ಗ್ರಾಮೀಣ ಭೂರಹಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರತೀಯ ಜೀವ ವಿಮಾ ಸಂಸ್ಥೆಯ ಸಹಯೋಗದೊಂದಿಗೆ ಆಮ್ ಆದ್ಮಿ ಬೀಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಭೂರಹಿತ ಕುಟುಂಬದ ಮುಖ್ಯ ಪೋಷಕರ ಮರಣದ ಸಂದರ್ಭದಲ್ಲಿ ಅಥವಾ ಅವರು ಅಂಗವಿಕಲರಾದ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ಥಿಕ ನೆರವು ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಗಾಗಿ ಪ್ರತಿ ಕುಟುಂಬದ ಮುಖ್ಯಸ್ಥರಿಗೆ ರೂ. ೨೦೦ ಗಳ ವಿಮಾ ಕಂತು ಇದ್ದು, ಇದರಲ್ಲಿ ರೂ. ೧೦೦ ಗಳನ್ನು ರಾಜ್ಯ ಸರ್ಕಾರ ಹಾಗೂ ರೂ. ೧೦೦ ಗಳನ್ನು ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ಸಂಸ್ಥೆಗೆ ಭರಿಸುವುದರಿಂದ ಫಲಾನುಭವಿಗಳು ಯಾವುದೇ ವಿಮಾ ಕಂತು ಭರಿಸುವ ಅವಶ್ಯಕತೆ ಇಲ್ಲ.
ಯೋಜನೆಗೆ ಯಾರು ಅರ್ಹರು ? : ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಭೂ ರಹಿತ ಕುಟುಂಬಗಳ ೧೮ ರಿಂದ ೫೯ ವರ್ಷದೊಳಗಿನ ಕುಟುಂಬದ ಮುಖ್ಯಸ್ಥರು ಅಥವಾ ಮುಖ್ಯ ಪೋಷಕರು ಈ ಯೋಜನೆಗೆ ಅರ್ಹರು.
ಯೋಜನೆಯಿಂದ ದೊರೆಯುವ ಲಾಭ : ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಕುಟುಂಬದ ಮುಖ್ಯಸ್ಥ ಒಂದು ವೇಳೆ ನೈಸರ್ಗಿಕ ಸಾವಿನಿಂದ ಮೃತಪಟ್ಟಲ್ಲಿ, ಆ ವಿಮೆದಾರನ ಕುಟುಂಬದ ನಾಮ ನಿರ್ದೇಶಿತರಿಗೆ ರೂ. ೩೦೦೦೦ ಗಳ ಮೊತ್ತ ಲಭ್ಯವಾಗಲಿದೆ. ಅದೇ ರೀತಿ ಅಪಘಾತದಿಂದ ಸಾವು ಸಂಭವಿಸಿದಲ್ಲಿ ರೂ. ೭೫೦೦೦ ಗಳ ಮೊತ್ತ ಕುಟುಂಬದ ನಾಮನಿರ್ದೇಶಿತರಿಗೆ ದೊರೆಯಲಿದೆ, ಒಂದು ವೇಳೆ ವಿಮಾದಾರ ಶಾಶ್ವತ ಅಂಗವಿಕಲತೆಗೆ ಒಳಗಾದಲ್ಲಿ ರೂ. ೭೫೦೦೦, ಭಾಗಶಃ ಅಂಗವಿಕಲತೆಗೆ ಒಳಗಾದಲ್ಲಿ ರೂ. ೩೭೫೦೦ ಗಳನ್ನು ವಿಮೆದಾರನಿಗೆ ಲಭ್ಯವಾಗುವುದು. ಅಲ್ಲದೆ ಆ ಕುಟುಂಬದಲ್ಲಿ ೯ ರಿಂದ ೧೨ ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಿರುವ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ. ೧೦೦ ರಂತೆ ವಿದ್ಯಾರ್ಥಿ ವೇತನ ನೀಡಲಾಗುವುದು. ವಿದ್ಯಾರ್ಥಿ ವೇತನವು ಆ ಕುಟುಂಬದ ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಅರ್ಜಿ ಸಲ್ಲಿಕೆ : ಈ ಯೋಜನೆಗಾಗಿ ನಿಗದಿತ ಅರ್ಜಿ ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಂದ ಅಥವಾ ತಾಲೂಕು ಕಚೇರಿಗಳಿಂದ ಪಡೆದು, ಅರ್ಜಿಯೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ ಜನನ ಪ್ರಮಾಣ ಪತ್ರ ಅಥವಾ ಚುನಾವಣಾ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಅಥವಾ ವಯಸ್ಸಿನ ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ ಸಲ್ಲಿಸಬೇಕು. ಅಲ್ಲದೆ ಭೂ ರಹಿತ ಕೃಷಿ ಕಾರ್ಮಿಕರಾಗಿರುವ ಬಗ್ಗೆ ದೃಢೀಕರಣ ಪತ್ರ, ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ನೀಡಿರುವ ಪಡಿತರ ಚೀಟಿ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಿರುವ ಜಾಬ್ ಕಾರ್ಡ್, ಕುಟುಂಬದಲ್ಲಿ ೦೯ ನೇ ತರಗತಿಯಿಂದ ೧೨ ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿದ್ದಲ್ಲಿ ಅವರ ವಿವರ, ಆ ಮಕ್ಕಳ ಜನನ ಪ್ರಮಾಣಪತ್ರ, ಹಾಗೂ ಆಯಾ ಶಾಲಾ ಮುಖ್ಯಸ್ಥರಿಂದ ಶಾಲಾ ವ್ಯಾಸಂಗದ ಪ್ರಮಾಣ ಪತ್ರ ಲಗತ್ತಿಸಿ ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಲ್ಲಿಸಬೇಕು.
ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿಗಳ ಸತ್ಯಾಸತ್ಯತೆಯನ್ನು ವಿಚಾರಣೆ ನಡೆಸುವ ಅಧಿಕಾರಿಗಳಾಗಿದ್ದು, ಅರ್ಜಿ ಪ್ರಕರಣದ ನೈಜತೆ ಮತ್ತು ಅರ್ಹತೆ ಬಗ್ಗೆ ಖಚಿತಪಡಿಸಿಕೊಂಡು, ಅವರು ತಮ್ಮ ಶಿಫಾರಸ್ಸಿನೊಂದಿಗೆ ಸಂಬಂಧಪಟ್ಟ ಕಂದಾಯ ಪರಿವೀಕ್ಷಕರ ಮೂಲಕ ತಾಲೂಕು ಕಚೇರಿಗೆ ಸಲ್ಲಿಸುವ ಹೊಣೆಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಲಾಗಿದೆ. ಯೋಜನೆಯ ಸವಲತ್ತು ಮಂಜೂರು ಮಾಡುವ ಅಧಿಕಾರವನ್ನು ಆಯಾ ತಹಸಿಲ್ದಾರರಿಗೆ ನೀಡಲಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಭೂ ರಹಿತ ಕುಟುಂಬಗಳು ಈ ಆಮ್ ಆದ್ಮಿ ಬೀಮಾ ಯೋಜನೆಯ ಸದುಪಯೋಗ ಪಡೆದುಕೊಂಡು, ಆರ್ಥಿಕ ಭದ್ರತೆ ಹೊಂದಲು ಯೋಜನೆ ಸಹಾಯಕಾರಿಯಾಗಿದೆ.
0 comments:
Post a Comment