| ಕಿರಿಮಗ ಮಧು ಅಗ್ನಿಸ್ಪರ್ಶ | ಚಿತೆಯೇರುವ ತನಕವೂ ಅಪ್ಪ-ಮಕ್ಕಳ ವೈಮನಸ್ಸೇ?
ಸೋಮವಾರ ವಿಧಿವಶರಾಗಿದ್ದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರ(79) ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ಸೊರಬದ ಕುಬಟೂರಿನಲ್ಲಿ ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ್ದು, ಬಂಗಾರಪ್ಪ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.
ಬಂಗಾರಪ್ಪನವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಮಧು ಬಂಗಾರಪ್ಪ ಜಮೀನಿಗೆ ತರಲಾಗಿತ್ತು.ದಾರಿಯುದ್ದಕ್ಕೂ ಅಭಿಮಾನಿಗಳು ತಮ್ಮ ನಮನ ಸಲ್ಲಿಸಿದರು.ನಾಯಕನ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು.ಬಣಜೆ,ಸಂಪೆ,ದೇವದಾರು,ಕರ್ವಾಲ ಹಾಗೂ ಶ್ರೀಗಂಧದ ಮರದ ಕಟ್ಟಿಗೆಯಿಂದ ಚಿತೆಯನ್ನು ನಿರ್ಮಾಣ ಮಾಡಲಾಗಿತ್ತು.
ವೇದಬ್ರಹ್ಮ ನಾರಾಯಣ ಭಟ್ ನೇತೃತ್ವದ ಹತ್ತು ಮಂದಿ ಪುರೋಹಿತರು ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.ನಂತರ ಪೊಲೀಸರು ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಯಿತು.ಬಳಿಕ ಬಂಗಾರಪ್ಪ ಕಿರಿಯ ಪುತ್ರ ಮಧು ಬಂಗಾರಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ತಮ್ಮ ತಂದೆಯ ನಿಧನಕ್ಕೆ ರಾಜ್ಯಾದ್ಯಂತ ಸಂತಾಪ ವ್ಯಕ್ತಪಡಿಸಿದ ಜನತೆಗೆ ಕೃತಜ್ಞತೆ.ಅದೇ ರೀತಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಗೃಹಸಚಿವ ಅಶೋಕ್,ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವುದಾಗಿ ಬಂಗಾರಪ್ಪ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಸಹೋದರ ಮಧು ಬಂಗಾರಪ್ಪ ತಾನೇ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುವುದಾಗಿ ವಿನಂತಿ ಮಾಡಿಕೊಂಡಿದ್ದ.ಕುಟುಂಬ ವರ್ಗ ಕೂಡ ಅದೇ ಮಾತನ್ನು ಹೇಳಿದ್ದರಿಂದ,ಒಮ್ಮತದ ಒಪ್ಪಿಗೆ ಮೇರೆಗೆ ಮಧುಗೆ ಅವಕಾಶ ನೀಡಿರುವುದಾಗಿ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಇದರಲ್ಲಿ ಯಾವುದೇ ಗೊಂದಲ ಇಲ್ಲ.ಚಿತೆಗೆ ಯಾರು ಅಗ್ನಿಸ್ಪರ್ಶ ಮಾಡಿದರು ಒಂದೇ,ಈ ದೇಹ ಮಣ್ಣಲ್ಲೇ ಮಣ್ಣಾಗಿ ಹೋಗುತ್ತೆ ಎಂದರು.
ಬಂಗಾರಪ್ಪ ಚಿತೆಗೆ ಕಿರಿಮಗ ಮಧು ಅಗ್ನಿಸ್ಪರ್ಶ: ಶಿವಮೊಗ್ಗ,ಡಿ.27:'ಬಂಗಾರಪ್ಪಗೆ ಜೈ'ಎಂಬ ಮುಗಿಲುಮುಟ್ಟುವ ಘೋಷಣೆಯೊಂದಿಗೆ ವರ್ಣಮಯ ರಾಜಕಾರಣಿ,ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರಿಗೆ ಸಕಲ ಸರ್ಕಾರಿ ಮರ್ಯಾದೆ,ವೇದ ಘೋಷಗಳೊಂದಿಗೆ ಡಿ.27ರ ಸಂಜೆ 7ಗಂಟೆ 8ನಿಮಿಷಕ್ಕೆ ಅಂತಿಮ ವಿದಾಯ ಕೋರಲಾಯಿತು. ದುಃಖತಪ್ತ ಸಾವಿರಾರು ಜನ ಸಮೂಹದ ನಡುವೆ ಚಿತೆಗೆ ಕಿರಿಯ ಮಗ ಮಧು ಬಂಗಾರಪ್ಪ ಅವರು ಅಗ್ನಿಸ್ಪರ್ಶ ಮಾಡಿದರು.
ಈ ನಡುವೆ ಬಂಗಾರಪ್ಪ ಅವರ ಅಂತಿಮ ಸಂಸ್ಕಾರ ಯಾರು ಮಾಡಬೇಕು ಎಂಬ ಅಂಶ ಚರ್ಚೆಗೀಡಾಗಿತ್ತು.ಹಿರಿಯ ಮಗ ಕುಮಾರ್ ಬಂಗಾರಪ್ಪ ಇರುವಾಗಲೇ ಕಿರಿಯ ಮಗ ಮಧು ಬಂಗಾರಪ್ಪ ಅವರು ತಮ್ಮ ತಂದೆಯ ಅಂತಿಮ ಸಂಸ್ಕಾರ ವಿಧಿ ವಿಧಾನ ನೆರವೇರಿಸುವುದು ಶಾಸ್ತ್ರದ ಪ್ರಕಾರ ಒಮ್ಮತವಲ್ಲ ಎಂದು ಕೂಗು ಎದ್ದಿತ್ತು.
ಆದರೆ,ಬಂಗಾರಪ್ಪ ಅವರ ಧರ್ಮಪತ್ನಿ ಶಕುಂತಲಾ ಅವರು ಕುಮಾರ್ ಬದಲಿಗೆ ಮಧು ತನ್ನ ತಂದೆ ಅಂತಿಮ ಕಾರ್ಯವನ್ನು ಪೂರೈಸಲಿ ಎಂದು ಇಚ್ಛಿಸಿದರು.ಇದಕ್ಕೆ ಕುಟುಂಬ ವರ್ಗದಿಂದಲೂ ಸಮ್ಮತಿ ಸಿಕ್ಕಿತ್ತು.ಬಂಗಾರಪ್ಪ ಅವರ ಅಳಿಯಂದಿರಾದ ತಿಲಕ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ಕೂಡಾ ಒಪ್ಪಿಗೆ ಸೂಚಿಸಿದ್ದರು.ಮಧು ಬಂಗಾರಪ್ಪ ಅಂತಿಮ ಕ್ರಿಯೆ ನಡೆಸಲು ಎಲ್ಲರ ಒಪ್ಪಿಗೆ ಪಡೆಯಲಾಗಿದೆ ಎಂದು ಕುಟುಂಬ ಮೂಲಗಳು ಹೇಳಿದೆ.
ಶಿವಮೊಗ್ಗದ ಜೂನಿಯರ್ ಕಾಲೇಜು ಮೈದಾನದಲ್ಲಿ ಬಂಗಾರಪ್ಪ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು.ಇದಕ್ಕೂ ಮುನ್ನ ಬೆಂಗಳೂರಿನಿಂದ ಹೊರಟ ಅಂತಿಮ ಯಾತ್ರೆ ತುಮಕೂರು,ತಿಪಟೂರು,ಅರಸೀಕೆರೆ,ಕಡೂರು,ಬೀರೂರು ಮಾರ್ಗವಾಗಿ ಶಿವಮೊಗ್ಗ ತಲುಪಿತ್ತು.
ಪುನಃ ಶಿವಮೊಗ್ಗದಿಂದ ಹೊರಟು ಶಿಕಾರಿಪುರ,ಶಿರಾಳಕೊಪ್ಪ,ಆನವಟ್ಟಿ ಮೂಲಕ ಬಂಗಾರಪ್ಪ ಅವರ ಹುಟ್ಟೂರು ಕಬಟೂರಿಗೆ ಪಾರ್ಥೀವ ಶರೀರದ ಅಂತಿಮ ಯಾತ್ರೆ ಸಾಗಿ ಬಂದಿದೆ.ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,ಮುಖ್ಯಮಂತ್ರಿ ಸದಾನಂದ ಗೌಡ,ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಜಿಲ್ಲಾ ಪ್ರಮುಖರು ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಅಗಲಿದ ಜನನಾಯಕನಿಗೆ ನಮನ ಸಲ್ಲಿಸಿದರು.
ರಾಜಕೀಯವಾಗಿ ದ್ವೇಷ ಕಟ್ಟಿಕೊಂಡಿದ್ದ ಬಂಗಾರಪ್ಪ ಹಾಗೂ ಕುಮಾರ್ ಅವರ ನಡುವಿನ ವೈಮನಸ್ಯ ಈಗಲಾದರೂ ಅಂತ್ಯಗೊಳ್ಳುತ್ತದೆ ಎಂದು ನಂಬಿದ್ದ ಜಿಲ್ಲಾ ಜನತೆಗೆ ಬಂಗಾರಪ್ಪ ಕುಟುಂಬದ ನಿಲುವು ಹಲವರಿಗೆ ಆಶ್ಚರ್ಯ ತಂದಿದೆ.ಬಂಗಾರಪ್ಪ ಅವರ ಚಿತೆಗೆ ಕಿರಿಯ ಪುತ್ರ ಮಧು ಬಂಗಾರಪ್ಪ ಅಗ್ನಿಸ್ಪರ್ಶ ಮಾಡುವ ಮೂಲಕ ಅಣ್ಣ ತಮ್ಮಂದಿರ ನಡುವಿನ ಕಂದರ ಹೆಚ್ಚಲಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ
ಚಿತೆಯೇರುವ ತನಕವೂ ಅಪ್ಪ-ಮಕ್ಕಳ ವೈಮನಸ್ಸೇ? :ಬಂಗಾರಪ್ಪ ಮತ್ತು ಅಪ್ಪ,ಮಕ್ಕಳ ನಡುವಿನ ವೈಮನಸ್ಸು ಕೊನೆಯವರೆಗೂ ಮುಂದುವರಿಯಿತು ಎನ್ನುವುದಕ್ಕೆ ಸಾಕ್ಷಿಯಾಗಿದ್ದು,ಬಂಗಾರಪ್ಪ ಅಂತ್ಯಕ್ರಿಯೆ ವೇಳೆಯಲ್ಲಿ.ತಂದೆಯ ಶವ ಹೊತ್ತೊಯ್ಯುವ ವೇಳೆಯಲ್ಲಿ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಇರಲೇ ಇಲ್ಲವಾಗಿತ್ತು. ತಂದೆಯ ಶವಕ್ಕೆ ಹೆಗಲು ಕೊಟ್ಟಾತ ಕಿರಿಯ ಪುತ್ರ ಮಧು ಬಂಗಾರಪ್ಪ ಮತ್ತು ಕುಟುಂಬ ವರ್ಗ. ಕೊನೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಕೂಡ ಮಧು ಬಂಗಾರಪ್ಪ..
0 comments:
Post a Comment