- ಬ್ರಾಹ್ಮಣರ ಎಂಜಲೆಲೆಗೆ ಕಿತ್ತಾಡುವ ಭಕ್ತರು - ಬಿಗಿ ಪೊಲೀಸ್ ಬಂದೋಬಸ್ತ್
ತುಮಕೂರು ಡಿ.29: ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯ ಮಡೆಸ್ನಾನದ ಚರ್ಚೆಯ ಕಾವು ಇನ್ನೂ ಹಸಿರುರಾಗಿರುವಾಗಲೇ ಪಾವಗಡ ತಾಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ನಡೆಯುವ ಮಡೆಸ್ನಾನ ಚರ್ಚೆಗೆ ಗ್ರಾಸವಾಗಿದೆ. ಡಿ.30 ರಂದು ನಡೆಯುವ ಅದ್ದೂರಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಮಡೆಸ್ನಾನದ ಬಗ್ಗೆ ಇಲ್ಲಿನ ಮುಜರಾಯಿ ಇಲಾಖೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ, ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಸೂಚಿಸಿರುವುದರಿಂದ ಪೊಲೀಸ್ ಸರ್ಪಗಾವಲಿನಲ್ಲಿ ಭಕ್ತರು ಮಡೆಸ್ನಾನದ ಹರಕೆ ತೀರಿಸಲಿದ್ದಾರೆ.
ಹೆಸರಾಂತ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆ 15 ದಿವಸಗಳ ಕಾಲ ನಡೆಯಲಿದ್ದು, ಡಿ.30ರ ಶುಕ್ರವಾರ ಮಧ್ನಾಹ್ನ 12:30ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. ವಿವಿಧ ರಾಜ್ಯಗಳಿಂದ ಭಾರೀ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಭಾರೀ ದನಗಳ ಜಾತ್ರೆ ಸಹ ನಡೆಯುತ್ತಿದೆ. ಬ್ರಾಹ್ಮಣರು ನಿರ್ದಿಷ್ಟ ಜಾಗದಲ್ಲಿ ಪ್ರಸಾದ ವಿನಿಯೋಗದ ನಂತರ ಊಟ ಮಾಡಿದ ಎಲೆಗಳನ್ನು ಹರಕೆ ಹೊತ್ತವರು ನೆತ್ತಿ ಮೇಲೆ ಹೊತ್ತು ಹರಕೆ ತೀರಿಸುವುದು ಇಲ್ಲಿನ ಪದ್ಧತಿ. ಕಳೆದ 13 ವರ್ಷಗಳಿಂದ ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಹರಕೆ ತೀರಿಸುವ ವಿಧಾನದಲ್ಲಿ ಮಾರ್ಪಾಡು ತರುವಲ್ಲಿ ಮಾಡಿದ ಪ್ರಯತ್ನ ವಿಫಲವಾಗಿವೆ. ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಅಂಟಿಕೊಂಡಂತೆ ಇರುವ ಆವರಣದಲ್ಲಿ ಬ್ರಾಹ್ಮಣರು ಊಟ ಮಾಡುವುದು ನಿಗದಿತ ಪದ್ಧತಿ. ಈಗ ಅಲ್ಲಿ ಆವರಣದ ಗೋಡೆಗಳನ್ನು ನಾಲ್ಕೂವರೆ ಅಡಿ ಎತ್ತರಕ್ಕೆ ನಿರ್ಮಾಣ ಮಾಡಲಾಗಿದೆ.
ಕಾರಣ ಅವರಿಗೆ ಸಂಪೂರ್ಣವಾಗಿ ಊಟ ಮಾಡಲು ಭಕ್ತರು ಬಿಡುತ್ತಿರಲಿಲ್ಲ, ಸಹಸ್ತ್ರಾರು ಸಂಖ್ಯೆಯಲ್ಲಿ ಹರಕೆ ತೀರಿಸಲು ಬಂದ ಭಕ್ತರು ಬೆಳಗ್ಗೆಯಿಂದ ಜಾಗ ಕಾಯ್ದಿರಿಸಿಕೊಂಡು ಕಾಂಪೌಂಡ್ ಗೋಡೆಯ ಸುತ್ತಲೂ ಪ್ರಸಾದ ವಿನಿಯೋಗದ ಎಲೆಗಾಗಿ ಕಾಯುತ್ತಿರುತ್ತಾರೆ. ಅರ್ಧ ಊಟ ಮಾಡುತ್ತಿರುವಾಗಲೇ ಬ್ರಾಹ್ಮಣರ ಪಂಕ್ತಿಯ ಮೇಲೆರಗುವ ಅವರು ಊಟದ ಎಲೆಗಳನ್ನು ಜೂರುಪಾರು ಕಿತ್ತುಕೊಂಡು ಓಡಿಹೋಗಿ ಪಕ್ಕದ ಉತ್ತರ ಪಿನಾಕಿನಿ ನದಿಯ ನೀರಿನಲ್ಲಿ ಮೂರು ಬಾರಿ ಮುಳುಗಿ ಹರಕೆ ತೀರಿಸುತ್ತಾರೆ. ಇದನ್ನು ತಡೆಯಲು ಈಗ ನಾಲ್ಕು ಅಡಿ ಇದ್ದ ಕಾಂಪೌಂಡ್ ಗೋಡೆಯನ್ನು ಎಂಟೂವರೆ ಅಡಿಗೆ ಏರಿಸಲಾಗಿದೆ. ಈ ವರ್ಷ ಪ್ರಸಾದ ವಿನಿಯೋಗಿಸುವ ಬ್ರಾಹ್ಮಣರು ತೃಪ್ತಿಯಾಗಿ ಊಟ ಮಾಡಬಹುದಾಗಿದೆ. ಎರಡು ಭದ್ರವಾದ ಬಾಗಿಲುಗಳು ಕಾಂಪೌಂಡ್ ಗೋಡೆಗಿದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಲು ಕಾಯ ಲಿದ್ದಾರೆ. ಆದರೂ ಊಟ ಮಾಡಿದ ಎಲೆ ಪಡೆಯಲು ನೂಕುನುಗ್ಗಲು ತಪ್ಪುವುದಿಲ್ಲ, ಕಾರಣ ಊಟದ ಎಲೆಗಳು ಕೆಲವು ನೂರಾದರೆ ಹರಿಕೆ ತೀರಿಸುವವರ ಸಂಖ್ಯೆ ಸಹಸ್ತ್ರಾರು, ಇದು ಒಂದು ಸಮಸ್ಯೆಯಾಗಿದೆ.
ಅನಾದಿ ಕಾಲದ ಸಂಪ್ರದಾಯ: ಎಂಜಲು ಎಲೆಯನ್ನು ನೆತ್ತಿಯ ಮೇಲೆ ಹೊತ್ತು ನೀರಿನಲ್ಲಿ ಮುಳುಗಿ ಹರಿಕೆ ತೀರಿಸುವುದು ಅನಾದಿ ಕಾಲದಿಂದ ಬಂದ ಸಂಪ್ರದಾಯವಾಗಿದೆ. ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಹರಿಕೆ ಹೊತ್ತು ಜಾತ್ರೆಗೆ ಬಂದು ಪದ್ಧತಿಯಂತೆ ಹರಿಕೆ ತೀರಿಸುವುದಾಗಿ ಬೇಡಿರುತ್ತಾರೆ. ಅದರಂತೆ ಇದುವರೆಗೂ ನಡೆದುಕೊಂಡುಬಂದಿದೆ. 1997-98ನೇ ಸಾಲಿನಲ್ಲಿ ನಡೆದ ಜಾತ್ರೆಯಂದು ದಲಿತ ಸಂಘಟನೆಗಳು ಈ ಪದ್ಧತಿಯನ್ನು ವಿರೋಧಿಸಿದ್ದವು. ಅಂದಿನ ಪಾವಗಡ ಪೊಲೀಸ್ ಇನ್ಸ್‌ಪೆಕ್ಟರ್ ರವಿನಾರಾಯಣ್ ಈ ಪದ್ಧತಿಯನ್ನು ತಡೆಯಲು ಸಾಕಷ್ಟು ಶ್ರಮಿಸಿದರೂ ಭಕ್ತರ ಆಕ್ರೋಶಕ್ಕೆ ತುತ್ತಾಗಿದ್ದರು. ಬ್ರಹ್ಮ ರಥೋತ್ಸವ ಮಧ್ಯಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ದೇವಸ್ಥಾನದಲ್ಲಿ ತಯಾರಿಸಿದ ಅನ್ನದ ರಾಶಿಯನ್ನು ನಾಗರಹಾವೊಂದು ಬಂದು ಎರಡು ಭಾಗ ಮಾಡಿದನಂತರ ಬ್ರಹ್ಮ ರಥೋತ್ಸವ ಪ್ರಾರಂಭವಾಗುತ್ತದೆ.
ಒಂದು ಭಾಗದ ಅನ್ನವನ್ನು ಬ್ರಾಹ್ಮಣರ ಪ್ರಸಾದ ವಿನಿಯೋಗಕ್ಕಾಗಿ ನೀಡಲಾಗುತ್ತದೆ. ಮತ್ತೊಂದು ಭಾಗವನ್ನು ಇತರರಿಗೆ ಪ್ರಸಾದಕ್ಕಾಗಿ ಮತ್ತು ಅತಿಥಿಗಳಿಗೆ ಊಟಕ್ಕಾಗಿ ಬಳಸಲಾಗುತ್ತದೆ. ಬ್ರಾಹ್ಮಣರು ರಥೋತ್ಸವ ಮುಗಿದನಂತರ ಒಂದೊತ್ತು ಬಿಡಲಿದ್ದು, ಅಲ್ಲಿಯವರೆಗೂ ಒಪ್ಪೊತ್ತಿನ ಮಡಿಯಿಂದ ಕಾದು ಕುಳಿತಿರುವ ಹರಕೆ ಹೊತ್ತ ಭಕ್ತರು ಊಟ ಮಾಡಿದ ಎಲೆ ಸಿಕ್ಕ ನಂತರ ಹರಕೆ ತೀರಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆಯಲ್ಲಿ ಊಟದ ಎಲೆಗಳ ಮೇಲೆ ಉರುಳಿ ಹರಕೆ ತೀರಿಸುವುದು ಮಡೆಸ್ನಾನವಾದರೆ ಇಲ್ಲಿ ಊಟ ಮಾಡಿದ ಎಲೆಯನ್ನು ನೆತ್ತಿಮೇಲೆ ಹೊತ್ತು ನೀರಿನಲ್ಲಿ ಮುಳುಗುವುದೇ ಹರಕೆಯ ಮಡೆ ಸ್ನಾನ. ಈ ಹರಕೆಯನ್ನು ಬೇರೆ ರೀತಿಯಲ್ಲಿ ತೀರಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ಚಿಂತಕರ ಅಭಿಪ್ರಾಯವಾಗಿದೆ.
ಗರ್ಭ ಗುಡಿಯ ಮುಂಭಾಗ ದೇವಮೂಲೆಯಲ್ಲಿ ಮಾಡಿಟ್ಟ ಅನ್ನದ ರಾಶಿಯನ್ನು ಹಾವು ಬಂದು ಎರಡು ಭಾಗ ಮಾಡಿದುದನ್ನೇ ಭಕ್ತರಿಗೆ ವಿತರಣೆ ಮಾಡಿ ಹರಕೆ ತೀರಿಸುವ ಪದ್ಧತಿ ಮಾರ್ಪಾಡು ಮಾಡಬೇಕೆಂಬುದು ಬಹುಸಂಖ್ಯೆಯ ಭಕ್ತರ ವಾದವಾಗಿದೆ. ಆದರೆ ಪ್ರತಿ ವರ್ಷ ಈ ಬಗ್ಗೆ ಚರ್ಚೆಯಾದರೂ ಹರಕೆ ನಿವಿಘ್ನವಾಗಿ ಸಾಗುತ್ತ ಬಂದಿದೆ.
- ರಂಗರಾಜು ಎನ್.ಡಿ.
0 comments:
Post a Comment