ: ಸಂವಿಧಾನ ರಚನಾ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ಒಂದು ಪ್ರದೇಶ ಸಮೃದ್ದವಾಗಿದ್ದು, ಮತ್ತೊಂದು ತೀರ ಹಿಂದುಳಿದು ಅಲ್ಲಿನ ಜನ ಹತ್ತು ಹಲವು ಸೌಲಬ್ಯಗಳಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಅತೀಯಾದ ಅಸಮಾನತೆ ನಿವಾರಣೆಗೆ ವಿಶೇಷ ಸವಲತ್ತು ನೀಡಲು ಸಂವಿಧಾನದ ೩೭೧ ನೇ ಕಲಂನ ಅಡಿಯಲ್ಲಿ ಅವಕಾಶ ನೀಡಲಾಗಿದೆ.
ಈ ದೇಶದ ಯಾವುದೇ ಒಂದು ಪ್ರದೇಶವನ್ನು ೩೭೧ ನೇ ಕಲಂನಡಿ ಸೇರಿಸಿದಾಗ ಆ ಪ್ರದೇಶದ ಅಭಿವೃದ್ದಿಯ ದೃಷ್ಟಿಯಲ್ಲಿ ಯಾವುದೇ ವಿಶೇಷ ಕಾನೂನು, ಸವಲತ್ತು, ಅನುದಾನ ನೀಡಿದರೆ, ಅದನ್ನು ಈ ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಬರುವದಿಲ್ಲ. ಭಾರತದಲ್ಲಿ ಈಗಾಗಲೇ ೩೭೧ನೇ ಕಲಂನ್ನು ಗುಜರಾತಿನ ಸೌರಾಷ್ಟ್ರ, ಮಹಾರಾಷ್ಟ್ರ, ೧೯೭೩ ರಲ್ಲಿ ಇಡೀ ಆಂದ್ರಪ್ರದೇಶಕ್ಕೆ, ಗೋವಾ, ಅಸ್ಸಾಂ, ಮೀಜೊರಾಂ, ನಾಗಾಲ್ಯಾಂಡ ಇತ್ಯಾದಿ ರಾಜ್ಯಗಳಿಗೆ ಬೇರೆ ಬೇರೆ ಕಾರಣಗಳಿಗಾಗಿ ನೀಡಲಾಗಿದೆ. ಡಾ.ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯು ತನ್ನ ವರದಿಯಲ್ಲಿ ಈ ಭಾಗದ ಆಬಿವೃದ್ದಿಗಾಗಿ ಹಾಗೂ ಇಲ್ಲಿಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಲಂಗಾಣ ಮಾದರಿಯಲ್ಲಿ ೩೭೧ ನೇ ಕಲಂ ತಿದ್ದುಪಡಿ ಮಾಡಬೇಕೆಂದು ಹೇಳಿದೆ.
ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಭೌತಿಕ ಅಭಿವೃದ್ದಿಯ ಜೊತೆಗೆ ಇಲ್ಲಿನ ವಿದ್ಯಾವಂತ ನಿರುದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿಗಳಲ್ಲಿ ಹಾಗೂ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಸಂವಿಧಾನದ ೩೭೧ನೇ ಕಲಂ ತೆಲಂಗಾಣ ಮಾದರಿಯಲ್ಲಿ ಜಾರಿಯಾಗುವದು ಅತೀ ಅವಶ್ಯಕವಾಗಿದೆ, ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳು, ಬುದ್ದಿಜೀವಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ರೈತರು, ಕೂಲಿಕಾರ್ಮಿಕರು, ೩೭೧ ನೇ ಕಲಂ ತಿದ್ದುಪಡಿ ಮಾಡಲು ಕೇಂದ್ರ ಸರಕಾರದ ಮೇಲೆ ತೀವ್ರತರವಾದ ಒತ್ತಡ ತರಲು ಜನಾಂದೋಲನವನ್ನು ರೂಪಿಸುವ ಅವಶ್ಯಕತೆ ಕಂಡು ಬರುತ್ತದೆ.

Advertisement

0 comments:

Post a Comment

 
Top