ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಾಂತಾದೇವಿ ಹಿರೇಮಠರು ಮುಗ್ಧತೆ ಹಾಗೂ ಕುತೂಹಲ ದೃಷ್ಟಿಯಿಂದ ಸಮಾಜವನ್ನು ,ಬದುಕನ್ನು ನೋಡುವ ರೀತಿ ಅದನ್ನು ಅಭಿವ್ಯಕ್ತಿಗೊಳಿಸುವ ರೀತಿ ಶ್ಲಾಘನೀಯ.ಅನುಭವದ ಬರವಣಿಗೆ ಆಪ್ತವಾಗಿ ಮೂಡಿಬಂದಿದೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೮೭ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ವಾರ ಶ್ರೀಮತಿ ಶಾಂತಾದೇವಿ ಹಿರೇಮಠರ "ಮಾತುಕತೆ" ಹರಟೆ ಪುಸ್ತಕದ ಬಗ್ಗೆ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅನುಭವಗಳನ್ನು ತಮ್ಮದಾಗಿಸಿಕೊಂಡು ಬರೆದಾಗ ಅರೇ ಇದು ನಾವು ಬರೆಯಬೇಕಿತ್ತಲ್ಲ ಎನ್ನುವ ಭಾವನೆ ಮೂಡಿದರೆ ಆ ಬರಹ ಸಾರ್ಥಕ ಎನಿಸಿಕೊಳ್ಳುತ್ತದೆ. ಆ ರೀತಿಯ ಹರಟೆಗಳನ್ನು ಶಾಂತಾದೇವಿ ಹಿರೇಮಠರು ಬರೆದಿದ್ದಾರೆ. ಆಯಾ ಕಾಲ ಸಂದರ್ಭಕ್ಕೆ ತಕ್ಕಂತ ರಚನೆಗಳು ಮೂಡಿ ಬಂದಿವೆ. ಹರಟೆಗಳ ಗಾತ್ರ ಇನ್ನಷ್ಟು ದೊಡ್ಡದಾಗಬಹುದಿತ್ತು. ಕೆಲವು ಸಲ ಒಮ್ಮುಖವಾಗಿ ಬರೆಯುತ್ತಿದ್ದಾರೆ ಎನಿಸುವಂತೆ ಕೆಲವು ಬರಹಗಳು ಮೂಡಿಬಂದಿವೆ. ಪರ ವಿರೋಧದ ಮುಖಾಮುಖಿಯಾದಾಗ ಲೇಖನಗಳು ಇನ್ನಷ್ಟು ಗಟ್ಟಿ ಎನಿಸುತ್ತವೆ ಎಂದು ಹಿರಿಯ ಬರಹಗಾರ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ- ಸೋಲು, ಡಾ.ಬಸವರಾಜ - ಪ್ರಜ್ಞೆಗೆ, ಬಸವರಾಜ್ ಚೌಡ್ಕಿ -ಹಸಿರೇ ಉಸಿರು, ಬಸವರಾಜ ಸಂಕನಗೌಡರ- ವರದಕ್ಷಿಣೆ, ಲಲಿತಾ ಭಾವಿಕಟ್ಟಿ- ತಾಯಿ ತುಂಗಭದ್ರೆ, ಪುಷ್ಪಲತಾ ಏಳುಬಾವಿ- ಕೋದಂಡ, ಕರಾವಳಿ, ವಿಜಯಲಕ್ಷ್ಮೀ ಮಠದ- ಕನ್ನಡದ ತೇರು, ಶಾಂತಾದೇವಿ ಹಿರೇಮಠ- ವಚನಗಳು, ಪುಷ್ಪಾವತಿ- ಚೆಲ್ಲಾಟ, ನಿರೀಕ್ಷೆ, ಸಿರಾಜ್ ಬಿಸರಳ್ಳಿ- ಹೀಗೇಕೆ?, ಪ್ರಕಾಶ ಗೊಂಡಬಾಳ- ಆಸೆ, ಗಾಂಧಿ, ರಾಮಣ್ಣ ವೇಮಲಿ-ಸವದತ್ತಿ ಗುರುಪಂಪ ಕವನಗಳನ್ನು ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ, ಬಸವರಾಜ್ ಶೀಲವಂತರ, ವೀರಣ್ಣ ಹುರಕಡ್ಲಿ, ಅಂದಣ್ಣ ಅರಳಿಗಿಡದ, ಮಂಜುನಾಥ ತಳಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಬಸವರಾಜ್ ಚೌಡ್ಕಿ, ವಂದನಾರ್ಪಣೆಯನ್ನು ಬಸವರಾಜ್ ಸಂಕನಗೌಡರ ಮಾಡಿದರೆ ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment