ಮತ್ತೆ ಸ್ಫೋಟಿಸಿದ ನಾಯಕತ್ವ ಪ್ರಶ್ನೆ
ಶಿವಮೊಗ್ಗ, ಡಿ.24: ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ನವರ ನಡುವೆ, ಮತ್ತೊಮ್ಮೆ ಭಿನ್ನಮತ ಸ್ಫೋಟವಾಗಿದೆ. ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಮುಖಂಡರು ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಾಮೂಹಿಕ ನಾಯಕತ್ವದ ಬಗ್ಗೆ ಮಾತನಾಡಿರುವ, ಕೆ.ಎಸ್.ಈಶ್ವರಪ್ಪನವರಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದಕ್ಕೆ ಯಾವುದೇ ಸೊಪ್ಪುಹಾಕುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪತಿರುಗೇಟು ನೀಡಿದ್ದಾರೆ. ಇಂದು ಶಿಕಾರಿಪುರದಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ನಾಯಕತ್ವ ಬೇಡವಾದರೆ ಈಶ್ವರಪ್ಪಬೇರೆ ನಾಯಕನನ್ನು ಹುಡುಕಿಕೊಳ್ಳಲಿ ಎಂದು ಗುಡುಗಿದರು.
ಒಂದು ಮನೆಯಲ್ಲಿ ಓರ್ವ ಯಜಮಾನನಿದ್ದಂತೆ, ರಾಜಕೀಯ ಪಕ್ಷಕ್ಕೂ ಇದು ಅನ್ವಯಿಸುತ್ತದೆ. ಬಿಜೆಪಿ ಎಂದರೆ ಮೊದಲಿನಿಂದಲೂ ಯಡಿಯೂರಪ್ಪನೇ ನಾಯಕ ಎಂಬ ಭಾವನೆ ಎಲ್ಲರಲ್ಲೂ ಇದೆ ಎಂದು ಯಡಿಯೂರಪ್ಪ ಹೇಳಿದರು. ಬಿಜೆಪಿ ತನ್ನ ಮಾತೃ ಪಕ್ಷವಿದ್ದಂತೆ, ತಾನು ಕಟ್ಟಿ ಬೆಳೆಸಿದ ಪಕ್ಷವನ್ನು ಏಕೆ ತೊರೆಯಲಿ? ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಜೊತೆಗೆ ಹೊಸ ಪಕ್ಷ ಕಟ್ಟುತ್ತೇನೆ ಎಂಬುದು ಕೂಡ ಊಹಾಪೋಹ ಎಂದು ಸ್ಪಷ್ಟಪಡಿಸಿದರು.
ಮತ್ತೆ ಮುಖ್ಯಮಂತ್ರಿ ಆಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಜನರ ನಿರೀಕ್ಷೆಯೂ ಅದೇ ಆಗಿದ್ದು, ಈ ವಿಷಯಕ್ಕೆ ತಕ್ಕಂತೆ ಹೈಕಮಾಂಡ್ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಹೇಳಿ ಅವರು ಅಚ್ಚರಿ ಮೂಡಿಸಿದರು. ಶಿವಮೊಗ್ಗ ಜಿಲ್ಲೆಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾತಿನಿಧ್ಯ ದೊರಕಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಸಂಪುಟ ವಿಸ್ತರಣೆಯೇ ಇಲ್ಲ ಎಂದು ಹೇಳಿ ಬಿಜೆಪಿ ಪಾಳೆಯದಲ್ಲಿ ಗೊಂದಲ ಸೃಷ್ಟಿಸಿದ್ದಾರೆ.
-ವಾರ್ತಾಭಾರತಿ
0 comments:
Post a Comment