PLEASE LOGIN TO KANNADANET.COM FOR REGULAR NEWS-UPDATES


ನಮ್ಮ ಭವ್ಯ ಭಾರತವು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಶೋಷಣೆ ಕೋಮುವಿನಂಥ ಜಟಿಲ ಸಮಸ್ಯೆಗಳು ನಮ್ಮನ್ನು ಸುತ್ತುವರಿದಿರುವುದರ ಪರಿಣಾಮ ಎಷ್ಟೇಂದರೆ ಅದರ ಆಳ ವ್ಯಾಪಕವಾಗಿದೆ. ಅದರೊಳಗಿನ ಕಹಿಯನ್ನು ನಾವಿಂದು ಎದುರಿಸುತ್ತಿರುವ ಅನಿವಾರ್ಯತೆಗಳಲ್ಲಿ ಒಂದಾಗಿದೆ. ಉನ್ನತ ಸಂಸ್ಕೃತಿ, ನೈತಿಕತೆ, ಮೌಲ್ಯಗಳ ಪತನ, ಆಧುನಿಕತೆ ವೈಜ್ಞಾನಿಕ ತಂತ್ರಜ್ಞಾನದ ಬಗೆಗೆ ಮಾತನಾಡುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪ್ರತೀಕವಾಗಿರುವ ಜ್ಯಾತ್ಯಾತೀತ ಸ್ವರೂಪ ಪಡೆದ ಜನಾಂಗ ಒಂದು ನಮ್ಮ ಮಧ್ಯೆ ಇರುವುದನ್ನು ಮರೆತೆ ಬಿಟ್ಟಿದ್ದೇವೆ ಎನಿಸುತ್ತದೆ.
ಹಿಂದೂ-ಮುಸ್ಲಿಂ ಸಂಪ್ರದಾಯದ ಸಮನ್ವಯತೆ, ಭಾವೈಕ್ಯದ ಸಂಕೇತವೆನಿಸಿರುವ ಪಿಂಜಾರ ಜನಾಂಗ ಇಂದಿನ ಸಮಾಜಕ್ಕೆ ಮಾದರಿ ಜನಾಂಗ ಎಂದು ಹೇಳಿದರೆ ತಪ್ಪಾಗಲಾರದು.
ಭಿನ್ನ, ಭಿನ್ನ ಕಾಲ, ಪರಿಸರದ ಪ್ರಭಾವ, ಪ್ರೇರಣೆಯ ಸಂಕುಚಿತನ, ವಿಕಸನ, ರಾಜಕೀಯ ಒತ್ತಡ, ಆರ್ಥಿಕ ನೆಲೆ, ಧಾರ್ಮಿಕ ಸಂಘರ್ಷ, ಸಾಂಸ್ಕೃತಿಕ ಅಸ್ತಿತ್ವಕ್ಕಾಗಿ ಅನೇಕ ಜಾತಿ-ಉಪಜಾತಿಗಳು ನಿರ್ಮಾಣಗೊಂಡು ಮಾನವನ ನೈಜ ಬದುಕಿನ ಭದ್ರತೆಯನ್ನು ಅಣಕಿಸುತ್ತಿವೆ. ಈ ನೆಲೆಯಲ್ಲಿ ಮುಸ್ಲಿಂ ಪಂಗಡಗಳಲ್ಲಿ ಉಪಜಾತಿಯಾಗಿ ಕಂಡು ಬರುವ ಪಿಂಜಾರ ಜನಾಂಗದ ಸಧ್ಯದ ಪರಿಸ್ಥಿತಿ ಕವಲುದಾರಿಯ ಹಂತದಲ್ಲಿದೆ.
ಇಸ್ಲಾಮಿನ ಮೂಲಭೂತವಾದಿ ಸ್ವರೂಪ, ಹಿಂದುತ್ವದ ಕೋಮುವಾದಿ ಸ್ವರೂಪ ಇವೆರಡರ ನಡುವೆ ಪ್ರಸ್ತುತದಲ್ಲಿ ಚರ್ಚೆಗೀಡಾಗಿರುವ ಭಯೋತ್ಪಾದನೆ ಎಂಬ ನಿರಾಕಾರಿ ಸೈತಾನನಿಗೆ ಚಹರೆ ಕಲ್ಪಿಸಲಾಗುತ್ತಿರುವ ಸಮಕಾಲೀನ ಪರಿಸರವನ್ನು ದೃಷ್ಟಿಯಲ್ಲಿಟ್ಟುಕೊಂಡು ಪಿಂಜಾರರಂಥ ಒಂದು ಜನಾಂಗವು ನೆರೆಯ ಜನಾಂಗದವರೊಂದಿಗೆ ಹೊಂದಿದ ಸಂಬಂಧಗಳು ನಡೆ-ನುಡಿ, ಆಚಾರ-ವಿಚಾರ, ಸಂಪ್ರದಾಯಗಳ ಮೂಲಕ ಅವರು ಉಂಡ ನೋವು, ಅನುಭವಿಸಿದ ಅಪಮಾನ, ಸೂಕ್ಷ್ಮ ಸಂವೇದನೆಗಳನ್ನು ಅನಾವರಣಗೊಳಿಸುವ ಕೆಲಸ ನಡೆಯಬೇಕಾಗಿದೆ.
ಪಿಂಜಾರರ ಬದುಕಿನ ಆಂತರಿಕ ವೈರುಧ್ಯತೆಗಳನ್ನು ಹಾಗೂ ಬಾಹ್ಯ ವೈವಿಧ್ಯೆಗಳೆರಡನ್ನೂ ಗುರುತಿಸುವಾಗ ನಮ್ಮೊಳಗೆ ವಿಶಿಷ್ಟ ಆಸಕ್ತಿಯನ್ನು ಹುಟ್ಟಿಸುತ್ತವೆ. ಹಿಂದೂ-ಮುಸ್ಲಿಂ ಸಂಸ್ಕೃತಿಯ ಚರ್ಚೆಯ ಪ್ರಸ್ತುತತೆಯಲ್ಲಿ ಇವರ ಬದುಕಿನ ಸಾಂಸ್ಕೃತಿಕ ತಲ್ಲಣಗಳನ್ನು ಗಮನಿಸಬೇಕಾದ ಅವಶ್ಯಕತೆ ಇದೆ.
ಮನುಷ್ಯ ಉತ್ಪಾದಕ ಘಟಕವಾಗಬೇಕೇ ವಿನಾಃ ಅನುತ್ಪಾದಕ ಘಟಕವಾಗಬಾರದೆಂಬ ಸಾಮಾಜಿಕ ಚಿಂತಕರ ತಾತ್ವಿಕ ಕೊಂಡಿಯನ್ನು ಹಿಡಿದು ನಡೆದಿರುವ ಇವರು ಹತ್ತಿ (ಅರಳೆ) ಹಿಂಜುವ ವೃತ್ತಿಯನ್ನು ಅವಲಂಬಿಸಿದ್ದಾರೆ. ನಾಗರಿಕತೆಯ ಬೆಸ್ಕಿ, ಕೊಡತಿಗಳನ್ನಿಡಿದು ಗಾದಿ, ದಿಂಬು, ಗುಡಾರುಗಳನ್ನು ಹೊಲಿಯುವಲ್ಲಿ ನಿರತರಾಗಿದ್ದಾರೆ. ನಾಗರಿಕತೆಯ ನಾಗಲೋಟದಲ್ಲಿ ಹಿಂಜಿದರೂ ಗಂಜಿಗೂ ಬರ ಎನ್ನುವಂತಹ ಕಾಲದಲ್ಲಿ ಇತರ ಹಲವಾರು ವೃತ್ತಿಯನ್ನು ತಮ್ಮದನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ದೇಶದಾದ್ಯಂತ ವ್ಯಾಪಕವಾಗಿರುವ ಈ ಜನಾಂಗಕ್ಕೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಪಿಂಜಾರ, ನದಾಫ್, ಮನ್ಸೂರಿ, ದೂದೆಕುಲ, ಪಂಜುಕೊಟ್ಟ, ನೂರಭಾಷ, ಅನ್ಸಾರಿ ಇತ್ಯಾದಿ.
ಹಿಂದೂ-ಮುಸ್ಲಿಂ ಸಾಮಾಜಿಕ-ಧಾರ್ಮಿಕ ವ್ಯವಸ್ಥೆಗಳೆರಡನ್ನು ಮೈಗೂಡಿಸಿಕೊಂಡು, ಯುಗಾದಿ, ದಸರಾ, ಅಮವಾಸ್ಯೆ-ಹುಣ್ಣಿಮೆಯ ಜೊತೆ ರಂಜಾನ್, ಬಕರೀದ, ಮೊಹರಂಗಳನ್ನು ಸಮ ಸಮವಾಗಿಯೇ ಆಚರಿಸಿ ಆನಂದಪಡುವರು. ಜನನ-ಮರಣ, ಮದುವೆ, ಮುಂಜವಿ ಮುಂತಾದ ಕ್ರಿಯೆಗಳನ್ನು ಮುಸ್ಲಿಂ ಧರ್ಮದ ವಿಧಿ ವಿಧಾನದ ಹಿನ್ನಲೆಯನ್ನು ಅನುಸರಿಸುವರು. ನೆರ ಮನೆಯ ಭರಮಜ್ಜ, ಚಂದ್ರಣ್ಣ, ಮಲ್ಲಮ್ಮ, ಅವ್ವ, ಅಪ್ಪ, ಅತ್ತಿಗೆ, ಅಕ್ಕ ಎಂದು ಮೈತ್ರಿ ಬೆಳೆಸಿ ಸಾಮಾಜಿಕ ವ್ಯವಸ್ಥೆಯಲ್ಲಿ ಜೀವನ ಸಾಗಿಸಿದರೂ, ಕಾಲ ಸಂದರ್ಭಗಳ ಸುಳಿಗೆ ಸಿಲುಕಿದಾಗ ಯಾವ ಧರ್ಮವೂ ಇವರನ್ನು ಇಡೀಯಾಗಿ ಅಪ್ಪಿಕೊಂಡಿಲ್ಲವೆನ್ನಬಹುದು.
ಭಾಷೆ : ಪಿಂಜಾರರ ಭಾಷೆಯು ಭೌಗೋಳಿ ಪರಿಸರ ಮತ್ತು ಪ್ರದೇಶಗಳನ್ನು ಅವಲಂಬಿಸಿದೆ. ಆಯಾ ಪ್ರಾದೇಶಿಕ ಭಾಷೆಯನ್ನೇ ತಮ್ಮ ಮಾತೃಭಾಷೆಯನ್ನಾಗಿ ಮಾಡಿಕೊಂಡಿರುವರು. ಕರ್ನಾಟಕದಲ್ಲಿ ಕನ್ನಡವೇ ಇವರ ಮಾತೃಭಾಷೆಯಾಗಿದೆ. ಇವರು ಕೀಳರಿಮೆಗೆ ಒಳಗಾಗಲೂ ಭಾಷೆಯೂ ಒಂದು ಅಂಶವಾಗಿದೆ. ಮುಸ್ಲಿಂ ಎಂದಾಕ್ಷಣ ಉರ್ದು ಬರುತ್ತದೆ, ಬರಲೇಬೇಕು? ಎಂಬ ತಪ್ಪು ಭಾವನೆ ಎಲ್ಲರಲ್ಲೂ ಸಾಮಾನ್ಯವಾಗಿ ಮನೆ ಮಾಡಿಕೊಂಡಿರುವುದು ಕಾಣುತ್ತೇವೆ. ಉರ್ದು ಬರದ ಪಿಂಜಾರರಿಗೆ ತಾತ್ಸಾರ ಮನೋಭಾವದಿಂದ ಕಾಣುವ ಮುಸ್ಲಿಂರು, ಧಾರ್ಮಿಕ ಭದ್ರತೆಯ ಹಿನ್ನೆಲೆಯಲ್ಲಿ ಕೀಳಾಗಿ ಕಾಣುತ್ತಾರೆ. ಹಿಂದೂಗಳು ಇವರೇನು ಅಡ್ಡ ಸಾಹೇಬ್ರಲೇ ಇವರಿಗೇನು ಗೊತ್ತು ಉರ್ದು ಎಂದು ಹಾಸ್ಯಕ್ಕೆ ಗುರಿ ಮಾಡುವುದುಂಟು.
ಉಡುಗೆ-ತೊಡಗೆ : ಇವರ ಉಡುಗೆ-ತೊಡಗೆಗಳನ್ನೇ ಸಾಮಾನ್ಯವಾಗಿ ಹೋಲುತ್ತವೆ. ನಿರ್ದಿಷ್ಟ ಧರ್ಮಗಳನ್ನು ಅಪ್ಪಿಕೊಂಡು ಬದುಕುತ್ತಿರುವ ಇವರ ಧಾರ್ಮಿಕ ಉಡುಗೆಯ ಬಗೆಗೆ ಹೇಳುವುದು ಕಷ್ಟ. ಹಮಾರಿ ಜೈಸಿ ಬುರ್ಖಾ ನಹೀ ದಾಲತೆ, ನಮಾಜ್ ನಹೀ ಪಡತೆ- ಕಾಫಿರ್ ಲೋಗ ನದಾಫ್ ಎಂದು ತಾತ್ಸಾರಕ್ಕೊಳಗಾಗುತ್ತಾರೆ. ಇವರಿಗೆ ಧರ್ಮದ ಸೋಂಕಿಗಿಂತಲೂ ಬದುಕುವುದೇ ಬಹುದೊಡ್ಡ ಸಮಸ್ಯೆಯಾಗಿರುವುದರಿಂದ, ಹೊಟ್ಟ ಬಟ್ಟೆಯ ಚಿಂತೆ ಸದಾಕಾಲ ಕಾಡುವುದರಿಂದ ಧರ್ಮದ ಪರಿಕಲ್ಪನೆ ಅಷ್ಟು ಗಾಢವಾಗಿ ಕಾಡಿರಲಿಕ್ಕಿಲ್ಲ.
ಇವರ ಸಾಮಾಜಿಕ-ಧಾರ್ಮಿಕ ಆಚರಣೆಗಳ ವ್ಯವಸ್ಥೆಯ ಸೂಕ್ಷ್ಮತೆಯನ್ನು ಗಮನಿಸಿದಾಗ ಹಿಂದೂ ಧರ್ಮದ ಕೆಲ ಕೆಳವರ್ಗದ ಕುರುಬ, ನಾಯಕ ಇತ್ಯಾದಿ ಜನ ಸಮೂಹ ಮತಾಂತರ ಹೊಂದಿರುವ ದಾಖಲೆಗಳು ಇತಿಹಾಸದಲ್ಲಿ ದೊರಕುತ್ತವೆ. ಅಂತಹ ಒಂದು ಸಮುದಾಯದಿಂದ ಮತಾಂತರ ಹೊಂದಿ ಪಿಂಜಾರರಾಗಿರುವ ಸಾಧ್ಯತೆಗಳು  ಮತ್ತು ಬದುಕಿನ ಸಾಮ್ಯತೆಗಳು ದೊರೆಯುತ್ತವೆ.
ಇತಿಹಾಸ : ಪಿಂಜಾರರ ಬದುಕಿಗೆ ಇತಿಹಾಸ ಮಾಡಿದ ಅನ್ಯಾಯವನ್ನು ಮರೆಯುವಂತಿಲ್ಲ. ಬದುಕಿಗೆ ಅವಶ್ಯವಿರುವ ದಿನ ಬಳಕೆಯ ವಸ್ತುಗಳಾದ ಮಡಿಕೆ-ಕುಡಿಕೆಗಳ ಬಗೆಗೆ ಉಲ್ಲೇಖಗಳು ಸಿಗುತ್ತವೆ. ಆದರೆ ದಿಂಬು, ಗಾದಿ, ಗುಡಾರಗಳ ಸುಪತ್ತಿಗೆಯ ಹಿಂದಿನ ಬಗೆಗೆ ಇತಿಹಾಸ ಮರೆಮಾಚಿದುದು ಈ ಜನಾಂಗಕ್ಕೆ ಮಾಡಿದ ಅನ್ಯಾಯವಲ್ಲವೇ?
ಅಕ್ಷರ ಜ್ಞಾನದಿಂದ ದೂರ ಉಳಿದು ನಿತ್ಯದ ಬದುಕಿಗೆ ಪರದಾಡುವ ಇವರು ತಮ್ಮ ಇತಿಹಾಸವನ್ನಾದರೂ ಹೇಗೆ ಬರೆದುಕೊಂಡಾರು? ಈ ಹಿನ್ನಲೆಯಲ್ಲಿ ಇವತ್ತಿನ ಪಿಂಜಾರ ಜನಾಂಗದ ಮುಂಬರುವ ದಿನಗಳ ಕುರಿತು ಚಿಂತಿಸಬೇಕಾದ ಅವಶ್ಯಕತೆ ಇದೆ. ಪಿಂಜಾರ ಸಮುದಾಯದಲ್ಲಿ ಈಗೀಗ ಸಂಘಟನೆಗಳು ಹುಟ್ಟಿಕೊಳ್ಳುತ್ತಿರುವುದು ಶುಭ ಸಂಕೇತವಾಗಿದೆ. ಸಾಂಘಿಕ ಹೋರಾಟಗಳ ಮೂಲಕ ಸಮುದಾಯದ ಬದುಕಿನ ತಲ್ಲಣಗಳಿಗೆ ಸ್ವತಂತ್ರ ಅಸ್ತಿತ್ವ ಕಲ್ಪಿಸಿಕೊಳ್ಳಬೇಕಾಗಿದೆ.
ನಾಯಕತ್ವದ ಕೊರತೆ: ರಾಜಕೀಯ ಇಚ್ಛಾಶಕ್ತಿಗಳನ್ನು ರೂಪಿಸಿಕೊಳ್ಳಲಾಗದ ಈ ಜನಾಂಗ ಅನೇಕ ರೀತಿಯ ಶೋಷಣೆಗೆ ಒಳಗಾಗಿದೆ, ಒಳಗಾಗುತ್ತಿದೆ. ಪ್ರಬಲ ರಾಜಕೀಯ ಮುಖಂಡರ ಕೊರತೆಯೇ ಇದಕ್ಕೆ ಕಾರಣವಿರಬೇಕು. ಅಸಂಖ್ಯಾತ ಮತದಾರರು ಜ್ಯಾತ್ಯಾತೀತ ಪಿಂಜಾರರಾಗಿದ್ದು, ರಾಜಕೀಯ ನೆಲೆಗಳಲ್ಲಿ ದಿಟ್ಟ ರಾಜಕೀಯ ನಾಯಕರು ತಮ್ಮ ಮಿತಿ ಮತ್ತು ವ್ಯಾಪ್ತಿಗಳನ್ನು ಅರಿತುಕೊಂಡು ಸಮಾಜ ಕಟ್ಟುವ ಸೃಜನಶೀಲ ಮನಸ್ಸನ್ನು ಹೊಂದಬೇಕಾಗಿದೆ.
ಸ್ಥಿತ್ಯಂತರ: ಆಧುನೀಕತೆಯ ಸ್ಥಿತ್ಯಂತರಗಳಲ್ಲಿ ನಗರ ಪಿಂಜಾರರು ಧಾರ್ಮಿಕ ಭದ್ರತೆಗಾಗಿ ಇಸ್ಲಾಂ ಧರ್ಮದ ತಿಳುವಳಿಕೆಯತ್ತ ವಾಲಿರುವುದು ಸಂತೋಷದ ಸಂಗತಿ. ಆದರೆ ಗ್ರಾಮೀಣ ಭಾಗದಲ್ಲಿ ಇರುವವರು ಅದಾವುದರ ಗೋಜಿಗೂ ಹೋಗದೇ ತಮ್ಮ ಪಾಡನ್ನು ಹಾಡಾಗಿಸಿಕೊಂಡು ಬದುಕುತ್ತಿರುವುದು ವಿಪರ್‍ಯಾಸವು ಹೌದು, ಅನಿವಾರ್ಯತೆಯೂ ಹೌದು.
ಈ ಸಮುದಾಯ ತಮ್ಮ ಮೇಲೆ ಒತ್ತಡ, ಅಪಮಾನ, ಎದುರಿಸಿದ ಸಂದಿಗ್ದತೆ, ಸವಾಲುಗಳನ್ನು ಪ್ರಶ್ನಿಸುವಂತಾಗಿ ತನ್ನ ಸಂಪ್ರದಾಯ, ನಂಬಿಕೆ ಆಚರಣೆಗಳ ಬಗೆಗೆ ರಚನಾತ್ಮಕವಾಗಿ ಕಟ್ಟಿಕೊಂಡು ಸಾಂಸ್ಕೃತಿಕ ಸಂವೇದನೆಗಳ ಅಭಿವ್ಯಕ್ತಿಯಾಗಿದೆ.
ಪಿಂಜಾರರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಂಡು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತಾಗಬೇಕಾಗಿದೆ. ಕೋಮು ಗಲಭೆ ರಹಿತ, ಜ್ಯಾತ್ಯಾತೀತ ಮನೋಭಾವ, ಸಮಾನತೆಯ ಅಡಿಯಲ್ಲಿ ಹೊಸ ಸಾಂಸ್ಕೃತಿಕ ಪರಿಸರವನ್ನು ಕಟ್ಟುವ ಪ್ರಯತ್ನವನ್ನು ಪಿಂಜಾರ ಸಂಘಟನೆಗಳು ಜೊತೆಗೆ ಇತರ ಜನಪರ ಸಂಘ-ಸಂಸ್ಥೆಗಳು ಕಾರ್ಯಾರಂಭ ಮಾಡುವುದು ಅತ್ಯವಶ್ಯಕವಾಗಿದೆ. ಘನ ಸರ್ಕಾರವು ಅಪಮಾನಿತ, ಶೋಷಿತ ವರ್ಗ, ಸಮುದಾಯಗಳನ್ನು ಗುರುತಿಸಿ ಅವರಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಾಗ ಪಿಂಜಾರರಂತಹ ಸಮುದಾಯ, ಸಮಾಜದಲ್ಲಿ ತಲೆ ಎತ್ತಿ ತಮ್ಮ ಸಂಸ್ಕೃತಿಯ ಸ್ವೋಪಜ್ಞತೆಯನ್ನು ಉಳಿಸಿಕೊಂಡು ಸಮಾನತೆಯ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ.


ಡಾ.ಮುಮ್ತಾಜ್‌ಬೇಗಂ. ಎಸ್.ಬಿರಾದಾರ್.
ಕೇರಾಫ್: ಹುಸೇನಸಾಬ ಮುಧೋಳ, 
ಮಸೀದಿ ಹತ್ತಿರ, ರಾಜಾರಾಂ ಕಲ್ಯಾಣ ಮಂಟಪ ರಸ್ತೆ, 
ಪ್ರಶಾಂತ ನಗರ, ಗಂಗಾವತಿ-೫೮೩ ೨೨೭ ಜಿಲ್ಲಾ. ಕೊಪ್ಪಳ. ಮೊಬೈಲ್-೯೯೮೬೬೬೬೦೭೫

Advertisement

1 comments:

  1. pinjaara bagege gamana hirisabeku..Avarigu uttama kalaji , aadyate avashyaka...

    ReplyDelete

 
Top